ಪದಗಳ ಜೋಡಣೆಗೆ
ನೋಟಗಳ ಸೂರೆಗೆ
ಬತ್ತದು ಬೆಳಗಿನ ಬೆಳಗು
ಇದು ನಿತ್ಯದ ಬೆರಗು
ಇದು ನಿತ್ಯದ ಕಾವ್ಯ
ಬೆಚ್ಚ ಗನಸ ಬೀಳ್ಕೊಟ್ಟು
ಹೊರಬಂದು ಜಡಬಿಟ್ಟು
ತನುವೊಡ್ಡಿದೆ ಮೂಡಣಕೆ ಮನಬಿಚ್ಚಿ
ಎಳೆ ಮಿಂಚು ಸಂಚರಿಸಿತು ಮೈಯೊಳಗೆ
ನಡುಕದೊಳಗಿಂದ
ತೇಜ ರಶ್ಮಿಯ ಶಾಖದಿಂದ
ಶುಭ್ರ ತಿಳಿಬಾನು - ಬೆಳ್ಳಿಮೋಡ
ಪ್ರಶಾಂತ, ಅತಿ ಪ್ರಶಾಂತ
ಸ್ತಬ್ಧ, ನಿಶ್ಯಬ್ಧ
ಎಲ್ಲವೂ ಸುತ್ತಮುತ್ತ
ಎಲೆ ಗರಿಗಳ ಉಯ್ಯಾಲೆಯ ಅಲೆ
ಹಕ್ಕಿ ಸಂಕುಲ ತೇಲಿದೆ
ದಿನದ ಪಲ್ಲವಿಯ ಗುನುಗುತಲೆ
ಸನಿಹದ ದೇಗುಲದಲಿ
ಮಂತ್ರಘೋಷ, ಮಂಗಳ ಘಂಟಾನಾದ
ಇದು ಅಮೃತ ಘಳಿಗೆ!
ನಗುತಿಹನೋ ಭಾಸ್ಕರ
ನಭದಂಚಿನ ಪ್ರಭೆಯೊಳಗೆ ಪ್ರಜ್ವಲಿಸಿ
-ಚೇತನ್ ಪಿ / ೦೫-೦೭-೨೦೦೫
No comments:
Post a Comment