Jan 2, 2007

ಗೋಕರ್ಣದಲ್ಲಿ ವರ್ಷಾರಂಭ

ಗೋಕರ್ಣದ ಓಂ ಬೀಚ್‌ಗೆ ಹೊರಟ್ವು.. ಸ್ಕರ್ಪಿಯೋದಲ್ಲಿ. ನಾವೂಂದ್ರೆ - ಇಷ್ಟು ದಿನ ತಲೆಮರೆಸಿಕೊಂಡಿದ್ದ ಸುನಿಲ, ಮನೀಶ ಮತ್ತವನ ಅಳಿಕೆಯ ಹಳೆ ಸ್ನೇಹಿತರಾದ - ಶರತ, ಸಮೀರ, ಬಾಳ್ಳಾರಿಯಿಂದ ಬಂದು ಜಾಯಿನ್ ಆದ ಸೋಮ. ಶ್ರೀನಿಧಿ ಶಿವಮೊಗ್ಗದಲ್ಲಿ ಕೈ ತೋರ್ಸಿ ಹತ್ತೊ ಪ್ಲಾನ್. ಅವ್ನ್ ಮನೇಲ್ಲೆ ಊಟ, ಎಲೆ ಅಡಿಕೆ (ಅವುರ್ದು ಅಡಿಕೆ ಮಂಡಿ ಇದೆ). ಅಲ್ಲಿಂದ ಸೀದಾ ಗೋಕರ್ಣ. ಟೈಮಿದ್ರೆ ಅಲ್ಲಲ್ಲಿ ಸೈಟ್ ಸೀಯಿಂಗ್.

ಬೆಳಿಗ್ಗೆ ಬೆಳಿಗ್ಗೆ 201 ಅಲ್ಲಿ ಸೊಳ್ಳೆ ಕೈಲಿ ಕಚ್ಚುಸ್ಕೊಂಡು, ಊರಿಗ್ ಮುಂಚೆ ದೇವೇಗೌಡ ಪೆಟ್ರೋಲ್ ಬಂಕಲ್ಲಿ, ಛಳೀಲ್ಲಿ ನಿಂತ್ರೆ, ಮನೀಶ bmtc ಬಸ್‌ಗಿಂತ ಲೇಟಾಗಿ ಬಂದ. ಒಬ್ಬೊಬ್ರುನ್ನೆ ಪಿಕ್‌ಅಪ್ ಮಾಡ್ಕೊಂಡು ಯಶವಂತಪುರ ದಾಟೋ ಅಷ್ಟ್ರಲ್ಲಿ ಹೊಟ್ಟೆ ಹಸಿತಾ ಇತ್ತು… ಒಂದಷ್ಟು ಡಬ್ಬ ಹಾಡ್‌ಗಳಿರೊ ಸಿಡಿಗಳಿದ್ವು.. ಬರೀ ಹಿಮ್ಮಿದು.. ಕೇಳಿ ಕೇಲಿ ತಲೆ ಕೆಟ್ಟೋಯ್ತು. ರೋಡ್ ಸೂಪರ್ರಾಗಿದೆ ಅಂತ ಮನೀಶ 100+ ಚಚ್ತಾ ಇದ್ದ…

ಕ್ಯಾತ್ಸಂದ್ರದಲ್ಲಿ ಇಡ್ಲಿ ವಡೆ, ದೋಸೆ ಕಾಪಿ ಸೂಪರ್ರಾಗಿತ್ತು. ಎಲ್ರೂ ಮತಾಡ್ದೆ ತಲೆ ಬಗ್ಗುಸ್ಕೊಂಡ್ ತಿಂದಿದ್ದೆ ತಿಂದಿದ್ದು.

ಎಲ್ರಿಗೂ ತಿಪ್ಟೂರ್ ಪರ್ಚಯ ಮಾಡುಸ್ದೆ.. ಅದು ನಮ್ ಸ್ಕೂಲು, ಅದು ನಮ್ ಹೈಸ್ಕೊಲು, ಅದು ನಮ್ ಮನೆ, ಅದು ನಮ್ ಕಾಲೇಜು.. ಸೋಮ ಅಂಡ್ ಕಂಪನಿ ಸ್ವಲ್ಪ ಜ್ಯೂಸ್ ತಗೊಂಡ್ರು. ಅಲ್ಲಿಂದ ಸೋಮ ಡ್ರೈವಿಂಗ್ - ಅರ್ಸೀಕೆರೆಗೆ 140kmph ಅಲ್ಲಿ ತಲ್ಪುದ್ವಿ. ಕಡೂರ್ ಹತ್ರ ಎಳ್ನೀರು ಬೊಂಬ್ಲು ತಿನ್ಕೊಂಡು, ಫೋಟೊ ಹೊಡ್ಕೊಂಡು ಒಯ್ತಾ ಇದ್ವಿ. ಮಧ್ಯಾನ ನಿಧಿ ಮನೆಲ್ಲಿ ಊಟಕ್ಕೆ ಕೂತ್ರೆ, ಪಾರ್ಟಿ, ಹಬ್ಬದೂಟ ಮಾಡ್ಸಿದ್ದ. ನಾವ್ ಬಿಡ್ತಿವಾ…?

ಸಾಗರಕ್ಕೂ ಸ್ವಲ್ಪ ಮುಂಚೆ, ಬ್ರೇಕ್ ಹಿಡಿತಾ ಇಲ್ಲ ಅಂತ ಮನೀಶ ಗಾಡಿ ನಿಲ್ಲುಸ್ದ. ನೋಡುದ್ರೆ, ಬೆಲ್ಟ್ ಬಿಚ್ಕೊಂಡ್ ಬಿಟ್ಟಿತ್ತು. ಬ್ಯಾಟ್ರಿ ರನ್ ಆಗ್ತಿರ್ಲಿಲ್ಲ. ಕೂಲೆಂಟು ಸರ್ಕುಲೇಟ್ ಆಗ್ದೆ ಇಂಜಿನ್ ಬೇರೆ ಹೀಟ್ ಆಗ್ಬಿಟ್ಟಿತ್ತು. ಸಾಗರ್ದಲ್ಲಿ ಗ್ಯಾರೇಜ್ ಸಿಗುತ್ತೆ ಅಂತ ಏನೋ ಧೈರ್ಯ ಮಾಡಿ, ಬೆಲ್ಟ್ ತಗ್ದು ಹೊರ್ಟೇ ಬಿಟ್ವಿ. ಇಂತ ಪರಿಸ್ಥಿತಿಲ್ಲೂ ಸೋಮ ಓವರ್‌ಟೇಕ್ ಮಾಡಕ್ ನೋಡ್ತಿದ್ದ!

ಹಂಗೂ ಹಿಂಗೂ, ಅದ್ರುಷ್ಟವಶಾತ್, ಮಹಿಂದ್ರ ಮೆಕ್ಯಾನಿಕ್ ಒಬ್ಬ ಸಿಕ್ದ. ಬೇಗ ಸರಿ ಮಾಡ್ಕೊಟ್ಟೋದ. ಅಷ್ಟ್ರಲ್ಲಿ ಭಾಳ ಲೇಟ್ ಆಗೋಗಿತ್ತು. ಸೂರ್ಯಾಸ್ತ ಗೋಕರ್ಣದಲ್ಲಿ ನೋಡೋ ಆಸೆ ಕೈ ಬಿಡ್ಬೇಕಾಯ್ತು.

ಬೆಳ್ದಿಂಗ್ಳಲ್ಲಿ ಜೋಗ್ ಫಾಲ್ಸ್ ಹೇಗ್ ಕಾಣುತ್ತೆ ಅಂತ ನೋಡೋ ಆಸೆ ಆಗಿ ಜೋಗ್‌ಗೆ ಹೋದ್ವಿ. ನಮ್ಗೆ ನಿರಾಸೆ ಆಗ್ಲಿಲ್ಲ. ಬೆಳ್ದಿಂಗ್ಳಲ್ಲಿ ಜೋಗಿನ ಸೌಂದರ್ಯನೇ ಬೇರೆ. ಕಂದರದಾಚೆ ಒಂದು ಬೆಳ್ಳಿ ಎಳೆ ಕಾಣುಸ್ತಾ ಇರುತ್ತೆ. ಮಧ್ಯೆ ಹಸಿರೆಲ್ಲ ಕಪ್ಪಾಗಿದೆ. ರಾತ್ರಿಯ ಕಾಡಿನ ಮಧ್ಯದ ನೀರವತೆ ನಿಶ್ಯಬ್ದಗಳ ನಡುವೆ ಭೋರ್ಗರೆತ ಕೇಳುಸ್ತಾ ಇದೆ.. ಕೇಳಿ.. ಈ ಹೊತ್ತಿನಲ್ಲಿ ಆ ಜಲಪಾತದ ಬುಡದಲ್ಲಿರೊ ಬಂಡೆ ಮೇಲೆ ಕೂತು, ಆ ಧಾರೆ ನೋಡ್ತಾ ಕೂರೊದು ಹೇಗಿರುತ್ತೆ ಅಂತ ಕಲ್ಪಿಸ್ಕೊತಾ ಇದ್ದೆ. [ಕತ್ಲಲ್ಲಿ ಫೋಟೋ ಸರಿಯಾಗಿ ಬರ್ಲೇ ಇಲ್ಲ]

ಬೆಳ್ದಿಂಗ್ಳಲ್ಲಿ ಪಶ್ಚಿಮ ಘಟ್ಟಗಳನ್ನ ದಾಟ್ತಾ ಇದ್ವಿ.. ಹಿಂದಿನ ಕಿಟ್ಕಿಯಿಂದ, ಕಾಡು, ರೋಡಿನ ತಿರುವುಗಳನ್ನ ನೋಡ್ತಾ ಇದ್ದೀನಿ.. ದೂರ ಹೋಗ್ತಾ ಹೋಗ್ತಾ, ಹಿಂದಿರುವ ಬೆಟ್ಟ, ಇನ್ನೂ ಎತ್ತರ, ಅಗಾಧ ಅಗ್ತಾ ಇದ್ಯೇನೋ ಅನ್ಸುತ್ತೆ. ಬೆಟ್ಟಗಳ ಹಿಂದೆ, ನೀಳ ಮರಗಳ ಹಿಂದೆ, ಈ ಚಂದ್ರ ಬೇರೆ ಫಾಲೋ ಮಾಡ್ತಾ ಇದ್ದಾನೆ… ಇದು ಯಾವ್ ಲೋಕ ಅನ್ನಿಸ್ತಾ ಇತ್ತು.

ಗೋಕರ್ಣ‌ದಿಂದ ಓಮ್ ಬೀಚ್‌ಗೆ ಹೋಗ್ಬೇಕು ಅಂದ್ರೆ ಒಂದು ಸಣ್ಣ ಬೆಟ್ಟ ಹತ್ತಿ ಇಳಿಬೇಕು. ಬೆಟ್ಟದ ರೋಡು ತುಂಬ ಇಳಿಜಾರಿದೆ (ಸ್ಟೀಪಿದೆ). ಅದರ ಭುಜಗಳಲ್ಲಿ ಹತ್ತುವಾಗ ಸಮುದ್ರ ಕಾಣುತ್ತೆ… ಆ ಎತ್ತರದಿಂದ, ಅದೂ ಬೆಳ್ದಿಂಗ್ಳಲ್ಲಿ, ಸಮುದ್ರ ಕಾಣೋ ದೃಶ್ಯನ ಹೇಗೆ ವರ್ಣಿಸ್ಲಿ? ಎಲ್ರೂ ಉಸಿರು ಬಿಗಿ ಹಿಡಿದು ನೋಡ್ತಾ ಇದ್ವಿ.

ಓಮ್ ಬೀಚ್ ಸೇರೋ ಅಷ್ಟ್ರಲ್ಲಿ 11 ಆಗಿತ್ತು… as usual, ಸಿಕ್ಕಾಪಟ್ಟೆ ಜನ.. ನ್ಯೂ ಯೀಯರ್ ಅಂದ್ರೆ ತಮಾಷೆನಾ?

ತೀರದಲ್ಲಿ ಸುಮ್ನೆ ಅತ್ತಿಂದಿತ್ತ ಓಡಾಡುದ್ವಿ. ಸ್ವಲ್ಪ ಹೊತ್ತು, ಉಸುಕಿಗೆ ಬೆನ್ ಹಾಕಿ ಆಕಾಶ ನೋಡ್ತಾ, ಸಮುದ್ರದ ಹಾಡ್ ಕೇಳ್ತಾ ಇದ್ವಿ. ಅಷ್ಟ್ರಲ್ಲೆ 12 ಘಂಟೆ ಆಯ್ತು. ಸಿಕ್ಕಾಪಟ್ಟೆ ಪಟಾಕಿ ಹೊಡುದ್ರು. [ನಾನ್ ಇಲ್ಲಿಗ್ ಬಂದಿದ್ದು, ಹೊಸ ವರುಷದ ಆಚರಣೆಗಾಗಿ ಅಲ್ಲ… ಆ ದೃಶ್ಯ ಮತ್ತು ಶ್ರಾವ್ಯಗಳ ಸೌಂದರ್ಯಕ್ಕಾಗಿ.]

ಬೆಳಿಗ್ಗೆ ವಾಪಸ್ ಬಂದು, ಕೂಡ್ಲು ಬೀಚನ್ನೂ ನೋಡೋದು ಅಂತ ಡಿಸೈಡ್ ಅಯ್ತು.

ಗೋಕರ್ಣದಲ್ಲಿ ಎಲ್ಲ ರೂಮ್‌ಗಳೂ ಫುಲ್. ಕುಮ್ಟಕ್ಕೆ ವಾಪಸ್ ಹೋಗಿ ಕಾಮತ್ ಹೋಟ್ಲಲ್ಲಿ ಉಳ್ಕೊ ಬೇಕಯ್ತು. ಅಡ್ಡಿ ಇಲ್ಲ!


No comments: