Feb 17, 2008

ಎತ್ತಿನ ಭುಜ

[12/13-Jan-08]

ಪ್ಲಾನ್ ಮಾಡಿದ್ದೇನೋ ಬಂಡಾಜೆ ಫಾಲ್ಸಿಗೆ. ಆದರೆ ಅದು ನಕ್ಸಲ್ ಪೀಡಿತ ಪ್ರದೇಶವಾದ್ದರಿಂದ ಕ್ಯಾನ್ಸಲ್ ಆಗಿ ನಮ್ಮ ಡೆಸ್ಟಿನೇಶನ್ ಪಶ್ಚಿಮ ಘಟ್ಟದ ಯಾವ್ಯಾವುದೋ ತಾಣಗಳನ್ನು ತಾಗಿ, ಕೊನೆಗೆ ಬಂದು ಜೋತಿದ್ದು ’ಎತ್ತಿನ ಭುಜ’ಕ್ಕೆ. ಎತ್ತಿನ ಭುಜಕ್ಕೆ ಎಲ್ಲರೂ ಒಪ್ಪಲು ಎರೆಡು ಕಾರಣ - ಅಮೇತಿಕಲ್ ಹತ್ತುವಾಗ ಅದನ್ನ ನೋಡಿ ಪರಿಚಯವಿದ್ದದ್ದು ಮತ್ತು ಗೋಪು ಗೋಖಲೆಯವರ ಮನೆಯ ಊಟದ ನನೆಪಾದದ್ದು :)

ಒಂದಾನೊಂದು ಕಾಲದಲ್ಲಿ, ನಾವೆಲ್ಲರೂ ಒಂದೇ ಕಂಪೆನಿಯಲ್ಲಿದ್ದುದರಿಂದ, coordination ಅಷ್ಟು ಕಷ್ಟ ಆಗ್ತಿರ್ಲಿಲ್ಲ. ಆದರೀಗ ಕೆಲವರಲ್ಲಿ - ಕೆಲವರಿಲ್ಲಿ. ಜಿ-ಮೈಲ್ ಕಾನ್ವರ್ಸೇಷನ್ಸ್ 50 ನ್ನು ಮೀರಿತ್ತು. ನಮ್ಮ ತಯಾರಿಯ ಮುಖ್ಯ ಅಂಶಗಳೆಂದರೆ ಟೆಂಟು, ಸ್ಲೀಪಿಂಗ್ ಬ್ಯಾಗ್ಸ್ ಮತ್ತು ಹಣ್ಣು ತಿಂಡಿ ತಿನಿಸು. ಈ ಎಲ್ಲಾ ಜವಾಬ್ದಾರಿಗಳೂ ಹಿಂದಿನ ಟ್ರೆಕ್ಕುಗಳಿಂದ inherit ಆದಂತಾಗಿ, ನಾನು ಕೈಬೀಸಿಕೊಂಡು ಹೋಗುವುದಷ್ಟೇ ಬಾಕಿ ಇದ್ದುದು.

ಅಮೇದಿಕಲ್ ಟ್ರೆಕ್ ಮುಗಿಸಿ ಹಿಂತಿರುಗುವಾಗ, ಪ್ರಮೋದನ ಜೊತೆ ಚರ್ಚಿಸುತ್ತಿದ್ದೆ: Lot of things could have gone wrong. ಯಾರಿಗಾದರೂ ಪೆಟ್ಟಾಗಿಯೋ ಏನೊ ಫ್ರಾಕ್ಚರ್ ಆಗಿದ್ದರೆ, ಹತ್ತುವಾಗ ಅಥವಾ ಶಿಖರದಲ್ಲಿ ಉಸಿರಾಟದ ತೊಂದರೆಯಾಗಿದ್ದರೆ, ಯಾವುದಾದರೂ ಕಾಡು ಮೃಗ ಎದುರಾಗಿದ್ದರೆ, ವಿಪರೀತದ ಸಂಧರ್ಭವೆಂದರೆ ಹಾವು ಕಚ್ಚಿದ್ದರೆ, ಜೇನುಗಳು ಕಚ್ಚಿದ್ದರೆ, ಅದೆಷ್ಟೋಂದು ಸಾಧ್ಯತೆಗಳನ್ನು ನಾವು ನಿರ್ಲಕ್ಷಿಸಿ ಚಾರಣಕ್ಕೆ ಮುಂದಾಗುತ್ತೇವೆ! ನಮ್ಮ ತಯಾರಿಗಳು ಅದೆಷ್ಟು ಅಪರಿಪೂರ್ಣ ಮತ್ತು ಅಪಕ್ವ ಎನಿಸಿತ್ತು.

ಈ ಹಿನ್ನೆಲೆಯಲ್ಲಿ, ಮತ್ತೆ ಟ್ರೆಕ್ಕಿಂಗ್ ಎಂದಾಗ, ಸಹಜವಾಗಿಯೇ, ಹಿಂಜರಿಕೆಯಿತ್ತು. ರಾತ್ರಿ ಬಸ್‍ನಲ್ಲಿ ಹೋಗುವಾಗ ಕೃಷ್ಣ ಜಿಮ್ ಕರ್ಬೆಟ್‍ನ ಹತ್ತಾರು ನರಭಕ್ಷಕ ಹುಲಿ ಚಿರತೆಗಳ ಕಥೆಗಳನ್ನು ವರ್ಣಿಸಿ ಹೇಳಿದ್ದು, ಸತೀಶ ತನ್ನೂರಿನ ಕಾಡಿನ ಕಥೆಗಳನ್ನು ಹೇಳಿದ್ದು, ಯಾಕೋ ನನ್ನಲ್ಲಿ ಸ್ವಲ್ಪ ಹೆಚ್ಚಾಗಿಯೇ ಭಯ ಹುಟ್ಟಿಸಿತ್ತು. ನಡು ರಾತ್ರಿ ಚಾರ್ಮಾಡಿ ಘಾಟಿನಲ್ಲಿ ಸಾಗುವಾಗೊಮ್ಮೆ ಎಲ್ಲವೂ ಕಣ್ಮುಂದೆ ಬಂದಂತಾಗಿ ಎಚ್ಚರಾಗಿ, ಮುಂಜಾನೆ ಧರ್ಮಸ್ಥಳದಲ್ಲಿ ಏನಾದರೂ ಕಾರಣ ಹೇಳಿ ಎಸ್ಕೇಪ್ ಆಗುವ ಯೋಜನೆಗಳ ಬಗ್ಗೆಯೂ ಚಿಂತಿಸಿದ್ದೆ. ಆದರೆ ಗೈಡ್ ಇದ್ದುದುದರಿಂದ, ಶಿಖರದ ಅತ್ತ ಬದಿಯಲ್ಲಿ 2 ಕಿ.ಮಿ. ದೂರದಲ್ಲೆ ಊರೊಂದು ಇದ್ದುದುರಿಂದ ಮತ್ತು ಹಿಂತಿರುಗಿದರೆ ಪರ್ಮನೆಂಟಾಗಿ ಪುಕ್ಕಲನೆಂಬ ಬಿರುದು ಬರಬಹುದಾದ ಸಾಧ್ಯತೆಗಳಿದ್ದರಿಂದ... ಚಾರಣಕ್ಕೆ ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಿದ್ದೆ.

ಹಿಂದಿನ ಟ್ರೆಕ್ಕಿನಂತೆ, ಮತ್ತೆ ಸಾಕೇತದಲ್ಲಿ ರೂಂ ಪಡೆದು ಫ್ರೆಶ್ ಆಗಿ ಮಂಜುನಾಥನ ದರ್ಶನ ಪಡೆದು ಚಾರಣವನ್ನು ಮೊದಲುಮಾಡಿದೆವು. ಆದರೆ ಈ ಬಾರಿ ಶಿಶಿಲಕ್ಕೆ ಹೋಗುವ ಜೀಪಿನಲ್ಲಿ ಹತ್ತು ಮಂದಿ ’ಹಿಡಿ’ಯಬೇಕಾಗಿತ್ತು. ನಾನು ಅಕ್ಷರಷಃ ’ಡ್ರೈವರ್ ಸೀಟಿ’ನಲ್ಲಿ. ಡ್ರೈವರ್ ನನ್ನ ಬಲ ಮಗ್ಗುಲಲ್ಲಿ ಜೀಪಿನ ಹೊರಗೆ ವಾಲಿಕೊಂಡು, ತನ್ನ ಕಲ್ಗಳೆರೆಡನ್ನು ಹೇಗೋ ಬ್ರೇಕು ಕ್ಲಚ್ಚು ಆಕ್ಸಲರೇಟರ್‍ಗಳ ಮೇಲಿಟ್ಟು ಓಡಿಸುತ್ತಿದ್ದ. ಗೇರ್‍ ಬದಲಾಯಿಸುವುದೋ - ಕತ್ತಲಲ್ಲಿ ಏನನ್ನೊ ತಡಕಾಡಿ ಅತ್ತಿಂದಿತ್ತ ಸರಿಸಿದಂತೆ! ಎನಿವೇ, ಈ ದೃಶ್ಯವನ್ನು ಕಂಡು ಯಾರೂ ಹುಬ್ಬೇರಿಸಿದಂತೆ ಕಾಣಿಲಿಲ್ಲ. ಇಲ್ಲಿ ಇದು ಸರ್ವೇ ಸಮಾನ್ಯ ಎನಿಸುತ್ತದೆ.

ಶಿಶಿಲದಲ್ಲಿ ಈ ಬಾರಿಯೂ, ಚೆನ್ನಪ್ಪಣ್ಣನವರು ನಮ್ಮ ಗೈಡ್ ಆಗಿ ನಮ್ಮ ಜೊತೆಗಾದರು. ಬೆಳಗಿನ ತಿಂಡಿ ಅದ್ಯಾವುದೋ ಡಬ್ಬಾ ಹೋಟೆಲಿನಲ್ಲಿ ಸರಿ ಹೋಗದೇ ಇದ್ದುದರಿಂದ, ಗೋಪು ಗೋಖಲೆಯವರ ಮನೆಯಲ್ಲಿ ಊಟ ಮುಗಿಸಿ ಚಾರಣ ಆರಂಭಿಸುವ ವಿಚಾರ ಕೆಲವರಿಗೆ! ಅಂತೂ ಇಂತೂ ಚಾರಣದ ಟ್ರೈಲ್ ತಲುಪುವಷ್ಟರಲ್ಲಿ ಸುಮಾರು ಹನ್ನೆರೆಡೂವರೆ! ಅದೇನೋ ಏನೋ, ವರ್ಷದ ಈ ವೇಳೆಗಾಗಲೆ, ಬಿಸಿಲಿಗೆ ರಸ್ತೆಯ ಮಣ್ಣು ಪೂರ್ತಿ ಶುಷ್ಕವಾಗಿತ್ತು. ಜೀಪ್ ಇಳಿಯುವಷ್ಟರಲ್ಲಿ ಎಲ್ಲರ ಮೈಮೇಲೆ ಎರೆಡಿಂಚು ಧೂಳು! ಚಾರಣದ ಫೋಟೋಗಳನ್ನು ನೋಡಿ - "ಏನೋ, ಕೂದಲಿಗೆ ಕಾಪರ್ ಬ್ಲೀಚ್ ಮಾಡುಸ್ಕೊಂಡಾ?" ಅಂತ ಕೇಳಿಸಿಕೊಳ್ಳುವಷ್ಟು! ಚೆನ್ನಪ್ಪಣ್ಣನವರ ಪರಿಚಯದವರ ಮನೆಯಲ್ಲಿ ಚಾರಣಕ್ಕೆ ಬೇಕಿಲ್ಲದ ಬಟ್ಟೆ ಸರಕುಗಳನ್ನು ಇಳಿಸಿದೆವು. 7 kg ಇದ್ದುದರಿಂದ, ಚೆನ್ನಪ್ಪಣ್ಣನವರ ಸಲಹೆಯ ಮೇರೆಗೆ, ಟೆಂಟುಗಳನ್ನೂ ಅಲ್ಲೇ ಇಳಿಸಿದೆವು.

ಟ್ರೈಲಿನ ಆದಿಯಲ್ಲೇ ನದಿಯನ್ನು ದಾಟಬೇಕು. ನದಿಯು ಆ ಬದಿಯ ತಿರುವಿನಲ್ಲಿ ಕಣಿವೆಯಿಂದ ಹರಿದು ಬಂದು ಈ ಬದಿಯಲ್ಲಿ ಮತ್ತೊಂದು ತಿರುವು ಪಡೆದು ಸಾಗುವ ದೃಶ್ಯ ಮನೋಹರವಾಗಿತ್ತು. ಹರಿವಿನಲ್ಲಿ ಕೊಂಚ ರಭಸವಿದ್ದುದ್ದರಿಂದ, ಸಣ್ಣ ಉರುಟುಕಲ್ಲುಗಳ ಮೇಲೆ ಹರಿಯುತ್ತಿದ್ದುದ್ದರಿಂದ ಮತ್ತು ಬದಿಯ ಮರಗಳು ಕೋನಿಫೆರಸ್ ಮರಗಳಂತೆ ಕಾಣುತ್ತಿದ್ದರಿಂದ, ಹಿಮಾಲಯದ ತಪ್ಪಲಿನ ಯಾವುದೊ ಕಣಿವೆಗೆ ಬಂದಂತಾಗಿತ್ತು! ಅಲ್ಲೇ ಸ್ವಲ್ಪ ವಿರಮಿಸಿಕೊಂಡು, ಚೆನ್ನಾಗಿ ನೀರು ಕುಡಿದು, ಬಾಟಲಿಗಳನ್ನು ತುಂಬಿಸಿಕೊಂಡು ಮುಂದುವರಿದೆವು. ಇದು ಅಮೇತಿಕಲ್‍‍ನಷ್ಟು ಕಷ್ಟ ಇರುವುದಿಲ್ಲ ಅಂತ ತಿಳಿದಿದ್ದರಿಂದ ಮಾನಸಿಕವಾಗಿ ಎಲ್ಲರೂ ಉತ್ಸಾಹದಿಂದ ಮುನ್ನಡೆಯುತ್ತಿದ್ದೆವು. ಅಷ್ಟಾಗಿ ಕಡಿದಾಗಿಯೂ ಇರದಿದ್ದರಿಂದ ಸುಸ್ತಾಗಲಿಲ್ಲ. ಒಣಗಿದ ಎಲೆಗಳ ಮೇಲೆ ಚರಕ್ ಪರಕ್ ಅಂತ ಸದ್ದು ಮಾಡಿಕೊಂಡು, ಗಿಡ-ಕೊಂಬೆಗಳನ್ನು ಸರಿಸಿಕೊಂಡು, ಎಲ್ಲೋ ಹರಿವ ತೊರೆಯ ಸದ್ದಿನಲ್ಲಿ, ಕಾಡಿನ ನಿಶ್ಯಬ್ಧದಲ್ಲಿ, ಏದುಸುರಿನಲ್ಲಿ, ಆಯಾಸದಲ್ಲಿ ಹೆಜ್ಜೆಗಳು ಸಾಗಿದ್ದವು.

ಎತ್ತಿನ ಭುಜದಲ್ಲಿ, ದಾರಿ ಕಡಿದಾಗಿರದೇ ಇರಬಹುದು, ಆದರೆ ನಡೆವ ದಾರಿ ಸಾಕಷ್ಟಿತ್ತು. ಹಾಗೂ ಬಹುತೇಕ ಭಾಗ ಕಾಡಾಗಿದ್ದುದರಿಂದ, ಆರ್ದ್ರತೆ ಹೆಚ್ಚಿದ್ದುದರಿಂದ ಕೆಲವರಿಗೆ ತುಸು ಹೆಚ್ಚೇ ಆಯಾಸವಾಗಿ ನಾವು ಅನೇಕ ಬಾರಿ ನಿಂತು ನಡೆಯಬೇಕಾಯಿತು [ನವೀನನಂತೂ, ಅಷ್ಟು ಹೊತ್ತು ಮಾತನಾಡುತ್ತಿದ್ದವನು ಸುಮ್ಮನಾಗಿಬಿಟ್ಟಿದ್ದ]. ಇದರಿಂದ ನಡಿಗೆಯ ಒಟ್ಟಾರೆ ಗತಿಯು ತಗ್ಗಿ, ಸಮಯಾಭಾವ ಕಾಣಿಸಿತು. ಚೆನ್ನಪ್ಪಣ್ಣನವರು "ಇನ್ನೇನು ಅರ್ಧ ಘಂಟೆ", "ಒಂದು ಘಂಟೆ" ಎಂದು, ಒಂದು ಘಂಟೆಯ ನಂತರವೂ ಮತ್ತರ್ಧ ಘಂಟೆ ಎನ್ನುತ್ತಿದ್ದರು. ಚೆನ್ನಪ್ಪಣ್ಣನವರ ಉದ್ದೇಶ ನಮ್ಮನ್ನು ’ಇನ್ನೆನು ಬಂತು’ ಎಂಬಂತೆ ಉತ್ತೇಜಿಸುವುದಷ್ಟೇ ಆಗಿದ್ದರೂ, ಮುಂದಿನ ಸಮಯದ ಒಂದು ಸರಿಯಾದ ಅಳತೆ ಸಿಗದೆ ಸ್ವಲ್ಪ ಕಸಿವಿಸಿಯಾಯಿತು. ಆದರೆ ಬಹುತೇಕೆ ಕಾಡನ್ನು ಕ್ರಮಿಸಿಯಾಗಿ, ಮೇಲಿನ ಬಯಲು ಸಿಕ್ಕಿದ್ದರಿಂದ, ಎತ್ತಿನ ಭುಜ ನಮ್ಮ ಕಣ್ ಮುಂದೆಯೇ ಇದ್ದುದರಿಂದ ಸ್ವಲ್ಪ ನಿರಾಳವೆನಿಸಿತ್ತು. ದಾರಿಯ ಕೊನೆಯ ಕಾಡಿನ ಸ್ಟ್ರೆಚ್ಚಿನ ಆದಿಯಲ್ಲಿ ಒಂದು ಸುಧೀರ್ಘ ವಿಶ್ರಾಂತಿ ಪಡೆದು ಮುಂದುವರೆದು ಶಿಖರದ ಕೆಳಗಿನ ಸಣ್ಣ ಬಯಲು ತಲುಪುವಷ್ಟರಲ್ಲಿ ಸೂರ್ಯಾಸ್ತದ ಸಮಯವಾಗಿತ್ತು.

ಚೆನ್ನಪ್ಪಣ್ಣನವರು ನೀರು ತರಹೋದರು. ನಾವು ಬ್ಯಾಗನ್ನಿಳಿಸಿ ಕ್ಯಾಮೆರಾ ಹಿಡಿದು ಮೇಲೋಡಿದೆವು. ದಿಗಂತದಲಿ ಸರಸರನೆ ಇಳಿಯುತ್ತಿದ್ದ ರವಿ - ಮುಂದಿನ ಕ್ಷಣಕ್ಕೆ ಮತ್ತಷ್ಟು ತಂಪಾಗಿ ಕೆಂಪಾಗಿ. ಕೆಳಗೆ ಹೊಳೆಯುವ ಒಂದು ಬೆಳ್ಳಿ ರೇಖೆ. ಅದೇ ಕಪಿಲಾ ನದಿ.. ಕಣಿವೆಗಳ ನಡುವೆ. ದಿಗಂತದಿಂದ ನೆತ್ತಿಯ ನೀಲಿಯವರೆಗೆ ಹಳದಿ ಕೆಂಪು ನಸುಗೆಂಪು ನೇರಳೆಗಳ ವರ್ಣಪಂಕ್ತಿಯ ನಿರಂತತೆ (continuum). ಬಾನಲ್ಲಿ ಕರಗುತ್ತಿರುವ ಬೆಳಕಿನ ಪರದೆಯ ಹಿಂದೆ ಅಸಂಖ್ಯ ತಾರೆ! ಕತ್ತಲಾಗುತ್ತಿದ್ದಂತೆ ಮತ್ತಷ್ಟು ಸ್ಪಷ್ಟ. ಇಡೀ ಬಾನು ದೇದೀಪ್ಯಮಾನವಾಗಿತ್ತು. ಆ ದೃಶ್ಯ ವರ್ಣಿಸಲಾಗದ್ದು. ನೆಲಕ್ಕೆ ಬೆನ್ನು ಹಾಕಿ, ಆಕಾಶ ದಿಟ್ಟಿಸುತ್ತಾ, ಅದು ಆ ಕಾನ್ಸ್ಟಲ್ಲೇಷನ್, ನೆಬುಲ್ಲ ಅಂತ ನಮ್ಮ ಹತ್ತನೆ ತರಗತಿಯ ಆಸ್ಟ್ರೊ-ಫಿಸಿಕ್ಸ್ ತರಗತಿಗಳನ್ನು ಮೆಲುಕಿದೆವು.

ಭುವಿಯಲ್ಲಿ ಸುತ್ತೆಲ್ಲ ಕಪ್ಪು ಕಾಡು ಹೊದ್ದ ಗಿರಿಪಂಕ್ತಿ. ಅಲ್ಲೊ ಇಲ್ಲೋ ಕಾಣುತ್ತಿದ್ದ ಬೆಳಕಿನ ತುಣುಕುಗಳು - ಅವು ಊರುಗಳು. ಅದೋ ಶಿಶಿಲ, ಅದೋ ಮೂಡಿಗೆರೆ, ಅದೋ ಕೊಟ್ಟಿಗೆಹಾರ ಎಂದು ಚೆನ್ನಪ್ಪಣ್ಣ ಗುರುತಿಸಿ ತೋರಿಸಿದರು. ನನಗೆ ಚಾರ್ಮಾಡಿ ಘಾಟಿನಲ್ಲಿ ಪಯಣಿಸಬೇಕೆಂಬ ಹಂಬಲ ಬಹಳ ಹಿಂದಿನದು. ನನ್ನಮ್ಮ ಅದೊಮ್ಮೆ ಆ ಘಾಟಿನಲ್ಲಿ ಸಾಗಿದ್ದ ತಮ್ಮ ಪಯಣವನ್ನು ವರ್ಣಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ - ಒಂದೇ ಬಸ್ಸು ಹೋಗಬಹುದಾದಂಥ ದಾರಿ; ಕಡಿದಾದುದು. ಅತ್ತ ನೋಡಿದರೆ ಕಂದರ. ೧೮೦ ಡಿಗ್ರಿಗಿಂತ ಹೆಚ್ಚಿನ ಘಾಟಿನ ತಿರುವುಗಳು. ಸಂಜೆಗೆ ಒಮ್ಮೆಗೆ ಶುರುವಾದ ಮಳೆಗೆ ಬಸ್ಸು ಹೆಡ್‍ಲೈಟ್ ಬಿಟ್ಟುಕೊಂಡು ನಿಂತದ್ದು.. ಇತ್ಯಾದಿ.

ಟ್ರೈಪಾಡ್ ಇಲ್ಲದಿದ್ದುದರಿಂದ ಆ ಮಬ್ಬುಗತ್ತಲಿನಲ್ಲಿ ಚಿತ್ರ ಸೆರೆಹಿಡಿಯಲಾಗಲಿಲ್ಲ :( ಚೆನ್ನಪ್ಪಣ್ಣನವರು ಸೌದೆ ಕಟ್ಟುಗಳನ್ನು ಒಗ್ಗೂಡಿಸಿ ಕ್ಯಾಂಪ್-ಫೈರ್ ಸಿಧ್ಧಮಾಡಿದ್ದರು. ಮಸಾಲಾ ಬ್ರೆಡ್ದು, ಕೇಕು, ಕರದಂಟು (?), ಖರ್ಜೂರ, ಒಬ್ಬಟ್ಟು ಮತ್ತಿನ್ನಷ್ಟು ತಿಂದು, ’ಚಪ್ಪ ಚಪ್ಪ ಚರಕ ಚಲೇ’ ಅಂತ ಬೆಂಕಿಯ ಸುತ್ತ ಸುತ್ತುತ್ತಾ ಕುಣಿಯುವಷ್ಟರಲ್ಲಿ ರಾತ್ರಿ ೮ ಆಗಿತ್ತು. ಅಲ್ಲಿಗೆ ಬಂದಿದ್ದ ಹತ್ತಿರದ ಊರಿನ ಮತ್ತೊಬ್ಬರು - ಗಾಳಿ ರಾತ್ರಿ ವಿಪರೀತ ಗತಿಯಲ್ಲಿ ಬೀಸುವುದಿದ್ದರಿಂದ ಕಾಡಿನಲ್ಲಿ ಅಥವಾ 2 ಕಿಮಿ ದೂರದ ದೇಗುಲದ ಕಾಂಪೌಂಡಿನಲ್ಲಿ ಮಲಗುವಂತೆ ಹೇಳಿದರು. ಕಾಡಿನಲ್ಲಿ?! ನೋ ಚಾನ್ಸ್. ೨ ಕಿಮಿ ಈ ಕತ್ತಲಲ್ಲಿ ಹೋಗುವುದು? ನೋ ಚಾನ್ಸ್ ಅಂತ ಅಲ್ಲೇ ಮಲಗುವುದಾಗಿ ನಿರ್ಧಾರವಾಗಿ ಸ್ಲೀಪಿಂಗ್ ಬ್ಯಾಗ್ ಹರಡಿಕೊಳ್ಳುವಾಗ ನಮಗೊಂದು ಸರ್ಪ್ರೈಸ್ ಕಾದಿತ್ತು. ಸ್ಲೀಪಿಂಗ್ ಬ್ಯಾಗ್‍ಗಳು ಸಾಕಷ್ಟು ಉದ್ದವಿರಲಿಲ್ಲ ಹಾಗೂ ಅವು ಸಂಪೂರ್ಣವಾಗಿ ದೇಹವನ್ನು ಮುಚ್ಚುವಂಥವುಗಳೂ ಆಗಿರಲಿಲ್ಲ. ಅಲ್ಲದೆ ಕೆಲವು ಬ್ಯಾಗ್‍ಗಳಲ್ಲಿ ತೂತಾಗಿದ್ದವು!

ನಾವು ಮಲಗಲು ಆಯ್ದುಕೊಂಡ ಜಾಗ ಅಷ್ಟೇನೂ ಸಮತಟ್ಟಾಗಿರಲಿಲ್ಲ. ಸ್ವಲ್ಪ ಹೊತ್ತಿಗೇ ಮೈ ಕೈ ನೋಯಲು ಶುರುವಾಯ್ತು. ಉದ್ದ ಸಾಲದೆ, ಮಂಡಿ ಮಡಚಿ, ಒಂದೇ ಬದಿಗೆ ಮಲಗಿ, ಸ್ಲೀಪಿಂಗ್ ಬ್ಯಾಗಿನ ಹೆಡ್ ರೆಸ್ಟನ್ನ ಆತ್ತಿತ್ತ ಎಳೆದುಕೊಂಡು ಸುತ್ತಿಕೊಂಡು ಮಲಗಿದರೂ, ಮೂರು ತಾಸಿಗಿಂತ ಹೆಚ್ಚು ನಿದ್ದೆಯಾಗಲಿಲ್ಲ! ಎಚ್ಚರಾದಾಗ ಮಧ್ಯರಾತ್ರಿ. ವಿಪರೀತ ಅಥವಾ ಪ್ರಚಂಡ ಎಂಬ ವಿಶೇಷಣಗಳು ಸಾಲುವುದಿಲ್ಲವೇನೋ. ಗಾಳಿ ರೊಯ್ಯನೆ ಬೆಟ್ಟವನ್ನೇ ಬುಡಮೇಲು ಮಾಡುವಂತೆ ಬೀಸುತ್ತಿತ್ತು! ಅಷ್ಟು ಹೊತ್ತಿಗಾಗಲೇ ಸತೀಶ ಮತ್ತು ಚೆನ್ನಪ್ಪಣ್ಣ ಎದ್ದು ಕ್ಯಾಂಪ್-ಫೈರ್ ಪಕ್ಕ ಕೂತುಬಿಟ್ಟಿದ್ದರು. ನಾನೂ ಅವರನ್ನು ಕೂಡಿಕೊಂಡು ಬೆಂಕಿಯ ಕೆನ್ನಾಲಿಗೆಗೆ ಮೈ ಒಡ್ಡಿ ಕೂತೆ. ಗಾಳಿಯ ಶಬ್ಧಕ್ಕೆ ಬೆಂಕಿಯ ಫಟ ಫಟಿಸುವಿಕೆಯಾಗಲಿ, ಸೌದೆಯ ಚಿಟ್ ಪಿಟ್ ಏನು, ಪಕ್ಕದಲ್ಲಿ ಕೂಗಿದರೂ ಕೇಳುತ್ತಿರಲಿಲ್ಲ. ಒಬ್ಬರು ಎದ್ದದ್ದುದನ್ನು ಕಂಡು ಮತ್ತೊಬ್ಬರು ಎಂಬಂತೆ ಒಬ್ಬೊಬ್ಬರಾಗಿ ಎಲ್ಲರೂ ಎದ್ದು ಬಂದರು. ಯಾರಿಗೂ ಸರಿಯಾಗಿ ನಿದ್ದೆಯಾಗಿರಲಿಲ್ಲ. ನಾರಾ, ರಾಜಸ್ತಾದ ಛಳಿಯ ಬಗ್ಗೆ ಹೇಳಹತ್ತಿದ. ಹೀಗೆ ಹರಟೆ ಎಲ್ಲಿಂದೆಲ್ಲಿಗೋ ಹೋಗಿ ಮಾತು ಸಾಕಾಗಿ, ಎಲ್ಲರೂ ದಿಗಂತದಲ್ಲಿ ಸೂರ್ಯನ ಬೆಳಕಿಗಾಗಿ ಕಾಯತೊಡಗಿದೆವು. ಮುಂಜಾನೆಯ ಬೆಳಕಿಗಾಗಿ ಕಾದದ್ದು ಅದೇ ಮೊದಲು :D

ಸೂರ್ಯೋದಯಕ್ಕೆ ಸುಮಾರು ಒಂದು ಘಂಟೆ ಮುಂಚೆಯೇ ನಾವು ಶಿಖರದೆಡೆಗೆ ಹೊರಟೆವು. ’ಭುಜ’ವನ್ನು ಹತ್ತುವ ದಾರಿ ಕಡಿದಾದ ಬಂಡೆ ಕಲ್ಲುಗಳಿಂದ ಕೂಡಿದುದರಿಂದ ಒಂದಷ್ಟು ರಾಕ್ ಕ್ಲೈಂಬಿಂಗ್ ಮಾಡಬೇಕು. ಆ ಗಾಳಿಯಲ್ಲಿ ಹತ್ತುವುದು ಅಪಾಯಕಾರಿಯಾದ್ದರಿಂದ ರಭಸ ಒಂದಿಷ್ಟು ತಗ್ಗುವವರೆಗೂ ಕಾದು ಶಿಖರ ಏರಿದೆವು !! ಸುತ್ತಲೂ, ಚಾರ್ಮಾಡಿ ಪರ್ವತ ಶ್ರೇಣಿ ಅಲೆ ಅಲೆಯಲೆಯಾಗಿ ಹರಡಿಕೊಂಡಿರುವ ದೃಶ್ಯವನ್ನು ಕಣ್ತುಂಬಿಕೊಳ್ಳುವ ಹೊತ್ತಿಗಾಗಲೇ, ಪೂರ್ವದ ಗಿರಿಸಾಲಿನ ಅಂಚಿನಲ್ಲಿ ಬೆಳ್ಳನೆ ಪ್ರಭಾವಳಿ ಕಾಣುತ್ತಿತ್ತು! ಒಂದಷ್ಟು ಬಾನುಲಿಗಳು ಸುತ್ತುತ್ತಿದ್ದವು. ಕಾಡು, ಕ್ರಮೇಣ ತನ್ನ ಕಪ್ಪನ್ನು ಜಡಿದು ಹಸಿರು ಬಣ್ಣ ತಾಳುತ್ತಿತ್ತು. ಚುಕ್ಕೆಗಳೆಲ್ಲ ಮರೆಯಾಗುತ್ತಾ, ದಿಗಂತ ನೆನ್ನೆಯ ಸಂಜೆಯಂತೆ ಮತ್ತೆ ಕೆಂಪಾಗಿತ್ತು. ಅವನ ಕಣ್ಮರೆಯ ಉಪಸ್ಥಿತಿಯಲ್ಲೂ, ಜೀವಗಳಲ್ಲಿ ಚೈತನ್ಯ ಸಂಚಾರ! ದಿನಕರ ದಿನದ ಕೀಲಿಕೈ ಹಿಡಿದು ಆ ಶಿಖರದಲ್ಲಿ ಹೊಳೆವಾಗ, ಬರೀ ರೋಮಾಂಚನವಾಯಿತೆಂದರೆ ಅದು ನ್ಯೂನೋಕ್ತಿ! ಪ್ರತಿ ಸೂರ್ಯೋದಯವೂ ಸೂರ್ಯಾಸ್ತವೂ ಒಂದು ವಿಸ್ಮಯ. ಅದನ್ನು ಕಾಡಿನ ನಡುವೆ, ಬೆಟ್ಟದ ಮೇಲೆ ನೋಡುವ ಸೊಬಗೇ ಬೇರೆ!