Jun 1, 2025

ಕೇಳಿದಂತೆ ಬರೆ, ಬರೆದಂತೆ ನುಡಿ

ಅಕ್ಷರಮಾಲೆ ಕಲಿತು, ಕಾಗುಣಿತಾಭ್ಯಾಸ ಆದರೂ ನನ್ನ ಮಗ ಕನ್ನಡ ಓದಲು ಕಷ್ಟ ಪಡುತ್ತಿದ್ದ. ‘ಅಪ್ಪಾ.. ಕನ್ನಡ ಓದೋದು ಕಷ್ಟ.. ಇಂಗ್ಲಿಷ್ ಈಜಿ’ ಅಂತ ರಾಗ ಎಳೆಯುತ್ತಿದ್ದ.  ಆಗ ನಾನವನಿಗೆ, ‘ಕನ್ನಡ ತುಂಬಾ ಸುಲಭ ಕಾಣೋ, ಇಂಗ್ಲಿಷ್ ನಲ್ಲಿ ಸೈಲೆಂಟ್ ಅಕ್ಷರ ಇರ್ತಾವೆ, ಒಂದೇ ಅಕ್ಷರಕ್ಕೆ ಬೇರೆ ಬೇರೆ ಉಚ್ಛಾರ ಇರುತ್ತೆ ಅಂತ ಉದಾಹರಣೆ ಕೊಟ್ಟು - ಕನ್ನಡದಲ್ಲಿ ಹಾಗಲ್ಲ. ಕೇಳಿದಂತೆ ಬರೆಯಬಹುದು, ಬರೆದಂತೆ ನುಡಿಯಬಹುದು' ಎಂದು ಗರ್ವದಿಂದ ಹೇಳಿದೆ. ಸ್ವಲ್ಪ ಗಮನಿಸಿ ನೋಡಿದಾಗ ಒತ್ತಕ್ಷರಗಳನ್ನ ಕೂಡಿಸಿ ಓದಲು ಕಷ್ಟ ಪಡುತ್ತಿದ್ದ. ನನಗೆ ಆಗ ಹೊಳೆಯಿತು.! ಇಂಗ್ಲಿಷ್ನಲ್ಲಿ ಫೋನೆಟಿಕ್ ಸೀಕ್ವೆನ್ಸ್ ಹಾಗೂ ಬರೆಯುವ ಸೀಕ್ವೆನ್ಸ್ ಒಂದೇ ಇದ್ದಂತೆ, ಕನ್ನಡಲ್ಲಿಲ್ಲ - ಸ್ವಲ್ಪ ವ್ಯತ್ಯಾಸವಿದೆ. 

ಉದಾಹರಣೆಗೆ 'ಶಕ್ತಿ' ಎನ್ನುವುದನ್ನು ಉಚ್ಛರಿಸುವಾಗ ಕ್ರಮವಾಗಿ - ಶ್, ಅ, ಕ್ , ತ್ , ಇ  ಹೇಳುತ್ತೇವೆ. ಅದೇ ಕ್ರಮದಲ್ಲಿ sh, a , k , t , i ಎಂದು ಬರೆಯುತ್ತೇವೆ. ಆದರೆ ಕನ್ನಡದಲ್ಲಿ, ಬರೆವಾಗ ಕ್ ಹಾಗೂ ಇ ಮೊದಲೇ ಕೂಡಿಸಿ ಬರೆದು, ನಂತರ ತ್ ಒತ್ತು ಕೊಡುತ್ತೇವೆ. ಪದದಲ್ಲಿ 'ಕಿ' ಇದ್ದರೂ 'ಕಿ' ಎಂದು ಉಚ್ಚರಿಸುವ ಹಾಗಿಲ್ಲ! ಹಿಂದಿಯಲ್ಲಿ ಈ exception  ಇಲ್ಲ ('शक्ति').   

ನುಡಿದಂತೆ ಬರೆ. ಆದರೆ ಕಂಡಿಷನ್ಸ್ ಅಪ್ಲೈ !

--

ಆಗಾಗ ನೆನಪಿಸುಕೊಳ್ಳಲು ಹೀಗೊಂದು ಉದಾಹರಣೆ ಪ್ರಿಂಟ್ ಮಾಡಿ ಕೊಟ್ಟೆ.




May 13, 2025

The World Not Seen

 ನನ್ನ ಶಾಲೆಯ ಹಾಗೂ ಕಾಲೇಜಿನ ಗೆಳೆಯರು ಒಟ್ಟುಗೂಡಿ, ಆಗಾಗ ಲಂಚ್ ಅಥವಾ ಡಿನ್ನರ್ ಅಂತ ಭೇಟಿ ಮಾಡ್ತಾ ಇರ್ತೀವಿ; ಬರೀ ಗೆಳೆಯರಷ್ಟೇ. 

ಮೂರು ದಶಕಗಳ ಹಿಂದೆ, ನಾವು ಶಾಲೆಯಲ್ಲಿ ಓದುವಾಗ, ಹುಡುಗರು ಹುಡುಗಿಯರನ್ನ ಹೆಚ್ಚಾಗಿ ಮಾತನಾಡಿಸುತ್ತಿರಲಿಲ್ಲ. ಅದೇನೋ ಒಂದು ಅಸ್ಪೃಶ್ಯತೆಯ ಪಿಡುಗಿನಂತೆ ಇರುತ್ತಿತ್ತು. ಕ್ರಮೇಣ 'ಹುಡುಗ-ಹುಡುಗಿಯರ' ನಡುವಿನ ಲಿಂಕ್ ಕಳಚಿ ಹೋಗಿತ್ತು. ಆ ಲಿಂಕ್ ಎಂದೂ ಇರಲೇ ಇಲ್ಲ ಅನ್ನಬಹುದು! 

ಕಳೆದ ವಾರ, ನಮ್ಮ ಆ ಸಹಪಾಠಿಗಳು ತಾವಾಗಿಯೇ initiative ತಗೊಂಡು ಒಂದು ಗೆಟ್ ಟುಗೆದರ್ ಪ್ಲಾನ್ ಮಾಡಿದ್ದರು! ಹಿಂದಿನ ಯಾವುದೇ ಬಂಧನಗಳಿರದೆ, ಮುಕ್ತವಾಗಿ ಮಾತನಾಡಿದೆವು. ಶಾಲೆಯಲ್ಲಿ ನಡೆದಿದ್ದು, ಶಾಲೆಯ ಆಚೆ ನಡೆದಿದ್ದು, ಯಾರಿಗೆ ಯಾರ ಮೇಲೆ ಕ್ರಶ್ ಇತ್ತು! ಏನೆಲ್ಲಾ!

ಈ ಮಾತು, ಈ ಸ್ವಾತಂತ್ರ್ಯ, ದಿಟ್ಟತನ ಆಗ ಯಾಕಿರಲಿಲ್ಲ? ಏನೋ ಅಮೂಲ್ಯವಾದದ್ದನ್ನ ಕಳೆದು ಕೊಂಡಂತಾಯ್ತು. ಶಾಲೆಯ ಸುವರ್ಣ ದಿನಗಳ ಇನ್ನೊಂದು ಸುಂದರ ವಿಸ್ತಾರವನ್ನ ನೋಡಲಿಲ್ಲವಲ್ಲ ಅಂತ!


May 12, 2025

ಮಳೆ vs ಛತ್ರಿ

ಊರಲ್ಲಿ, ಸಣ್ಣದಾಗಿ ಸೋನೆ ಶುರುವಾಯಿತು. ಈ ವರ್ಷ ಮಳೆ ಕೈ ಕೊಟ್ಟಿತ್ತು. ಎಷ್ಟೋ ದಿನದ ಮೇಲೆ ಮಳೆ ಬಂತು ಅಂತ ಕೊಡೆ ಹಿಡಿದು ಮಂದಸ್ಮಿತನಾಗಿ ನಡೆದು ಹೋಗುತ್ತಿದ್ದೆ . ಎದುರಿಗೆ ಬರುತ್ತಿದ್ದ ಹಿರಿಯ ಯಜಮಾನರು - "ಮಳೆ ಬರ್ತಿಲ್ಲ ಅಂತ ಜನ ಸಾಯ್ತಾ ಇದ್ರೆ, ಇಷ್ಟು ಸೋನೆಗೇ ಕೊಡೆ ಹಿಡೀತೀಯಾ?" ಎಂದು ಸ್ವಲ್ಪ ಕೋಪದಲ್ಲೇ ಗೊಣಗಿ ಹೋದರು!


(ಇದು ಕೆಲವು ವರ್ಷಗಳ ಹಿಂದಿನ ಘಟನೆ -  ಇದರ ಮುಂದೆ ಏನೋ ಬರೆಯಲು ಹೊರಟಿದ್ದೆ. ಈಗ ಮರೆತು ಹೋಗಿದೆ. ಇಷ್ಟೇ ಸಾಕೆನಿಸಿತು..)

Aug 30, 2012

ಹಬ್ಬ

ಮೋಡಿಯ ಮಾಡನಿಟ್ಟು
ಸೌರ ತೇಜದ ಕಂಬಗಳ ನೆಟ್ಟು
ದೂರ ಸಾಗರದಿಂದ ತಂದ
ಮುತ್ತಿನ ಹಾಸಿಟ್ಟು
ಬಣ್ಣದ ಬಿಲ್ಲನು
ತೋರಣಕಿಟ್ಟು
ಹಸಿರುಸಿರ ಹಣತೆಯಿಟ್ಟು
ನಮ್ಮೆದೆಗೂಡನು ಬೆಚ್ಚಗಿಟ್ಟು
ಬಾನ ತಾಳ ಮೇಳಗಳ ನಡುವೆ
ಅಪೂರ್ವ ಸೃಷ್ಠಿಯ ಹಬ್ಬಕೆ
ಕರ್ತನು ವರುಷವೂ ಕೊಂಡಾಡುವನು!

Jul 1, 2012

ಕಾರ್ವಾಲೋ, ಮಿಸ್ ಸದಾರಮೆ, ರಂಗ ಶಂಕರ

ಸ್ವಲ್ಪವೂ ವೃತ್ತಿಪರತೆ ಇರದೆ ನಿರ್ಮಿಸಿದ ಕನ್ನಡದ ಸಿನಿಮಾ ನೋಡುವ ಬದಲು, ಒಳ್ಳೆ ನಾಟಕಗಳನ್ನು ನೋಡೋಣ ಅನ್ನಿಸಿತು. ಉತ್ತರ ಬೆಂಗಳೂರಿಗೆ ಶಿಫ್ಟ್ ಆದ ಮೇಲೆ ಇಲ್ಲಿದ್ದಾಗ ನೋಡಲಿಲ್ಲ ಅನ್ನೊ ಗಿಲ್ಟ್ ಕಡಿಮೆ ಆಗಲಿ ಎಂಬ ಉದ್ದೇಶವೂ ಇತ್ತು.

ಮೊದಲು ರಂಗಶಂಕರದಲ್ಲಿ ಕಾರ್ವಾಲೋ ನೋಡಿದೆ. ಕಾರ್ವಾಲೋ, ರಂಗಭೂಮಿಯ ಅಳವಡಿಕೆಗೆ ಅಷ್ಟು ಸೂಕ್ತ ಎನಿಸಲಿಲ್ಲ. ಕಾರ್ವಾಲೋ ಕೃತಿ ಓದದೆ ಹೋದರಂತೂ ನಾಟಕದ ಎಳೆ ಗೋಜಲೆನಿಸುವುದು. ಮಂದಣ್ಣನ ಬಹುಮುಖ ಪ್ರತಿಭೆ ಹಾಗೂ ಪಶ್ಚಿಮ ಘಟ್ಟಗಳ ವನ್ಯ ಜೀವಿಗಳ ನಿಘೂಢತೆ, ವಿಸ್ಮಯಗಳನ್ನು ತೋರುವ ಕಾರ್ವಾಲೋ ಪಾತ್ರ ಅಲ್ಪ ಸಮಯದಲ್ಲಿ, ಹಾಗೂ ರಂಗದ ಸೀಮಿತ ಸೌಕರ್ಯಗಳಲ್ಲಿ ಬಿಂಬಿಸುವುದು ಕಷ್ಟ ಎನಿಸಿತು. ಉಳಿದಂತೆ, ನಿರೂಪಣೆಯಲ್ಲಿ ಎಲ್ಲಿಯೂ ತಡೆಯಿರಲಿಲ್ಲ. ಕಡೆಯಲ್ಲಿ ಒಂದು ಪ್ರೊಜೆಕ್ಟರ್ ಬಳಸಿ ಹಾರುವ ಹಲ್ಲಿಯನ್ನು ತೋರಿದ್ದು ಉಚಿತವಾಗಿತ್ತು. ನಾಟಕದ ಹೈಲೈಟ್ ಆಗಿದ್ದಿದ್ದು - ಕಿರುತೆರೆಯ ಕಲಾವಿದ ’ವೆಂಕಟಾಚಲಯ್ಯ’ ನವರು. ಮಂದಣ್ಣನ ಮಾವನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಅದಕ್ಕೆ ತಕ್ಕಂತೆ ಮನತುಂಬಿದ ಚಪ್ಪಾಳೆಗಳೂ ಸಿಗುತ್ತಿದ್ದವು.

ಆನಂತರ ನೋಡಿದ ’ಸಮಷ್ಠಿ’ ತಂಡದ’ಮಿಸ್ ಸದಾರಮೆ’ ನಾಟಕವೂ ಚೆನ್ನಗಿತ್ತು. ಕಥೆಯ ಎಳೆಯಲ್ಲಿ ವಿಶೇಷತೆ  ಇಲ್ಲದಿದ್ದರೂ, ಕೆ.ವಿ.ಸುಬ್ಬಣ್ಣನವರು ಬರೆದ ನಾಟಕವನ್ನು ಈಗಿನ ಕಾಲಕ್ಕೆ ತಕ್ಕಂತೆ ಅಳವಡಿಸಲಾಗಿದೆ. ಸದಾರಮೆಯ ಗಂಡ ಎಲ್ಲ ಕಳೆದುಕೊಂಡು ಊರೂರು ಅಲೆಯುತ್ತ ರತ್ನಖಚಿತ ಕರವಸ್ತ್ರವೊಂದನ್ನು ರಾಜನೊಬ್ಬನ ಬಳಿ ಮಾರಲು ಬರುವಂಥಹ ಗಂಭೀರ ಪ್ರಸಂಗದ ನಡುವೆ, ರಾಜನು ಇದ್ದಕ್ಕಿದ್ದಂತೆ ’ಕರವಸ್ತ್ರ’ಎಂದು, ತನ್ನ ಮಾಡರ್ನ್ ಮಂತ್ರಿ, ನರಪೇತಲ ಬಂದೂಕುಧಾರಿ ಕಾವಲುಗಾರನ ಜೊತೆ ಕುಣಿದು ಕುಪ್ಪಳಿಸುವುದು ಆಭಾಸವೆನಿಸದೆ ಉಲ್ಲಾಸಕರವಾಗಿತ್ತು.  ಅಲ್ಲಿಂದ ಕೊನೆಯವರೆಗೂ ಒಂದು ಸಣ್ಣ ಹಾಸ್ಯದ ಎಳೆ, ಮುಖ್ಯ ಪ್ರಸಂಗಗಳ ನಡುವೆ ಸಾಗುತ್ತದೆ. ನಾಟಕದ ಮುಖ್ಯ ಪಾತ್ರಧಾರಿ ಸದಾರಮೆಯಿಂದ, ನರಪೇತಲ ಬಂದೂಕುಧಾರಿ ಕಾವಲುಗಾರನವರೆಗೆ, ಎಲ್ಲರ ಅಭಿನಯವೂ ಚೆನ್ನಗಿತ್ತು.

ರಂಗದಲ್ಲಿ, ಬೆಳಕು ಸಂಯೋಜನೆಯ ಪಾಲು ಹೆಚ್ಚು ಎಂದು ಕೇಳಿದ್ದೆ. ಇದರ ಬಗ್ಗೆ ಗಮನವಿದ್ದುದರಿಂದ, ಬೆಳಕಿನದೇ ಆದ ಒಂದು ಭಾಷೆ, ಅಭಿವ್ಯಕ್ತಿಯ ಅನುಭವವಾಯಿತು. ನಿರೂಪಣೆಯಲ್ಲಿ ಕೆಲವೆಡೆ, ರಂಗದಲ್ಲಿ / ಪಾತ್ರಗಳಲ್ಲಿ ತೋರಲಾಗದ ಕುಂದುಗಳನ್ಜು, ಬೆಳಕಿನಲ್ಲಿ ಸರಿದೂಗಿಸಬಹುದು. ಉದಾಹರಣೆಗೆ, ಈ ನಾಟಕದಲ್ಲಿ, ಕೆಲವೊಂದು ಸಂಧರ್ಭಗಳಲ್ಲಿ ಸ್ವಗತ ಸಂಭಾಷಣೆಗಳನ್ನು - ರಂಗವನ್ನು ಸಂಪೂರ್ಣ ಮಬ್ಬುಗೊಳಿಸಿ, ಪಾತ್ರವೊಂದರ ಮೇಲೇ ಬೆಳಕನ್ನು ಕೇಂದ್ರಿಕರಿಸಿ ತೋರಲಾಯಿತು.

ಆದರೆ ಎಲ್ಲಾ ನಾಟಕಗಳೂ ಚೆನ್ನಾಗಿರುತ್ತವೆಂದಲ್ಲ. ಕೆ.ಹೆಚ್. ಕಲಾ ಸೌಧದಲ್ಲಿ ’ಅಚಾನಕ್’ ಎಂಬ ನಾಟಕದಿಂದ ಅರ್ಧದಲ್ಲೇ ಎದ್ದು ಬರುವಂತಾಯಿತು.  ನಾಟಕದ ತಂಡದ/ಲೇಖಕರ/ಕೃತಿಗಳ ಪರಿಚಯವಿದ್ದಲ್ಲಿ ನೋಡಬಹುದು. ಇಲ್ಲದಿದ್ದರೆ, ಅಂತರ್ಜಾಲದಲ್ಲಿ ಸಿನಿಮಾಗಳಂತೆ, ನಾಟಕಗಳಿಗೆ ಸಾಕಷ್ಟು ವಿಮರ್ಶೆಗಳು ಸಿಗುವುದಿಲ್ಲ. ಹೀಗೆ ಬ್ಲಾಗ್ ಗಳಲ್ಲಿ ಅವರಿವರು ನಾಟಕಗಳ ವಿಮರ್ಶೆ / ಪರಿಚಯ ಮಾಡಿದರೆ, ಇನ್ನೂ ಹೆಚ್ಚಿನವರು ಒಳ್ಳೆ ನಾಟಕಗಳನ್ನು ಸವಿಯಬಹುದು.

May 30, 2010

ಪರಿಮಳದ ಜಾಡು

ನೆನಪಿನ ನೌಕೆ
ಸಾಲದು ಗೆಳತಿ
ನಿನ್ನೆದೆಯ ಲೋಕಕೆ!

ಪಯಣಿಸಲಿ ಹೇಗೆ,
ಕಂಗಳ ಕಾಂತಿಗೆ
ಸ್ಪರ್ಶದ ಮಿಂಚಿಗೆ
ಹುಚ್ಚೇರಿದೆ ಮನಕಡಲಿಗೆ

ಚಿಂತಿಸದಿರು ನೀ
ಉಸಿರಲಿ ಹಿಡಿದಿರುವೆ
ನಿನ್ನ ಪರಿಮಳವ;
ಕಂಪಿನ ಜಾಡನು ಹಿಡಿವೆ

ಒಲವಲಿ ಹೊಳೆಯುವ
ನಿನ್ನ ಕಣ್ ತಾರಾಗಣವ
ಅನುಸರಿಸಿ ಬರುವೆ!
ನಿನ್ನೆದೆಯ ಲೋಕಕೆ!

Sep 7, 2009

ಮುನ್ನ

ಪೂಜೆಗೆ ಕಾಯ್ ಒಡೆದು ಕೊಡುವ ಚಿಣ್ಣ,
ಜಗುಲಿಯ ಮೇಲೆ ನಿಂತು ಕಾಯುತಿರುವನು

ಹರಿದ ಬಟ್ಟೆ ತೊಟ್ಟವನು
ಕೊಳೆಯ ಮೈಯವನು
ಆದರೆ ತೇಜ ಕಂಗಳಲಿ ಸೆಳೆವನು
ಮಂತ್ರ ಸ್ಪರ್ಶದಲಿ ನುಡಿವನು

ಕೇರಿಯ ಹುಡುಗ;
ಹೆಸರೇನೆಂದು ಕೇಳಲು
’ಮುನ್ನ’ ಎಂದು ಹಿಂಜರಿದು ನುಡಿದು
ಕಾಣದಾದನು