Jul 19, 2009

ಓಂ ಬೀಚ್ ಟು ಕುಡ್ಲು ಬೀಚ್ (ಗೋಕರ್ಣದಲ್ಲಿ ವರ್ಷಾರಂಭ - ೩)

Dec 1, 2007 (ಅರ್ಧಕ್ಕೆ ಬಿಟ್ಟವುಗಳನ್ನೆಲ್ಲ ಪೂರ್ಣಗೊಳಿಸುವ ಸಂಕಲ್ಪದೊಂದಿಗೆ, ಎರೆಡು ವರ್ಷಗಳ ನಂತರ!)


ಬೆಳಿಗ್ಗೆ ೮ ರೊಳಗ್ಗೆ ಬೀಚ್ ತಲುಪಿದ್ವಿ. ನಾವು ಅಂದು ಕೊಂಡ ಹಾಗೆ ಬೀಚು ನಿರ್ಜನವಾಗಿತ್ತು. ಹಿಂದಿನ ರಾತ್ರಿ ಬೆಳದಿಂಗಳಲ್ಲಿ ಕತ್ತಲ ಅಗಾಧ ಒಡಲಿಂದ ಬೋರ್ಗರೆದು ನೊರೆಯಂತೆ ಬಂದು ದಡ ಬಡಿಯುತ್ತಿದ್ದ ಸಾಗರ ಶುಭ್ರ ಅಕಾಶದ ಬೆಳಕಿನಲ್ಲಿ ತನ್ನದೇ ಸ್ವಂತ ’ಓಷನ್ ಬ್ಲೂ’ ಬಣ್ಣದಲ್ಲಿ ಕಂಗೊಳಿಸುತ್ತಿತ್ತು. (ಅ ಕ್ಷಣ ಆ ನೋಟ ನನ್ನ ಕಣ್ ಬಿಂಬದಲ್ಲಿ ಹೇಗೆ ಕಾಣುತ್ತಿರಬಹುದೆಂದು ಯೋಚಿಸುತ್ತಿದ್ದೆ!). ಅದಕ್ಕೆ ಹೊಂದುವಂತೆ ಹಸಿರಂಚಿನ ತೀರ ಬೆಳ್ಳಗೆ ಕೋರೈಸಿತ್ತು. ಶೂ ತೆಗೆದು ತಣ್ಣಗಿನ ಉಸುಕಿನಲ್ಲಿ ಹೂತು ಹೋಗುವಂತೆ ಹೆಜ್ಜೆ ಹಾಕುತ್ತಾ ಸವಿದೆವು. ಎಷ್ಟೋ ಹೊತ್ತು ಸಾಗರದೆದೆ ಉಬ್ಬುತ್ತಾ ಇಳಿಯುತ್ತಾ, ತೊರೆಗಳನ್ನು ದಡಕ್ಕೆ ದೂಕುವುದನ್ನೇ ನೋಡುತ್ತಾ ಕುಳಿತೆವು. ಭುವಿಯ ಜೀವಜಲವಾಗಿರುವಾಗ ’ಉಸಿರಾಟ’ದ ಕಲ್ಪನೆ ಉಚಿತವೆನಿಸಿತು.

[ಕೆಲವು ವಿದೇಶಿ ಮಹಿಳೆಯರು ಹಿಂದಿನ ರಾತ್ರಿ ಚೆಲ್ಲಿದ ಬೀರ್ ಬಾಟಲ್, ಪ್ಲಾಸ್ಟಿಕ್ ಕವರ್ ಇತ್ಯಾದಿ ಕಸವನ್ನು ಹೆಕ್ಕಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದರು. ತಮ್ಮ ದೇಶವಲ್ಲವೆಂದು ಎಣಿಸದೆ ಶ್ರಮಾದಾನ ಮಾಡುತ್ತಿರುವ ಅವರ ಪ್ರಙ್ಞೆ, ಕಾಳಜಿ ಮೆಚ್ಚುವಂತದ್ದು].

ಆನಂತರ ಕೂಡ್ಲ ಬೀಚಿಗೆ ಹೋಗುವುದೆಂದಾಗಿ ಮೋಟಾರ್ ಚಾಲಿತ ದೋಣಿ ಹತ್ತಿದೆವು. ಅದೊಂದು ನೀಳ ದೋಣಿ. ನಡುವಿನಲ್ಲಿ ಇಬ್ಬರು ಕೂರಬಹುದಾದಷ್ಟು ಅಗಲ. ಹಿಂಬದಿಯಲ್ಲಿ ಒಬ್ಬನಿಗಷ್ಟೇ ಜಾಗ. ಅಲ್ಲಿ ಮೋಟಾರ್ ನಿರ್ದೇಶಿಸುತ್ತ ನಾವಿಕ ಕೂತಿದ್ದ. ಯಾವುದೇ ಲೈಫ್ ಜಾಕೆಟ್ ಇಲ್ಲದೆ ಹತ್ತಲು ಹೆದರಿಕೆಯಾದರೂ, ಜಾವಪಾಯವಾಗುವಂತ ಯಾವುದೇ ಸಂದರ್ಭ ಕಾಣದಿದ್ದರಿಂದ ಯೋಚಿಸಲಿಲ್ಲ. ಆದರೆ ತೀರದಿಂದ ಸುಮಾರು ದೂರ ಬಂದಾದ ಮೇಲೆ ಅಲೆಯ ಏರಿಳಿತ ದೋಣಿಯ ಅಳತೆಗಿಂತ ಸುಮಾರು ಪಟ್ಟಿದ್ದದ್ದು, ಶಾಕ್ ಸಹಿತ ಅನುಭವವಾಯಿತು. ದೋಣಿ ಮಗುಚುವುದನ್ನು ತಡೆಯುವಂತೆ, ನಾವು ವಿರುದ್ಧ ದಿಕ್ಕಿನಲ್ಲಿ ಬಾಗಿ ಏಕಾಗ್ರತೆಯಿಂದ ಬ್ಯಾಲೆನ್ಸ್ ಮಾಡುವ ಕಸರತ್ತೆಲ್ಲ ಸೀಕ್ರೆಟ್ ಆಗಿ ಮಾಡಿದೆವು. ಯಾರೊಬ್ಬರೂ ಮತಾಡುತ್ತಿಲ್ಲ. ನೋಡಿದರೆ, ಒಮ್ಮೆಗೇ ಸಮೀರ ಹಾಗೂ ಶರತ ದೋಣಿಯಲ್ಲಿದ್ದ ಎರೆಡು ಲೈಫ್ ಜಾಕೆಟ್‍ಗಳನ್ನು ಏರಿಸಿಕೊಂಡು ಬಿಟ್ಟಿದ್ದರು!

ಕುಡ್ಲ ಬೀಚಿನೆಡೆಗೆ ದೋಣಿ ತಿರುಗಿಸುವಷ್ಟರಲ್ಲಿ ಮೋಟರು ಆಫ್ ಆಗೋಯ್ತು! ಅದರಿಂದ ದೋಣಿ ಓಲಾಡುವುದು ಕಮ್ಮಿಯಾಗಿ ಸ್ಟೇಬಲ್ ಆಗಿದ್ದುದೊಂದೇ ಸಮಾಧಾನ. ಎಲ್ಲರೂ ತೀರದಿಂದ ಎಷ್ಟು ದೂರದಲ್ಲಿದ್ದೇವೆ, ಹತ್ತಿರದಲ್ಲಿ ಯಾವ ಬೋಟ್ ಇದೆ ಅಂತ ಅಂದಾಜು ಹಾಕುತ್ತಾ ಇದ್ದೆವು. ಯಾರಿಗೆ ಈಜು ಬರುತ್ತೆ ಅಂತ ಕೇಳಿದರೆ ಯರೂ ಮಾತಾಡ್ತಾ ಇಲ್ಲ. ಈ ನಡುವೆ ನಮ್ಮ ನಾವಿಕ ಮೋಟಾರ್ ಸ್ಟಾರ್ಟ್ ಮಾಡುವುದಕ್ಕೆ ಸರ್ಕಸ್ ಮಾಡ್ತಾ, ಅದ್ಯಾಕೋ ಅವನ ಅಸಿಸ್ಟೆಂಟ್‍ಗೆ ಆಳ ನೋಡಲು ಹೇಳಿದ. ದೋಣಿಯಷ್ಟೇ ಉದ್ದದ ಕೋಲೋಂದು ತಳದಲ್ಲಿಂದ ಎತ್ತಿ, ನೀರೊಳಗೆ ಇಳಿಸಿದ. ಅದು ಪೂರ್ತಿಯಾಗಿ ಒಳ ಹೋಗಿದ್ದನ್ನು ನೋಡಿ ಅವನೂ ಹೆದರಿಬಿಟ್ಟನೆಂದು ಅವನ ಮುಖ ಹೇಳುತ್ತಿತ್ತು. ಅಷ್ಟರಲ್ಲಿ ಮೋಟರ್ ಸ್ಟಾರ್ಟ್ ಆಯಿತು. ದಡವನ್ನು ಸಮೀಪಿಸುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಜೀವ ಬಂತಂದಾಗಿ, ಎಲ್ಲರ ದ್ವನಿ ಎತ್ತರವಾಗಿತ್ತು!


[ಥ್ಯಾಂಕ್ಸ್ ಟು ಸೋಮ. ಎಲ್ಲಾ ಸಮಯದಲ್ಲೂ ಕೂಲ್ ಆಗಿರದೇ ಇದ್ದರೆ ಈ ಫೋಟೋಗಳಿರುತ್ತಿರಲಿಲ್ಲ.]

No comments: