Apr 12, 2005

ಜೀವಜಲವೇ

ನನ್ನೊಡಲ ಜೀವಜಲವೇ,
ನಿನ್ನೊಡಲ ಈ ಜೀವವ ಸಲಹು ಬಾ
ಬಾ ತಾಯಿ, ಬಂದೇ ಬಾ,
ಈ ನಿನ್ನ ನನ್ನ ಮೈದುಂಬಿ ಬಾ…ನಿನ್ನೆಲ್ಲಾ ಆಕಾರಗಳಲಿ
ನಿನ್ನೆಲ್ಲಾ ವರ್ಣಗಳಲಿ
ನಿನ್ನೆಲ್ಲಾ ಗುಣಗಳಲಿ
ನಿನ್ನೆಲ್ಲಾ ರೂಪುಗಳಲಿ
ನಿನ್ನೆಲ್ಲಾ ಶಕ್ತಿಗಳಲಿ
ನಿನ್ನೆಲ್ಲಾ ವ್ಯಾಪ್ತಿಗಳಲಿ
ನಿನ್ನ ಒಡಲಾಳ ಜೀವಕೋಟಿಗಳಲಿ
ಶೂನ್ಯದ ತಳ ಸೇರುವೆ
ಭಕ್ತಿಯಿಂದ ಕೈ ಮುಗಿವೆ
ಬಾ ತಾಯಿ, ನೀ ಬಂದೇ ಬಾ…

ನಿನ್ನ ಗುಡುಗು ಗದ್ದಲಕೆ
ನಿನ್ನ ಸಿಡಿಲು ಮಿಂಚಿಗೆ
ನಿನ್ನ ರೋಷ ರಭಸಕೆ
ಉಸಿರ ಬಿಗಿ ಹಿಡಿದು ಕಾದಿಹೆ ನಾ
ಬಾ ತಾಯಿ, ನೀ ಬೇಗ ಬಾ…

ಇಳೆಯೊಳು ಉಕ್ಕಿ ಬಾ
ಕಡಲೋಳು ಕೊಚ್ಚಿ ಬಾ
ಗಗನವ ಮುಚ್ಚಿ ಬಾ
ಎಂತಾದರೂ ಬಾ
ಬಿರಿದ ಬಾಯ್ಗಳ ಮುಚ್ಚು ಬಾ
ಬಾ ತಾಯಿ, ನೀ ಬಂದೇ ಬಾ…

ಹಸಿರು ಎಲೆಗಳಲಿ
ಅವುಗಳ ನೆರಳಿನಲಿ
ನೆಲದ ತಂಪಿನಲಿ
ಮಣ್ಣಿನ ಕಂಪಿನಲಿ
ಕಾಮನ ಬಿಲ್ಲಿನಲಿ
ಅದರ ಬಿಂಬಗಳಲಿ
ನಮ್ಮೆಲ್ಲಾ ಜೀವನಾಳಗಳಲಿ
ಮೈ ಬೆವರ ಬಿಂದುಗಳಲಿ
ನದಿ ಕೆರೆ ತೊರೆಗಳಲಿ
ಹಳ್ಳ ಕೊಳ್ಳಗಳಲಿ
ಝರಿ ಜಲಪಾತಗಳಲಿ
ನಮ್ಮೆಲ್ಲಾ ಆನಂದ ಭಾಷ್ಪಗಳಲಿ
ನೆಲೆಸು ಬಾ
ಉಳಿಸು ಬಾ
ಬಾಳಿಸು ಬಾ…

ಬಾ ತಾಯಿ, ನೀ ಬಂದೇ ಬಾ,
ನಿನಿಲ್ಲೇ ನೆಲೆಸು ಬಾ

-ಚೇತನ್ ಪಿ
೧೨-೦೪-೨೦೦೫

No comments: