Apr 20, 2005

ನಮ್ಮ ಮಹಾನಗರಿ

ಉರಿಬಿಸಿಲಿನೊಳು ಅಲ್ಲೆಲ್ಲೋ ಕಾಣುವ
ಒಂದ್ನಾಲ್ಕು ಮರಗಳು
ಆ ಮರಗಳ ತೂತು ಛತ್ರಿಯ ಒಳಗೆ ತೂರುವ
ಒಂದ್ನಾಲ್ಕು ಕಿರಣಗಳು

ದುರ್ನಾತದ ಚರಂಡಿಯ ಪಕ್ಕದ
ಬಿಡಿಏ ಉದ್ಯಾನ
ಆ ಉದ್ಯಾನದೊಳು ಚಿಮ್ಮುವ ಕಾರಂಜಿಯ
ತಂಪನೆ ನೀರಿನ ಸಿಂಚನ

ವಾಹನಗಳ ಕರ್ಕಶ ಸದ್ದು,
ಕಪ್ಪು ಹೊಗೆಯ ನಟ್ಟ ನಡು
ಎಲ್ಲಿಂದಲೋ ತೇಲಿ ಬರುತಲಿಹುದು
ಆಕಾಶವಾಣಿಯ ಸುಮಧುರ ಹಾಡು

ಕೈ ಚಾಚಿದರೊಬ್ಬ ಸಿಗುವನು
ಅಷ್ಟೊಂದು ಇಕ್ಕಟ್ಟು
ಈ ಇಕ್ಕಟ್ಟಿನಲಿ ಗಟ್ಟಿಯಾಗಿದೆ
ಅವಿಭಕ್ತ ಕುಟುಂಬದ ಒಗ್ಗಟ್ಟು

ಮಹಾನಗರಿಯಲ್ಲಿಂದೂ ಅಳಿದಿಲ್ಲ
ಜಾತಿ ಮತಗಳ ಬೇಧ
ಈ ಬೇಧವ ಭೇಧಿಸುತಲಿದೆ
ಮನುಜತೆಯ ಸಹಜ ಸ್ನೇಹ ಸಂಬಂಧ

ಹತ್ತು ಭಾಷೆಯ ನೂರು ಸೀಮೆಗಳ
ಜನ ಮನಗಳದಿದು ಸಂಗಮ
ಆ ಸಂಗಮದೊಳೂ ಕಂಗೊಳಿಸುತಿದೆ
ಕನ್ನಡದ ನಿತ್ಯೋತ್ಸವದ ಸಂಭ್ರಮ

ಚೇತನ್ ಪಿ
೨೦-೦೪-೨೦೦೫

No comments: