Feb 5, 2005

ಕುಮಾರಪರ್ವತ ಚಾರಣ

೧. ಸಂಕಲ್ಪ.
ಚಿರನೂತನ ಹಸಿರು ಪ್ರಕೃತಿಯ ಚಿರ ಚೈತನ್ಯ ಸೆಲೆ, ಕಾಲಚಕ್ರದ ಅಡಿಯಾಳಾಗಿ ದುಡಿಯುತ್ತಿದ್ದ ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಆ ಸೆಳೆತಕ್ಕೆ ಒಳಗಾಗಿ ಧನ್ಯರಾದೆವು.

ನಾವು ಅಂದರೆ - ಶಿವಕುಮಾರ್, ಮಾರುತಿ, ಹರ್ಷ, ಅಮೋಲ್ ಮತ್ತು ನಾನು ಸಹೋದ್ಯೋಗಿಗಳು, ಕುಮಾರಪರ್ವತ ಚಾರಣ ಮಾಡಬೇಕೆಂಬ ಸಂಕಲ್ಪ ಮಾಡಿದೆವು. ಅದರಂತೆ ಒಂದು ಪುಟ್ಟ ಯೋಜನೆಯನ್ನು ರೂಪಿಸಲು ಯೋಚಿಸಿದೆವು. ಬಹಳ ವಾದ ವಿವಾದಗಳಿಗೆ ಆಸ್ಪದ ನೀಡಿದ್ದ ನಮ್ಮ ಯೊಜನೆ ಅಂತೂ ಸಿದ್ಧಗೊಂಡಿತ್ತು. ಯೋಜನೆಯಲ್ಲಿ ಎರೆಡು ಅಂಶಗಳು : ನಾವು ಒಯ್ಯುವ ಸಾಮಗ್ರಿಗಳು ಮತ್ತು ವೇಳಾಪಟ್ಟಿ.

ಯೋಜನೆಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ -"ಸೋಮವಾರ ಪೇಟೆಗೆ ರಾತ್ರಿ ಪ್ರಯಾಣ ಮಾಡಿ, ಅಲ್ಲಿಂದ ಮುಂಜಾನೆ ೧೦-೧೫ ಕಿ.ಮೀ ದೂರದ ಪುಷ್ಪಗಿರಿಯೆಂಬ ಬೆಟ್ಟದ ತಪ್ಪಲಿನ ಊರಿಗೆ ಹೋಗಿ, ಅಲ್ಲಿಂದ ಹತ್ತಲು ಪ್ರಾರಂಭಿಸುವುದು. ಬೆಟ್ಟದ ತುದಿಯೇರಿ, ರಾತ್ರಿ ಕಳೆದು, ಇನ್ನೊಂದು ಬದಿಯಿಂದ ಇಳಿದು ಸುಬ್ರಹ್ಮಣ್ಯ ಸೇರುವುದು. ಇಳಿಯುವಾಗ ಮಾರ್ಗ ಮಧ್ಯದಲ್ಲಿ ’ಭಟ್ಟ’ರ (ಬೆಟ್ಟದ ಮೇಲೆ ಮನೆ ಮಾಡಿರುವ ಪುಣ್ಯಾತ್ಮನ) ಮನೆಯಲ್ಲಿ ಉದರ ಪೋಷಣೆ ಮತ್ತು ಒಡಲ ಪೋಷಣೆ ಮಾಡಿಕೊಂಡು ಇಳಿಯುವುದು. ಸುಬ್ರಹ್ಮಣ್ಯದಲ್ಲಿ ಕುಮಾರಧಾರೆಯಲ್ಲಿ ಮಿಂದು, ದೇವರ ದರ್ಶನ ಮಾಡಿಕೊಂಡು, ಭಾನುವಾರ ರಾತ್ರಿ ಅಥವಾ ಸೋಮವಾರ ಮುಂಜಾನೆಯ ಹೊತ್ತಿಗೆ ಬೆಂಗಳೂರು ಸೇರುವುದು".

ನಿಶ್ಚಯಿಸಿದಂತೆ ಕ.ರಾ.ರ.ಸಾ.ಸಂ. ಬಸ್ ನಿಲ್ದಾಣದಲ್ಲಿ ಸೇರಿ, ಮುನ್ನವೇ ಕಾದಿರಿಸಿದ್ದ (’ಮಲೆನಾಡ ಮಿಂಚು’ ಎಂಬ ಬಿರುದಾಲಂಕೃತ) ಬಸ್ಸನ್ನು ಏರಿದೆವು. ನಮ್ಮ ’ಮಿಂಚು’ ಎಷ್ಟು ನಿಧಾನವಾಗಿ ಸಾಧ್ಯವೋ ಅಷ್ಟು ನಿಧಾನವಾಗಿ ’ಓಡಿತು’. ಟ್ರಾಕ್ಟರ್ ಗಳಿಂದೆಲ್ಲ ಹಿಂದಿಕ್ಕಲ್ಪಟ್ಟಿತು! ನಮಗೇನು? ಮುಂಜಾನೆಯ ಒಳಗಾಗಿ, ಸೋಮವಾರ ಪೇಟೆಯಲ್ಲಿ ಎಸೆದರೆ ಸಾಕೆಂದು ಸಮಾಧಾನದಿಂದ ’ಕಾಡು ಹರಟೆ’ಗೆ ತೊಡಗಿದೆವು. ಪಾಪ ಕನ್ನಡ ಬಾರದ ಅಮೋಲನಿಗೆ ಬೇಸರ ಬಂದು ನಿದ್ದೆ ಹೋದನು. ಸರಿಸುಮಾರು ೧ ಘಂಟೆಯವರೆಗೂ ಶಕ್ತಾನುಸಾರ ಹರಟೆ ಕೊಚ್ಚಿ, ಒಬ್ಬೊಬ್ಬರೆ ನಿದ್ದೆ ಹೋದೆವು. ಹರಟೆ ನಿಷ್ಪ್ರಯೋಜಕ ಎಂದು ಯಾರು ಹೇಳಿದ್ದು? ಅದು ಬಾಯಿಯ ಚಪಲ ತೀರಿಸುವುದಲ್ಲದೆ ಆತ್ಮೀಯತೆ, ಒಗ್ಗಟ್ಟುಗಳನ್ನು ಬಲಪಡಿಸುತ್ತದೆ (ಎಂದು ಯಾರೋ ಹೇಳಿದ ನೆನಪು!)

ಹಾಗೂ ಹೀಗೂ, ಒಂದೆರೆಡು ಕಂತುಗಳಲ್ಲಿ, ಒಟ್ಟು ೩ ತಾಸು ನಿದ್ದೆ ಹೊಡೆದೆ. ಕಿಟಕಿಯ ಮಗ್ಗುಲಲ್ಲಿ ಕುಳಿತಿದ್ದರಿಂದ, ಸ್ವಲ್ಪವೇ ತೆರೆದ ಕಿಟಕಿಯಿಂದ ಒಂದು ರೀತಿಯ ಕಂಪಾದ ಗಾಳಿಯು ಮೂಗಿಗೇರಿ, ಸಹಸ್ರಾರು ನರಗಳನ್ನು ಉದ್ರೇಕಿಸಿ ನನ್ನನ್ನು ಎಚ್ಚರಿಸಿತು. ಬಸ್ಸು ಆಗಲೇ ಮಲೆನಾಡನ್ನು ಪ್ರವೇಶಿಸಿಯಾಗಿತ್ತು. ಒಳಗಿನ ದೀಪಗಳೆಲ್ಲವೂ ಆರಿದ್ದವು. ಅರೆ ಬೆಳದಿಂಗಳ ಮತ್ತು ಬಸ್ಸಿನ ಬದಿಗೆ ಬೀಳುತ್ತಿದ್ದ ಹೆಡ್‌ಲೈಟಿನ ಮಂದ ಬೆಳಕಿನ ಮಿಶ್ರಣದಲ್ಲಿ, ಕಾಡಿನ ಎತ್ತರದ ಮರಗಳು ಮಬ್ಬು ಮಬ್ಬಾಗಿ, ಆಪ್ಯಾಯಮಾನವಾಗಿ ಕಾಣುತ್ತಿದ್ದವು. ನಿದ್ದೆ ಸಂಪೂರ್ಣವಾಗಿ ಆರಿಹೋಗಿತ್ತು. ಕಿಟಕಿಯೆಡೆ ಮಗ್ಗುಲಾಗಿ ಸುಖಾನುಭವವನ್ನು ಮುಂದುವರೆಸಿದೆ. ಅಪರಾತ್ರಿಯಲ್ಲೂ ಇಂತಹ ಚೈತನ್ಯ ಸೂಸುವ ಶಕ್ತಿ ಇನ್ಯಾರಿಗಿದೆ?

ಬಸ್ಸು ಘಟ್ಟಗಳಲ್ಲಿ ತಿರುಗುತ್ತಾ, ಸಮವೇಗದಲ್ಲಿ ಏರುತ್ತ ಇಳಿಯುತ್ತಿರುವಾಗ ಸೀಟಿನಲ್ಲಿ ರುಂಡ ಮುಂಡಗಳು ಅತ್ತಿತ್ತ ಓಲಾಡುತ್ತ, ಕಾಡಿನ ನಿಶಾ ಸೌಂದರ್ಯ ಸವಿಯುತ್ತಾ, ಅಲ್ಲಲ್ಲಿ ಕಾಫಿ ಗಿಡಗಳ ಕಂಪನ್ನು ಬಲವಾಗಿ ಹೀರಿ ಎದೆ ತುಂಬಿಸಿಕೊಳ್ಳುತ್ತಾ, ನಶೆ ಏರಿ ಏನನ್ನೂ ಯೋಚಿಸದ ಸ್ಥಿತಿ ತಲುಪಿ, ಧೈನ್ಯ ಭಾವ ತಾಳಿದ್ದೆ. ಮಲೆನಾಡ ಸ್ವಾಗತಕ್ಕೆ ಬೆರಗಾದೆ.

ಅಷ್ಟರಲ್ಲಿ ’ಶನಿವಾರ ಸಂತೆ’ ಬಂತು. ರಸ್ತೆ ಬದಿಯ ಬಹುತೇಕ ಕಟ್ಟಡಗಳು ಮಳಿಗೆಗಳಾಗಿದ್ದವು. ಆ ಪಟ್ಟಣ ವ್ಯಪಾರೀ ಕೇಂದ್ರವೆಂದು ತೋರುತ್ತದೆ. ಕಂಡ ಅಲ್ಪಸ್ವಲ್ಪ ಮನೆಗಳು ಪ್ರಾಚೀನ ಮಾದರಿಯವುಗಳಾಗಿದ್ದರೆ, ಸರ್ಕಾರಿ ಕಟ್ಟಡಗಳು ಬ್ರಿಟೀಷ್ ಮಾದರಿಯಲ್ಲಿದ್ದವು. ಪಟ್ಟಣವು ಕಾಲರೇಖೆಯಲ್ಲಿ ಇನ್ನೂ ಹಿಂದಿರುವಂತೆ ಕಂಡಿತು. ಗತದರ್ಶನವಾದಂತಾಯಿತು. ಬಾಲ್ಯದ ನೆನಪುಗಳು ಕಣ್ಣ ಮುಂದೆ ಕುಣಿದವು.

[ಸಮಾನ್ಯವಾಗಿ ನಾವೆಲ್ಲರೂ, ’ಭೂತ’ವನ್ನು (ವಿಶೇಷವಾಗಿ ಬಾಲ್ಯವನ್ನು) ಪ್ರೀತಿಸುತ್ತೇವೆ. ಕೆಲವರಂತೂ ಭೂತದಲ್ಲೇ ಜೀವಿಸುತ್ತಾರೆ. ಅಂಥವರಲ್ಲಿ ನಾನೂ ಒಬ್ಬ. ತಪ್ಪೊ ಒಪ್ಪೊ, ನನಗಂತೂ ಅದೇ ಇಷ್ಟ.]

ಇನ್ನೂ, ೪.೩೦ ಆಗುತ್ತಿದ್ದಂತೆಯೇ, ಸೋಮವಾರಪೇಟೆ ತಲುಪಿದೆವು. ಇಷ್ಟು ಬೇಗನೆ ತಂದೆಸೆದದ್ದಕ್ಕೆ ಡ್ರೈವರನನ್ನು ಬಯ್ಯುತ್ತ ಇಳಿದೆವು. ಮುಂದೇನೆಂದು ಮೈಮುರಿಯುತ್ತ, ಆಕಳಿಸುತ್ತ ಯೋಚಿಸಿದೆವು. ನಿತ್ಯಕರ್ಮಗಳಿಗೆ ಒಂದು ಲಡ್ಜ್ ಮಾಡುವುದೆಂದೂ, ಅದರ ಮುನ್ನ ಒಮ್ಮೆ ಈ ಊರಿನ ಬೀದಿಗಳಿಗೆ ನಮ್ಮ ದರ್ಶನ ಭಾಗ್ಯ ಕೊಟ್ಟು ಬರೋಣವೆಂದು ನಿರ್ಧರಿಸಿ ಹೊರಟೆವು. ಫೋಜು ಕೊಡುತ್ತ ಕ್ಯಾಮೆರಾ ಕ್ಲಿಕ್ಕಿಸಿದೆವು. ಅಲೆದಾಡಿದೆವು. ಹರ್ಷನಂತೂ ಹರ್ಷದಿಂದ "ಈ ಊರು ಕ್ಲಾಸ್ ಅದ" ಎಂದು ಒಂದೇ ಸಮನೆ ಉದ್ಗರಿಸತೊಡಗಿದನು. ಬಾಲ್ಯ ಮರುಕಳಿಸಿದಂತೆ ಆಡತೊಡಗಿದನು. ನಮ್ಮಲ್ಲಿಯ ಏಕೈಕ ಮನೊರಂಜನೆಯೆಂದರೆ ಅವನೆ! ಅವನ ಸಾಂಕ್ರಾಮಿಕ ನಗೆಯ ಶೈಲಿ, ಸಿಲ್ಲಿ ಜೋಕ್‍ಗಳಿಗೂ ನಗುವಂತೆ ಮಾಡಿತ್ತು. ಶಿವಣ್ಣನನ್ನು (ಶಿವಕುಮಾರನನ್ನು ಪ್ರೀತಿಯಿಂದ ಹಾಗೆ ಕರೆಯುತ್ತಿದ್ದೆವು) ಅವನು ಕಾಡುತ್ತಿದ್ದ ರೀತಿ, ಕಾಮಿಡಿ ಧಾರಾವಾಹಿ ನೋಡಿದಂತಾಗಿತ್ತು.

ಲಾಡ್ಜಿನಲ್ಲಿ ಹರ್ಷನ ಬಾಲ್ಯ ಲೀಲೆ ಮುಂದುವರೆದಿತ್ತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಬಾಟಲಿಗಳಿಗೆ ನೀರು ತುಂಬಿಸಿಕೊಂಡು ರೂಮ್ ಖಾಲಿ ಮಾಡಿದೆವು. ಸಮಯ ೬.೩೦. ಎಲ್ಲೆಲ್ಲೂ ಮುಸುಕು ಮಂಜು. ತಿಳಿ ನೀಲಿ ಬಣ್ಣದ ಶುಭ್ರ ಬಾನು, ನಮ್ಮ ಕೈಂಕರ್ಯಕ್ಕೆ ಶುಭಸೂಚನೆಯಂತಿತ್ತು. ಹೊರಡುವಾಗ ರೂಮ್‍ಬಾಯ್ "ಹಾವಿರುತ್ತವೆ, ಹುಶಾರ್ ಸಾರ್" ಎಂದು ಎಚ್ಚರಿಸಿ, ನನ್ನ ತಲೆಗೆ ಹುಳ ಬಿಟ್ಟಿದ್ದ. ಹಾವು ಕಚ್ಚಿದರೆ ಮಾಡುವ ಮೊದಲ ಚಿಕಿತ್ಸೆಯನ್ನು ನೆನಪಿಸಿಕೊಂಡೆ - ಅದು ಎಲ್ಲರಿಗೂ ಗೊತ್ತೆಂದು ಖಾತ್ರಿ ಮಾಡಿಕೊಂಡೆ. ಎಷ್ಟು ಪ್ರಯತ್ನ ಪಟ್ಟರೂ, ಹುಳ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಲೇ ಇತ್ತು. ಹೋಟೆಲೊಂದನ್ನು ಹೊಕ್ಕು, ಗಡತ್ತಾಗಿ ಇಡ್ಲಿ ಚಟ್ನಿ ತಿಂದೆವು; ಸಾಕಷ್ಟನ್ನು ಕಟ್ಟಿಸಿಕೊಂಡೆವು.

ಪುಷ್ಪಗಿರಿಗೆ (ಖಾಸಗೀ) ಬಸ್ಸಿದ್ದಿದ್ದು. ೭.೩೦ಕ್ಕೆ. ಬೆ.ಮ.ಸಾ.ಸಂ. ಬಸ್ಸುಗಳಲ್ಲಿ ಅಲೆದಾಡಿ ’ಅನುಭವಸ್ಥ’ನಾದ ನಾನು, ಜವಾಬ್ದಾರಿಯಿಂದ ಎಲ್ಲರಿಗೂ ಸೀಟ್ ಹಿಡಿದೆ. ನಮ್ಮ ಭಾರೀ ಭಾರೀ ಬ್ಯಾಗುಗಳನ್ನು ತೊಡೆಯ ಮೇಲೇರಿಸಿಕೊಂಡು, ಕೈಗೊಂದು ನೀರಿನ ಬಾಟಲಿ ಹಿಡಿದುಕೊಂಡು ಕುಂತೆವು. ಮಾರುತಿಯ ಬಿ.ಎಸ್.ಎನ್.ಎಲ್ ಮೊಬೈಲಿನಲ್ಲಿ ಸಿಗ್ನಲ್ ಇತ್ತು. ಮನೆಗೆ ಫೋನ್ ಹಾಯಿಸಿದೆವು. ಬಸ್ ಹೊರಟಿತು. ನಮ್ಮೆಲ್ಲರ ದೃಷ್ಠಿ ಕಿಟಕಿಯ ಮೂಲಕ ಹಾಯ್ದು ರಸ್ತೆಯ ಬದಿಯಿಂದ ಹಿಡಿದು - ದಿಗಂತದ ಪರ್ವತಗಳವರೆಗೆ ಇಣುಕಿತ್ತು. ಇದ್ದಕ್ಕಿದ್ದಂತೆ ನಾವೆಲ್ಲ ಅರಿವಿಲ್ಲದಂತೆ ಅಂತರ್ಮುಖಿಗಳಾಗಿದ್ದೆವು.

ಕ್ರಮೇಣ ಬಸ್ ಭರ್ತಿಯಾಯಿತು. ಅವರಲ್ಲಿ ಹೆಚ್ಚು ಮಂದಿ ಕಾಫಿ ತೋಟದ ಕೂಲಿಯಾಳುಗಳು ಮತ್ತು ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು. ವಿಧ್ಯಾರ್ಥಿಗಳಂತೂ ಹತ್ತುತ್ತಿದ್ದಂತೆಯೇ ಎದುರಿನಲ್ಲೇ ಕುಳಿತಿದ್ದ ತಮ್ಮ ಶಿಕ್ಷಕಿಯನ್ನು ಕಂಡು "ನಮಸ್ತೆ ಮೇಡಂ" ಎಂದು ಎರೆಡೂ ಕೈಗಳನ್ನು ಜೋಡಿಸಿ (ದೇವರಿಗೆ ವಂದಿಸುವಂತೆ) ತಲೆಬಾಗಿ ನಮಸ್ಕರಿಸುತ್ತಿದ್ದರು. ಆ ಕ್ಷಣ ನಮ್ಮೆಲ್ಲರ ಹೃದಯಗಳು ಮೆಚ್ಚುಗೆಯಿಂದ ತುಂಬಿ ಬಂದವು. ಕ್ರಮೇಣ ಎಲ್ಲರೂ ಇಳಿದು ವಿಧ್ಯಾರ್ಥಿಗಳು ಮಾತ್ರ ಉಳಿದರು. "ವಿಧ್ಯಾರ್ಥಿಗಳಿಗೆ ಮಾಸಿಕ ಪಾಸ್ ಇಲ್ವೇ?" ಎಂದು ಹರ್ಷ ಕೇಳಿದ್ದಕ್ಕೆ ಕಂಡಕ್ಟರ್ ಉತ್ತರಿಸಿದ "ವಿಧ್ಯಾರ್ಥಿಗಳಿಗೆ ಟಿಕೇಟೇ ಇಲ್ರಿ"

ಪುಷ್ಪಗಿರಿ ಹತ್ತಿರವಾದಂತೆ, ರಸ್ತೆ ಕಿರಿದಾಗುತ್ತಾ ಹೋಯಿತು. "ಈ ರಸ್ತೆಯಲ್ಲಿ ಬಸ್ ಹೋಗುವುದೇ!" ಎಂಬುವಷ್ಟು ಕಿರಿದಾಯಿತು. ಗಿಡಗೆಂಟೆಗಳು ಕಿಟಕಿಗಳೊಳಗೆ ಇಣುಕಿ ನೋಡುತ್ತಿದ್ದವು. ನೋಡನೋಡುತ್ತಿದ್ದಂತೆ ಪುಷ್ಪಗಿರಿ ಬಂದೇ ಬಿಟ್ಟಿತ್ತು. ಚಾಲಕನ ಚಾಕಚಕ್ಯತೆಯನ್ನು ಮೆಚ್ಚುತ್ತಾ ಇಳಿದೆವು. ಶಾಲಾಮಕ್ಕಳೂ ಇಳಿದರು. ಎದುರಿಗೆ ಕಂಡದ್ದು ಒಂದು ಚೊಕ್ಕ ಶಾಲೆ. ಅದು ಬಿಟ್ಟರೆ ದೂರದ ವೃಕ್ಷಾವೃತ ಬೆಟ್ಟಗಳು. ನಾನೂ ಇಲ್ಲಿಯೇ ಹುಟ್ಟಿ, ಈ ಶಾಲೆಯಲ್ಲೇ ಒದಿದ್ದರೆ ಹೇಗಿರುತ್ತಿತ್ತು?! ಹಾಗೆ ಓದುತ್ತಿದ್ದಾಗ ಚಾರಣ ಮಾಡಲು ಬರುತ್ತಿದ್ದ ನನ್ನಂಥವರನ್ನು ’ಆ ನಾನು’ ಹೇಗೆ ನೋಡುತ್ತಿದ್ದೆ? - ಎಂದೆಲ್ಲ ಯೋಚಿಸತೊಡಗಿದೆ. ಅಷ್ಟರಲ್ಲಿ ಅಮೋಲ್ ಹೇಳಿದ - "ಇನ್ಕೆ ಜೀವನ್ ಕಿತ್ನೀ ಸರಲ್ ಹೈನಾ?"

೨. ಹತ್ತಿದ್ದು.
ಇಲ್ಲಿಂದ ಮುಂದಿನದೆಲ್ಲ ಬರೀ ಬೆವರಿನ ಕಥೆ!

ಕ್ಯಾಮೆರಾಗಳನ್ನು ಹೊರತೆಗೆದು ನಡೆಯಲಾರಂಭಿಸಿದೆವು. ಬೆಟ್ಟದ ಬುಡದ ಅರಣ್ಯ ಇಲಾಖೆಯ ಚೆಕ್ ಪೋಸ್ಟಿಗೆ ಇನ್ನೂ ೩-೪ ಕಿ.ಮಿ. ಏರು ದಾರಿ ಸವೆಸಬೇಕಾಗಿತ್ತು. ಅಲ್ಲಲ್ಲಿ ಮನೆಗಳು, ಕಾಡು ಕಡಿದು ಮಾಡಿದ ಹೊಲ ಗದ್ದೆಗಳು. ಸಣ್ಣ ಪರಿಶುಧ್ಧ ನೀರಿನ ಚರಂಡಿಗಳನ್ನು ನೋಡುತ್ತಾ, ನಶ್ಯಬ್ಧ ಪ್ರಶಾಂತ ವಾತಾವರಣದಲ್ಲಿ ಹರಟುತ್ತಾ ಸಾಗಿದೆವು.

ನಡುವೆ ಒಂದು ಈಶ್ವರನ ದೇವಸ್ಥಾನ ಎದುರಾಯಿತು. ದೇವಸ್ಥಾನ ತಲುಪುವಷ್ಟರಲ್ಲೇ, ನಾವೆಲ್ಲ ಏದುಸಿರು ಬಿಡುತ್ತಿದ್ದೆವು. ನಮ್ಮ ಲಗೇಜ್‍ಗಳನ್ನೆಲ್ಲ ಇಳಿಸಿ, ಶೂ ಬಿಚ್ಚಿ, ಅಲ್ಲಿಯೇ ಇದ್ದ ನಲ್ಲಿಗಳಲ್ಲಿ ಕೈ ಕಾಲ್ ಮುಖಗಳನ್ನು ತೊಳೆದೆವು. ಬೆಟ್ಟದ ಆ ತಣ್ಣನೆಯ ನೀರು ಬೆಚ್ಚಗಿನ ಮುಖಕ್ಕೆ ತಾಗಿ, ಹಣೆಯ ಗೆರೆಗಳನ್ನು ನಿವಾರಿಸಿತು. ಕಣ್ಣರಳಿಸಿತು.

ದೇವಸ್ಥಾನ ಪ್ರವಶಿಸಿದೆವು. ದೇವಸ್ಥಾನದ ರಚನೆ ವಿಶಿಷ್ಟವಾಗಿತ್ತು. ನಮ್ಮಲ್ಲಿರುವಂತಲ್ಲ; ನಾಲ್ಕು ಮೂಲೆಗಳಲ್ಲಿಯೂ ಸೊಂಟದೆತ್ತರದ ಕೋಣೆಗಳು; ಒಂದೊಂದರಲ್ಲಿಯೂ ಒಂದೊಂದು ದೇವರು. ದೇವಸ್ಥಾನದ ಎಡಭಾಗದ ಕೋಣೆಗಳು ಪರಸ್ಪರ ಅಭಿಮುಖವಾಗಿದ್ದವು. ಹಾಗೆಯೇ ಬಲಬಾಗದ ಕೋಣೆಗಳು. ಮಹಾಮಂಗಳಾರತಿಗೆ ಸಿದ್ಧತೆಗಳು ನಡೆಯುತ್ತಿತ್ತು. ಪೂಜಾರಿಗಳು - "ಇನ್ನೂ ೧೫ ನಿಮಿಷಗಳಾಗುತ್ತದೆ" ಎಂದಾಗ ಹೊರಬಂದು ದೇವಾಲಯದ ಪಕ್ಕದಲ್ಲಿದ್ದ ವಿಶಾಲ ಆಲದ ಮರದ ಕಟ್ಟೆಯಲ್ಲಿ ಕಾಲು ಚಾಚಿ ಕುಳಿತೆವು. ಆ ವಿಶಾಲ ತಂಪು ನೆರಳು ಹಿತವಾಗಿತ್ತು. ಆ ಮರ ನಮ್ಮೂರಲ್ಲಿದ್ದಿದ್ದರೆ ಸದಾಕಾಲ ಕ್ರಿಕೆಟ್ ನಡೆಯುತ್ತಿತ್ತು. ಒಂದೆರಡು ಫೋಟೋ ಹೊಡೆದೆವು.

ಈ ಫೋಟೋಗಳು ಕೇವಲ ನಮ್ಮ ನೆನಪಿನಾಳದ ಚಿತ್ರಗಳನ್ನು ಹೊರತೆಗೆಯಲು ಇರುವ ಕೀಲಿಕೈ ಇದ್ದಂತಷ್ಟೇ. ಫೋಟೋಗಳಲ್ಲಿ ಬಣ್ಣಮಾತ್ರವಿರುತ್ತದೆ. ಆದರೆ ಮನಸ್ಸಿನ ಚಿತ್ರದಲ್ಲಿ, ಭಾವ ಹಾಗೂ ಸುತ್ತಮುತ್ತಲಿನ ವಾತಾವರಣ, ಪರಿಸರ ಸಮ್ಮಿಳಿತವಾಗಿರುತ್ತದೆ. ಹೀಗಾಗಿ, ಫೋಟೋಗಳನ್ನು ಇತರರಿಗೆ ತೋರಿಸಿದಾಗ, ನಮಗಾದಷ್ಟೇ ಸಂತೋಷ ಅವರಿಗಾಗದು. ಅನುಭವವೇ ಬೇರೆ, ವರ್ಣನೆಯೇ ಬೇರೆ.

ಸ್ವಲ್ಪ ಹೊತ್ತಿಗೆ ಇನ್ನೊಂದು ತಂಡವೊಂದು ದೇವಸ್ಥಾನಕ್ಕೆ ಬಂತು. ಆ ತಂಡದ ’ಕ್ಯಾಪ್ಟನ್’ - ವೆಂಕಿ. ಪರಸ್ಪರ ಪರಿಚಯ ಮಾಡಿಕೊಂಡೆವು. ನಾವು ಸ್ಲೀಪಿಂಗ್ ಬ್ಯಾಗ್ ತರದಿರುವುದನ್ನು ನೋಡಿ - "ಪೀಕಲ್ಲಿ ಸಿಂಗಲ್ ಡಿಜಿಟ್ ಟೆಂಪರೇಚರ್ ಇರುತ್ತೆ. ತೀವ್ರ ಚಳಿಯಿರುತ್ತೆ. ಮಂಜಿನಿಂದ ನಿಮ್ಮ ಹೊದಿಕೆ ಒದ್ದೆಯಾಗಿ ಹೋಗುತ್ತದೆ" ಎಂದು ಎಚ್ಚರಿಸಿದನು.

ಅಷ್ತೊತ್ತಿಗೆ ದಣಿವಾರಿ ನಾವೆಲ್ಲ ಸಹಜ ಸ್ಥಿತಿಗೆ ಮರಳಿದ್ದೆವು. ಮಂಗಳಾರತಿಗೆ ದೇವಾಲಯಕ್ಕೆ ಹಿಂತಿರುಗಿದೆವು. ಪೂಜೆಯ ನಂತರ ಮುತುಕದ ಎಲೆಯಲ್ಲಿ ಕೊಟ್ಟ ಗೋಧಿ ಪಾಯಸವನ್ನು ಚಪ್ಪರಿಸಿ ಹೊಡೆದೆವು. ಮತ್ಯಾರಿಗೂ ಹಸಿವಿಲ್ಲವಾದ್ದರಿಂದ ಮುಂದೆ ನೀರಿರುವಲ್ಲಿ ತಿಂಡಿ ತಿಂದು ನಮ್ಮ ಬಾಟಲಿಗಳನ್ನು ತುಂಬಿಸಿಕೊಂಡು ಮುಂದುವರೆಯುವುದೆಂದು ನಿರ್ಧರಿಸಿ, ಮಾರುತಿ ತಂದಿದ್ದ ’ಕರದಂಟ’ನ್ನು ಬಾಯಿಗೆ ಹಾಕಿಕೊಂಡು ಹೆಜ್ಜೆ ಹಾಕಿದೆವು.

ಒಂದು ಕಿ.ಮೀ. ದೂರದಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಿಕ್ಕಿತು. (ಅದರ ಸುತ್ತ ಆನೆಗಳ ಉಪಟಳಗಳಿಂದ ಪಾರಾಗಲು ಗುಂಡಿ ತೆಗೆದಿದ್ದರು). ತಲೆಗೆ ೨೦ರಂತೆ ಪ್ರವೇಶ ಶುಲ್ಕ ನೀಡಿ, ಅರಣ್ಯ ಪ್ರವೇಶಿಸಿದೆವು. ಒಂದು ಚಿಕ್ಕ ತೊರೆಯನ್ನು ಕಾಲಲ್ಲೇ ದಾಟಿದೆವು (ಅದಕ್ಕೆ ಕಟ್ಟಿದ್ದ ತೂಗು ಸೇತುವೆ ಮುರಿದು ಹೋಗಿತ್ತು). ಒಳಗೆ ಹೋದಂತೆಲ್ಲ ಕಾಡು ದಟ್ಟವಾಗಿ, ರವಿಯ ಕಿರಣಗಳು ಕೇವಲ ಇಣುಕಲಷ್ಟೇ ಸಾಧ್ಯವಾಗಿತ್ತು. ಶಕ್ತಿಯ ಉಪಯುಕ್ತ ಬಳಕೆಗಾಗಿ ಮೌನವಾಗಿ, ಹಸಿರನ್ನು ಆಸ್ವಾದಿಸುತ್ತಾ, ಪಕ್ಷಿ ಸಂಕುಲದ - "ಜುಂಯ್‍ಯ್", "ಟರ್ ಕುಟ್ ಪರ್ ಕುಟ್", "ಚೀಂವ್ ಚೀಂವ್" ನಿನಾದಗಳನ್ನು ಸವಿಯುತ್ತಾ ನಡೆದೆವು. ಕ್ಯಾಮೆರಾಗೆ ಕೆಲಸ ಕಡಿಮೆಯಾಯಿತು.

ಅಕ್ಕಪಕ್ಕದಲ್ಲಿ ಸಣ್ಣ ತೊರೆಗಳು, ಚಿಕ್ಕ ಜಲಪಾತಗಳು ಕಂಡುಬಂದರೂ, ಅಲ್ಲಿ ನಿಲ್ಲುವ ಸಮಯವಿಲ್ಲದೆ, ಸ್ವಲ್ಪ ನಿರಾಸೆಯಿಂದಲೇ ಮುನ್ನಡೆದೆವು. ನಮ್ಮ ಮುಖ್ಯ ಗುರಿಯ ದೆಸೆಯಿಂದ, ಇಂಥ ಬಹಳಷ್ಟು ಸಣ್ಣ ಪುಟ್ಟ ತ್ಯಾಗಗಳನ್ನು ಮಾಡಬೇಕಾಯಿತು. ಗುರಿ ಕಷ್ಟವಾದಷ್ಟೂ ಇಂಥ ತ್ಯಾಗಗಳು ಹೆಚ್ಚಾಗುತ್ತವಷ್ಟೇ! ಗುರಿಯ ಮಹತ್ವ ಇಂಥಹ ತ್ಯಾಗಗಳನ್ನು ಮುಚ್ಚುವಂತಿರಬೇಕು.

ಈ ನಡುವೆ ಮನಸ್ಸಿನಲ್ಲಿ ಒಂದು ಪುಟ್ಟ ಕವನ ಹೆಣೆದೆ:

ಕಣ್ಣರಳಿ, ಪದ ತೊದಲಿ,
ಉನ್ಮಾದದಲೆಯಲಿ ತೇಲಿ,
ಕಣ ಕಣ ತಣಿಯುವ ಪರಿ,
ಇನೆಲ್ಲಿ? ನಾಸ್ತಿಕನಾಸ್ತಿನಕಾಗುವನೇ ಸರಿ.

ಅರಿವಿಗೆ ಹೊಳೆದಷ್ಟು ರೀತಿಯಲ್ಲಿ ’ದೇವರ’ನ್ನು ಅರ್ಥೈಸಿಕೊಂಡಿದ್ದ ನಾನು ’ಸತ್ಯಂ ಶಿವಂ ಸುಂದರಂ’ ಎಂಬುದನ್ನು ಮನಗಂಡೆ.

ಈ ನಡುವೆ ವೆಂಕಿಯ ತಂಡವೂ ನಮ್ಮನ್ನು ಕೂಡಿಕೊಂಡಿತು. ಪುನಃ ಸುಮಾರು ೧.೦೦ ಸುಮಾರಿಗೆ, ಹಚ್ಚು ಕಮ್ಮಿ ಬತ್ತಿ ಹೋಗಿದ್ದ ತೊರೆಯೊಂದು ಸಿಕ್ಕಿತು. ರೈತರ ದೇಹದಲ್ಲಿ ಎಲುಬುಗಳು ಮೇಲೆದ್ದಂತೆ, ಅದರ ಒಡಲ ಬಂಡೆಗಳೆಲ್ಲ ಮೇಲೆದ್ದಿದ್ದವು. ವೆಂಕಿಯ ತಂಡವೂ ಅಲ್ಲೇ ತೊರೆಯ ಕೆಳಭಾಗದಲ್ಲಿ ಊಟಕ್ಕೆ ಕೂತಿತು. ಇಡ್ಲಿ, ಚಪಾತಿ, ಸಿಹಿ ಹೋಳಿಗೆ, ಉಪ್ಪಿನ ಕಾಯಿ ಮುಂತಾದ ನಮ್ಮ ಅವಶ್ಯಕತೆಗೆ ವ್ಯತಿರಿಕ್ತವಾಗಿದ್ದ ಭೋಜನವನ್ನೇ ಮಾಡಿದ್ದೆವು. ಪರಿಣಾಮವನ್ನು ನಂತರ ಮನಗಂಡೆವು : "ಭಾರವಾದ ಹೊಟ್ಟೆ, ಹೆಚ್ಚಿದ ಬಾಯಾರಿಕೆ, ಆಯಾಸ". ಆದರೆ ವೆಂಕಿಯ ತಂಡ, ಹಣ್ಣುಗಳು ಮತ್ತು ನೀರಿನ ಅಂಶ ಹೆಚ್ಚಿರುವ ಆಹಾರವನ್ನೇ ಸೇವಿಸಿತ್ತು.

ಮುಂದೆ ದಾರಿ ಕಡಿದಾಗುತ್ತಾ ಹೋಯಿತು. ಕತ್ತಲು ಹೆಚ್ಚಿತು. ಆಯಾಸ ಹೆಚ್ಚಾಗಿ ಕಾಲಿನ ಸೆಳೆತ ಪ್ರರಂಭವಾಯಿತು. ಸುಮಾರು ೩.೩೦ ಕ್ಕೆ ಶಿಖರಕ್ಕೆ ಇನ್ನೂ ಎಷ್ಟು ದೂರವೆಂದು ಕೇಳಲು ವೆಂಕಿ ಹೇಳಿದ್ದಿಷ್ಟು:

"ಇನ್ನೂ ಸುಮಾರು ಒಂದೂವರೆ ತಾಸಾಗುತ್ತದೆ. ಮುಂದಿನ ದಾರಿ ಇನ್ನೂ ಕಡಿದಾಗಿದೆ. ನಿಮಗೆ ಹತ್ತಲು ಸಾಧ್ಯವೇ ಇಲ್ಲ ಎನ್ನುವುದಾದರೆ, ಶಿಖರ ಏರದೆಯೇ ಈ ಮಟ್ಟದಲ್ಲೇ ಬೆಟ್ಟವನ್ನು ಬಳಸಿ, ಭಟ್ಟರ ಮನೆಯನ್ನು ಕೂಡುವ ಪರ್ಯಾಯ ದಾರಿಯೊಂದಿದೆ. ಆ ದಾರಿ ಒಂದಷ್ಟು ದೂರ ಸಮತಟ್ಟಾಗಿದ್ದು, ನಂತರ ಇಳಿಜಾರಿದೆ. ತ್ರಾಸಾಗಲಾರದು. ಹಾಗೇ ಹೋದರೆ ಸುಮಾರು ೨ ತಾಸಾಗುತ್ತದೆ. ಆದರೆ ನಿಮ್ಮ ಈ ಸ್ಥಿತಿಯನ್ನು ನೋಡಿದರೆ ೩ ತಾಸಾಗಬಹುದು. ಕತ್ತಲೂ ಆಗಬಹುದು. ಕತ್ತಲಲ್ಲಿ ದಾರಿ ತಪ್ಪದಂತೆ ನಡೆಯಬೇಕು. ಇನ್ನು ಸ್ವಲ್ಪ ದೂರದಲ್ಲಿಯೇ ಕಾಡು ಮುಗಿಯುತ್ತದೆ. ಹುಲ್ಲು ಮತ್ತು ಬಡೆಕಲ್ಲುಗಳಿರುವ ಇಳಿಜಾರು ಸಿಗುತ್ತದೆ. ಅಲ್ಲಿಂದಲೇ ಭಟ್ಟರ ಮನೆ ಕಾಣುತ್ತದೆ. ಅಲ್ಲಿಂದ ನಿಮ್ಮ ದೃಷ್ಠಿ ಭಟ್ಟನ ಮನೆಯ ಮೇಲೇ ಇದ್ದರೆ ಸಾಕು.."

"ಸಂಪೂರ್ಣ ಕತ್ತಲಾಗುವುದರೊಳಗಾಗಿ ನಾವು ತಲುಪಲಾಗದಿದ್ದರೆ? ನರದ ಸೆಳೆತ ಹೆಚ್ಚಾಗಿ ಈ ಕಡೆ ಶಿಖರವನ್ನೂ ತಲುಪಲಾಗದಿದ್ದರೆ? ರಾತ್ರಿ ಕಾಡಿನಲ್ಲೇ ತಂಗಬೇಕಾದರೆ?" ಎಂಬ ಪ್ರಶ್ನೆಗಳಿಂದ ನಮ್ಮಲ್ಲಿ ಸಣ್ಣ ಭಯ ಆವರಿಸಿತು. ನಾನು ಸುಲಭವಾದ ಭಟ್ಟರ ಮನೆಯ ದಾರಿಯನ್ನೇ ಹಿಡಿಯೋಣವೆಂದೆ. ನನ್ನ ದೇಹದ ದಣಿವಿಗಿಂತ ಮಾನಸಿಕ ದಣಿವು ಹೆದರಿಕೆಗಳು ನನ್ನ ಆಯ್ಕೆಗೆ ಕಾರಣವಾಗಿದ್ದವು. ಮಾರುತಿ ಮತ್ತು ಅಮೋಲ್ ತಮ್ಮ ನಿಶ್ಚಯದಲ್ಲಿ ಅಚಲರಾಗಿದ್ದರು - "ಎಷ್ಟೇ ಕಷ್ಟವಾಗಲಿ, ಏರಿಯೇ ತೀರೋಣ; ಎಂಥ ಚಳಿಯೇ ಆಗಲಿ, ಸಹಿಸೋಣ; ಇಷ್ಟು ದೂರವೇ ಬಂದಿದ್ದೇವೆ, ಹಾಗೇ ಹಿಂದಿರುಗುವುದು ಬೇಡ; ಸೂರ್ಯಾಸ್ತ, ಸೂರ್ಯೋದಯಗಳನ್ನು ನೋಡಿಯೇ ತೀರೋಣ"

“when going gets tough, tough get going” ಎಂಬುದು ನೆನಪಿಗೆ ಬಂತು.

ಹರ್ಷ ಮತ್ತು ಶಿವಣ್ಣನಿಗೆ ನನ್ನಷ್ಟೇ ದಣಿವಾಗಿತ್ತು. ಅವರೂ ಸಹ ನನ್ನ ನಿರ್ಧಾರವನ್ನು ಸಮರ್ಥಿಸಿದರು. ಅಷ್ಟರಲ್ಲಿ ಭಟ್ಟರ ಮನೆಯ ಕಡೆಗೆ ಹೋಗುವ ಕವಲು ಬಂದೇ ಬಿಟ್ಟಿತು. ನಮ್ಮ ದ್ವಂದ್ವ ತೀರಿರಲಿಲ್ಲ. ವಾದ-ವಿವಾದಗಳೆದ್ದವು. ಅಲ್ಲೇ ನಿಂತೆವು. ಸಂಜೆಯ ನಾಲ್ಕಾದರೂ ಮಬ್ಬುಗತ್ತಲು ತೀವ್ರವಾಗುತ್ತಿತ್ತು. ಭಯ ಹೆಚ್ಚಾಯಿತು. ವೆಂಕಿಯ ತಂಡ ನಮ್ಮ ಪ್ರಶ್ನೆಗಳನ್ನು ಪರಿಹರಿಸುತ್ತ ನಮ್ಮೊಡನೆಯೆ ನಿಂತಿತು.

ಕೊನೆಗೆ ಕಾಲಿನ ಸೆಳೆತವೇ ಪ್ರಧ್ಯಾನ್ಯತೆ ಪಡೆದು, ಮಾರುತಿ ಮತ್ತು ಅಮೋಲ್ ನಮ್ಮ ನಿರ್ಧಾರಕ್ಕೇ ಒಪ್ಪಿದರು. ನಾವು ಭಟ್ಟರ ಮನೆಯ ಕಡೆಗೆ ಹೆಜ್ಜೆ ಹಾಕಿದೆವು. ವೆಂಕಿಯ ತಂಡ ಮುಖ್ಯ ದಾರಿಯಲ್ಲಿ ಶಿಖರದೆಡೆ ಏರತೊಡಗಿತು.

ಇಷ್ಟಿಷ್ಟು ದೂರ ನಡೆಯುವಷ್ಟರಲ್ಲಿ ನರದ ಸೆಳೆತಕ್ಕೆ ಒಳಗಾಗುತ್ತಿದ್ದೆ. ಕೂತು ಪರಿಹರಿಸಿಕೊಂಡು ಮುಂದುವರೆಯುತ್ತಿದ್ದೆ. ವೆಂಕಿಯ ನಿರ್ದೇಶನದಂತೆ ಅಲ್ಲಲ್ಲಿ ಸರಿಯಾದ ಕವಲುಗಳನ್ನು ಹಿಡಿಯುತ್ತಾ ಸಾಗಿದೆವು. ಕಾಡು ಮುಗಿದು ಬಯಲು ಸಿಕ್ಕೇ ಬಿಟ್ಟಿತು. ನಿಟ್ಟುಸಿರು ಬಿಟ್ಟೆವು. ಸ್ವಲ್ಪ ದೂರ ಸಾಗುವಷ್ಟರಲ್ಲಿ ಒಂದು ಬೆಟ್ಟದ ತುದಿಯಲ್ಲಿದ್ದೆವು. ಆ ತುದಿಯಲ್ಲಿ ಸುತ್ತಲಿನ ಕಂದರಗಳ ನಡುವಿನಲ್ಲಿ ನಿಂತು, ರಮಣೀಯ ದೃಶ್ಯ ನೋಡಿದಾಗ, ಆಯಾಸವು ತಾತ್ಕಾಲಿಕವಾಗಿ ಮಾಯವಾಯಿತು (ಮನಸ್ಸಿನ ಮತ್ತು ಶರೀರದ ನಡುವಿನ ನಂಟು ಬಹಳ ಜಟವೇ ಸರಿ).

೩. ಇಳಿದಿದ್ದು.
ಸುಬ್ರಮಣ್ಯದಿಂದ ಏರುತ್ತಿದ್ದ ಕೆಲವು ಅನುಭವಸ್ಥ ’ಕ್ಲೈಂಬರ್ಸ್’ ಸಿಕ್ಕಿದರು. ’ಸ್ಲೀಪಿಂಗ್ ಬ್ಯಾಗ್’ ಆಗಲೀ, ಟೆಂಟ್ ಆಗಲೀ ಅವಶ್ಯಕವಿಲ್ಲವೆಂಬಂತೆ ಬಂದಿದ್ದರಿಂದ ಹಾಗೂ ಈ ಸ್ಥಳದಿಂದ ಶಿಖರ ಬಹು ದೂರವಿಲ್ಲವೆಂದು ತಿಳಿದು ಬಂದಿದ್ದರಿಂದ, ಮಾರುತಿ ಅಮೋಲರಿಗೆ ಧೈರ್ಯ ಬಂದು, ಅವರೊಡನೆಯೆ ನಡೆಯಲು ನಿರ್ಧರಿಸಿದರು. ನಾನು, ಹರ್ಷ, ಶಿವಣ್ಣ ಇಳಿಯಲು ಮುಂದಾದೆವು.

ಬೆಟ್ಟ ಇಳಿಯುತ್ತಾ ಇಳಿಯುತ್ತಾ, ಭಟ್ಟರ ಮನೆ ಸ್ಪಷ್ಟವಾಗಿ ಕಾಣತೊಡಗಿತು. ಇನ್ನಷ್ಟು ದೂರದಲ್ಲಿ, ನೆಲಮಟ್ಟದಲ್ಲಿ ನೀರಿನ ತೊರೆಯಿಂದ ಪ್ರಕಾಶಮಾನ ಪ್ರತಿಫಲನವೊಂದು ಕಂದಿತು. ಅದೇ ಕುಮಾರಧಾರೆಯೆಂದು ನಂತರ ತಿಳಿದೆವು.

ಗ್ಲೂಕೋಸ್ ತಿನ್ನುತ್ತಾ, ಕ್ಯಾಮೆರಾ ಕ್ಲಿಕ್ಕುಸುತ್ತಾ ಇಳಿದೆವು. ಇಳಿಯುವಾಗ ಮಂಡಿ ನೋಯಲು ಶುರುವಾಯಿತು. ಚೂಪಾದ ಬಂದೆ ಕಲ್ಲುಗಳ ಮೇಲೆ ಕಾಲಿಟ್ಟು, ಪಾದಗಳೂ ನೋಯಲು ಶುರುವಯಿತು. ಆದರೂ ಹಿಂದಿದ್ದಂಥ ಆತಂಕ, ಅನಿಶ್ಚಿತತೆ ಇರದಿದ್ದುದರಿಂದ, ಪ್ರಶಾಂತ ಚಿತ್ತದಿಂದ ಹರಟುತ್ತಾ ಇಳಿದೆವು. ಆ ಕ್ಷಣ ಇಲ್ಲಿ ಕಣ್ಣು ಮುಚ್ಚಿ, ಅದೋ ಆ ಬೆಟ್ಟದಲ್ಲಿ, ಆ ಮರಗಳ ನಡುವೆ ಕಣ್ಬಿಟ್ಟರೆ ಗತಿಯೇನು? ಎಂದೆಲ್ಲಾ ಕಲ್ಪಿಸಿಕೊಳ್ಳುತ್ತಾ, ನಗುತ್ತಾ ಸಾಗಿದೆವು.

ಮೊದಲು ಫಾರೆಸ್ಟ್ ಗಾರ್ಡಿನ ಕ್ವಾರ್ಟರ್ಸ್ ಸಿಕ್ಕಿತು. ನಾವು ತಂದಿದ್ದ ರಸೀತಿಯನ್ನು ತೋರಿಸಿದೆವು. ಮುಂಜಾನೆ ನಮ್ಮ ಸ್ನೇಹಿತರಿಬ್ಬರು ಬರುವುದಾಗಿ ತಿಳಿಸಿ, ಚೆನ್ನಾಗಿ ನೀರು ಕುಡಿದು, ದಣಿವಾರಿಸಿಕೊಂದು, ಅಲ್ಲಿಯೇ ಹತ್ತಿರವಿದ್ದ ಭಟ್ಟರ ಮನೆಗೆ ಅವನ ಅಡಿಕೆಯ ತೋಟದ ಮೂಲಕ ಹಾದು ಹೋದೆವು.

ಸುಬ್ರಹ್ಮಣಯದಿಂದ ಹತ್ತುವವರು ಕೆಲವರು ಭಟ್ಟರ ಮನೆಯಲ್ಲೇ ತಂಗಿ, ಮುಂಜಾನೆ ಎದ್ದು ಹತ್ತುತ್ತಾರೆ. ಅಂಥವರು ಹತ್ತಾರು ಮಂದಿಯಾಗಲೇ ಅಲ್ಲಿಗೆ ಬಂದಿದ್ದರು. ಕೆಲವರು ಮನೆಯ ಮುಂದಿನ ಒಂದು ವಿಶಾಲ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದರು (ಎಡೆಮಟ್ಟೆಯನ್ನು ಬ್ಯಾಟ್ ಮಾಡಿಕೊಂಡು, ಯಾವುದೋ ಹಣ್ಣನ್ನು ಬಾಲ್ ಮಾಡಿಕೊಂಡು). ಇನ್ನು ಕೆಲವರು ಹರಟುತ್ತಿದ್ದರು.

ಬ್ಯಾಗ್ ಶೂಗಳನ್ನು ಕಳಚಿ ಕೂತು ಕ್ರಿಕೆಟ್ ವೀಕ್ಷಿಸಿದೆವು. ಆ ಅಂಗಳದ ಮೂಲೆಯಲ್ಲಿ (ತೋಟದ ಅಂಚಿನಲ್ಲಿ) ಇಟ್ಟಿದ್ದ ನೀರಿನ ಡ್ರಮ್‍ನಲ್ಲಿ ನೀರು ತೆಗೆದು ಕೈ ಕಾಲು ತೊಳೆದುಕೊಂಡು ’ಫ್ರೆಶ್’ ಆದೆವು. ಕಾಫಿ ಕೇಳಿ ಪಡೆದೆವು. ’ಸೊರ್ರ್ ಸೊರ್ರ್’ ಎಂದು ಹೀರಿದೆವು. (ಆಹಾ! ಪುನರ್ಜನ್ಮ!!) ರುಚಿ ಹೇಗಿತ್ತೆಂದು ನೋಡುವಷ್ಟರಲ್ಲಿ ಲೋಟ ಖಾಲಿಯಾಗಿತ್ತು. ಕ್ರಿಕೆಟ್ಟಿನ ಮುಂದಿನ ’ಸೆಷನ್’ ನೋಡುತ್ತಾ ಕುಳಿತೆವು. ಅಷ್ಟರಲ್ಲಿ ಕತ್ತಲಾಯಿತು. ದೀಪ ಹಚ್ಚಲಾಯಿತು. ಅಲ್ಲಿಗೆ ಬಂದಿದ್ದವರೆಲ್ಲಾ, ತಾವು ತಂದಿದ್ದ ಒಂದು ಬಗೆಯ ಪ್ಲಾಸ್ಟಿಕ್ ಚೀಲವೊಂದನ್ನು ಹಾಸಿಕೊಂಡು ಅಂಗಳದಲ್ಲಿ ಹರಟೆಗೆ ಕೂತರು. ನಾವೇನು ಕಮ್ಮಿ? ಪೇಪರ್ ಹಾಸಿಕೊಂಡು ಕುಳಿತು ನಾವೂ ಹರಟಿದೆವು. ಭೂತ, ವರ್ತಮಾನ, ಭವಿಷ್ಯಗಳನ್ನು ಜಾಲಾಡಿದೆವು.

ತೆರೆದ ಅಂಗಳದಲ್ಲಿ ಹರಟುವುದು ನನಗೇನೂ ಹೊಸದಲ್ಲ. ಆದರೂ ಈ ಬಾರಿ ಹೆಚ್ಚು ಆಪ್ಯಾಯಮಾನವಾಗಿ ಕಂಡಿತು. ತಂಪಾದ ಗಾಳಿಯಲ್ಲಿ ಆಗೊಮ್ಮೆ ಈಗೊಮ್ಮೆ ಕತ್ತೆತ್ತಿ ಚುಕ್ಕಿ ಚಂದ್ರಮ ದರ್ಶನ ಮಾಡುತ್ತಿದ್ದೆವು. ಆಕಳಿಸಿದೆ. ಸಾಂಕ್ರಾಮಿಕವೆಂಬಂತೆ ಎಲ್ಲರೂ ಸರದಿಯೆಂಬಂತೆ ಆಕಳಿಸಿದೆವು. ಹೊಟ್ಟೆಯಲ್ಲಿ ರೌದ್ರ ನರ್ತನ ನಡೆಯುತ್ತಿತ್ತು. ಊಟಕ್ಕೆ ಇದಿರು ನೋಡುತ್ತಿದ್ದೆವು.

"ಊಟ ರೆಡಿ" ಎಂಬ ಬುಲಾವ್ ಬಂದೊಡನೆಯೇ, ಛಂಗನೆ ಹಾರಿ, ಮನೆಯ ಹೊರಕೋಣೆಗೆ ನುಗ್ಗಿದೆವು. ’ಸೆಲ್ಫ್ ಸರ್ವೀಸ್’ ಎಂದು ತಿಳಿಯಿತು. ಪ್ಲಾಸ್ಟಿಚ್ ಚೀಲಗಳನ್ನು ಮಡಚಿ ಹಾಸಿ ಕುಳಿತೆವು. ಕೆಲವು ಸ್ವಯಂ ಸೇವಕರು ಊಟ ಬಡಿಸಿದರು. "ಆಹಾ! ಅದೇನು ರುಚಿ!!" ಚಪ್ಪರಿಸಿಕೊಂಡು, ಎರೆಡೆರೆಡು ಬಾರಿ ಬಡಿಸಿಕೊಂಡು "ಅನ್ನದಾತಾ ಸುಖೀಭವ" ಎಂದು ಹರಸಿ, ಉಂಡೆವು. ಸಮಯ ೯.೦೦. ಇನ್ನೊಂದು ಹೇಳಲೇಬೇಕಾದ ಅಂಶವೆಂದರೆ - ನಮಗೆ ಬೇರೊಬ್ಬರ ಮನೆಗೆ ಬಂದಿರುವಂತೆ ಅನಿಸಲೇ ಇಲ್ಲ. ನಮ್ಮ ಅಜ್ಜಿಯ ಮನೆಗೋ, ಅಜ್ಜನ ಮನೆಗೋ ಹೋದಂತಿತ್ತು. ಬಂದವರೆಲ್ಲರ ನಡುವೆ - "ನಾವೆಲ್ಲಾ ಒಂದೇ ಮನೆಯವರು" ಎಂಬ ಭಾವವಿತ್ತು. ಈ ರೀತಿಯ ವಾತಾವರಣ ಸೃಷ್ಠಿಸುವುದು, ಅಥವಾ ಸೃಷ್ಠಿಗೊಳ್ಳುವುದು ಕಷ್ಟವೇ ಸರಿ. ಇದರ ಹಿಂದಿನ ರಹಸ್ಯವಾದರೂ ಎನು?

ಈಗ ನಾವು ’ಹೊಟ್ಟೆ ತುಂಬಿದ ಜನ’. ಇನ್ನಷ್ಟು ಹರಟಿ, ಮನೆಯ ಮುಂಭಗದಲ್ಲಿ ಚಪ್ಪರದಂತೆ ಸೋಗೆಯಲ್ಲೇ ಮಾಡಿದ ಕೋಣೆಯಲ್ಲಿ, ಭಟ್ಟರೇ ಕೊಟ್ಟ ಪ್ಲಾಸ್ಟಿಕ್ ಚೀಲಗಳು, ನಾವು ತಂದಿದ್ದ ಪೇಪರ್‍ಗಳನ್ನು ಹಾಸಿಕೊಂಡು ಮಲಗಿದೆವು. ಆ ರಾತ್ರಿ ನಮ್ಮನ್ನು ಯಮ ಬಂದರೂ ಎಚ್ಚರಿಸಲಾಗುತ್ತಿರಲಿಲ್ಲ!

ಮುಂಜಾನೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಮಧುರವಾದ ಹಾಡೊಂದು ನಮ್ಮನ್ನು ಎಚ್ಚರಿಸಿತು (ನನಗೆ ನನ್ನ ಅಜ್ಜಿಯ ನೆನಪು ತರಿಸಿತು). ಮನೆಯಿಂದ ಸ್ವಲ್ಪ ದೂರ ಹೋಗಿ, ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಬಂದು, ಕಾಫಿ ಕುಡಿದು, ಭಟ್ಟರೊಂದಿಗೆ ಫೋಟೋ ತೆಗೆಸಿಕೊಂಡು, ತಿಂಡಿ ತಿನ್ನದೇ ಹೊರಟೇ ಬಿಟ್ಟೆವು.

ಮಾರ್ಗ ಮಧ್ಯದಲ್ಲಿ, ಬೆಟ್ಟಗಳ ನಡುವೆ ಸೂರ್ಯೋದಯ ವೀಕ್ಷಿಸಿ ಹರ್ಷಗೊಂಡೆವು. ೫ ಕಿ.ಮಿ. ಕಾಡಿನಲ್ಲಿ ಇಳಿದು ಸುಬ್ರಹ್ಮಣ್ಯ ಸೇರಿದೆವು. ಕುಮಾರಧಾರೆಯಲ್ಲಿ ಮಿಂದು, ದೇವರ ದರ್ಶನ ಮಾಡಿ, ಬಸ್ಸಲ್ಲಿ ಕುಳಿತೆವು. ಸಮಯ: ಮದ್ಯಾಹ್ನ ೨.೩೦. ಬೆಂಗಳೂರವರೆಗಿನ ದಾರಿಯನ್ನು ಸವೆಯುವಷ್ಟು ನೆನಪಿನ ಬುತ್ತಿ, ಆಗಲೇ ಕಟ್ಟಿದ್ದೆವು.