Nov 10, 2007

"ಅಣ್ಣ ಎರಡೇ ಎರ್‍ಡು"

ದೀಪದ ಬೆಳಕಿಂದ ಕಂಗೊಳಿಸಬೇಕಿದ್ದ ರಾತ್ರಿ, ಪಟಾಕಿಗಳ ಸದ್ದು ಗದ್ದಲದಿಂದ, ಹೊಗೆಯಿಂದ ತುಂಬಿತ್ತು. ಕಿಟಕಿ ಬಾಗಿಲು ಮುಚ್ಚಿ, ಹಲ್ ಕಚ್ಕೊಂಡ್ ಟಿ.ವಿ. ನೋಡ್ತಿದ್ದೆ. "ಹಚ್ಚೇವು ಕನ್ನಡದ ದೀಪ" ಹಾಡಿನ ಸಮೂಹಗಾನ ಬರ್ತಿತ್ತು. ಆಗ ಒಮ್ಮೆಗೇ...

*ಧಡೋಮ್* *ಧಡೋಮ್*

ಆ ಸದ್ದಿಗೆ ಕಿಟಕಿ ಗಾಜು ಒಡೆದು ಹೋಗೋ ಹಾಗೆ ನಡುಗಿತ್ತು. ಅವ್ನ್ ಯಾವನವ್ನು ಅಂತ ಆಚೆ ಹೋದೆ. ನಾಲ್ಕಾರು ಚಿಲ್ಟಾರಿಗಳು ಉದ್ದನೆ ಊದುಬತ್ತಿ ಹಚ್ಕೊಂಡು ದೊಡ್ ದೊಡ್ ಪಟಾಕಿ ಹೊಡಿತಿದ್ರು, ಮತಾಪೋ ಹೂವಿನ್ ಕುಂಡನೋ ಹಚ್ಚೊದ್ ಬಿಟ್ಟು.

ಮುಖ ಗಂಟ್ ಹಕ್ಕೊಂಡು ಕೇಳ್ದೆ "ಇನ್ನೂ ಎಷ್ಟಿದೆ?"
ಆಗ ಹಳದಿ ರೇಶ್ಮೆ ಲಂಗ ತೊಟ್ಟ ಪುಟ್ಟಿ - "ಅಣ್ಣ ಎರಡೇ ಎರ್‍ಡು" ಅಂದ್ಲು, ಮೂರ್ ಬೆರಳ್ ತೋರುಸ್ತಾ.. ಏನ್ ಮಾಡೂಂತಿರ?

Oct 27, 2007

ಸೆರೆಂಡಿಪಿಟಿ

ಶುಭ್ರ ಬಿಳಿ ತೊಟ್ಟಿದ್ದಳು. ಅತ್ತೆಲ್ಲೋ ನೋಡುತ್ತಿದ್ದಳು. ರೇರ್ ವ್ಯೂ ಕನ್ನಡಿಯಲ್ಲಿ ಅವಳ ಓರೆ ಮುಖ ಮಾತ್ರ ಕಂಡಿದ್ದು - ಕೆಲವೇ ಕ್ಷಣಗಳವರೆಗೆ. ಬಹಳ ಚಲಾಕುತನದಿಂದ ಟ್ರಾಫಿಕ್ ಸಂಭಾಳಿಸಿಕೊಂಡು ಸಿಗ್ನಲ್‍ನಲ್ಲಿ ಜಾರಿಕೊಂಡು ಬಿಟ್ಟಳು. ರವಿ* ಅವಳನ್ನು (ನೋಡಿದವನಂತೆ) ಹಾಡಿ ಹೊಗಳಲು ಶುರು ಮಾಡಿದ. ಇಂಥ ಚೆಲುವೆಯನ್ನ ಇಲ್ಲಿಯವರೆಗೂ ಕಂಡಿಲ್ಲ, ಹಾಗೆ ಹೀಗೆ ಅಂತೆಲ್ಲ. ನಮ್ಮೆಲ್ಲರ ಕುತೂಹಲ ಉತ್ತುಂಗದಲ್ಲಿತ್ತು. ಪ್ರದೀಪ ಆಗಲೇ ಕಾರ್ ನಂಬರ್ ಪಠಿಸುತ್ತಿದ್ದ. ಫಾಲೋ ಮಾಡಲು ನೋಡಿದೆವು. ಕಿಟಕಿಯಾಚೆ ತಲೆ ಹಾಕಿ ಒಬ್ಬೊಬ್ಬರೊಂದು ದಿಕ್ಕು ಜಾಲಾಡಿದರೂ ಎಲ್ಲೂ ಕಾಣಸಿಗಳು. ಎರೆಡು ಸಿಗ್ನಲ್‍ಗಳ ನಂತರ, ಅಚಾನಕ್ ಹಿಂದಿನಿಂದ ಬಂದು, ಸಿಗ್ನಲ್ ಜಂಪ್ ಮಾಡಿ ಬಸ್ಸು ಟ್ರಕ್ಕುಗಳ ಹಿಂದೆ ಮತ್ತೆ ಮರೆಯಾಗಿಬಿಟ್ಟಳು.

ಕಾರ್ ನಂಬರ್ ಇರುವ ಪೇಪರ್ ಇನ್ನೂ ಡ್ಯಾಶ್ ಬೋರ್ಡ್ ಮೇಲಿದೆ. ಆ ನಂಬರ್ ಎಲ್ಲರ ನಾಲಿಗೆ ತುದಿಯಲ್ಲಿದೆಯೆನ್ನುವುದು ಬೇರೆ ಮಾತು. ಅವಳು ಮತ್ತೆಂದೂ ಕಾಣಸಿಗದ ಬೆಳದಿಂಗಳ ಬಾಲೆಯೋ?

* ಹೆಸರನ್ನು ಬದಲಾಯಿಸಲಾಗಿದೆ!

Sep 19, 2007

ಬೊಗಸೆಯಲ್ಲಿ ಮಳೆ

ಹೀಗೇ ಒಮ್ಮೆ 'interesting' ಎನಿಸಿ ’ಬೊಗಸೆಯಲ್ಲಿ ಮಳೆ’ ಕೊಂಡೆ. ಹತ್ತು ಪುಟಗಳನ್ನು ಓದುವಷ್ಟರಲ್ಲಿ ನಾನು ಜಯಂತರ ಅಭಿಮಾನಿಯಾಗಿ ಹೋಗಿದ್ದೆ.

ಕವಿ-ಕೃತಿ ಪರಿಚಯದಲ್ಲಿ ಹೇಳಿರುವಂತೆ, ಪ್ರತೀವಾರ "ಹಾಯ್ ಬೆಂಗಳೂರ್" ವಾರ ಪತ್ರಿಕೆಗೆ "ಬೊಗಸೆಯಲ್ಲಿ ಮಳೆ" ಶೀರ್ಷಿಕೆಯಲ್ಲಿ ಬರೆದ ನುಡಿನೋಟಗಳ ಸಮಗ್ರ ಸಂಕಲನ ಇದು.

ಏನಿದು ನುಡಿನೋಟ? - ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಓದಿ ಸ್ವತಃ ತಿಳಿಯುವಂಥದ್ದು. ಓದಿದ ನಂತರ ’ನುಡಿನೋಟ’ ವೆಂಬುದು ಎಷ್ಟು ಸಮರ್ಪಕ ಹೆಸರೆಂದು ನಿಮಗೇ ತಿಳಿಯುತ್ತದೆ. ಆದರೂ ಸಂಕ್ಷಿಪ್ತವಾಗಿ ಹೇಳುವುದಾದರೆ, ನುಡಿನೋಟವು, ದೈನಿಕ ಆಗುಹೋಗುಗಳ ಸಣ್ಣ ವಿವರಗಳಲ್ಲಿ ಜಯಂತರು ತಮ್ಮ ಅನುಭವಗಳನ್ನು ಹೆಣೆದು ಕಟ್ಟಿಕೊಡುವ ಅಭಿವ್ಯಕ್ತಿಯ ಪ್ರಯತ್ನ; ಅವರ ಸುತ್ತಣ ಜಗತ್ತಿನ ಸೂಕ್ಷ್ಮ ಸವಿವರ ಚಿತ್ರಣ, ಭಾವುಕ ಅವಲೋಕನ. ಇಲ್ಲಿ ಕಾಲ್ಪನಿಕತೆಯಿಲ್ಲ. ಪೂರ್ವಾಗ್ರಹವಿಲ್ಲ, ಉತ್ಪ್ರೇಕ್ಷೆಗಳಿಲ್ಲ.

ರವಿ ಬೆಳಗೆರೆ ಹೇಳುವಂತೆ - ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಜಯಂತರು ಹೇಳಬಲ್ಲರು. ದೇಶ ಕಾಲಗಳಲ್ಲಿ ಸಂಚರಿಸುವ, ಪರಕಾಯ ಪ್ರವೇಶ ಮಾಡುವ ಅತಿಮಾನುಷನಂತೆ, ಅವರಿಗೆ ಫುಟ್‍ಪಾತ್‍ನಲ್ಲಿ ಸಿಲ್ವರ್ ಪೈಂಟ್ ಬಳಿದುಕೊಂಡು ನಿಲ್ಲುವ ಗಾಂಧಿ ಹುಡುಗನಿಗೆ ರಾತ್ರಿ ರಾತ್ರಿ ಗಾಳಿ ತೋರುವ ಮಮತೆ ಕಾಣುತ್ತದೆ. ಆಪರೇಷನ್ ಮುನ್ನ ಸಹಿ ಮಾಡುವ ಕರಾರು ಪತ್ರದ ನಿಯಮಗಳಲ್ಲಿ ಸೂತಕ ಛಾಯೆಯಿರುವುದು ಕಾಣುತ್ತದೆ. ’ಪಿಕ್‍ಪಾಕೆಟ್’ಗೊಂಡವನ ಆತ್ಮಸಾಕ್ಷಾತ್ಕಾರ ಕಾಣುತ್ತದೆ. ಎಲ್ಲವನ್ನು ಲೇಖಕನ ಛಾಯೆಯಿರದಂತೆ third person ನಿರೂಪಣೆಯಲ್ಲಿ ಬೆಚ್ಚನೆಯ ಸ್ಪರ್ಶದೊಂದಿಗೆ ಚಿತ್ರಿಸುತ್ತಾರೆ.

ಒಟ್ಟಿನಲ್ಲಿ, ಓದಿ ಮುಗಿವಾಗ, ಪುಸ್ತಕದಲ್ಲಿ ಬೆರಳಿಟ್ಟು ಮುಚ್ಚಿ, ಒಂದು ನಿಟ್ಟುಸಿರು ಬಿಟ್ಟಿರುತ್ತೇವೆ. ಕಣ್ಣು ಮುಚ್ಚಿಯೋ, ಎಲ್ಲೋ ದಿಟ್ಟಿಸಿಯೋ, ಒಂದು ಮಂಥನಕ್ಕೆ ಸಾಗಿರುತ್ತೇವೆ.

MUST READ.

[ಕನ್ನಡ ಓದಲು ಬಾರದ ಕನ್ನಡಿಗ ಮಿತ್ರರಿಗೆ ಓದಿ ಹೇಳಲು ಸಿದ್ಧ]

Sep 10, 2007

ಸಾಕು

ನೀ ಜನಿಸುವ
ಮೇರು ಗಿರಿ ಕಾನನಗಳ
ಮಲೆನಾಡಿನವನಲ್ಲ

ಎಡೆಯಿರದ
ಜೀವಗಳೊಡಲ
ಕಡಲ ತೀರದವನಲ್ಲ

ನೀನೊಲಿದು ನಗುವ
ಬಯಲಿನವನಲ್ಲ

ಗುಡುಗೇನು
ಸಿಡಿಲೇನು
ಬರೀ ಗಾಳಿಗೆ
ಕೊಂಬೆಗಳು ತೂಗಿ
ಎಲೆಗರಿಗಳದುರಿ
"ಓ ಮಳೆಯೆ?"
ಎನಿಸಿದರೆ ಸಾಕು.

Sep 8, 2007

ಆಕ್ಸಿಡೆಂಟ್ (ಗೋಕರ್ಣದಲ್ಲಿ ವರ್ಷಾರಂಭ - ೨)

ದಿಸೆಂಬರ್ 31ರ ಬೆಳದಿಂಗಳ ರಾತ್ರಿ. ಗೋಕರ್ಣದ ಓಂ ಬೀಚಿನಿಂದ ಹಿಂತಿರುಗುವಾಗ ಸುಮಾರು ಒಂದು ಘಂಟೆ. ನಾನು ಮುಂದಿನ ಸೀಟ್‍ನಲ್ಲಿ ಕುಳಿತೆ. ಸೋಮ ಡ್ರೈವಿಂಗ್. ಸ್ವಲ್ಪ ದೂರ ಸಾಗಿದಿದಂತೆ ಕಡಲ ಭೋರ್ಗರೆತ ಕ್ರಮೇಣ ಕ್ಷೀಣಿಸಿ, ನಿಶ್ಯಬ್ಧ ಆವರಿಸಿತ್ತು. ನಿರ್ಜನ ಪ್ರದೇಶ. ಸೋಮನ ದೃಷ್ಠಿ ರಸ್ತೆಯ ಮೇಲೆ ನೆಟ್ಟಿತ್ತು. ಅವ ಹೆಚ್ಚು ಮಾತನಾಡುವವನಲ್ಲ. ಹಿಂದೆಲ್ಲರೂ ನಿದ್ರೆಗಿಳಿಯುತ್ತಿದ್ದಾರೆ. ಒಳಗೂ, ಹೊರಗೂ ಮೌನ. ಕೇಳುತ್ತಿದ್ದು ಬರೀ ಇಂಜಿನ್ ಸದ್ದು, ಕಿಟಕಿಯಿಂದ ತೂರಿಬರುತ್ತಿದ್ದ ಗಾಳಿಯ ಆರ್ಭಟ.

ದೂರದಲ್ಲಿ ಒಂದರ ಪಕ್ಕದಲ್ಲೊಂದು ಜೋಡಿಸಿದಂತೆ ಕಾಣುತ್ತಿದ್ದ ಬೆಳಕಿನ ತುಣುಕುಗಳು ಕಾಣಿಸಿದವು. ಬೆಳದಿಂಗಳಿದ್ದುದರಿಂದ ಅದು ರೈಲಿನ ಬೋಗಿಗಳ ಕಿಟಕಿಗಳೆಂದು ಗುರುತು ಹಿಡಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ರೈಲು ನಮ್ಮ ದಿಕ್ಕಿಗೆ ಲಂಬವಾಗಿ ಚಲಿಸುತ್ತಿತ್ತು. ಆಗಾಗ ತಗ್ಗುಗಳಲ್ಲಿ ಅಥವಾ ಗುಡ್ಡಗಳ ಹಿಂದೆ ಮರೆಯಾಗಿ ಮತ್ತೆ ಕಾಣಿಸಿಕೊಳ್ಳುತ್ತಿತ್ತು. ಮುಂದಿನ ಕ್ಷಣಕ್ಕೆ ಅದು ಹೆಚ್ಚು ಸ್ಪಷ್ಟ. (ಅದೋ.. ಅದೊಂದು ಬೋಗಿಯ ಬಾಗಿಲಲ್ಲಿ ಯಾರೋ ನಿಂತಂತಿದೆ!) ಆ ಕಂಡು ಮರೆಯಾಗುವ ಕುತೂಹಲದಲ್ಲೇ ಅದರ ಚಲನೆಯಲ್ಲೇ ದೃಷ್ಠಿಯಿಟ್ಟಿದ್ದೆ. ರೈಲು ಅದೊಮ್ಮೆ ಸೈರನ್ ಕಂಠದಲ್ಲಿ ಕೂಗಿದಾಗಲೇ ಅದೆಷ್ಟು ಹತ್ತಿರಾಗಿತ್ತೆಂದು ಅರಿವಾಗಿದ್ದು. ನಿಶ್ಯಬ್ಧದ ನಡುವೆ ಒಮ್ಮೆಗೇ ಸೀಳಿ ಬಂದ ಸದ್ದಿಗೆ ಕೆಲವರಿಗೆ ಎಚ್ಚರಾಯಿತು. ಹತ್ತಿರದಲ್ಲೇ ಮುಂದೊಂದು ಕ್ರಾಸಿಂಗ್ ಗೇಟ್ ಕಾಣ ಸಿಗಬಹುದೆಂದು ಕಣ್ಣು ಸಣ್ಣ ಮಾಡಿ ದಾರಿಯುದ್ದಕ್ಕೂ ನೋಡಿದೆ. ಉಹ್ಞೂ. ಅಂದಾಜಿನ ಪ್ರಕಾರ, ಅದೇ ವೇಗದಲ್ಲೇ ಚಲಿಸಿದರೆ, ನಮ್ಮ ಸ್ಕಾರ್ಪಿಯೋ, ರೈಲಿಗೆ ಮೂತಿಯಿಡುವುದು ಖಚಿತವಾಗಿತ್ತು. ಇನ್ನೇನು 50ಮೀ ಅಷ್ಟೇ. ಎಲ್ಲರ ದೃಷ್ಠಿ ಸೋಮನ ಮೇಲೆ. ಇನ್ನೇನು ಗಾಡಿ ನಿಲ್ಲಿಸುತ್ತಾನೆ - ಅಂತ. ಆದರೆ ಅವ ಸ್ಪೀಡ್ ಇನ್ನೂ ಹೆಚ್ಚಿಸಿದ! what the?

"ಏಯ್ ಸೋಮ"
"ಟ್ರೈನ್ ಕಣೋ ಸೋಮ"

ಹಾ.. ಅಕ್ಸಿಡೆಂಟೇನಾಗಲಿಲ್ಲ. ಜಸ್ಟ್ ಮಿಸ್ಸೂ ಅಲ್ಲ! ರೈಲು ಓವರ್ ಬ್ರಿಡ್ಜ್ ಮೇಲೆ ಹೋಗಿತ್ತು.

ಕಿರುಚಿದ್ದು ಯಾರು? ಯಾರಿಗೆ ’ಎಲ್ಲ ಗೊತ್ತಿತ್ತು’ ಯಾರಿಗೆ ’ಏನೂ ಗೊತ್ತಿರಲಿಲ್ಲ’ ಎಂಬುದು ಇನ್ನೂ ವಿವಾದದಲ್ಲಿದೆ.

Aug 25, 2007

ಬಿಳಿಗಿರೀsss... ರಂಗಯ್ಯ...

...ಅಂತ ’ಹಾಡಿ’ ಎರೆಡು ದಿನದ ಮುಂಚಿಂದ ಎಲ್ರಿಗೂ ತಲೆ ತಿಂತಾ ಇದ್ದೆ. ಶನಿವಾರ ಮೈಸೂರಿನಿಂದ ಬಿಳಿಗಿರಿ ರಂಗನ ಬೆಟ್ಟ, ಭಾನುವಾರ ನವೀನನ ಮನೆ ಗೃಹಪ್ರವೇಶ(ದ ನೆಪ). ಗಿಫ್ಟ್ ಬಗ್ಗೆ ಯಾರಿಗೂ ಯೊಚನೆ ಇಲ್ಲ. ವಿಕ್ಕಿ ಮನೆಲ್ಲಿ ಟೆಂಟು; ಎನಾದ್ರೂ ಹಣ್ಣೊ, ಸ್ವೀಟ್ಸೊ ತಗೊಂಡೋಗ್ಬೇಕು ಅನ್ನೊ ಸೌಜನ್ಯ ಕೂಡ ಯಾರಿಗೂ ಇಲ್ಲ.. ಹ್ಞಾ.. ನನ್ನನ್ನೂ ಒಳಗೊಂಡು.

ಟ್ರಿಪ್ಪಿನ ಹೈಲೈಟ್ - ನಾನ್ ಕಾರ್ ಓಡ್ಸಿದ್ದು. ಹೌದು. ಫರ್ಸ್ಟ್ ಟೈಮ್; ಚೆನ್ನಾಗೇ ಓಡಿಸ್ದೆ. ಓಡಿಸ್ತಾ ಇದ್ದೆ. ಆದ್ರೆ, ಸಂಜೆ ಇದ್ದಕ್ಕಿದ್ದಂಗೆ ಮಳೆ ಬಂತು. ವೈಪರ್ ಆನ್ ಮಾಡೋದ್ ಹೇಗೇಂತ ಕೇಳ್ದೆ ಅಷ್ಟೇ.. ಈಗಿನ ಕಾಲ್ದಲ್ಲಿ ಜನ್ರಿಗೆ ನಂಬ್ಕೆ ಅನ್ನೋದೆ ಇಲ್ಲ ಬಿಡಿ. (ನನ್ನ ಡ್ರಿವಿಂಗ್ ಲೈಸೆನ್ಸ್ ಕೂಡ ತೋರಿಸ್ದೆ).

ಚಾಮರಾಜನಗರ, ಮೈಸೂರು ಜಿಲ್ಲೆಗಳ ಹಳ್ಳಿಗಾಡು ಹೊಲಗಳ ನಡುವೆ ಓಡೋ ರಸ್ತೆಯಲ್ಲಿ ಸಾಗಿದ್ದು, ಟ್ರಿಪ್ಪಿನ ಹೈಲೈಟ್. ಉದ್ದಕ್ಕೂ ಒಳ್ಳೆ ನೀರಾವರಿ ಸೌಕರ್ಯ. ಕಾವೇರಿ ನದಿ ಬೇರೆ. ನದಿ, ಇಲ್ಲವೆ ಕಾಲುವೆ, ರಸ್ತೆಗೆ ಅಡ್ಡಹಾಯುತ್ತಿದ್ದದ್ದು ಸರ್ವೇ ಸಮಾನ್ಯ ದೃಶ್ಯವಾಗಿತ್ತು. ಮಕ್ಕಳು ಸ್ಕೂಲಿನಿಂದ ವಾಪಸ್ ಬರ್ತಾ ಬ್ರಿಡ್ಜ್ ಮೂಲಕ ನದೀನ ಹಾದು ಊರಿಗೆ ಹಿಂತಿರುಗೋದ್ ನೋಡಿ ಅಸೂಯೆ ಆಯ್ತು.

ಮಳೆಗಾಲ ಬೇರೆ! ಎಲ್ರೂ ಹೊಲ ಗದ್ದೆಗಳ ಕೆಲಸದಲ್ಲಿ ಮಗ್ನ. ಕೆಲವ್ ಕಡೆ ಎತ್ತುಗಳು, ಇತ್ತ ಕಡೆ ಮಾಡರ್ನ್ ಮಷೀನ್‍ಗಳು. ಮಳೆ ಬಂದ್ರೂ ಯಾವುದೂ ನಿಲ್ಲಲ್ಲ! ಪಟ್ಟೆಗಳಲ್ಲಿ ನಿಲ್ಸಿದ ನೀರಿನ ಹಾಳೆ, ಬಿಸ್ಲಿಗೆ ಬೆಳ್ಳಗೆ ಹೊಳೆದು ಕಣ್ಣ ಕೋರೈಸ್ತಿತ್ತು. ಇಳಿಜಾರಿನ ಪ್ರದೇಶಗಳಲ್ಲಿ ಮೇಲಿನ್ ಪಟ್ಟೆಗಳಿಂದ ಕೆಳಗಿನವಕ್ಕೆ, ಸಣ್ಣ ತೂತೊಡೆದು ನಿಯಂತ್ರಿತವಾಗಿ ನೀರು ಬಿಟ್ಟಿದ್ದು - ಸಣ್ಣ ಸಣ್ಣ ಜಲಪಾತಗಳಂತೆ ಕಾಣ್ತಿದ್ವು. ನನಗೋ, ಯಾವುದೋ ಪೂರ್ವ ಜನ್ಮದ ನೆನಪಾದಂಗೆ ಆಗ್ತಾ ಇತ್ತು. ಏನಾದ್ರೂ ನಿಜ್ವಾಗ್ಲೂ ಹಿಂದಿನ್ ಜನ್ಮದಲ್ಲಿ ರೈತನಾಗಿ ಹೊಲದಲ್ಲಿ ದುಡಿತಾ ಇದ್ನಾ? ರೋಮಾಂಚನವಾಯ್ತು!

ದರ್ಶನ ಮಾಡ್ಕೊಂಡು ’ರಾಮಕೃಷ್ಣ ಕುಟೀರ’ಕ್ಕೆ ಬಂದ್ವಿ. ಸ್ವಾಮೀಜಿಗಳ ಆಶೀರ್ವಾದ ಪಡೆದು, ಅವರ ಸಲಹೆಯಂತೆ, ’ಕೆ.ಗುಡಿ’ಯ ದಾರಿ ಹಿಡಿದ್ವಿ. ಈ ದಾರಿಯಲ್ಲಿ ಕಾಡು ಇನ್ನೂ ಹೆಚ್ಚು ಒತ್ತೊತ್ತು ಹಾಗೂ ವನ್ಯಜೀವಿಗಳನ್ನ ನೋಡ್‍ಬಹುದೆಂಬುದಾಗಿ. ನಿರಾಸೆಯಾಗ್ಲಿಲ್ಲ - ಜಿಂಕೆ, ಕಾಡು ಕೋಣ, ಕರಡಿ ಮುಂತಾದವುಗಳನ್ನ ಕ್ಯಾಮೆರ ಕಣ್ಗಳಲ್ಲಿ ಸೆರೆ ಹಿಡಿದ್ವಿ. ಪ್ರದೀಪನ ಗಂಟ್ಲಿಗೆ ಹೆದ್ರಿ ಇನ್ ಕೆಲ್ವು ಓಟ ಕಿತ್ವು. ಕರಡಿಯಂತೂ ಇವ್ನ್ ಕಡೆ ನೋಡಿ ಗುರುತಿರೋ ಹಂಗೆ, ತಲೆಯಾಡ್ಸಿ ಹೋಯ್ತು.

ರಾತ್ರಿ ಮೈಸೂರಿಗೆ ವಾಪಸ್ಸಾಗೋವಾಗ ಸಿಕ್ಕಾಪಟ್ಟೆ ಮಳೆ - Just what I wanted.

Aug 17, 2007

ಜನ ಚೇಂಜ್ ಕೇಳ್ತಾರೆ!

ರಜೆ ಮೇಲೆ ಊರಿಗೋಗಿದ್ದೆ. ಬೆಳಿಗ್ಗೆ ಬೆಳಿಗ್ಗೆ ನನ್ನ ತಂದೆ ಸ್ನೇಹಿತರೊಬ್ಬರು ನನ್ನನ್ನೇ ಕೇಳ್ಕೊಂಡ್ ಬಂದ್ರು. ಅವರದು ನೋಕಿಯ ಹ್ಯಾಂಡ್‍ಸೆಟ್. ಪೇಪರ್‌ನಲ್ಲಿ ಬ್ಯಾಟರಿ ಪ್ರಾಬ್ಲಮ್ ಬಗ್ಗೆ ಓದಿ, ಎಸ್ಸೆಮ್ಮೆಸ್ ಕಳ್ಸಿದ್ದಾರೆ. ರಿಪ್ಲೈ ಬಂದಿಲ್ಲ. "ಯಾಕೋ ರಿಪ್ಲೈ ಬರ್ತಾನೇ ಇಲ್ಲ, ನಮ್ ಆಫೀಸ್‍ನಲ್ಲೆಲ್ರಿಗೂ ಬಂದಿದೆ.. ಏನ್ ಮಾಡೋದು" ಅಂತ ಗಾಬರಿಯಾಗಿ ನನ್ನ ’ಎಕ್ಸ್‍ಪರ್ಟ್ ಅಡ್‍ವೈಸ್’ ಕೇಳಿದರು. "ಎಸ್ಸೆಮ್ಮೆಸ್ ಬಂದೇ ಬರುತ್ತೆ. worst case ಒಂದು ದಿನ ಆಗ್‍ಬಹುದು, ವೈಟ್ ಮಾಡಿ" ಅಂದೆ. ಅವ್ರಿಗೆ ಸಮಾಧಾನ ಆಗ್ಲಿಲ್ಲ. ಸರಿ ಅಂತ ನಾನೊಂದ್ ಸಲ ಮೆಸ್ಸೇಜ್ ಕಳಿಸ್ದೆ. ಸ್ವಲ್ಪ ಹೊತ್ತಿಗೇ ರಿಪ್ಲೈ ಬಂತು - "..you may continue to use your battery.."

ಅವ್ರಿಗೆ ತುಂಬಾ ನಿರಾಸೆ ಆಯ್ತು - "ಹೌದಾ? ಹಾಗಾದ್ರೆ ಬ್ಯಾಟರಿ ಚೇಂಜ್ ಮಾಡ್ಬೇಕಾಗಿಲ್ವ?" ಅಂತ ಸಪ್ಪಗಾದ್ರು.

ಹೌದಲ್ಲ?! ಬ್ಯಾಟರಿ ಚೇಂಜ್ ಮಾಡ್ಬೇಕು ಅಂತ ಮೆಸೇಜ್ ಬಂದಿದ್ದಿದ್ರೆ, ಸ್ವಲ್ಪ ಎಕ್ಸೈಟಿಂಗೆ ಇರ್ತಿತ್ತು. ಜನ ಚೇಂಜ್ ಕೇಳ್ತಾರೆ!