Jul 4, 2007

ಅಮೇತಿಕಲ್ ಪರ್ವತಾರೋಹಣ

ಈ ಬಾರಿ ನಾವು ಹೊರಟದ್ದು - ಧರ್ಮಸ್ಥಳದ ಹತ್ತಿರದ, ಶಿಶಿಲದ ಬಳಿಯ ಚಾರ್ಮಾಡಿ, ಶಿರಾಡಿ ಶ್ರೇಣಿಗಳ ಮದ್ಯದಲ್ಲಿರುವ ಅಮೇತಿಕಲ್ ಪರ್ವತಕ್ಕೆ.

ಶನಿವಾರ ಹತ್ತಿ, ರಾತ್ರಿ ಶಿಖರದಲ್ಲೇ ತಂಗಿ, ಮುಂಜಾನೆ ಇಳಿದು, ಸಂಜೆ ಬೆಂಗಳೂರಿಗೆ ಹಿಂದಿರುಗುವ ಪ್ಲಾನ್. ಟೆಂಟ್ ಮತ್ತು ಸ್ಲೀಪಿಂಗ್ ಬ್ಯಾಗ್‌ಗಳ ವ್ಯವಸ್ಥೆ ಬೆಂಗಳೂರಿನಿಂದಲೇ; ಮಾರ್ಗದರ್ಶನಕ್ಕಾಗಿ ಸ್ಥಳೀಯ ಗೈಡ್. ಶುಕ್ರವಾರ ರಾತ್ರಿ ಸರ್ಕಾರಿ ಬಸ್ಸಲ್ಲಿ ಪ್ರಯಾಣ.

ಕಣ್ಬಿಟ್ಟಾಗ ಮುಂಜಾನೆ ಆರು. ಆಗಲೇ ರವಿ ತನ್ನ ಪ್ರಖರತೆ ತೋರುತ್ತಿದ್ದ. ಬಸ್ಸು ಹೈವೇಯಿಂದಿಳಿದು, ರೊಯ್ಯನೆ ಕಾಡಿನ ನಡುವೆ ಏರಿ ಇಳಿದು ಸುತ್ತುತ್ತಾ ಧರ್ಮಸ್ಥಳದ ಕಡೆಗೆ ಸಾಗಿದೆ. ಸುತ್ತೆಲ್ಲ ವನಸಿರಿ - ಹಸಿರು - ಅಹ್ಲಾದಕರ ಗಾಳಿ. ಮಲೆನಾಡಿನ ಪರಿಸರದಲ್ಲಿ ಶ್ವಾಸ ಸಂಭಂಧಿಗಳಾಗಿ ಒಂದಾಗಿದ್ದೆವು.

‘ಸಾಕೇತ’ದಲ್ಲಿ ಲೋಕಲ್ ಬಾಯ್ ಪ್ರದೀಪ ಆಗಲೇ ರೋಮುಳನ್ನು ಕಾದಿರಿಸಿದ್ದ. ‘ಫ್ರೆಶ್’ ಆಗಿ ದೇವಸ್ಥಾನಕ್ಕೆ ಹೊರಟು ಸೀದಾ ಕ್ಯೂನಲ್ಲಿ ನಿಂತೆವು. ಮುಂಜಾನೆಯಾದುದರಿಂದಲೋ ಏನೋ, ಪ್ರಾಂಗಣದಲ್ಲಿ ಅಷ್ಟಾಗಿ ಹೆಚ್ಚು ಜನರಿದ್ದಂತೆ ಕಾಣಲಿಲ್ಲ. ಭಕ್ತಿಯ ವಾತಾವರಣ; ಅದರಿಂದ ಸುತ್ತೆಲ್ಲ ಒಂದು ಗಾಂಭೀರ್ಯ, ಸ್ಥಬ್ದತೆ, ಉಲ್ಲಾಸ. ಸಾಲಿನಲ್ಲಿ ನಡೆಯುವಾಗ ಅಲ್ಲಲ್ಲಿ ದೊಡ್ಡ ಪರದೆಯಲ್ಲಿ ದೇವರ ದರ್ಶನ. ನಾನಾ ಕಡೆಯಿಂದ ಬಂದಿದ್ದ ಭಕ್ತಾದಿಗಳು - ಮುದುಕರು, ಅಜ್ಜಿಯರು, ಯುವಕರು.. - ನಾನಾ ಕಷ್ಟಗಳು - ಅವನಲ್ಲಿ ಮೊರೆ. ಆ ಪ್ರಶಾಂತ ದೇಗುಲವೇ ಅವರಿಗೆ ಅಭಯ. ಭಕ್ತಿಯೇ ಅವರ ಅರ್ಪಣೆ.

ಅಂಗಳದ ನಡುವಿನಲ್ಲಿದ್ದುದು ಕಲ್ಲು ಮಂಟಪಗಳು ಹಾಗೂ ಅಲ್ಲಿ ರವಿಯ ನೆರಳು ಬೆಳಕಿನ ಆಟ - ಎಲ್ಲರಿಗೂ ತಮ್ಮೂರ ಊರ ನಡುವಿನ ದೇಗುಲ ನೆನಪಿಗೆ ಬರುವಂತೆ. ಮಂತ್ರ ಘೋಷ, ಘಂಟಾನಾದ, ಮಂಗಳಾರತಿಯ ತೇಜದ ವಿಶಿಷ್ಟ ಬೆಳಕಲ್ಲಿ ದರ್ಶನ ಸುಸಾಂಗ. ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಹೊರಬಂದಾಗ ಏನೋ ತೃಪ್ತಿ.

ಜೀಪನ್ನು ಹಿಡಿದು ಹೊರಟೇಬಿಟ್ಟೆವು. ನಮ್ಮ ಗೈಡ್ - ‘ಚೆನ್ನಪ್ಪಣ್ಣ’ನವರು ನಮ್ಮನ್ನು ಶಿಶಿಲದಲ್ಲಿ ಕೂಡಿಕೊಂಡರು. ಚಾರಣದ ಪ್ರಾರಂಭದ ತಾಣ ತಲುಪುವಷ್ಟರಲ್ಲಿ ನೇರ ನೆತ್ತಿಯ ಬಿಸಿಲಿತ್ತು.

* * * *

ಪ್ರಾರಂಭದ ದಾರಿ ತುಸು ಹೆಚ್ಚೇ ಕಡಿದಾಗಿತ್ತು. ೪೫ ಡಿಗ್ರಿಯಷ್ಟು ಇಳಿಜಾರು. ಉಸ್ ಉಸ್ ಎಂದು ಅಲ್ಲಲ್ಲೆ ಕೂತು ನಿಂತು ಕಾಡನ್ನು ದಾಟುವುದರಲ್ಲಿ ನೀರಿನ ಬಾಟಲಿಗಳಾಗಲೇ ಖಾಲಿಯಾಗುವುದರಲ್ಲಿದ್ದವು. ಆರಂಭದ ಕಾಡು ದಾಟಿದ ನಂತರ ಸ್ವಲ್ಪ ಸಮತಟ್ಟಾದ ನೆಲ. ಅಲ್ಲೆ ಮರದ ತಂಪಿನಲ್ಲಿ ಊಟ. ಆ ಜಾಗದಿಂದಲೇ ಅಮೇತಿಕಲ್ ಪರ್ವತದ ತುತ್ತ ತುದಿಯ ಮೂರು ದೊಡ್ಡ ಕಲ್ಲು ಬಂಡೆಗಳು ಕಾಣುತ್ತಿದ್ದವು. ನಮ್ಮ ಗೈಡ್ ಹೇಳಿದಂತೆ, ತುಳುವಿನಲ್ಲಿ ‘ಅಮೇ’ ಅಂದರೆ ಪಾಂಡವರು ಹಾಗೂ ‘ದಿಕ್ಕೆಲು’ ಅಂದರೆ ಒಲೆ. (ಒಂದೊಂದು ಬಂಡೆಯೂ ಸುಮಾರು ಮೀಟರ್‌ಗಳಷ್ಟು ಎತ್ತರ. ಅದನ್ನು ಪಾಂಡವರು ಹೇಗೆ ಬಳಸುತ್ತಿದ್ದರೋ, ದೇವರೇ ಬಲ್ಲ). ಇಷ್ಟು ದೂರದಿಂದ ನೋಡಿದರೂ, ಶಿಖರದೆಡೆಗೆ ಒಂದು ಅಂದಾಜಿನ ಮಾರ್ಗವೂ ಕಾಣದು. ಗೈಡ್ ಇರದಿದ್ದರೆ ಅರ್ಧ್ ದಾರಿಗೇ ವಾಪಸ್ ಬರಬೇಕಾಗಿತ್ತು!

ಬೇಸಿಗೆಯಲ್ಲಿ, ಈ ಮಾರ್ಗದಲ್ಲಿ ನೀರು ಸಿಗುವುದು ಒಂದೇ ಒಂದು ತಾಣದಲ್ಲಿ. ‘ಅದಿನ್ನೆಷ್ಟು ದೂರ?’ ಎಂದು ತಲೆಗೊಂದೆಂಬಂತೆ ಪದೇ ಪದೇ ಗೈಡನ್ನು ಕೇಳಿದೆವು. ಅವರೂ ಸಹ ಎಲ್ಲರಿಗೂ - ‘ಇಲ್ಲೇ’, ‘ಇನ್ನೈದು ನಿಮಿಷ’, ‘ಇನ್ನು ಹತ್ತು ನಿಮಿಷ’ ಎಂದು ಶಾಂತವಾಗಿ ಹೇಳುತ್ತಿದ್ದರು. ಕೊನೆಗೂ ಅಲ್ಲಿ ತಲುಪಿದಾಗ ಹೊಟ್ಟೆ ತುಂಬಾ ಕುಡಿದು ಎಲ್ಲಾ ಬಾಟಲಿಗಳಲ್ಲಿ ನೀರು ತುಂಬಿಸಿಕೊಂಡು ಹೊರಟೆವು. ಮುಂದೆ ಹುಲ್ಲು, ಸಣ್ಣ ಕಲ್ಲು ಬಂಡೆಗಳಿಂದ ಕೂಡಿದ zigzag ದಾರಿ. ಸಾಗುತ್ತಾ ನಿಲ್ಲುತ್ತಾ ಸವಿಯುತ್ತಾ ಕ್ಲಿಕ್ಕಿಸುತ್ತಾ ಮಾತಾಡುತ್ತಾ, ಒಂದು ಏಕಾತನದ (monotonous) ಲಯದಲ್ಲಿ ಹತ್ತುತ್ತಿದ್ದೆವು. ಆದರೆ ಕೃಷ್ಣ ಮಾತ್ರ, ಭಾರವಾದ ಬ್ಯಾಗಿನ ಕಾರಣ, ಬಹಳ ಕಷ್ಟ ಪಡಬೇಕಾಯಿತು.

ಒಂದೆಡೆ 60 ಡಿಗ್ರಿ ಇಳಿಜಾರಿನ ಬಂಡೆ. ಷೂ ಗ್ರಿಪ್ ಚೆನ್ನಾಗಿದ್ದುದರಿಂದ ಯಾರಿಗೂ ಕಷ್ಟವಾಗಲಿಲ್ಲ. ಬಂಡೆ ತೇವವಿದ್ದರಂತೂ ಸಾದ್ಯವೇ ಇಲ್ಲ ಬಿಡಿ. ಮತ್ತೊಂದು ಕಡೆ ತೀರಾ ಇಳಿಜಾರಿನ ಕಲ್ಲುಬಂಡೆಯ ಸಂದು ಗೊಂದುಗಳಲ್ಲಿ ನೂರಾರು ಬಾಳೆ ಗಿಡಗಳು! (ಅಲ್ಲಿ ಒಳಗೊಂದು ನೀರಿನ ಸೆಲೆಯಿತ್ತೆಂದು ಕಾಣುತ್ತದೆ). ನಿಂತು ಒಮ್ಮೆ ಹಿಂದೆ ತಿರುಗಿ ನೋಡಿದರೆ ಪರ್ವತಗಳ ಸಾಲು ಸಾಲೇ ಕಾಣುತ್ತದೆ - ಅದೋ ಎತ್ತಿನ ಭುಜ, ಅದೋ ಹುಲಿ ಮಲೆ ಎಸ್ಟೇಟ್, ಅದೋ ಭತ್ತದ ರಾಶಿ - ಅಲ್ಲಿಂದ ಮೂಡಿಗೆರೆ 3 ಕಿ.ಮೀ. ಅದು ಚಾರ್ಮಾಡಿ ಪರ್ವತ ಶ್ರೇಣಿ. ಇತ್ತ ಶಿರಾಡಿ! ಇಲ್ಲೇ ಹೀಗೆ! ಇನ್ನು ಶಿಖರದಿಂದ?!

ಒಂದೆಡೆ ದೊಡ್ಡ ಬಂಡೆಯ ಅಡಿಯಲ್ಲಿ ನಿಂತೆವು. ಅದು ಟೆಂಟ್ ಮಾಡಬಹುದಾದಂತಹ ಜಾಗ - ರಾತ್ರಿ ತಂಗುವುದಕ್ಕೆ ಒಂದು ಪರ್ಯಾಯ. ಕೃಷ್ಣನಿಗೆ ಹೆಚ್ಚೇ ಬಳಲಿದ್ದ - ‘ಇಲ್ಲೇ ತಂಗುವ’ ಎಂದ. ಕೆಲವರು ಅದನ್ನು ಪುಷ್ಟೀಕರಿಸುತ್ತ ಮುಂಜಾನೆ ಎದ್ದು ಶಿಖಿರಕ್ಕೆ ಹೊಗಿಬರಬಹುದಲ್ಲ - ಎಂದು ಉಪಾಯ ಹೂಡಿದರು. ಶಿಖರ ತಲುಪುವ ವೇಳೆ 5, 6 ಎಂದು ಹಲವಾರು ಬಾರಿ ಪರಿಷ್ಕೃತಗೊಂಡು ಈಗ 6.30 ಆಗುವಂತೆ ಕಾಣುತ್ತಿತ್ತು. ಮೋಡ ಕವಿದು ಮಬ್ಬಾಗಿದೆ. ಮುಂದೆ ಕಡಿದಾದ ಕಾಡು ಬೇರೆ. ಏನಾಗುತ್ತೋ ನೋಡೋಣ; ಮುಂದೆ ಕಷ್ಟವಾದರೆ, ಹಿಂದಿರುಗಿ ಇಲ್ಲೇ ಟೆಂಟ್ ಮಾಡುವ ಸಾದ್ಯತೆ ಇದ್ದೇ ಇದೆಯೆಂದು ಏರಲು ಮುಂದುವರಿದೆವು.

* * * *

ಎಲ್ಲರ ಮನಸ್ಸಿನಲ್ಲೂ, ಆಗ ತಾನೇ ಮೂಡಿದ ಸಂಜೆಗತ್ತಲಿನಿಂದ ಶುರುವಾದ ಒಂದು ಸಣ್ಣ ಭಯ, ಮಾತಾಡದೇ ಬೇಗ ಬೇಗ ಹೆಜ್ಜೆ ಹಾಕುವಂತೆ ಮಾಡಿತು. ಗೈಡ್ ಇದ್ದುದರಿಂದ ಎಲ್ಲರಿಗೂ ಒಂದಿಷ್ಟು ದೈರ್ಯ. ಇಲ್ಲದಿದ್ದರೆ ಆ ಕಾಡನ್ನು ದಾಟುವ ದುಸ್ಸಾಹಸ ಖಂಡಿತಾ ಮಾಡುತ್ತಿರಲಿಲ್ಲ! ಇಳಿಬೆಳಕಿನಲ್ಲಿ, ಒತ್ತೊತ್ತಿನ ವನದಲ್ಲಿ, ಚೀರುವ ನೀರವತೆಯಲ್ಲಿ, ಜೀರುಂಬೆಯೋ ಅಥವಾ ಇನ್ಯಾವುದೋ ಕಾಡು ಜಂತುವಿನ ಶಿಳ್ಳೆಯಲ್ಲಿ, ಮುಳ್ಳಿನ ಗಿಡಗಳಿಂದ ತಪ್ಪಿಸಿಕೊಳ್ಳುತ್ತಾ, ಕೊಂಬೆಗಳನ್ನು ಬಗ್ಗಿಯೋ, ಜಿಗಿದೋ ಸಾಗಿ, ಗಿಡಗಳ ಖಾಂಡವನ್ನೇ ಸಹಾಯವಾಗಿ ಹಿಡಿದೆಳೆದು ಸಾಗುತ್ತಿದ್ದೆವು. ಚೆನ್ನಪ್ಪಣ್ಣನವರು ಮುಂದೆ ಸಾಗುತ್ತಾ, ಅಲ್ಲಲ್ಲೆ, ದಾರಿಗಡ್ಡವಾದುದನ್ನು ತಮ್ಮ ಮಚ್ಚಿನಲ್ಲಿ ಕಡಿಯುತ್ತ, ಅಲ್ಲಲ್ಲಿ ಎಚ್ಚರಿಕೆ ಹೇಳುತ್ತಿದ್ದರು. ನನಗೋ, “ಎಲ್ಲಿದ್ದೀನಪ್ಪಾ!”, ‘ನಾನ್ಯಾಕಾದ್ರೂ ಬಂದ್ನೋ” ಅಂತ ಅನ್ನಿಸ್ತಾ ಇತ್ತು.

ಕಾಡು, ಬೆಟ್ಟದ ತುದಿಯ ಹೆಬ್ಬಂಡೆಯನ್ನು ಬಳಸಿ, ಹಿಂಬಾಗದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದೆ ಕಡಿದಾದ ಮಾರ್ಗ; ಕಾಲು ದಾರಿಯನ್ನು ಮುಚ್ಚುವಂತಹ ಎದೆಯೆತ್ತರದ ಹುಲ್ಲು. ಕೆಲವು ಕಡೆಯಲ್ಲಂತೂ ಜಾರಿದರೆ ದೇವರೇ ಗತಿಯೆನ್ನುವಂತೆ. ಅಲ್ಲಲ್ಲಿ ಸಡಿಲ ಮಣ್ಣು ಅಥವಾ ಸಡಿಲಾದ ಕಲ್ಲುಗಳಿರುತ್ತಿದ್ದುದರಿಂದ ಪ್ರತಿ ಹೆಜ್ಜೆಗೂ ಹುಲ್ಲನ್ನು ಗೊಂಚಲಾಗಿ ಹಿಡಿದು ಹತ್ತಬೇಕಾಗಿತ್ತು. ಶಿಖರ ತಲುಪಿದಾಗ ಮೋಡ ಕವಿದಿದ್ದರಿಂದ ಆಗಲೇ ಸುಮಾರು ಕತ್ತಲಾಗಿತ್ತು. ಸೂರ್ಯಾಸ್ತ ನೋಡುವ ಅವಕಾಶ ನನಗೆ ಮತ್ತೆ ಕೈ ತಪ್ಪಿತ್ತು.

ಗಾಳಿಗಡ್ಡವಾಗುವಂತಿದ್ದ ಬಂಡೆಯ ಮಗ್ಗುಲಲ್ಲಿ ೨ ಟೆಂಟ್ ಹಾಕಿದೆವು. ಮತ್ತೊಂದು ಸ್ವಲ್ಪ ದೂರದಲ್ಲಿ. ಚೆನ್ನಪ್ಪಣ್ಣನವರು ಆಗಲೇ ಕಟ್ಟಿಗೆ ಒಟ್ಟು ಮಾಡಿ ಬೆಂಕಿ ಹಚ್ಚಿದ್ದರು; ನಮ್ಮ ‘ಕ್ಯಾಂಪ್ ಫೈರ್’ ಸಿದ್ದವಾಗಿತ್ತು. ಬೆಂಕಿ ಕಾಯಿಸಿಕೊಂಡು, ಒಂದಿಷ್ಟು ತಿನ್ನುತ್ತಾ, ಹರಟೆ ಹೊಡೆದು ಕತ್ತಲಾಗುವಷ್ಟರಲ್ಲಿ ಎಲ್ಲರೂ ಟೆಂಟ್ ಒಳಗೆ. ಮಲಗುವಾಗ ಇನ್ನೂ ೮ ಘಂಟೆ. ನೆಲಕ್ಕೆ ಬೆನ್ನು ಹಾಕಿ ಚುಕ್ಕಿ ಚಂದಿರರನ್ನು ದಿಟ್ಟಿಸಲು ಬಾನೆಲ್ಲ ಮೋಡ. ಅಂದು ರಾತ್ರಿ ಶಿಶಿಲದಲ್ಲಿ ಜಾತ್ರೆಯ ಕೊನೆ ದಿನದ ಉತ್ಸವ ಆಚರಣೆಗಳ ಬೆಳಕನ್ನು ನೋಡೋಣವೆಂದರೆ ಕೆಳಗೂ ಮೋಡ. ಇನ್ನೇನು ಮಲಗುವುದೊಂದೇ option. ನನಗಂತೂ ಕಣ್ಮುಚ್ಚಿದೊಡನೆ ನಿದ್ದೆ.

ಒಮ್ಮೆ ರಾತ್ರಿ ಎಚ್ಚರಾದಾಗ ‘ಧೋ’ ಎಂದು ಮಳೆ ಸುರಿಯುತ್ತಿತ್ತು. ಟೆಂಟ್ ಮೇಲೆ ಕವರ್ ಮುಚ್ಚಿದ್ದರೂ, ಹನಿ ತೊಟ್ಟಿಕ್ಕುತ್ತಿತ್ತು; ಇತ್ತ ನೋಡಿದರೆ ಕೃಷ್ಣ, ಪ್ರದೀಪ ಗೊರಕೆ. ಎಷ್ಟೋ ಮೈಲಿ ದೂರ ಬಂದು, ಈ ಬೆಟ್ಟದ ತುದಿಯಲ್ಲಿ, ಈ ಮಳೆಯಲ್ಲಿ, ರಾತ್ರಿ ಕಳೆಯುವ ಅದ್ಯಾವ ಘನ ಸಾದನೆಗಾಗಿ ಇಲ್ಲಿಗೆ ಬಂದೆ ಎಂದೆನಿಸಿತು.

ಪಕ್ಕದ ಟೆಂಟ್‌ಗೆ ಸರಿಯಾಗಿ ಕವರ್ ಮುಚ್ಚದ ಕಾರಣ ಒಳಗೆಲ್ಲ ನೀರು. ಮಿಥುನ, ರಾಧೇಶ ಎದ್ದು ಕೂತುಬಿಟ್ಟಿದ್ದರಂತೆ. ನವೀನ ಪ್ರಳಯಕ್ಕೂ don’t care ಎಂಬಂತೆ ಮಲಗಿದ್ದನಂತೆ. ಕೆಲವರಿಗೆ ರಾತ್ರಿ ಜಾತ್ರೆಯ ಓಲಗ ಕೇಳಿಸಿತಂತೆ. ಕೆಲವರಿಗೆ ಟೆಂಟ್ ಸುತ್ತಾ ಯಾರೋ/ಏನೋ ಓಡಾಡಿದಂತಾಯಿತಂತೆ!

* * * *

ಮುಂಜಾನೆಯ ವಿಚಾರವೇ ಬೇರೆ ಬಿಡಿ. ಅದನ್ನು ಇಲ್ಲಿ ಮತ್ತೆ ಹೇಳಬೇಕಾಗಿಲ್ಲ. ಅದು ಪ್ರತಿ ದಿನದ ಕೊಡುಗೆ. (”ಮೂಡಣ ಮನೆಯ ಮುತ್ತಿನ ನೀರಿನ..” ನೆನಪಿಗೆ ಬಂತು). ಅಲ್ಲಿಂದ ಮುಂದುವರೆದು ಒಂದು ದೊಡ್ಡ ಬಂಡೆಯನ್ನು ಹತ್ತಿ ತುತ್ತ ತುದಿ ತಲುಪಿದೆವು. ಅಲ್ಲೊಂದು ಬಾವುಟ ಕಲ್ಲುಗಳೊಳಗೆ ಅಚಲವಾಗಿ ನಿಂತಿದೆ. ಅಲ್ಲಿಯ ನೋಟಗಳಿಗೆ ಎಲ್ಲರೂ ಮೂಕರಾಗಿ ಹೋದೆವು ಎಂದಷ್ಟೇ ಹೇಳಬಲ್ಲೆ. ಸುತ್ತೆಲ್ಲ ಮೋಡದ ಸಾಗರ. ಸೂರ್ಯ ಅವುಗಳ ಮರೆಯಲ್ಲಿ ಕ್ಷೀಣವಾಗಿ ಬೆಳಗುತ್ತಿದ್ದಾನೆ! ಮೋಡಗಳು ನಿಧಾನವಾಗಿ ಒಂದೇ ಗತಿಯಲ್ಲಿ ತೇಲುತ್ತಿವೆ. ಹಿಂಡು ಹಿಂಡಾಗಿ ಪಡುವಣದಿಂದ ಮತ್ತಷ್ಟು ಬರುತ್ತಲೇ ಇವೆ. ಇದರಲ್ಲಿ ಒಂದೊಂದು ಮೋಡ ಅದೆಲ್ಲಿ ಹೋಗಿ ಕರಗುವುದೆಂಬ ಬೆರಗು. ಮೋಡಗಳು ಸ್ವಲ್ಪವೇ ಸರಿದು ಸಂದಾದರೂ, ಕೆಳಗಿನ ಆಳದಲ್ಲಿ ಪರ್ವತಗಳ ಸಾಲು ಸಾಲು ಕಾಣುತ್ತಿತ್ತು. ಸ್ವರ್ಗದಿಂದ ಭುವಿಯನ್ನು ನೋಡಿದಂತಾಗಿತ್ತು. ಕ್ಯಾಮೆರಾ ತೆಗೆದು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಎಲ್ಲರೂ ಬಂಡೆಗಳ ತುದಿಯಲ್ಲಿ ಕೂತು ಮೋಡಗಳನ್ನೋ, ದಿಗಂತವನ್ನೋ, ಏನನ್ನೋ ದಿಟ್ಟಿಸುತ್ತ ಕೂತ್ತದ್ದು ಅದೆಷ್ಟು ಹೊತ್ತೋ! ಪ್ರಮೋದ್ ಆಗ “ಬಾರೇ, ಬಾರೇ” ಹಾಡಿದ. ಅದೊಂದು ಸಂಪೂರ್ಣ ರಸ ಘಳಿಗೆಯಾಗಿತ್ತು.

* * * *

ಇಳಿದವರೇ ಸೀದಾ ಚನ್ನಪ್ಪಣ್ಣನವರ ಮನೆಯಲ್ಲಿ ಲ್ಯಾಂಡ್. ರುಚಿರುಚಿಯಾದ ಮಾವಿನ ಹಣ್ಣಿನ ಆತಿಥ್ಯ ಸ್ವೀಕರಿಸಿದೆವು. ಎಲ್ಲಾ ಸಮಯದಲ್ಲೂ ನಗುನಗುತ್ತಲೇ ಇದ್ದು, ನಮ್ಮ ತರಲೆ ತೊಂದರೆಗಳನ್ನು ಸಹಿಸಿಕೊಂಡು, ಚಾರಣದ ಯಶಸ್ವಿಗೆ ಕಾರಣರಾದದ್ದಕ್ಕೆ ಚೆನ್ನಪ್ಪಣ್ಣನವರಿಗೆ ನಾವು ಕೃತಜ್ಞತೆಯಿಂದ ವಂದಿಸಿ ವಿದಾಯ ಹೇಳಿದೆವು. ಅಲ್ಲಿಂದ ಸೀದಾ ನಮ್ಮ organizer ಗೋಪು ಗೋಖಲೆಯವರ ಮನೆಗೆ; ಅವರ ಅಡಿಕೆಯ ತೋಟದ ಹಿಂದಿನ ನದಿಯಲ್ಲಿ ಸ್ನಾನ (ಜಲ ಮಾಲಿನ್ಯ). ನಂತರ ಮನೆಯಲ್ಲಿ ಭಾರೀ ಭೋಜನ. ಹಲಸಿನ ಬೀಜದ ಸಾರು, ಹಲಸಿನ ಹಣ್ಣಿನ ಸಾರು - ಹಬ್ಬದಡುಗೆ! (ಜಾತ್ರೆಯ ಪ್ರಯುಕ್ತ ಇರಬಹುದು).

ಆನಂತರ ಶಿಶಿಲೇಶ್ವರನ ದರ್ಶನ. ದೇವಸ್ಥಾನದ ದಂಡೆಯಲ್ಲಿ ಕಪಿಲೆ - ಅಲ್ಲಿ ಸಾವಿರಾರು ದೊಡ್ಡ ಮೀನುಗಳು. ಅವುಗಳಿಗೆ ಪುರಿ ಎಸೆಯುತ್ತಾ ಫೋಟೋ ಸೆಷನ್. ತೂಗು ಸೇತುವೆಯ ಮೇಲೆ ನಿಂತು ವೀಕ್ಷಣೆ - ಸುತ್ತೆಲ್ಲ ಬೆಟ್ಟ, ನಡುವೆ ಕಪಿಲೆ, ದಡದಲ್ಲಿ ದೇವಸ್ಥಾನ … ಆಹಾ!

ಬೆಟ್ಟ, ಮೋಡ, ಬಿಸಿಲು, ಮಳೆ, ಸಾಗರ, ಗಾಳಿ, ಹಸಿರು, ಕಾಡು, ವನ್ಯ ಜೀವಿಗಳು, ಶಿಶಿಲ ಧರ್ಮಸ್ಥಳಗಳಲ್ಲಿ ದೇವರ ದರ್ಶನ .. ನಮ್ಮ ಚಾರಣ ಒಂದು ಆಧ್ಯಾತ್ಮಿಕ ಯಾತ್ರೆಯಾಗಿತ್ತು!