Mar 2, 2005

ನಾ ಕಂಡ ದೈವ

ರವಿವಾರದ ಸಂಜೆಯೊಂದು
ಹೊರಟೆ ಸಿನಿಮಾ ನೋಡಲೆಂದು
ಸಾಲು ಸಲಾಗಿ ಜನ ನಿಂತಿರಲು
ಗೇಟಿನಾಚೆ ನಾ ಕಾಯುತಿರಲು
ಚಾಚಿತ್ತು ಒಂದು ಕೈ
ಎನೋ ಬೇಡಿತ್ತು ಆ ಕೈ

ಹತ್ತು ವರ್ಷದ ವಯಸು
ಹರಿದ ಮಾಸಿದ ಧಿರಿಸು
ಸೊಂಟದಲ್ಲೊಂದು ಕೂಸು
ಯೋಚಿಸಲಿಲ್ಲ ಮನಸು
ಕೈಗಿಟ್ಟೆ ನಾಲ್ಕು ಕಾಸು

ಸಿನಿಮಾ ಮರೆತಿದ್ದೆ
ಅವಳನೇ ನೋಡುತಲಿದ್ದೆ
ಕೊಂಡಳಿಷ್ಟು ತಿನಿಸು
ಬಯ್ಗಿಡಲು ನಕ್ಕಿತು ಕೂಸು

ನಗುತಲಿದ್ದಳು,
ನಗಿಸುತಲಿದ್ದಳು, ಮುತ್ತುಗರೆಯುತಿದ್ದಳು
ಅದೆಂಥ ಮಮತೆ! ವಾತ್ಸಲ್ಯದ ಒರತೆ
ಕುಲಕೆ ಕೀರ್ತಿ, ಇದ್ಯಾವ ಶಕ್ತಿ?
ಯಾರು ಕರುಣಿಸಿದ ವರದ ಪ್ರಾಪ್ತಿ?

ಕೈ ಮುಗಿದೆ,
ನಾ ಕಂಡ ಆ ದೈವಕೆ

-ಚೇತನ್ ಪಿ
೦೧/೦೩/೦೫

No comments: