Dec 8, 2025

ತೋಳ ಬಂತು ತೋಳ

[ಮಗನಿಗೆ ಕನ್ನಡ ಕಥೆ ಪುಸ್ತಕ ಓದುವ ಪ್ರವೃತ್ತಿ ಬೆಳೆಸುವ ಹಂಬಲದಿಂದ, ಅನೇಕ ಪುಸ್ತಕಗಳನ್ನು ತರಿಸಿ ಓದಲು ಕೊಟ್ಟೆ. ಅವನೊಡನೆ ನಾನೂ ಓದಿದೆ. ಎಂದೋ ಯೋಚಿಸಿದ್ದ ಒಂದು ವಿಚಾರ ಹಿಡಿದು ಎಳೆಯರಿಗಾಗಿ ನಾನೊಂದು ಕಥೆ ಯಾಕೆ ಬರೆಯಬಾರದು ಎಂದೆನಿಸಿ. ಅದರ ಪ್ರಯತ್ನವೇ ಈ ಕೆಳಗಿನ ಕಥೆ.]


----------


ಪ್ರಮೋದ ಪ್ರತಿ ವರ್ಷದಂತೆ ಈ ವರ್ಷವೂ ಬೇಸಿಗೆ ರಜೆಗೆ ಅಜ್ಜನ ಊರಿಗೆ ಹೋಗಿದ್ದ. 


ನೆರೆಯ ಹುಡುಗರ ಜೊತೆ ಆಡುವುದು, ಅಜ್ಜಿಯ ಜೊತೆ ದೇವಸ್ಥಾನಕ್ಕೆ ಹೋಗುವುದು, ಅಜ್ಜನ ಜೊತೆ ತೋಟಕ್ಕೆ ಹೋಗುವುದು, ಹತ್ತಿರದ ನೆಂಟರ ಮನೆಗೆ ಹೋಗಿ ಅವರು ಕೊಟ್ಟ ರವೆ ಉಂಡೆ, ಚಕ್ಕುಲಿ ಇತ್ಯಾದಿ ತಿಂದು ಬರುವುದು, ರಾತ್ರಿ ಅಜ್ಜಿ ಹೇಳುವ ಕಥೆ ಕೇಳುತ್ತಾ, ನಿದ್ದೆಗೆ ಜಾರುವುದು - ಅವನ ನಿತ್ಯದ ದಿನಚರಿ. 


ಒಂದು ದಿನ 'ಅಜ್ಜಿ .. ಅಜ್ಜಿ... ' ಎಂದು ಕೂಗುತ್ತಾ ಬಂದವನೇ 'ಆಡೋವಾಗ ಬಿದ್ದೆ. ಪೆಟ್ಟಾಗಿದೆ, ರಕ್ತ ಬರ್ತಾ ಇದೆ.. ' ಎಂದು ಅಳುವಂತೆ ನಟಿಸುತ್ತಾ ಹೇಳಿದ ಪ್ರಮೋದ. 


'ಅಯ್ಯೋ .. ನಿಮ್ಮಪ್ಪ ನಮಗೆ ಚೆನ್ನಾಗಿ ಬೈತಾನೆ ಕಣೋ.. ಬಾ ನೋಡೋಣ' ಅಂತ ಕಾಲೆಲ್ಲ ಹುಡುಕಿ ನೋಡುವಾಗ, ಪ್ರಮೋದ ಹೇಳಿದ 


'ಏಪ್ರಿಲ್ ಫೂಲ್ ಅಜ್ಜಿ ' ಹಹ್ಹಹ್ಹ ಎಂದು ನಗುತ್ತ. 


'ಅಯ್ಯೋ ಪುಟ್ಟ ಹೆದರಿಸಿಬಿಟ್ಟಲ್ಲೋ' ಎಂದು ಅಜ್ಜಿ ಸಮಾಧಾನ ಮಾಡಿಕೊಂಡು ಅಡುಗೆ ಮನೆಗೆ ಹೋದರು. 


ಏಪ್ರಿಲ್ ಮುಗಿದರೂ, ಪ್ರಮೋದನ ಏಪ್ರಿಲ್ ಫೂಲ್ ಮುಗಿಯಲಿಲ್ಲ. ದಿನಕ್ಕೊಂದು 'ಏಪ್ರಿಲ್ ಫೂಲ್'.   


'ಅಜ್ಜ .. ಅಜ್ಜ..  ಹಿತ್ತಲಿನ ಪರಂಗಿ ಮರದಿಂದ ಹಣ್ಣು ಬಿದ್ದು ಬಿಟ್ಟಿದೆ' ಎಂದು ಸುಳ್ಳೇ ಕೂಗಿದ ಪ್ರಮೋದ. 


'ಹೌದಾ ..' ಎನ್ನುತ್ತಾ  ತೋಟದಿಂದ ಬಂದು ವಿಶ್ರಾಂತಿ ತಗೋತಾ ಇದ್ದ ಅಜ್ಜ ತಕ್ಷಣ ಎದ್ದು ಬಂದರು. 


ಅದು ಸುಳ್ಳೆಂದು ಗೊತ್ತಾದಾಗ - 'ಪ್ರಮೋದ... ಒಂದು ದಿನ ನಿಂದು ತೋಳ-ಬಂತು-ತೋಳ ಕಥೆ ಆಗುತ್ತೆ ಕಣೋ' ಶಾಂತರಾಗೇ ಹೇಳಿದರು. 


ಅದೇನಜ್ಜ ತೋಳ-ಬಂತು-ತೋಳ ಕಥೆ?


'ನಿನ್ನ ಅಜ್ಜಿನ ಕೇಳು.. ಇವತ್ತು ರಾತ್ರಿ ಕಥೆ ಹೇಳ್ತಾರೆ !' ಎಂದು ಮಲಗಲು ಕೋಣೆಗೆ ಹೊರತು ಹೋದರು. 


ಅಜ್ಜಿ ರಾತ್ರಿ ಕಥೆ ಹೇಳಿ ಬುದ್ಧಿವಾಗ ಹೇಳಿ ಮಲಗಿಸಿದರು. ಮಾರನೇ ದಿನದಿಂದ 'ಏಪ್ರಿಲ್ ಫೂಲ್' ಆಟ ನಿಂತಿತ್ತು. 


* * * *


ಮನೆಯ ಹಿಂದಿನ ತೋಟದಲ್ಲಿ ಕೆಲವು ಹುಳುಕು ಮರಗಳನ್ನು ತೆಗೆಸಿ, ಹೊಸ ಮಣ್ಣು ಹೊಡೆಸಿ, ಹೊಸ ಸಸಿಗಳನ್ನು ನೆಡಿಸಲು ನಿರ್ಧರಿಸಿದ್ದರು ಅಜ್ಜ. ಸೋಮವಾರ ಕೆಲಸದವರು ಬರುವಂತೆ ಏರ್ಪಾಟು ಮಾಡಿದ್ದರು. 


ಹಿಂದಿನ ಎರೆಡು ದಿನಗಳಿಂದಲೇ ನೀರು ಹಾಯಿಸಿ, ಮಣ್ಣು ಹದ ಮಾಡಿದ್ದರು. ಸೋಮವಾರ ಬೆಳಿಗ್ಗೆ ಬೇಗನೆ ಇದ್ದು, ಬೇಕಾದ ಸಲಕರಣೆಗಳನ್ನೆಲ್ಲ ಒಂದೆಡೆ ಇಟ್ಟು, ಆಳುಗಳಿಗೆ ