Jul 1, 2012

ಕಾರ್ವಾಲೋ, ಮಿಸ್ ಸದಾರಮೆ, ರಂಗ ಶಂಕರ

ಸ್ವಲ್ಪವೂ ವೃತ್ತಿಪರತೆ ಇರದೆ ನಿರ್ಮಿಸಿದ ಕನ್ನಡದ ಸಿನಿಮಾ ನೋಡುವ ಬದಲು, ಒಳ್ಳೆ ನಾಟಕಗಳನ್ನು ನೋಡೋಣ ಅನ್ನಿಸಿತು. ಉತ್ತರ ಬೆಂಗಳೂರಿಗೆ ಶಿಫ್ಟ್ ಆದ ಮೇಲೆ ಇಲ್ಲಿದ್ದಾಗ ನೋಡಲಿಲ್ಲ ಅನ್ನೊ ಗಿಲ್ಟ್ ಕಡಿಮೆ ಆಗಲಿ ಎಂಬ ಉದ್ದೇಶವೂ ಇತ್ತು.

ಮೊದಲು ರಂಗಶಂಕರದಲ್ಲಿ ಕಾರ್ವಾಲೋ ನೋಡಿದೆ. ಕಾರ್ವಾಲೋ, ರಂಗಭೂಮಿಯ ಅಳವಡಿಕೆಗೆ ಅಷ್ಟು ಸೂಕ್ತ ಎನಿಸಲಿಲ್ಲ. ಕಾರ್ವಾಲೋ ಕೃತಿ ಓದದೆ ಹೋದರಂತೂ ನಾಟಕದ ಎಳೆ ಗೋಜಲೆನಿಸುವುದು. ಮಂದಣ್ಣನ ಬಹುಮುಖ ಪ್ರತಿಭೆ ಹಾಗೂ ಪಶ್ಚಿಮ ಘಟ್ಟಗಳ ವನ್ಯ ಜೀವಿಗಳ ನಿಘೂಢತೆ, ವಿಸ್ಮಯಗಳನ್ನು ತೋರುವ ಕಾರ್ವಾಲೋ ಪಾತ್ರ ಅಲ್ಪ ಸಮಯದಲ್ಲಿ, ಹಾಗೂ ರಂಗದ ಸೀಮಿತ ಸೌಕರ್ಯಗಳಲ್ಲಿ ಬಿಂಬಿಸುವುದು ಕಷ್ಟ ಎನಿಸಿತು. ಉಳಿದಂತೆ, ನಿರೂಪಣೆಯಲ್ಲಿ ಎಲ್ಲಿಯೂ ತಡೆಯಿರಲಿಲ್ಲ. ಕಡೆಯಲ್ಲಿ ಒಂದು ಪ್ರೊಜೆಕ್ಟರ್ ಬಳಸಿ ಹಾರುವ ಹಲ್ಲಿಯನ್ನು ತೋರಿದ್ದು ಉಚಿತವಾಗಿತ್ತು. ನಾಟಕದ ಹೈಲೈಟ್ ಆಗಿದ್ದಿದ್ದು - ಕಿರುತೆರೆಯ ಕಲಾವಿದ ’ವೆಂಕಟಾಚಲಯ್ಯ’ ನವರು. ಮಂದಣ್ಣನ ಮಾವನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಅದಕ್ಕೆ ತಕ್ಕಂತೆ ಮನತುಂಬಿದ ಚಪ್ಪಾಳೆಗಳೂ ಸಿಗುತ್ತಿದ್ದವು.

