Jul 7, 2005

ಎರೆಡು ಘಟನೆಗಳು.

ಎಂದಿನಂತೆ ಬೆಳಿಗ್ಗೆ ಬಸ್ಸಿಗೆ ಸಾಲಿನಲ್ಲಿ(ಕ್ಯೂನಲ್ಲಿ) ಕಾಯುತ್ತಿದ್ದೆ. ನನ್ನೆದುರಿಗೆ ನಿಂತಿದ್ದವನೊಂದಿಗೆ ಮಾತನಾಡುವ ನೆಪದಲ್ಲಿ ಬಂದವನೊಬ್ಬ ಸಾಲಿನೊಳಗೆ ನುಸುಳಿಬಿಟ್ಟನು. ಎನೋ ಧೈರ್ಯ ಮಾಡಿ ಆಕ್ಷೇಪಿಸಿದೆ. ಮಾತಿಗೆ ಮಾತಿಗೆ ಬೆಳೆದು ವಾಗ್ವಾದ ಹೆಚ್ಚಾಯಿತು. ತಪ್ಪು ಅವನದ್ದಾಗಿದ್ದರಿಂದ ಸ್ವಲ್ಪ ಮೆತ್ತಗೇ ಒದರುತ್ತಿದ್ದ. ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಲೂ ಇರಲಿಲ್ಲ. ಅದು ಒಟ್ಟು ಒಣ ಧೈರ್ಯ. ಆದರೆ ನ್ಯಾಯ ನನ್ನ ಕಡೆಯಿದ್ದರೂ ನನ್ನ ಧ್ವನಿ ನಡುಗುತ್ತಿತ್ತು. ಏಕೆಂದರೆ ಇದೇ ಮೊದಲ ಬಾರಿ ನಾನು ಇಷ್ಟು ಧೈರ್ಯ ಮಾಡಿ ತಪ್ಪನ್ನು ಎಲ್ಲರ ಮುಂದೆ ಆಕ್ಷೇಪಿಸಿದ್ದು.

ಬೈದಷ್ಟು ಬೈದೆ. ಆದರೂ ಅತ ಕ್ಯೂ ಬಿಡಲಿಲ್ಲ. ನಾಚಿಕೆ ಬಿಟ್ಟು ನಿಂತೇ ಇದ್ದ. ‘ಹೋದರೆ ಹೋಗಲಿ’ ಎಂದು ನಾನೇ ಸುಮ್ಮನಾಗಬೇಕಾಯಿತು.
ಇರಲಿ. ಇದು ನನ್ನ ಮೊದಲನೆ ಪ್ರಯತ್ನ. ಮುಂದಿನ ಬಾಗಿ ಖಂಡಿತ ಸಫಲನಾಗುತ್ತೇನೆ. ಅಲ್ಲದೆ, ಅವ ಇನ್ನೊಮ್ಮೆ ಹೀಗೆ ಮಾಡುವ ಧೈರ್ಯ ಮಾಡುವುದಿಲ್ಲ.

ನನ್ನ ಕಿವಿಗಳು ತಣ್ಣಗಾಗುವುದಕ್ಕೆ ೨೦ ನಿಮಿಷಗಳೇ ಬೇಕಾದವು!

————–

ಸಂಜೆ ಹಿಂದಿರುವಾಗ ನಡೆದ ಇನ್ನೊಂದು ಘಟನೆ.
ಹುಡುಗನೊಬ್ಬ ಫುಟ್‍ಬೋರ್ಡಿನಲ್ಲಿ ನಿಂತಿದ್ದ. ಅವನು ನಾರ್ತಿ(ಉತ್ತರ ಭಾರತದವನು). ಅಷ್ಟಿಷ್ಟು ಕನ್ನಡ ಮಾತಾಡುತ್ತಿದ್ದ. ಎಷ್ಟು ಹೇಳಿದರೂ, ಬಸ್ಸಿನೊಳಗೆ ಒಂದಿಷ್ಟು ಜಾಗವಿದ್ದರೂ ಒಳಗೆ ಹೋಗದೆ, ಹತ್ತುವವರಿಗೆ ಇಳಿಯುವವರಿಗೆ ತೊಂದರೆಯಾಗಿದ್ದ.

ಜನರ ಮಧ್ಯೆ ನಿಲ್ಲುವುದು ಅಸಹ್ಯವೆನುವಂತೆ ಮತಾಡಿದ (ನಾರ್ತಿಗಳಲ್ಲಿ ಸಹಜವಾದ ಒಂದು ಮಟ್ಟದ ಅಹಂ ಇವನಲ್ಲೂ ಇತ್ತು). ಅಷ್ಟು ಹೇಳಿದ್ದೇ ತಡ, ಎಲ್ಲರ ಕೆಂಗಣ್ಣು ಅವನ ಮೇಲೆ! ಕುಡಿದವನೊಬ್ಬ ಬಾಯಿಗೆ ಬಂದಂತೆ ಕೆಟ್ಟ ಭಾಷೆಯಲ್ಲಿ ಬಯ್ಯತೊಡಗಿದ. ಸಹಿಸುವವರೆಗೂ ಸಹಿಸಿ, ಕೊನೆಗೆ ಇಳಿಯಲು ಬೆನ್ನು ತೋರಿಸಿದ್ದೇ ತಡ! ಒಂದ್ನಾಲ್ಕು ಕೈಗಳು ಅವನನ್ನು ದಬ್ಬುವಂತೆ ಹೊರಬಂದವು!

ಆ ಹುಡುಗ ಆಡಿದ ಅವಮಾನದ ಮಾತುಗಳು, ಜನರಿಗೆ ನಾರ್ತಿಗಳ ಮೇಲಿರುವ ಒಂದು ಸುಪ್ತವಾದ ಕ್ರೋಧವನ್ನು ಹೊರಗೆಡವಲು ಒಂದು ಮಾರ್ಗವಾಗಿತ್ತಷ್ಟೆ. ಈ ಸಿಟ್ಟು, ಅಸಹನೆ ನಾನು ಬಹಳ ದಿನಗಳಿಂದ ನೋಡುತ್ತಿದ್ದೇನೆ. ನನ್ನಲ್ಲಿಯೂ ಒಂದಿಷ್ಟಿದೆ ಎಂದು ಒಪ್ಪಿಕೊಳ್ಳುತ್ತೇನೆ.

ಈ ಸಿಟ್ಟು ಅಸಹನೆಗಳು ಎಲ್ಲಿಗೆ ಹೋಗಿ ಮುಟ್ಟುತ್ತವೆ ಎಂದೊಮ್ಮೊಮ್ಮೆ ಕಳವಳಿಸುತ್ತೇನೆ. ಶಾಂತಿ ಪ್ರಿಯ, ಸ್ನೇಹ ಪ್ರಿಯ ಕನ್ನಡ ನಾಡು, ಜನತೆ ತಮ್ಮ ಗಣಗಳಿಗೆದುರಾಗಿ ನಡೆಯುವಂಥ ಸ್ಥಿತಿ ಬರದಿರಲಿ ಎಂದು ಆಶಿಸುತ್ತೇನೆ.

Jul 5, 2005

ಮತ್ತೊಂದು ಮುಂಜಾವು

ಪದಗಳ ಜೋಡಣೆಗೆ
ನೋಟಗಳ ಸೂರೆಗೆ
ಬತ್ತದು ಬೆಳಗಿನ ಬೆಳಗು
ಇದು ನಿತ್ಯದ ಬೆರಗು
ಇದು ನಿತ್ಯದ ಕಾವ್ಯ

ಬೆಚ್ಚ ಗನಸ ಬೀಳ್ಕೊಟ್ಟು
ಹೊರಬಂದು ಜಡಬಿಟ್ಟು
ತನುವೊಡ್ಡಿದೆ ಮೂಡಣಕೆ ಮನಬಿಚ್ಚಿ
ಎಳೆ ಮಿಂಚು ಸಂಚರಿಸಿತು ಮೈಯೊಳಗೆ
ನಡುಕದೊಳಗಿಂದ
ತೇಜ ರಶ್ಮಿಯ ಶಾಖದಿಂದ

ಶುಭ್ರ ತಿಳಿಬಾನು - ಬೆಳ್ಳಿಮೋಡ
ಪ್ರಶಾಂತ, ಅತಿ ಪ್ರಶಾಂತ
ಸ್ತಬ್ಧ, ನಿಶ್ಯಬ್ಧ
ಎಲ್ಲವೂ ಸುತ್ತಮುತ್ತ
ಎಲೆ ಗರಿಗಳ ಉಯ್ಯಾಲೆಯ ಅಲೆ
ಹಕ್ಕಿ ಸಂಕುಲ ತೇಲಿದೆ
ದಿನದ ಪಲ್ಲವಿಯ ಗುನುಗುತಲೆ
ಸನಿಹದ ದೇಗುಲದಲಿ
ಮಂತ್ರಘೋಷ, ಮಂಗಳ ಘಂಟಾನಾದ
ಇದು ಅಮೃತ ಘಳಿಗೆ!

ನಗುತಿಹನೋ ಭಾಸ್ಕರ
ನಭದಂಚಿನ ಪ್ರಭೆಯೊಳಗೆ ಪ್ರಜ್ವಲಿಸಿ

-ಚೇತನ್ ಪಿ / ೦೫-೦೭-೨೦೦೫