Aug 23, 2008

ಅಲೂಗೆಡ್ಡೆ, ಮಂಜುಗಡ್ಡೆ ಮತ್ತು ಕಾಮನಬಿಲ್ಲು - 2

ಯಾವುದೇ ಅಲಂಕಾರದ ಪದಗಳನ್ನು ಬಳಸಿ ಹೇಳಿದರೂ, ಹಿಮಾಲಯದ ಭವ್ಯತೆ, ಅಗಾಧತೆ, ಸೌಂದರ್ಯದ ಅರಿವಾಗುವುದು ಪ್ರತ್ಯಕ್ಷವಾಗಿ ಕಂಡಾಗ ಮಾತ್ರ. ನಮ್ಮ ಪೂರ್ವಿಕರು ಹಿಮಾಲಯವನ್ನು ದೇವತೆಗಳ ವಾಸಸ್ಥಾನ, ಕೈಲಾಸ ಎಂದು ಕಲ್ಪಿಸಿರುವುದು ಅದೆಷ್ಟು ಅರ್ಥಪೂರ್ಣ ಎಂದು ಅರಿವಾಗುತ್ತದೆ.

ಕೆಳಗಿನ ಹಸುರು ಬಯಲುಗಳ ದಿಬ್ಬಗಳು ಕಳೆದು, ಬೆಟ್ಟದ ಕಡಿದಾದ ಮೇಲ್ಮೆ ಮೇಲೆ ಬೆಳೆದ ನೇರ ನೀಳ ಕೊನಿಫೆರಸ್ ಮರಗಳೂ ಕಳೆದ ನಂತರ, ವರ್ಷದ ಈ ಸಮಯದಲ್ಲಿ, ಎಲ್ಲಿ ನೋಡಿದರೂ ಹಿಮ! [ಅಲ್ಲಿಂದ ಬರಿಗಣ್ಣಲ್ಲಿ ನೋಡುವುದು ಅಪಾಯಕಾರಿ. ಸನ್​ಗ್ಲಾಸ್​ಗಳನ್ನು ಉಪಯೋಗಿಸಬೇಕಾಗುತ್ತದೆ.] ಶಿಖರದೆಡೆಗಿನ ಏರು ತಿರುವಿನ ದಾರಿಯಲ್ಲಿ, ಒಮ್ಮೆ ನಿಂತು 360 ಡಿಗ್ರಿ, ಪನೋರಾಮಾ ದ್ುಶ್ಯ ನೋಡಿದರೆ - ಎಲ್ಲವೂ ಶ್ವೇತ ಶುಭ್ರ ಶೀತಲ. ಅಲೆಯಲೆಯಾಗಿ ಹರಡಿರುವ ಇದೇ ಥರಹದ ಅನೇಕ ಹಿಮಾವ್ುತ ಪರ್ವತಗಳು, ದಿಗಂತದಲ್ಲಿ ಸಾಲಾಗಿ ನೀಲಿಯಲ್ಲಿ ಬಾನ್ ನಿಲುಕಿ ನಿಂತಿರುವುದು ಕಾಣುತ್ತದೆ. K2 ಪರ್ವದ ಶಿಖರದಲ್ಲಿ ತೆಗೆದ ಚಿತ್ರವೊಂದು ನೆನಪಿಗೆ ಬಂತು [http://www.cascadeclimbers.com/plab/data/513/Abott_Panorama.JPG]. ಅದರಷ್ಟು ಎತ್ತರವಿರದಿದ್ದರೂ, ಯಾರೇ ಆದರೂ ಭಾವುಕರಾಗಿ 'ಹೈ' ಅಥವಾ 'ಇಲೇಷನ್' ಅನುಭವಿಸುತ್ತಾರೆ. ಕೆಲವರಿಗೆ ಎಲ್ಲವೂ ದೈವ ರೂಪಿಯಾಗಿ ಕಂಡು ಭಕ್ತಿಯ ಭಾವ ಮೂಡಿದರೆ, ಕೆಲವರಿಗೆ ಅದು ಸಾಹಸದ ಸಫಲತೆಗಳ ಭಾವಾತಿರೇಕ.

ಚಾರಣದ ಮುಖ್ಯ ಕ್ಯಾಂಪ್​​ಗಳೆಂದರೆ - ತಿಲಾ ಲೋಟ್ನಿ (Tila Lotni) ಮತ್ತು ಬಿಸ್ಕೆರಿ ಥಾಚ್ (Biskeri Thatch). ತಿಲಾ ಲೋಟ್ನಿ - ಟ್ರೆಕ್ಕಿನಲ್ಲೇ ಎತ್ತರದ ಹಾಗೂ ಸರ್ಪಾಸ್ ತುದಿಯ ಮುಂಚಿನ ಕ್ಯಾಂಪ್. ಮೇ ತಿಂಗಳ ಬೇಸಿಗೆಯಲ್ಲೂ ಹಿಮಪಾತವಾಗುತಿದ್ದರೆ, ಇದು ಸಂಪೂರ್ಣವಾಗಿ ಹಿಮದಲ್ಲಿ ಮುಚ್ಚಿರುತ್ತದೆ. ಟೆಂಟ್‌ಗಳು ಹಿಮದ ಹಾಸಿನ ಮೇಲೆ. ಕ್ಯಾಂಪ್ ತಲುಪುವ ವೇಳೆಗಾಗಲೇ, ಮಧ್ಯಾಹ್ನದ ಅವಧಿ ದಾಟಿರುವುದರಿಂದ ಹಿಮ ಬೀಳುತ್ತಿರುತ್ತದೆ, ಅದರೊಡನೆ ಶೀತಲ ಗಾಳಿಯೂ ಬೀಸಿದರೆ, ನಡಿಗೆಗೆ ಬೇಕಾದ ಏಕಾಗ್ರತೆಯನ್ನು ಕೆಡಿಸಿ ಕಿರಿಕಿರಿ ಮಾಡುತ್ತದೆ. ಹೇಗೋ, ಕ್ಯಾಂಪ್ ತಲುಪಿ ಬೆಚ್ಚಗೆ ಹೊದ್ದು ಕೂರೋಣ ಅಂದರೆ ಜ್ವರ ಹಿಡಿಯುವ ಭಯ. ಏರ್ ಡೆನ್ಸಿಟಿ ಕೂಡ ಇಲ್ಲಿ ಕಡಿಮೆಯಿರುವುದರಿಂದ, ಉಸಿರಾಟದ ತೊಂದರೆಯಾಗಬಹುದು. ಹಾಗಾಗಿ ಒಟ್ಟಾರೆ ಚಾರಣದಲ್ಲಿ, ತಿಲಾ ಲೋಟ್ನಿ ಬಹು ಮುಖ್ಯ.

ಈ ಕ್ಯಾಂಪಿನಲ್ಲಿ ಇರುವಷ್ಟು ಕಾಲ, ನಮ್ಮನ್ನು ನಾವು ಅದೆಷ್ಟು ಶಪಿಸಿಕೊಂಡೆವೋ ಗೊತ್ತಿಲ್ಲ. 'ನಾವ್ಯಾಕೆ ಇಲ್ಲಿಗೆ ಬಂದ್ವಿ' ಅಂತ ಕೇಳ್ಕೊಂಡಿದ್ದಿದೆ. ಅಷ್ಟೋಂದು ಕಷ್ಟವಾಗಿತ್ತು ಅಂತಲ್ಲ. ಆದ್ರೆ, ಯಾಕ್ ಬೇಕಿತ್ತು ಅನ್ನೋ ರೀತಿ :) ಆದರೆ ಈಗ ಹಿಂತಿರುಗಿ ನೋಡಿದರೆ, ದಟ್ ವಾಸ್ ದ ಬೆಸ್ಟ್ ಕ್ಯಾಂಪ್. ಹಿಮಾಲಯ ಪರ್ವತ ಶ್ರೇಣಿಯಲ್ಲೆಲ್ಲೋ ೧೨ ಸಾವಿರ ಅಡಿ ಬೆಟ್ಟದೆತ್ತರದಲ್ಲಿ, ಹಿಮಪಾತದ ನಡುವೆ ಸ್ಲೀಪಿಂಗ್ ಬ್ಯಾಗ್ ಒಳಗೆ ಜಾರಿ ಬೆಚ್ಚಗೆ ಮಲಗುವುದರಲ್ಲಿರೋ ಮಜಾನೇ ಬೇರೆ!



ಬಿಸ್ಕೆರಿ ಥಾಚ್ ಎಲ್ಲಾ ಕ್ಯಾಂಪುಗಳಲ್ಲಿ ಅತ್ಯಂತ ಸುಂದರವಾದುದು. ತಿಲಾ ಲೋಟ್ನಿಯಿಂದ ಸರ್ಪಾಸ್ ಹತ್ತಿ ಅತ್ತ ಇಳಿದರೆ ಬಿಸ್ಕೆರಿ ಥಾಚ್ ಸಿಗುತ್ತದೆ. ಒಂದು ದಿನದ ನಡಿಗೆ/ಚಾರಣ. ಅಲ್ಲಿನ ಪರಿಸರ ತಿಲಾ ಲೋಟ್ನಿಗೆ ವ್ಯತಿರಿಕ್ತವಾದುದು. ಸಣ್ಣ ಝರಿಗಳು, ಒಂದಷ್ಟು ಹಿಮ, ಮಿಕ್ಕಂತೆ, ಹಸಿರೇ ಹಸಿರು. ದೂರದಲ್ಲಿ ಹಿಮಾವ್ುತ ಗಿರಿಗಳು. ಆ ಗಿರಿಗಳ ಮೇಲೆ ಮೆಲ್ಲಗೆ ತೇಲಿ ಕರಗುವ ಮೋಡಗಳು.. ಕಡೆದು ಮಾಡಿಸಿದಂತ ಕಪ್ಪು ಬಂಡೆಕಲ್ಲುಗಳ ಬೆಟ್ಟಗಳ ಒಡಲು.. ಪುಟವಿಟ್ಟಂತೆ, ಒಂದು ಕಾಮನಬಿಲ್ಲು! ಬಿಸ್ಕೆರಿಯಲ್ಲಿ ನಾವು ತೆಗೆದ ಫೋಟೋಗಳಿಗೆ ಲೆಕ್ಕವೇ ಇಲ್ಲ.


ಮುಂದುವರೆಯುತ್ತದೆ...

2 comments:

Unknown said...

Very well and differently written, The blog sums up the mood we felt there. Also congrats for the sampige recommendation.

chethan said...

Thanks mithun!
Sorry for the delayed reply :)