ಆನಂತರ ನೋಡಿದ ’ಸಮಷ್ಠಿ’ ತಂಡದ’ಮಿಸ್ ಸದಾರಮೆ’ ನಾಟಕವೂ ಚೆನ್ನಗಿತ್ತು. ಕಥೆಯ ಎಳೆಯಲ್ಲಿ ವಿಶೇಷತೆ  ಇಲ್ಲದಿದ್ದರೂ, ಕೆ.ವಿ.ಸುಬ್ಬಣ್ಣನವರು ಬರೆದ ನಾಟಕವನ್ನು ಈಗಿನ ಕಾಲಕ್ಕೆ ತಕ್ಕಂತೆ ಅಳವಡಿಸಲಾಗಿದೆ. ಸದಾರಮೆಯ ಗಂಡ ಎಲ್ಲ ಕಳೆದುಕೊಂಡು ಊರೂರು ಅಲೆಯುತ್ತ ರತ್ನಖಚಿತ ಕರವಸ್ತ್ರವೊಂದನ್ನು ರಾಜನೊಬ್ಬನ ಬಳಿ ಮಾರಲು ಬರುವಂಥಹ ಗಂಭೀರ ಪ್ರಸಂಗದ ನಡುವೆ, ರಾಜನು ಇದ್ದಕ್ಕಿದ್ದಂತೆ ’ಕರವಸ್ತ್ರ’ಎಂದು, ತನ್ನ ಮಾಡರ್ನ್ ಮಂತ್ರಿ, ನರಪೇತಲ ಬಂದೂಕುಧಾರಿ ಕಾವಲುಗಾರನ ಜೊತೆ ಕುಣಿದು ಕುಪ್ಪಳಿಸುವುದು ಆಭಾಸವೆನಿಸದೆ ಉಲ್ಲಾಸಕರವಾಗಿತ್ತು.  ಅಲ್ಲಿಂದ ಕೊನೆಯವರೆಗೂ ಒಂದು ಸಣ್ಣ ಹಾಸ್ಯದ ಎಳೆ, ಮುಖ್ಯ ಪ್ರಸಂಗಗಳ ನಡುವೆ ಸಾಗುತ್ತದೆ. ನಾಟಕದ ಮುಖ್ಯ ಪಾತ್ರಧಾರಿ ಸದಾರಮೆಯಿಂದ, ನರಪೇತಲ ಬಂದೂಕುಧಾರಿ ಕಾವಲುಗಾರನವರೆಗೆ, ಎಲ್ಲರ ಅಭಿನಯವೂ ಚೆನ್ನಗಿತ್ತು.

ರಂಗದಲ್ಲಿ, ಬೆಳಕು ಸಂಯೋಜನೆಯ ಪಾಲು ಹೆಚ್ಚು ಎಂದು ಕೇಳಿದ್ದೆ. ಇದರ ಬಗ್ಗೆ ಗಮನವಿದ್ದುದರಿಂದ, ಬೆಳಕಿನದೇ ಆದ ಒಂದು ಭಾಷೆ, ಅಭಿವ್ಯಕ್ತಿಯ ಅನುಭವವಾಯಿತು. ನಿರೂಪಣೆಯಲ್ಲಿ ಕೆಲವೆಡೆ, ರಂಗದಲ್ಲಿ / ಪಾತ್ರಗಳಲ್ಲಿ ತೋರಲಾಗದ ಕುಂದುಗಳನ್ಜು, ಬೆಳಕಿನಲ್ಲಿ ಸರಿದೂಗಿಸಬಹುದು. ಉದಾಹರಣೆಗೆ, ಈ ನಾಟಕದಲ್ಲಿ, ಕೆಲವೊಂದು ಸಂಧರ್ಭಗಳಲ್ಲಿ ಸ್ವಗತ ಸಂಭಾಷಣೆಗಳನ್ನು - ರಂಗವನ್ನು ಸಂಪೂರ್ಣ ಮಬ್ಬುಗೊಳಿಸಿ, ಪಾತ್ರವೊಂದರ ಮೇಲೇ ಬೆಳಕನ್ನು ಕೇಂದ್ರಿಕರಿಸಿ ತೋರಲಾಯಿತು.

ಆದರೆ ಎಲ್ಲಾ ನಾಟಕಗಳೂ ಚೆನ್ನಾಗಿರುತ್ತವೆಂದಲ್ಲ. ಕೆ.ಹೆಚ್. ಕಲಾ ಸೌಧದಲ್ಲಿ ’ಅಚಾನಕ್’ ಎಂಬ ನಾಟಕದಿಂದ ಅರ್ಧದಲ್ಲೇ ಎದ್ದು ಬರುವಂತಾಯಿತು.  ನಾಟಕದ ತಂಡದ/ಲೇಖಕರ/ಕೃತಿಗಳ ಪರಿಚಯವಿದ್ದಲ್ಲಿ ನೋಡಬಹುದು. ಇಲ್ಲದಿದ್ದರೆ, ಅಂತರ್ಜಾಲದಲ್ಲಿ ಸಿನಿಮಾಗಳಂತೆ, ನಾಟಕಗಳಿಗೆ ಸಾಕಷ್ಟು ವಿಮರ್ಶೆಗಳು ಸಿಗುವುದಿಲ್ಲ. ಹೀಗೆ ಬ್ಲಾಗ್ ಗಳಲ್ಲಿ ಅವರಿವರು ನಾಟಕಗಳ ವಿಮರ್ಶೆ / ಪರಿಚಯ ಮಾಡಿದರೆ, ಇನ್ನೂ ಹೆಚ್ಚಿನವರು ಒಳ್ಳೆ ನಾಟಕಗಳನ್ನು ಸವಿಯಬಹುದು.