
ಕವಿ-ಕೃತಿ ಪರಿಚಯದಲ್ಲಿ ಹೇಳಿರುವಂತೆ, ಪ್ರತೀವಾರ "ಹಾಯ್ ಬೆಂಗಳೂರ್" ವಾರ ಪತ್ರಿಕೆಗೆ "ಬೊಗಸೆಯಲ್ಲಿ ಮಳೆ" ಶೀರ್ಷಿಕೆಯಲ್ಲಿ ಬರೆದ ನುಡಿನೋಟಗಳ ಸಮಗ್ರ ಸಂಕಲನ ಇದು.
ಏನಿದು ನುಡಿನೋಟ? - ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಓದಿ ಸ್ವತಃ ತಿಳಿಯುವಂಥದ್ದು. ಓದಿದ ನಂತರ ’ನುಡಿನೋಟ’ ವೆಂಬುದು ಎಷ್ಟು ಸಮರ್ಪಕ ಹೆಸರೆಂದು ನಿಮಗೇ ತಿಳಿಯುತ್ತದೆ. ಆದರೂ ಸಂಕ್ಷಿಪ್ತವಾಗಿ ಹೇಳುವುದಾದರೆ, ನುಡಿನೋಟವು, ದೈನಿಕ ಆಗುಹೋಗುಗಳ ಸಣ್ಣ ವಿವರಗಳಲ್ಲಿ ಜಯಂತರು ತಮ್ಮ ಅನುಭವಗಳನ್ನು ಹೆಣೆದು ಕಟ್ಟಿಕೊಡುವ ಅಭಿವ್ಯಕ್ತಿಯ ಪ್ರಯತ್ನ; ಅವರ ಸುತ್ತಣ ಜಗತ್ತಿನ ಸೂಕ್ಷ್ಮ ಸವಿವರ ಚಿತ್ರಣ, ಭಾವುಕ ಅವಲೋಕನ. ಇಲ್ಲಿ ಕಾಲ್ಪನಿಕತೆಯಿಲ್ಲ. ಪೂರ್ವಾಗ್ರಹವಿಲ್ಲ, ಉತ್ಪ್ರೇಕ್ಷೆಗಳಿಲ್ಲ.
ರವಿ ಬೆಳಗೆರೆ ಹೇಳುವಂತೆ - ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಜಯಂತರು ಹೇಳಬಲ್ಲರು. ದೇಶ ಕಾಲಗಳಲ್ಲಿ ಸಂಚರಿಸುವ, ಪರಕಾಯ ಪ್ರವೇಶ ಮಾಡುವ ಅತಿಮಾನುಷನಂತೆ, ಅವರಿಗೆ ಫುಟ್‍ಪಾತ್‍ನಲ್ಲಿ ಸಿಲ್ವರ್ ಪೈಂಟ್ ಬಳಿದುಕೊಂಡು ನಿಲ್ಲುವ ಗಾಂಧಿ ಹುಡುಗನಿಗೆ ರಾತ್ರಿ ರಾತ್ರಿ ಗಾಳಿ ತೋರುವ ಮಮತೆ ಕಾಣುತ್ತದೆ. ಆಪರೇಷನ್ ಮುನ್ನ ಸಹಿ ಮಾಡುವ ಕರಾರು ಪತ್ರದ ನಿಯಮಗಳಲ್ಲಿ ಸೂತಕ ಛಾಯೆಯಿರುವುದು ಕಾಣುತ್ತದೆ. ’ಪಿಕ್‍ಪಾಕೆಟ್’ಗೊಂಡವನ ಆತ್ಮಸಾಕ್ಷಾತ್ಕಾರ ಕಾಣುತ್ತದೆ. ಎಲ್ಲವನ್ನು ಲೇಖಕನ ಛಾಯೆಯಿರದಂತೆ third person ನಿರೂಪಣೆಯಲ್ಲಿ ಬೆಚ್ಚನೆಯ ಸ್ಪರ್ಶದೊಂದಿಗೆ ಚಿತ್ರಿಸುತ್ತಾರೆ.
ಒಟ್ಟಿನಲ್ಲಿ, ಓದಿ ಮುಗಿವಾಗ, ಪುಸ್ತಕದಲ್ಲಿ ಬೆರಳಿಟ್ಟು ಮುಚ್ಚಿ, ಒಂದು ನಿಟ್ಟುಸಿರು ಬಿಟ್ಟಿರುತ್ತೇವೆ. ಕಣ್ಣು ಮುಚ್ಚಿಯೋ, ಎಲ್ಲೋ ದಿಟ್ಟಿಸಿಯೋ, ಒಂದು ಮಂಥನಕ್ಕೆ ಸಾಗಿರುತ್ತೇವೆ.
MUST READ.
[ಕನ್ನಡ ಓದಲು ಬಾರದ ಕನ್ನಡಿಗ ಮಿತ್ರರಿಗೆ ಓದಿ ಹೇಳಲು ಸಿದ್ಧ]