Sep 8, 2007

ಆಕ್ಸಿಡೆಂಟ್ (ಗೋಕರ್ಣದಲ್ಲಿ ವರ್ಷಾರಂಭ - ೨)

ದಿಸೆಂಬರ್ 31ರ ಬೆಳದಿಂಗಳ ರಾತ್ರಿ. ಗೋಕರ್ಣದ ಓಂ ಬೀಚಿನಿಂದ ಹಿಂತಿರುಗುವಾಗ ಸುಮಾರು ಒಂದು ಘಂಟೆ. ನಾನು ಮುಂದಿನ ಸೀಟ್‍ನಲ್ಲಿ ಕುಳಿತೆ. ಸೋಮ ಡ್ರೈವಿಂಗ್. ಸ್ವಲ್ಪ ದೂರ ಸಾಗಿದಿದಂತೆ ಕಡಲ ಭೋರ್ಗರೆತ ಕ್ರಮೇಣ ಕ್ಷೀಣಿಸಿ, ನಿಶ್ಯಬ್ಧ ಆವರಿಸಿತ್ತು. ನಿರ್ಜನ ಪ್ರದೇಶ. ಸೋಮನ ದೃಷ್ಠಿ ರಸ್ತೆಯ ಮೇಲೆ ನೆಟ್ಟಿತ್ತು. ಅವ ಹೆಚ್ಚು ಮಾತನಾಡುವವನಲ್ಲ. ಹಿಂದೆಲ್ಲರೂ ನಿದ್ರೆಗಿಳಿಯುತ್ತಿದ್ದಾರೆ. ಒಳಗೂ, ಹೊರಗೂ ಮೌನ. ಕೇಳುತ್ತಿದ್ದು ಬರೀ ಇಂಜಿನ್ ಸದ್ದು, ಕಿಟಕಿಯಿಂದ ತೂರಿಬರುತ್ತಿದ್ದ ಗಾಳಿಯ ಆರ್ಭಟ.

ದೂರದಲ್ಲಿ ಒಂದರ ಪಕ್ಕದಲ್ಲೊಂದು ಜೋಡಿಸಿದಂತೆ ಕಾಣುತ್ತಿದ್ದ ಬೆಳಕಿನ ತುಣುಕುಗಳು ಕಾಣಿಸಿದವು. ಬೆಳದಿಂಗಳಿದ್ದುದರಿಂದ ಅದು ರೈಲಿನ ಬೋಗಿಗಳ ಕಿಟಕಿಗಳೆಂದು ಗುರುತು ಹಿಡಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ರೈಲು ನಮ್ಮ ದಿಕ್ಕಿಗೆ ಲಂಬವಾಗಿ ಚಲಿಸುತ್ತಿತ್ತು. ಆಗಾಗ ತಗ್ಗುಗಳಲ್ಲಿ ಅಥವಾ ಗುಡ್ಡಗಳ ಹಿಂದೆ ಮರೆಯಾಗಿ ಮತ್ತೆ ಕಾಣಿಸಿಕೊಳ್ಳುತ್ತಿತ್ತು. ಮುಂದಿನ ಕ್ಷಣಕ್ಕೆ ಅದು ಹೆಚ್ಚು ಸ್ಪಷ್ಟ. (ಅದೋ.. ಅದೊಂದು ಬೋಗಿಯ ಬಾಗಿಲಲ್ಲಿ ಯಾರೋ ನಿಂತಂತಿದೆ!) ಆ ಕಂಡು ಮರೆಯಾಗುವ ಕುತೂಹಲದಲ್ಲೇ ಅದರ ಚಲನೆಯಲ್ಲೇ ದೃಷ್ಠಿಯಿಟ್ಟಿದ್ದೆ. ರೈಲು ಅದೊಮ್ಮೆ ಸೈರನ್ ಕಂಠದಲ್ಲಿ ಕೂಗಿದಾಗಲೇ ಅದೆಷ್ಟು ಹತ್ತಿರಾಗಿತ್ತೆಂದು ಅರಿವಾಗಿದ್ದು. ನಿಶ್ಯಬ್ಧದ ನಡುವೆ ಒಮ್ಮೆಗೇ ಸೀಳಿ ಬಂದ ಸದ್ದಿಗೆ ಕೆಲವರಿಗೆ ಎಚ್ಚರಾಯಿತು. ಹತ್ತಿರದಲ್ಲೇ ಮುಂದೊಂದು ಕ್ರಾಸಿಂಗ್ ಗೇಟ್ ಕಾಣ ಸಿಗಬಹುದೆಂದು ಕಣ್ಣು ಸಣ್ಣ ಮಾಡಿ ದಾರಿಯುದ್ದಕ್ಕೂ ನೋಡಿದೆ. ಉಹ್ಞೂ. ಅಂದಾಜಿನ ಪ್ರಕಾರ, ಅದೇ ವೇಗದಲ್ಲೇ ಚಲಿಸಿದರೆ, ನಮ್ಮ ಸ್ಕಾರ್ಪಿಯೋ, ರೈಲಿಗೆ ಮೂತಿಯಿಡುವುದು ಖಚಿತವಾಗಿತ್ತು. ಇನ್ನೇನು 50ಮೀ ಅಷ್ಟೇ. ಎಲ್ಲರ ದೃಷ್ಠಿ ಸೋಮನ ಮೇಲೆ. ಇನ್ನೇನು ಗಾಡಿ ನಿಲ್ಲಿಸುತ್ತಾನೆ - ಅಂತ. ಆದರೆ ಅವ ಸ್ಪೀಡ್ ಇನ್ನೂ ಹೆಚ್ಚಿಸಿದ! what the?

"ಏಯ್ ಸೋಮ"
"ಟ್ರೈನ್ ಕಣೋ ಸೋಮ"

ಹಾ.. ಅಕ್ಸಿಡೆಂಟೇನಾಗಲಿಲ್ಲ. ಜಸ್ಟ್ ಮಿಸ್ಸೂ ಅಲ್ಲ! ರೈಲು ಓವರ್ ಬ್ರಿಡ್ಜ್ ಮೇಲೆ ಹೋಗಿತ್ತು.

ಕಿರುಚಿದ್ದು ಯಾರು? ಯಾರಿಗೆ ’ಎಲ್ಲ ಗೊತ್ತಿತ್ತು’ ಯಾರಿಗೆ ’ಏನೂ ಗೊತ್ತಿರಲಿಲ್ಲ’ ಎಂಬುದು ಇನ್ನೂ ವಿವಾದದಲ್ಲಿದೆ.

No comments: