ಧುಮುಕುವ ಹನಿ
ಧರೆಗೆ ಮುತ್ತಿಡಲು
ಹೊಮ್ಮುವ ತೃಪ್ತಿಯ ತರಂಗಗಳು
ಕಳವಳದ ಮನಸಿಗೆಷ್ಟೋ ನೆಮ್ಮದಿ
ಹೊನ್ನಿನ ಎಳೆಬಿಸಿಲಿಗೆ
ಮುಖವೊಡ್ಡಲು, ರೆಪ್ಪೆಯೊಳಗೆ
ಮೂಡುವ ಬೆಚ್ಚನೆ ಬೆಳಕಿನ ಹಿತ
ಒತ್ತಡದಲಿ ಒತ್ತಿದ ಮನಸಿಗೆಷ್ಟೋ ನೆಮ್ಮದಿ
ನಿರ್ಜನ ರಸ್ತೆಯಲಿ, ನಿಶ್ಯಬ್ಧದಲಿ
ಒಂದೇ ಗತಿಯ
ಹುಚ್ಚು ನಡಿಗೆಯ ಲಯ
ದಣಿದ ಮನಸಿಗೆಷ್ಟೋ ನೆಮ್ಮದಿ
ಹೋದ ರಜೆಯಲಿ
ಊರ ಮನೆಯಲಿ
ತಾಯ್ ತೊಡೆಯಲಿ ತಲೆಯನಿಟ್ಟ ನೆನಪು
ದಿಕ್ಕೆಟ್ಟ ಮನಸಿಗೆಷ್ಟೊ ನೆಮ್ಮದಿ
ಕಣ್ತುಂಬಿ ಎದೆಯುಕ್ಕುವ
ಆ ಘಳಿಗೆ, ಆ ನಿಮಿಷದಲಿ
ಸಾಲು ನಿಲ್ಲುವ ಭಾವ ಪದಗಳು
ತಲ್ಲಣಿಸಿದ ಮನಸಿಗೆಷ್ಟೋ ನೆಮ್ಮದಿ
-ಚೇತನ್ ಪಿ
೨೫-೦೪-೨೦೦೫
No comments:
Post a Comment