Aug 23, 2008

ಅಲೂಗೆಡ್ಡೆ, ಮಂಜುಗಡ್ಡೆ ಮತ್ತು ಕಾಮನಬಿಲ್ಲು - 2

ಯಾವುದೇ ಅಲಂಕಾರದ ಪದಗಳನ್ನು ಬಳಸಿ ಹೇಳಿದರೂ, ಹಿಮಾಲಯದ ಭವ್ಯತೆ, ಅಗಾಧತೆ, ಸೌಂದರ್ಯದ ಅರಿವಾಗುವುದು ಪ್ರತ್ಯಕ್ಷವಾಗಿ ಕಂಡಾಗ ಮಾತ್ರ. ನಮ್ಮ ಪೂರ್ವಿಕರು ಹಿಮಾಲಯವನ್ನು ದೇವತೆಗಳ ವಾಸಸ್ಥಾನ, ಕೈಲಾಸ ಎಂದು ಕಲ್ಪಿಸಿರುವುದು ಅದೆಷ್ಟು ಅರ್ಥಪೂರ್ಣ ಎಂದು ಅರಿವಾಗುತ್ತದೆ.

ಕೆಳಗಿನ ಹಸುರು ಬಯಲುಗಳ ದಿಬ್ಬಗಳು ಕಳೆದು, ಬೆಟ್ಟದ ಕಡಿದಾದ ಮೇಲ್ಮೆ ಮೇಲೆ ಬೆಳೆದ ನೇರ ನೀಳ ಕೊನಿಫೆರಸ್ ಮರಗಳೂ ಕಳೆದ ನಂತರ, ವರ್ಷದ ಈ ಸಮಯದಲ್ಲಿ, ಎಲ್ಲಿ ನೋಡಿದರೂ ಹಿಮ! [ಅಲ್ಲಿಂದ ಬರಿಗಣ್ಣಲ್ಲಿ ನೋಡುವುದು ಅಪಾಯಕಾರಿ. ಸನ್​ಗ್ಲಾಸ್​ಗಳನ್ನು ಉಪಯೋಗಿಸಬೇಕಾಗುತ್ತದೆ.] ಶಿಖರದೆಡೆಗಿನ ಏರು ತಿರುವಿನ ದಾರಿಯಲ್ಲಿ, ಒಮ್ಮೆ ನಿಂತು 360 ಡಿಗ್ರಿ, ಪನೋರಾಮಾ ದ್ುಶ್ಯ ನೋಡಿದರೆ - ಎಲ್ಲವೂ ಶ್ವೇತ ಶುಭ್ರ ಶೀತಲ. ಅಲೆಯಲೆಯಾಗಿ ಹರಡಿರುವ ಇದೇ ಥರಹದ ಅನೇಕ ಹಿಮಾವ್ುತ ಪರ್ವತಗಳು, ದಿಗಂತದಲ್ಲಿ ಸಾಲಾಗಿ ನೀಲಿಯಲ್ಲಿ ಬಾನ್ ನಿಲುಕಿ ನಿಂತಿರುವುದು ಕಾಣುತ್ತದೆ. K2 ಪರ್ವದ ಶಿಖರದಲ್ಲಿ ತೆಗೆದ ಚಿತ್ರವೊಂದು ನೆನಪಿಗೆ ಬಂತು [http://www.cascadeclimbers.com/plab/data/513/Abott_Panorama.JPG]. ಅದರಷ್ಟು ಎತ್ತರವಿರದಿದ್ದರೂ, ಯಾರೇ ಆದರೂ ಭಾವುಕರಾಗಿ 'ಹೈ' ಅಥವಾ 'ಇಲೇಷನ್' ಅನುಭವಿಸುತ್ತಾರೆ. ಕೆಲವರಿಗೆ ಎಲ್ಲವೂ ದೈವ ರೂಪಿಯಾಗಿ ಕಂಡು ಭಕ್ತಿಯ ಭಾವ ಮೂಡಿದರೆ, ಕೆಲವರಿಗೆ ಅದು ಸಾಹಸದ ಸಫಲತೆಗಳ ಭಾವಾತಿರೇಕ.

ಚಾರಣದ ಮುಖ್ಯ ಕ್ಯಾಂಪ್​​ಗಳೆಂದರೆ - ತಿಲಾ ಲೋಟ್ನಿ (Tila Lotni) ಮತ್ತು ಬಿಸ್ಕೆರಿ ಥಾಚ್ (Biskeri Thatch). ತಿಲಾ ಲೋಟ್ನಿ - ಟ್ರೆಕ್ಕಿನಲ್ಲೇ ಎತ್ತರದ ಹಾಗೂ ಸರ್ಪಾಸ್ ತುದಿಯ ಮುಂಚಿನ ಕ್ಯಾಂಪ್. ಮೇ ತಿಂಗಳ ಬೇಸಿಗೆಯಲ್ಲೂ ಹಿಮಪಾತವಾಗುತಿದ್ದರೆ, ಇದು ಸಂಪೂರ್ಣವಾಗಿ ಹಿಮದಲ್ಲಿ ಮುಚ್ಚಿರುತ್ತದೆ. ಟೆಂಟ್‌ಗಳು ಹಿಮದ ಹಾಸಿನ ಮೇಲೆ. ಕ್ಯಾಂಪ್ ತಲುಪುವ ವೇಳೆಗಾಗಲೇ, ಮಧ್ಯಾಹ್ನದ ಅವಧಿ ದಾಟಿರುವುದರಿಂದ ಹಿಮ ಬೀಳುತ್ತಿರುತ್ತದೆ, ಅದರೊಡನೆ ಶೀತಲ ಗಾಳಿಯೂ ಬೀಸಿದರೆ, ನಡಿಗೆಗೆ ಬೇಕಾದ ಏಕಾಗ್ರತೆಯನ್ನು ಕೆಡಿಸಿ ಕಿರಿಕಿರಿ ಮಾಡುತ್ತದೆ. ಹೇಗೋ, ಕ್ಯಾಂಪ್ ತಲುಪಿ ಬೆಚ್ಚಗೆ ಹೊದ್ದು ಕೂರೋಣ ಅಂದರೆ ಜ್ವರ ಹಿಡಿಯುವ ಭಯ. ಏರ್ ಡೆನ್ಸಿಟಿ ಕೂಡ ಇಲ್ಲಿ ಕಡಿಮೆಯಿರುವುದರಿಂದ, ಉಸಿರಾಟದ ತೊಂದರೆಯಾಗಬಹುದು. ಹಾಗಾಗಿ ಒಟ್ಟಾರೆ ಚಾರಣದಲ್ಲಿ, ತಿಲಾ ಲೋಟ್ನಿ ಬಹು ಮುಖ್ಯ.

ಈ ಕ್ಯಾಂಪಿನಲ್ಲಿ ಇರುವಷ್ಟು ಕಾಲ, ನಮ್ಮನ್ನು ನಾವು ಅದೆಷ್ಟು ಶಪಿಸಿಕೊಂಡೆವೋ ಗೊತ್ತಿಲ್ಲ. 'ನಾವ್ಯಾಕೆ ಇಲ್ಲಿಗೆ ಬಂದ್ವಿ' ಅಂತ ಕೇಳ್ಕೊಂಡಿದ್ದಿದೆ. ಅಷ್ಟೋಂದು ಕಷ್ಟವಾಗಿತ್ತು ಅಂತಲ್ಲ. ಆದ್ರೆ, ಯಾಕ್ ಬೇಕಿತ್ತು ಅನ್ನೋ ರೀತಿ :) ಆದರೆ ಈಗ ಹಿಂತಿರುಗಿ ನೋಡಿದರೆ, ದಟ್ ವಾಸ್ ದ ಬೆಸ್ಟ್ ಕ್ಯಾಂಪ್. ಹಿಮಾಲಯ ಪರ್ವತ ಶ್ರೇಣಿಯಲ್ಲೆಲ್ಲೋ ೧೨ ಸಾವಿರ ಅಡಿ ಬೆಟ್ಟದೆತ್ತರದಲ್ಲಿ, ಹಿಮಪಾತದ ನಡುವೆ ಸ್ಲೀಪಿಂಗ್ ಬ್ಯಾಗ್ ಒಳಗೆ ಜಾರಿ ಬೆಚ್ಚಗೆ ಮಲಗುವುದರಲ್ಲಿರೋ ಮಜಾನೇ ಬೇರೆ!



ಬಿಸ್ಕೆರಿ ಥಾಚ್ ಎಲ್ಲಾ ಕ್ಯಾಂಪುಗಳಲ್ಲಿ ಅತ್ಯಂತ ಸುಂದರವಾದುದು. ತಿಲಾ ಲೋಟ್ನಿಯಿಂದ ಸರ್ಪಾಸ್ ಹತ್ತಿ ಅತ್ತ ಇಳಿದರೆ ಬಿಸ್ಕೆರಿ ಥಾಚ್ ಸಿಗುತ್ತದೆ. ಒಂದು ದಿನದ ನಡಿಗೆ/ಚಾರಣ. ಅಲ್ಲಿನ ಪರಿಸರ ತಿಲಾ ಲೋಟ್ನಿಗೆ ವ್ಯತಿರಿಕ್ತವಾದುದು. ಸಣ್ಣ ಝರಿಗಳು, ಒಂದಷ್ಟು ಹಿಮ, ಮಿಕ್ಕಂತೆ, ಹಸಿರೇ ಹಸಿರು. ದೂರದಲ್ಲಿ ಹಿಮಾವ್ುತ ಗಿರಿಗಳು. ಆ ಗಿರಿಗಳ ಮೇಲೆ ಮೆಲ್ಲಗೆ ತೇಲಿ ಕರಗುವ ಮೋಡಗಳು.. ಕಡೆದು ಮಾಡಿಸಿದಂತ ಕಪ್ಪು ಬಂಡೆಕಲ್ಲುಗಳ ಬೆಟ್ಟಗಳ ಒಡಲು.. ಪುಟವಿಟ್ಟಂತೆ, ಒಂದು ಕಾಮನಬಿಲ್ಲು! ಬಿಸ್ಕೆರಿಯಲ್ಲಿ ನಾವು ತೆಗೆದ ಫೋಟೋಗಳಿಗೆ ಲೆಕ್ಕವೇ ಇಲ್ಲ.


ಮುಂದುವರೆಯುತ್ತದೆ...

Aug 9, 2008

ಕೆಂಡ ಸಂಪಿಗೆಯಲ್ಲಿ

ಕನ್ನಡದ ಜನಪ್ರಿಯ ಇ-ಮ್ಯಾಗ್ ಕೆಂಡ ಸಂಪಿಗೆಯಲ್ಲಿ, ದಿನದ ಬ್ಲಾಗ್ ಪುಟದಲ್ಲಿ - 'ಪದ ನಾಲ್ಕು ಸಾಲಾಗಿ' ಆಯ್ಕೆಯಾಗಿತ್ತು. ಇಲ್ಲಿ ನೋಡಿ - http://kendasampige.com/article.php?id=450.

ನಿಮಗೆ ಅಲ್ಲಿ ಇನ್ನೂ ಉತ್ತಮ ಬ್ಲಾಗ್ ಗಳು ಸಿಗುತ್ತವೆ. ವಿಹರಿಸಿ.

Jun 28, 2008

ಅಲೂಗೆಡ್ಡೆ, ಮಂಜುಗಡ್ಡೆ ಮತ್ತು ಕಾಮನಬಿಲ್ಲು

..ಎಂಬುದು ಪೋಸ್ಟಿನ ಟೈಟಲ್ ಅಂತ ಒಮ್ಮತದಿಂದ ಆಯ್ಕೆಯಾಗಿತ್ತು. ಅಲೂಗೆಡ್ಡೆ, ಮಂಜುಗಡ್ಡೆ ಮತ್ತು ಕಾಮನಬಿಲ್ಲು - ಇನ್ ದಟ್ ಆರ್ಡರ್ - ನಮ್ಮನ್ನ ತತ್ತರಿಸುವಂತೆ ಮಾಡಿದ್ದವು. ಹತ್ತು ದಿನಗಳ ಕಾಲ ನಮ್ಮನ್ನು ಒಂದೇ ಸಮನೆ ಕಾಡಿದ್ದ, ಮತ್ತೊಂದು ಎಲಿಮೆಂಟ್ - ’ಪೀಪ್’ ಸೀಟಿ, ರೈಮಿಂಗ್ ಅಥವಾ ಅಬ್‍ಸ್ಕ್ಯೂರಿಟಿ ಇಲ್ಲದ ಕಾರಣ ಟೈಟಲ್ ಸೇರದೇ ಹೋಯ್ತು.

ಆಲೂಗೆಡ್ಡೆ - ನಿಮಗೆ ಆಲೂಗೆಡ್ಡೆ ಸೇರದಿದ್ದರೆ, ಉತ್ತರ ಭಾರತದಲ್ಲಿ ಸಂಭಾಳಿಸುವುದು ಕಷ್ಟ. ಸಹಜವಾಗಿ ಅಲೂಗೆಡ್ಡೆ, yhai ಡಯೆಟ್‍ನಲ್ಲಿ ಸಿಂಹಪಾಲು. ತಿನ್ನುತ್ತಾ, ತಿನ್ನುತ್ತಾ, ನಾಲಗೆಗೂ ಅಲೂಗೆಡ್ಡೆಗೂ ಬೆಳೆದ ಹಗೆತನ ಹೋಗಲಾಡಿಸಲು ತಿಳಿಸಾರು ಪಾನಿಪುರಿ ಮಸಾಲೆವಡೆಗಳಿಗೆ ಬಹಳ ದಿನಗಳೆ ಹಿಡಿಯಿತು. ಮತ್ತು ಕಸೋಲಿನ ಟೆಂಟಿನಲ್ಲಾದ ಭೀಕರ ಅನಿಲ ದುರಂತಕ್ಕೂ ಇದೇ ಕಾರಣ ಎಂಬ ಶಂಕೆ.

ಮಂಜುಗಡ್ಡೆ - 56 ವರ್ಷಗಳಲ್ಲೇ, ಈ ಬಾರಿ ಗರಿಷ್ಠ ಹಿಮಪಾತ. ತಿಲಾ ಲೋಟ್ನಿ, ಸರ್‍ಪಾಸ್‍ ‍ಗಳಲ್ಲಿ ಹಿಮವೋ ಹಿಮ! ಬಿಸಿಲೇರಿ, ಶೂ ಒತ್ತಡವೂ ಸೇರಿ, ಹಿಮ ಕರಗುತ್ತಿದ್ದಂತೆ ಶೂಗಳ ಗ್ರಿಪ್ ಯಾವುದಕ್ಕೂ ಸಾಲದೆ ಮುಂಗಾಲು ಹಿಂಗಾಲುಗಳು ಹಿಮದಲ್ಲಿ ಹೂತುಹೋಗುವಂತೆ ಒದ್ದುಕೊಂಡು ಹೆಜ್ಜೆ ಮೇಲೆ ಹೆಜ್ಜೆಯಿಟ್ಟು, ಕೋಲೂರ್ಕೊಂಡು ಹೋಗೋದು ಬಲು ಪ್ರಯಾಸದ ಸಂಗತಿಯಾಗಿತ್ತು. ಮತ್ತೆ ಹಿಮವೆಂದರೆ ವ್ಯಾಕರಿಕೆ ಬರುವಂತಾಗಿತ್ತು. ಎಷ್ಟೆಂದರೆ, ರೋಹ್ತಾಂಗ್ ಪಾಸ್‍ನಲ್ಲಿ (ಜಬ್ ವಿ ಮೆಟ್ ಫೇಮ್) ಕೂಡ ಯಾರೊಬ್ಬರಿಗೂ ಸ್ನೋ ಮೇಲೆ ಅಡಿಯಿಡುವ ಆಸಕ್ತಿಯಿರಲಿಲ್ಲ.

ಕಾಮನಬಿಲ್ಲು - ಖರ್ಚುಗಳನ್ನು ಲೆಕ್ಕ ಇಡುವಲ್ಲಿ ಸುಲಭ ಆಗ್ಲೆಂದು ಒಂದು shared by all ಕಾಮನ್ ಬಿಲ್ ಮಾಡಿದೆವು. ಎಲ್ರೂ, ತಮ್ಮದಲ್ಲ ಅಂತ ಖರ್ಚು ಮಾಡ್ತಿದ್ರಿಂದ, ಅದು ಅಗಾಧವಾಗಿ ಬೆಳೆದು ನಮ್ಮ (ಕೃಷ್ಣನನ್ನು ಹೊರೆತುಪಡಿಸಿ) ಶಾಲೋ ಜೇಬುಗಳಿಗೆ ಹೊರೆಯಾಗಿ, ಆರ್ಥಿಕ ಚಿಂತೆಗೀಡು ಮಾಡಿತ್ತು.

ಎಲ್ಲಕ್ಕೂ ಮಿಗಿಲಾಗಿ, ಸರ್‍ಪಾಸ್ ಶೃಂಗದಲ್ಲಿ ಮೊದಲಿಗನಾಗಿ ನಿಂತು ಮಫ್ಲರ್ ತೆಗೆದು, ಝಂಡಾ ಊರಿ, ಸುತ್ತುತ್ತಿರುವ ಹೆಲಿಕಾಪ್ಟರ್‍ನಲ್ಲಿರುವ ವೀಡಿಯೋಗ್ರಾಫರ್‍ಗೆ "ಯೇ" ಅಂತ ಕೂಗ್‍ಕೊಳ್ಳೋ ಪ್ರಮೋದನ ಕನಸು, ನಮ್ಮ ಬ್ಯಾಚ್‍ನಲ್ಲಿ ಅಷ್ಟೋಂದ್ ಜನ ಚಿಕ್ ಮಕ್ಳು ಇದ್ದಾರೆ ಅಂತ ಗೊತ್ತಾದಾಗ್ಲೇ ಭಗ್ನವಾಗಿ ಹೋಯ್ತು. ಹೌದು, ನಮ್ಮ ಬ್ಯಾಚ್‍ನಲ್ಲಿ ಚಿಕ್ ಮಕ್ಳಿದ್ರು. ಸಣ್ಣ ವಯಸ್ಸಿನ, ಒಮ್ಮೆಯೂ ಟ್ರೆಕ್ ಮಾಡಿರದವರಿದ್ರು. ಮೊದಲನೇ ಬ್ಯಾಚಿಗೆ ಪ್ರೀಪೋನ್ ಮಾಡ್ಕೊಳ್ಳೋ ಎಲ್ಲಾ ಪ್ಲಾನುಗಳೂ, ಮಿಥುನ ಕಾಲು ಉಳುಕಿಸುಕೊಳ್ಳೋದ್ರೊಂದಿಗೆ ಡ್ರಾಪ್ ಆದವು. ಆನ್ ದಿ ಪಾಸಿಟೀವ್ ಸೈಡ್, ’ಅವ್ರಿಗೇ ಆಗೋದಾದ್ರೆ, ನಮ್ಗೇನು ಕಷ್ಟ?’ ಅಂತ ನಾವು ಕಾನ್ಫಿಡೆನ್ಸ್ ತಗೊಂಡು ಸಮಾಧಾನ ಮಾಡ್ಕೊಬೇಕಾಯ್ತು.

ಮುಂದುವರೆಯುತ್ತದೆ...

Mar 1, 2008

ಜಿಮ್ ಕಾರ್ಬೆಟ್ ಆಮ್ನಿಬಸ್


[Oxford university press, Rs.545]

ಜಿಮ್ ಕಾರ್ಬೆಟ್ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. 'A shot in the dark' - ಓದಿರುತ್ತೀರಿ. ನೂರಾರು ಯಾತ್ರಿಗಳನ್ನು ಕೊಂದ ರುದ್ರಪ್ರಯಾಗದ ನರಭಕ್ಷಕ ಚಿರತೆಯ ಅಂತ್ಯದ ಕಥೆಯದು. ಆ ಕಥೆಯನ್ನು ಓದುತ್ತಾ, ನೀವು ರೋಮಾಂಚಿತರಾಗಿದ್ದರೆ, ನೀವು jim corbett omnibus ಓದಲೇಬೇಕು. ಹಿಮಾಲಯದ ತಪ್ಪಲಿನ ಪ್ರಾಂತ್ಯಗಳಲ್ಲಿ, ಸಾವಿರಾರು ಜನರನ್ನು ಕೊಂದು ಅಲ್ಲಿನ ವಾಸಿಗಳನ್ನು ಭೀಕರ ಭಯದ ನೆರಳಿಗೆ ದೂಡಿ, ಸಾವು ನೋವುಗಳಿಂದ ಯಾತನೆಗೀಡುಮಾಡಿದ್ದ ನರಭಕ್ಷಕ ಹುಲಿ ಚಿರತೆಗಳನ್ನು ಬೇಟೆಯಾಡಿ ಕೊಲ್ಲುವ ಪ್ರಸಂಗಗಳನ್ನು, ಕಾರ್ಬೆಟ್ ಅದ್ಭುತವಾಗಿ ನಿರೂಪಿಸಿ ಬರೆದಿದ್ದಾರೆ - ಅವುಗಳ ಒಟ್ಟು ಸಂಗ್ರಹವೇ ಜಿಮ್ ಕಾರ್ಬೆಟ್ ಆಮ್ನಿಬಸ್.

ಪರ್ವತಮಯ ದುರ್ಗಮ ದಟ್ಟ ಕಾಡುಗಳಲ್ಲಿ, ಜೀವವನ್ನು ನರಭಕ್ಷಕನ ಮರ್ಜಿಯಲ್ಲಿಟ್ಟು, ಪ್ರತಿ ಕ್ಷಣ ಅಪಾಯವನ್ನು ಎದುರುನೋಡುತ್ತಾ, ಅದರ ಮುಂದಿನ ಹವಣಿಕೆಯನ್ನು ಊಹಿಸುತ್ತಾ, ಪ್ರತಿತಂತ್ರಗಳನ್ನು ಹೂಡುತ್ತಾ, ಅನಿರೀಕ್ಷಿತ ಪ್ರತಿಕೂಲಗಳ ನಡುವೆ ಬೇಟೆಯಾಡಿ ಕೊಲ್ಲುವುದನ್ನು ನೀವು ಅವನ ಸಾಹಸ ಧೈರ್ಯಗಳನ್ನು ಮೆಚ್ಚುತ್ತಾ ಸವಿಯಬಹುದು. ಪ್ಯಾರೆಲಲಿ, ಕಾರ್ಬೆಟ್‍ಗೆ ಕಾಡಿನ ಬಗೆಗಿರುವ ಆಳವಾದ ತಿಳುವಳಿಕೆ, ನಿಸರ್ಗದ ಬಗೆಗಿನ ಕಾಳಜಿ, ನೊಂದ ಹಳ್ಳಿಗರ ಅಳಲಿಗೆ ಸ್ಪಂದನ ಮತ್ತಿತರ ಸೂಕ್ಷ್ಮ ವಿವರಗಳು ತೆರೆದುಕೊಳ್ಳುತ್ತಾ ಹೊಗುತ್ತವೆ.

.. ಇನ್ನು ನಿಮ್ಮ ಓದಿಗೆ ಬಿಡುತ್ತೇನೆ. ತಪ್ಪದೇ ಓದಿ.

p.s: ಪುಸ್ತಕದ ಕೊನೆಯಲ್ಲಿ ಪ್ರಾಂತ್ಯಗಳ ನಕ್ಷೆಯಿದೆ - ನಿರೂಪಣೆಯ ಜೊತೆಜೊತೆಗೆ ನರಭಕ್ಷಕನ ವ್ಯಾಪ್ತಿ, ಜಾಡುಗಳನ್ನು ಗ್ರಹಿಸುವಲ್ಲಿ ಸಹಾಯಕ್ಕೆ ಬರುತ್ತದೆ.

Feb 17, 2008

ಎತ್ತಿನ ಭುಜ

[12/13-Jan-08]

ಪ್ಲಾನ್ ಮಾಡಿದ್ದೇನೋ ಬಂಡಾಜೆ ಫಾಲ್ಸಿಗೆ. ಆದರೆ ಅದು ನಕ್ಸಲ್ ಪೀಡಿತ ಪ್ರದೇಶವಾದ್ದರಿಂದ ಕ್ಯಾನ್ಸಲ್ ಆಗಿ ನಮ್ಮ ಡೆಸ್ಟಿನೇಶನ್ ಪಶ್ಚಿಮ ಘಟ್ಟದ ಯಾವ್ಯಾವುದೋ ತಾಣಗಳನ್ನು ತಾಗಿ, ಕೊನೆಗೆ ಬಂದು ಜೋತಿದ್ದು ’ಎತ್ತಿನ ಭುಜ’ಕ್ಕೆ. ಎತ್ತಿನ ಭುಜಕ್ಕೆ ಎಲ್ಲರೂ ಒಪ್ಪಲು ಎರೆಡು ಕಾರಣ - ಅಮೇತಿಕಲ್ ಹತ್ತುವಾಗ ಅದನ್ನ ನೋಡಿ ಪರಿಚಯವಿದ್ದದ್ದು ಮತ್ತು ಗೋಪು ಗೋಖಲೆಯವರ ಮನೆಯ ಊಟದ ನನೆಪಾದದ್ದು :)

ಒಂದಾನೊಂದು ಕಾಲದಲ್ಲಿ, ನಾವೆಲ್ಲರೂ ಒಂದೇ ಕಂಪೆನಿಯಲ್ಲಿದ್ದುದರಿಂದ, coordination ಅಷ್ಟು ಕಷ್ಟ ಆಗ್ತಿರ್ಲಿಲ್ಲ. ಆದರೀಗ ಕೆಲವರಲ್ಲಿ - ಕೆಲವರಿಲ್ಲಿ. ಜಿ-ಮೈಲ್ ಕಾನ್ವರ್ಸೇಷನ್ಸ್ 50 ನ್ನು ಮೀರಿತ್ತು. ನಮ್ಮ ತಯಾರಿಯ ಮುಖ್ಯ ಅಂಶಗಳೆಂದರೆ ಟೆಂಟು, ಸ್ಲೀಪಿಂಗ್ ಬ್ಯಾಗ್ಸ್ ಮತ್ತು ಹಣ್ಣು ತಿಂಡಿ ತಿನಿಸು. ಈ ಎಲ್ಲಾ ಜವಾಬ್ದಾರಿಗಳೂ ಹಿಂದಿನ ಟ್ರೆಕ್ಕುಗಳಿಂದ inherit ಆದಂತಾಗಿ, ನಾನು ಕೈಬೀಸಿಕೊಂಡು ಹೋಗುವುದಷ್ಟೇ ಬಾಕಿ ಇದ್ದುದು.

ಅಮೇದಿಕಲ್ ಟ್ರೆಕ್ ಮುಗಿಸಿ ಹಿಂತಿರುಗುವಾಗ, ಪ್ರಮೋದನ ಜೊತೆ ಚರ್ಚಿಸುತ್ತಿದ್ದೆ: Lot of things could have gone wrong. ಯಾರಿಗಾದರೂ ಪೆಟ್ಟಾಗಿಯೋ ಏನೊ ಫ್ರಾಕ್ಚರ್ ಆಗಿದ್ದರೆ, ಹತ್ತುವಾಗ ಅಥವಾ ಶಿಖರದಲ್ಲಿ ಉಸಿರಾಟದ ತೊಂದರೆಯಾಗಿದ್ದರೆ, ಯಾವುದಾದರೂ ಕಾಡು ಮೃಗ ಎದುರಾಗಿದ್ದರೆ, ವಿಪರೀತದ ಸಂಧರ್ಭವೆಂದರೆ ಹಾವು ಕಚ್ಚಿದ್ದರೆ, ಜೇನುಗಳು ಕಚ್ಚಿದ್ದರೆ, ಅದೆಷ್ಟೋಂದು ಸಾಧ್ಯತೆಗಳನ್ನು ನಾವು ನಿರ್ಲಕ್ಷಿಸಿ ಚಾರಣಕ್ಕೆ ಮುಂದಾಗುತ್ತೇವೆ! ನಮ್ಮ ತಯಾರಿಗಳು ಅದೆಷ್ಟು ಅಪರಿಪೂರ್ಣ ಮತ್ತು ಅಪಕ್ವ ಎನಿಸಿತ್ತು.

ಈ ಹಿನ್ನೆಲೆಯಲ್ಲಿ, ಮತ್ತೆ ಟ್ರೆಕ್ಕಿಂಗ್ ಎಂದಾಗ, ಸಹಜವಾಗಿಯೇ, ಹಿಂಜರಿಕೆಯಿತ್ತು. ರಾತ್ರಿ ಬಸ್‍ನಲ್ಲಿ ಹೋಗುವಾಗ ಕೃಷ್ಣ ಜಿಮ್ ಕರ್ಬೆಟ್‍ನ ಹತ್ತಾರು ನರಭಕ್ಷಕ ಹುಲಿ ಚಿರತೆಗಳ ಕಥೆಗಳನ್ನು ವರ್ಣಿಸಿ ಹೇಳಿದ್ದು, ಸತೀಶ ತನ್ನೂರಿನ ಕಾಡಿನ ಕಥೆಗಳನ್ನು ಹೇಳಿದ್ದು, ಯಾಕೋ ನನ್ನಲ್ಲಿ ಸ್ವಲ್ಪ ಹೆಚ್ಚಾಗಿಯೇ ಭಯ ಹುಟ್ಟಿಸಿತ್ತು. ನಡು ರಾತ್ರಿ ಚಾರ್ಮಾಡಿ ಘಾಟಿನಲ್ಲಿ ಸಾಗುವಾಗೊಮ್ಮೆ ಎಲ್ಲವೂ ಕಣ್ಮುಂದೆ ಬಂದಂತಾಗಿ ಎಚ್ಚರಾಗಿ, ಮುಂಜಾನೆ ಧರ್ಮಸ್ಥಳದಲ್ಲಿ ಏನಾದರೂ ಕಾರಣ ಹೇಳಿ ಎಸ್ಕೇಪ್ ಆಗುವ ಯೋಜನೆಗಳ ಬಗ್ಗೆಯೂ ಚಿಂತಿಸಿದ್ದೆ. ಆದರೆ ಗೈಡ್ ಇದ್ದುದುದರಿಂದ, ಶಿಖರದ ಅತ್ತ ಬದಿಯಲ್ಲಿ 2 ಕಿ.ಮಿ. ದೂರದಲ್ಲೆ ಊರೊಂದು ಇದ್ದುದುರಿಂದ ಮತ್ತು ಹಿಂತಿರುಗಿದರೆ ಪರ್ಮನೆಂಟಾಗಿ ಪುಕ್ಕಲನೆಂಬ ಬಿರುದು ಬರಬಹುದಾದ ಸಾಧ್ಯತೆಗಳಿದ್ದರಿಂದ... ಚಾರಣಕ್ಕೆ ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಿದ್ದೆ.

ಹಿಂದಿನ ಟ್ರೆಕ್ಕಿನಂತೆ, ಮತ್ತೆ ಸಾಕೇತದಲ್ಲಿ ರೂಂ ಪಡೆದು ಫ್ರೆಶ್ ಆಗಿ ಮಂಜುನಾಥನ ದರ್ಶನ ಪಡೆದು ಚಾರಣವನ್ನು ಮೊದಲುಮಾಡಿದೆವು. ಆದರೆ ಈ ಬಾರಿ ಶಿಶಿಲಕ್ಕೆ ಹೋಗುವ ಜೀಪಿನಲ್ಲಿ ಹತ್ತು ಮಂದಿ ’ಹಿಡಿ’ಯಬೇಕಾಗಿತ್ತು. ನಾನು ಅಕ್ಷರಷಃ ’ಡ್ರೈವರ್ ಸೀಟಿ’ನಲ್ಲಿ. ಡ್ರೈವರ್ ನನ್ನ ಬಲ ಮಗ್ಗುಲಲ್ಲಿ ಜೀಪಿನ ಹೊರಗೆ ವಾಲಿಕೊಂಡು, ತನ್ನ ಕಲ್ಗಳೆರೆಡನ್ನು ಹೇಗೋ ಬ್ರೇಕು ಕ್ಲಚ್ಚು ಆಕ್ಸಲರೇಟರ್‍ಗಳ ಮೇಲಿಟ್ಟು ಓಡಿಸುತ್ತಿದ್ದ. ಗೇರ್‍ ಬದಲಾಯಿಸುವುದೋ - ಕತ್ತಲಲ್ಲಿ ಏನನ್ನೊ ತಡಕಾಡಿ ಅತ್ತಿಂದಿತ್ತ ಸರಿಸಿದಂತೆ! ಎನಿವೇ, ಈ ದೃಶ್ಯವನ್ನು ಕಂಡು ಯಾರೂ ಹುಬ್ಬೇರಿಸಿದಂತೆ ಕಾಣಿಲಿಲ್ಲ. ಇಲ್ಲಿ ಇದು ಸರ್ವೇ ಸಮಾನ್ಯ ಎನಿಸುತ್ತದೆ.

ಶಿಶಿಲದಲ್ಲಿ ಈ ಬಾರಿಯೂ, ಚೆನ್ನಪ್ಪಣ್ಣನವರು ನಮ್ಮ ಗೈಡ್ ಆಗಿ ನಮ್ಮ ಜೊತೆಗಾದರು. ಬೆಳಗಿನ ತಿಂಡಿ ಅದ್ಯಾವುದೋ ಡಬ್ಬಾ ಹೋಟೆಲಿನಲ್ಲಿ ಸರಿ ಹೋಗದೇ ಇದ್ದುದರಿಂದ, ಗೋಪು ಗೋಖಲೆಯವರ ಮನೆಯಲ್ಲಿ ಊಟ ಮುಗಿಸಿ ಚಾರಣ ಆರಂಭಿಸುವ ವಿಚಾರ ಕೆಲವರಿಗೆ! ಅಂತೂ ಇಂತೂ ಚಾರಣದ ಟ್ರೈಲ್ ತಲುಪುವಷ್ಟರಲ್ಲಿ ಸುಮಾರು ಹನ್ನೆರೆಡೂವರೆ! ಅದೇನೋ ಏನೋ, ವರ್ಷದ ಈ ವೇಳೆಗಾಗಲೆ, ಬಿಸಿಲಿಗೆ ರಸ್ತೆಯ ಮಣ್ಣು ಪೂರ್ತಿ ಶುಷ್ಕವಾಗಿತ್ತು. ಜೀಪ್ ಇಳಿಯುವಷ್ಟರಲ್ಲಿ ಎಲ್ಲರ ಮೈಮೇಲೆ ಎರೆಡಿಂಚು ಧೂಳು! ಚಾರಣದ ಫೋಟೋಗಳನ್ನು ನೋಡಿ - "ಏನೋ, ಕೂದಲಿಗೆ ಕಾಪರ್ ಬ್ಲೀಚ್ ಮಾಡುಸ್ಕೊಂಡಾ?" ಅಂತ ಕೇಳಿಸಿಕೊಳ್ಳುವಷ್ಟು! ಚೆನ್ನಪ್ಪಣ್ಣನವರ ಪರಿಚಯದವರ ಮನೆಯಲ್ಲಿ ಚಾರಣಕ್ಕೆ ಬೇಕಿಲ್ಲದ ಬಟ್ಟೆ ಸರಕುಗಳನ್ನು ಇಳಿಸಿದೆವು. 7 kg ಇದ್ದುದರಿಂದ, ಚೆನ್ನಪ್ಪಣ್ಣನವರ ಸಲಹೆಯ ಮೇರೆಗೆ, ಟೆಂಟುಗಳನ್ನೂ ಅಲ್ಲೇ ಇಳಿಸಿದೆವು.

ಟ್ರೈಲಿನ ಆದಿಯಲ್ಲೇ ನದಿಯನ್ನು ದಾಟಬೇಕು. ನದಿಯು ಆ ಬದಿಯ ತಿರುವಿನಲ್ಲಿ ಕಣಿವೆಯಿಂದ ಹರಿದು ಬಂದು ಈ ಬದಿಯಲ್ಲಿ ಮತ್ತೊಂದು ತಿರುವು ಪಡೆದು ಸಾಗುವ ದೃಶ್ಯ ಮನೋಹರವಾಗಿತ್ತು. ಹರಿವಿನಲ್ಲಿ ಕೊಂಚ ರಭಸವಿದ್ದುದ್ದರಿಂದ, ಸಣ್ಣ ಉರುಟುಕಲ್ಲುಗಳ ಮೇಲೆ ಹರಿಯುತ್ತಿದ್ದುದ್ದರಿಂದ ಮತ್ತು ಬದಿಯ ಮರಗಳು ಕೋನಿಫೆರಸ್ ಮರಗಳಂತೆ ಕಾಣುತ್ತಿದ್ದರಿಂದ, ಹಿಮಾಲಯದ ತಪ್ಪಲಿನ ಯಾವುದೊ ಕಣಿವೆಗೆ ಬಂದಂತಾಗಿತ್ತು! ಅಲ್ಲೇ ಸ್ವಲ್ಪ ವಿರಮಿಸಿಕೊಂಡು, ಚೆನ್ನಾಗಿ ನೀರು ಕುಡಿದು, ಬಾಟಲಿಗಳನ್ನು ತುಂಬಿಸಿಕೊಂಡು ಮುಂದುವರಿದೆವು. ಇದು ಅಮೇತಿಕಲ್‍‍ನಷ್ಟು ಕಷ್ಟ ಇರುವುದಿಲ್ಲ ಅಂತ ತಿಳಿದಿದ್ದರಿಂದ ಮಾನಸಿಕವಾಗಿ ಎಲ್ಲರೂ ಉತ್ಸಾಹದಿಂದ ಮುನ್ನಡೆಯುತ್ತಿದ್ದೆವು. ಅಷ್ಟಾಗಿ ಕಡಿದಾಗಿಯೂ ಇರದಿದ್ದರಿಂದ ಸುಸ್ತಾಗಲಿಲ್ಲ. ಒಣಗಿದ ಎಲೆಗಳ ಮೇಲೆ ಚರಕ್ ಪರಕ್ ಅಂತ ಸದ್ದು ಮಾಡಿಕೊಂಡು, ಗಿಡ-ಕೊಂಬೆಗಳನ್ನು ಸರಿಸಿಕೊಂಡು, ಎಲ್ಲೋ ಹರಿವ ತೊರೆಯ ಸದ್ದಿನಲ್ಲಿ, ಕಾಡಿನ ನಿಶ್ಯಬ್ಧದಲ್ಲಿ, ಏದುಸುರಿನಲ್ಲಿ, ಆಯಾಸದಲ್ಲಿ ಹೆಜ್ಜೆಗಳು ಸಾಗಿದ್ದವು.

ಎತ್ತಿನ ಭುಜದಲ್ಲಿ, ದಾರಿ ಕಡಿದಾಗಿರದೇ ಇರಬಹುದು, ಆದರೆ ನಡೆವ ದಾರಿ ಸಾಕಷ್ಟಿತ್ತು. ಹಾಗೂ ಬಹುತೇಕ ಭಾಗ ಕಾಡಾಗಿದ್ದುದರಿಂದ, ಆರ್ದ್ರತೆ ಹೆಚ್ಚಿದ್ದುದರಿಂದ ಕೆಲವರಿಗೆ ತುಸು ಹೆಚ್ಚೇ ಆಯಾಸವಾಗಿ ನಾವು ಅನೇಕ ಬಾರಿ ನಿಂತು ನಡೆಯಬೇಕಾಯಿತು [ನವೀನನಂತೂ, ಅಷ್ಟು ಹೊತ್ತು ಮಾತನಾಡುತ್ತಿದ್ದವನು ಸುಮ್ಮನಾಗಿಬಿಟ್ಟಿದ್ದ]. ಇದರಿಂದ ನಡಿಗೆಯ ಒಟ್ಟಾರೆ ಗತಿಯು ತಗ್ಗಿ, ಸಮಯಾಭಾವ ಕಾಣಿಸಿತು. ಚೆನ್ನಪ್ಪಣ್ಣನವರು "ಇನ್ನೇನು ಅರ್ಧ ಘಂಟೆ", "ಒಂದು ಘಂಟೆ" ಎಂದು, ಒಂದು ಘಂಟೆಯ ನಂತರವೂ ಮತ್ತರ್ಧ ಘಂಟೆ ಎನ್ನುತ್ತಿದ್ದರು. ಚೆನ್ನಪ್ಪಣ್ಣನವರ ಉದ್ದೇಶ ನಮ್ಮನ್ನು ’ಇನ್ನೆನು ಬಂತು’ ಎಂಬಂತೆ ಉತ್ತೇಜಿಸುವುದಷ್ಟೇ ಆಗಿದ್ದರೂ, ಮುಂದಿನ ಸಮಯದ ಒಂದು ಸರಿಯಾದ ಅಳತೆ ಸಿಗದೆ ಸ್ವಲ್ಪ ಕಸಿವಿಸಿಯಾಯಿತು. ಆದರೆ ಬಹುತೇಕೆ ಕಾಡನ್ನು ಕ್ರಮಿಸಿಯಾಗಿ, ಮೇಲಿನ ಬಯಲು ಸಿಕ್ಕಿದ್ದರಿಂದ, ಎತ್ತಿನ ಭುಜ ನಮ್ಮ ಕಣ್ ಮುಂದೆಯೇ ಇದ್ದುದರಿಂದ ಸ್ವಲ್ಪ ನಿರಾಳವೆನಿಸಿತ್ತು. ದಾರಿಯ ಕೊನೆಯ ಕಾಡಿನ ಸ್ಟ್ರೆಚ್ಚಿನ ಆದಿಯಲ್ಲಿ ಒಂದು ಸುಧೀರ್ಘ ವಿಶ್ರಾಂತಿ ಪಡೆದು ಮುಂದುವರೆದು ಶಿಖರದ ಕೆಳಗಿನ ಸಣ್ಣ ಬಯಲು ತಲುಪುವಷ್ಟರಲ್ಲಿ ಸೂರ್ಯಾಸ್ತದ ಸಮಯವಾಗಿತ್ತು.

ಚೆನ್ನಪ್ಪಣ್ಣನವರು ನೀರು ತರಹೋದರು. ನಾವು ಬ್ಯಾಗನ್ನಿಳಿಸಿ ಕ್ಯಾಮೆರಾ ಹಿಡಿದು ಮೇಲೋಡಿದೆವು. ದಿಗಂತದಲಿ ಸರಸರನೆ ಇಳಿಯುತ್ತಿದ್ದ ರವಿ - ಮುಂದಿನ ಕ್ಷಣಕ್ಕೆ ಮತ್ತಷ್ಟು ತಂಪಾಗಿ ಕೆಂಪಾಗಿ. ಕೆಳಗೆ ಹೊಳೆಯುವ ಒಂದು ಬೆಳ್ಳಿ ರೇಖೆ. ಅದೇ ಕಪಿಲಾ ನದಿ.. ಕಣಿವೆಗಳ ನಡುವೆ. ದಿಗಂತದಿಂದ ನೆತ್ತಿಯ ನೀಲಿಯವರೆಗೆ ಹಳದಿ ಕೆಂಪು ನಸುಗೆಂಪು ನೇರಳೆಗಳ ವರ್ಣಪಂಕ್ತಿಯ ನಿರಂತತೆ (continuum). ಬಾನಲ್ಲಿ ಕರಗುತ್ತಿರುವ ಬೆಳಕಿನ ಪರದೆಯ ಹಿಂದೆ ಅಸಂಖ್ಯ ತಾರೆ! ಕತ್ತಲಾಗುತ್ತಿದ್ದಂತೆ ಮತ್ತಷ್ಟು ಸ್ಪಷ್ಟ. ಇಡೀ ಬಾನು ದೇದೀಪ್ಯಮಾನವಾಗಿತ್ತು. ಆ ದೃಶ್ಯ ವರ್ಣಿಸಲಾಗದ್ದು. ನೆಲಕ್ಕೆ ಬೆನ್ನು ಹಾಕಿ, ಆಕಾಶ ದಿಟ್ಟಿಸುತ್ತಾ, ಅದು ಆ ಕಾನ್ಸ್ಟಲ್ಲೇಷನ್, ನೆಬುಲ್ಲ ಅಂತ ನಮ್ಮ ಹತ್ತನೆ ತರಗತಿಯ ಆಸ್ಟ್ರೊ-ಫಿಸಿಕ್ಸ್ ತರಗತಿಗಳನ್ನು ಮೆಲುಕಿದೆವು.

ಭುವಿಯಲ್ಲಿ ಸುತ್ತೆಲ್ಲ ಕಪ್ಪು ಕಾಡು ಹೊದ್ದ ಗಿರಿಪಂಕ್ತಿ. ಅಲ್ಲೊ ಇಲ್ಲೋ ಕಾಣುತ್ತಿದ್ದ ಬೆಳಕಿನ ತುಣುಕುಗಳು - ಅವು ಊರುಗಳು. ಅದೋ ಶಿಶಿಲ, ಅದೋ ಮೂಡಿಗೆರೆ, ಅದೋ ಕೊಟ್ಟಿಗೆಹಾರ ಎಂದು ಚೆನ್ನಪ್ಪಣ್ಣ ಗುರುತಿಸಿ ತೋರಿಸಿದರು. ನನಗೆ ಚಾರ್ಮಾಡಿ ಘಾಟಿನಲ್ಲಿ ಪಯಣಿಸಬೇಕೆಂಬ ಹಂಬಲ ಬಹಳ ಹಿಂದಿನದು. ನನ್ನಮ್ಮ ಅದೊಮ್ಮೆ ಆ ಘಾಟಿನಲ್ಲಿ ಸಾಗಿದ್ದ ತಮ್ಮ ಪಯಣವನ್ನು ವರ್ಣಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ - ಒಂದೇ ಬಸ್ಸು ಹೋಗಬಹುದಾದಂಥ ದಾರಿ; ಕಡಿದಾದುದು. ಅತ್ತ ನೋಡಿದರೆ ಕಂದರ. ೧೮೦ ಡಿಗ್ರಿಗಿಂತ ಹೆಚ್ಚಿನ ಘಾಟಿನ ತಿರುವುಗಳು. ಸಂಜೆಗೆ ಒಮ್ಮೆಗೆ ಶುರುವಾದ ಮಳೆಗೆ ಬಸ್ಸು ಹೆಡ್‍ಲೈಟ್ ಬಿಟ್ಟುಕೊಂಡು ನಿಂತದ್ದು.. ಇತ್ಯಾದಿ.

ಟ್ರೈಪಾಡ್ ಇಲ್ಲದಿದ್ದುದರಿಂದ ಆ ಮಬ್ಬುಗತ್ತಲಿನಲ್ಲಿ ಚಿತ್ರ ಸೆರೆಹಿಡಿಯಲಾಗಲಿಲ್ಲ :( ಚೆನ್ನಪ್ಪಣ್ಣನವರು ಸೌದೆ ಕಟ್ಟುಗಳನ್ನು ಒಗ್ಗೂಡಿಸಿ ಕ್ಯಾಂಪ್-ಫೈರ್ ಸಿಧ್ಧಮಾಡಿದ್ದರು. ಮಸಾಲಾ ಬ್ರೆಡ್ದು, ಕೇಕು, ಕರದಂಟು (?), ಖರ್ಜೂರ, ಒಬ್ಬಟ್ಟು ಮತ್ತಿನ್ನಷ್ಟು ತಿಂದು, ’ಚಪ್ಪ ಚಪ್ಪ ಚರಕ ಚಲೇ’ ಅಂತ ಬೆಂಕಿಯ ಸುತ್ತ ಸುತ್ತುತ್ತಾ ಕುಣಿಯುವಷ್ಟರಲ್ಲಿ ರಾತ್ರಿ ೮ ಆಗಿತ್ತು. ಅಲ್ಲಿಗೆ ಬಂದಿದ್ದ ಹತ್ತಿರದ ಊರಿನ ಮತ್ತೊಬ್ಬರು - ಗಾಳಿ ರಾತ್ರಿ ವಿಪರೀತ ಗತಿಯಲ್ಲಿ ಬೀಸುವುದಿದ್ದರಿಂದ ಕಾಡಿನಲ್ಲಿ ಅಥವಾ 2 ಕಿಮಿ ದೂರದ ದೇಗುಲದ ಕಾಂಪೌಂಡಿನಲ್ಲಿ ಮಲಗುವಂತೆ ಹೇಳಿದರು. ಕಾಡಿನಲ್ಲಿ?! ನೋ ಚಾನ್ಸ್. ೨ ಕಿಮಿ ಈ ಕತ್ತಲಲ್ಲಿ ಹೋಗುವುದು? ನೋ ಚಾನ್ಸ್ ಅಂತ ಅಲ್ಲೇ ಮಲಗುವುದಾಗಿ ನಿರ್ಧಾರವಾಗಿ ಸ್ಲೀಪಿಂಗ್ ಬ್ಯಾಗ್ ಹರಡಿಕೊಳ್ಳುವಾಗ ನಮಗೊಂದು ಸರ್ಪ್ರೈಸ್ ಕಾದಿತ್ತು. ಸ್ಲೀಪಿಂಗ್ ಬ್ಯಾಗ್‍ಗಳು ಸಾಕಷ್ಟು ಉದ್ದವಿರಲಿಲ್ಲ ಹಾಗೂ ಅವು ಸಂಪೂರ್ಣವಾಗಿ ದೇಹವನ್ನು ಮುಚ್ಚುವಂಥವುಗಳೂ ಆಗಿರಲಿಲ್ಲ. ಅಲ್ಲದೆ ಕೆಲವು ಬ್ಯಾಗ್‍ಗಳಲ್ಲಿ ತೂತಾಗಿದ್ದವು!

ನಾವು ಮಲಗಲು ಆಯ್ದುಕೊಂಡ ಜಾಗ ಅಷ್ಟೇನೂ ಸಮತಟ್ಟಾಗಿರಲಿಲ್ಲ. ಸ್ವಲ್ಪ ಹೊತ್ತಿಗೇ ಮೈ ಕೈ ನೋಯಲು ಶುರುವಾಯ್ತು. ಉದ್ದ ಸಾಲದೆ, ಮಂಡಿ ಮಡಚಿ, ಒಂದೇ ಬದಿಗೆ ಮಲಗಿ, ಸ್ಲೀಪಿಂಗ್ ಬ್ಯಾಗಿನ ಹೆಡ್ ರೆಸ್ಟನ್ನ ಆತ್ತಿತ್ತ ಎಳೆದುಕೊಂಡು ಸುತ್ತಿಕೊಂಡು ಮಲಗಿದರೂ, ಮೂರು ತಾಸಿಗಿಂತ ಹೆಚ್ಚು ನಿದ್ದೆಯಾಗಲಿಲ್ಲ! ಎಚ್ಚರಾದಾಗ ಮಧ್ಯರಾತ್ರಿ. ವಿಪರೀತ ಅಥವಾ ಪ್ರಚಂಡ ಎಂಬ ವಿಶೇಷಣಗಳು ಸಾಲುವುದಿಲ್ಲವೇನೋ. ಗಾಳಿ ರೊಯ್ಯನೆ ಬೆಟ್ಟವನ್ನೇ ಬುಡಮೇಲು ಮಾಡುವಂತೆ ಬೀಸುತ್ತಿತ್ತು! ಅಷ್ಟು ಹೊತ್ತಿಗಾಗಲೇ ಸತೀಶ ಮತ್ತು ಚೆನ್ನಪ್ಪಣ್ಣ ಎದ್ದು ಕ್ಯಾಂಪ್-ಫೈರ್ ಪಕ್ಕ ಕೂತುಬಿಟ್ಟಿದ್ದರು. ನಾನೂ ಅವರನ್ನು ಕೂಡಿಕೊಂಡು ಬೆಂಕಿಯ ಕೆನ್ನಾಲಿಗೆಗೆ ಮೈ ಒಡ್ಡಿ ಕೂತೆ. ಗಾಳಿಯ ಶಬ್ಧಕ್ಕೆ ಬೆಂಕಿಯ ಫಟ ಫಟಿಸುವಿಕೆಯಾಗಲಿ, ಸೌದೆಯ ಚಿಟ್ ಪಿಟ್ ಏನು, ಪಕ್ಕದಲ್ಲಿ ಕೂಗಿದರೂ ಕೇಳುತ್ತಿರಲಿಲ್ಲ. ಒಬ್ಬರು ಎದ್ದದ್ದುದನ್ನು ಕಂಡು ಮತ್ತೊಬ್ಬರು ಎಂಬಂತೆ ಒಬ್ಬೊಬ್ಬರಾಗಿ ಎಲ್ಲರೂ ಎದ್ದು ಬಂದರು. ಯಾರಿಗೂ ಸರಿಯಾಗಿ ನಿದ್ದೆಯಾಗಿರಲಿಲ್ಲ. ನಾರಾ, ರಾಜಸ್ತಾದ ಛಳಿಯ ಬಗ್ಗೆ ಹೇಳಹತ್ತಿದ. ಹೀಗೆ ಹರಟೆ ಎಲ್ಲಿಂದೆಲ್ಲಿಗೋ ಹೋಗಿ ಮಾತು ಸಾಕಾಗಿ, ಎಲ್ಲರೂ ದಿಗಂತದಲ್ಲಿ ಸೂರ್ಯನ ಬೆಳಕಿಗಾಗಿ ಕಾಯತೊಡಗಿದೆವು. ಮುಂಜಾನೆಯ ಬೆಳಕಿಗಾಗಿ ಕಾದದ್ದು ಅದೇ ಮೊದಲು :D

ಸೂರ್ಯೋದಯಕ್ಕೆ ಸುಮಾರು ಒಂದು ಘಂಟೆ ಮುಂಚೆಯೇ ನಾವು ಶಿಖರದೆಡೆಗೆ ಹೊರಟೆವು. ’ಭುಜ’ವನ್ನು ಹತ್ತುವ ದಾರಿ ಕಡಿದಾದ ಬಂಡೆ ಕಲ್ಲುಗಳಿಂದ ಕೂಡಿದುದರಿಂದ ಒಂದಷ್ಟು ರಾಕ್ ಕ್ಲೈಂಬಿಂಗ್ ಮಾಡಬೇಕು. ಆ ಗಾಳಿಯಲ್ಲಿ ಹತ್ತುವುದು ಅಪಾಯಕಾರಿಯಾದ್ದರಿಂದ ರಭಸ ಒಂದಿಷ್ಟು ತಗ್ಗುವವರೆಗೂ ಕಾದು ಶಿಖರ ಏರಿದೆವು !! ಸುತ್ತಲೂ, ಚಾರ್ಮಾಡಿ ಪರ್ವತ ಶ್ರೇಣಿ ಅಲೆ ಅಲೆಯಲೆಯಾಗಿ ಹರಡಿಕೊಂಡಿರುವ ದೃಶ್ಯವನ್ನು ಕಣ್ತುಂಬಿಕೊಳ್ಳುವ ಹೊತ್ತಿಗಾಗಲೇ, ಪೂರ್ವದ ಗಿರಿಸಾಲಿನ ಅಂಚಿನಲ್ಲಿ ಬೆಳ್ಳನೆ ಪ್ರಭಾವಳಿ ಕಾಣುತ್ತಿತ್ತು! ಒಂದಷ್ಟು ಬಾನುಲಿಗಳು ಸುತ್ತುತ್ತಿದ್ದವು. ಕಾಡು, ಕ್ರಮೇಣ ತನ್ನ ಕಪ್ಪನ್ನು ಜಡಿದು ಹಸಿರು ಬಣ್ಣ ತಾಳುತ್ತಿತ್ತು. ಚುಕ್ಕೆಗಳೆಲ್ಲ ಮರೆಯಾಗುತ್ತಾ, ದಿಗಂತ ನೆನ್ನೆಯ ಸಂಜೆಯಂತೆ ಮತ್ತೆ ಕೆಂಪಾಗಿತ್ತು. ಅವನ ಕಣ್ಮರೆಯ ಉಪಸ್ಥಿತಿಯಲ್ಲೂ, ಜೀವಗಳಲ್ಲಿ ಚೈತನ್ಯ ಸಂಚಾರ! ದಿನಕರ ದಿನದ ಕೀಲಿಕೈ ಹಿಡಿದು ಆ ಶಿಖರದಲ್ಲಿ ಹೊಳೆವಾಗ, ಬರೀ ರೋಮಾಂಚನವಾಯಿತೆಂದರೆ ಅದು ನ್ಯೂನೋಕ್ತಿ! ಪ್ರತಿ ಸೂರ್ಯೋದಯವೂ ಸೂರ್ಯಾಸ್ತವೂ ಒಂದು ವಿಸ್ಮಯ. ಅದನ್ನು ಕಾಡಿನ ನಡುವೆ, ಬೆಟ್ಟದ ಮೇಲೆ ನೋಡುವ ಸೊಬಗೇ ಬೇರೆ!

Jan 19, 2008

Jan 11, 2008

ಕನಸು ಕಲ್ಪನೆಗಳಲಿ

ಇನಿ ದನಿಯಲಿ
ಮಾತನಾಡಿ
ಮುದಗೊಳಿಸುವವಳು ನೀನೆ

ಕನಸು ಕಲ್ಪನೆಗಳಲಿ
ಜೀಕಿ ನಲಿದು
ನಗುವವಳು ನೀನೆ

ಒಡನಾಟದಲಿ
ಸುಳಿವಿಲ್ಲದೆ ಮನದಲಿ
ಸುಳಿದಾಡಿದವಳು ನೀನೆ

ಎದೆಯ
ಮಾತು ಮಾತಿನಲಿ
ಸ್ಫುರಿಸುವ
ಹೆಸರು ನೀನೆ

ಅರಿವು ತಿಳಿವುಗಳಿರದೆ
ಕರಗಿದವನು ನಾನೆ

ಹೃದಯ ತಿಳಿದ
ನಿನ್ನೋಟದ ನುಡಿ
ಒಲವು ತಾನೆ?

Jan 6, 2008

Cricket

After all, its just a game right? WRRRONG.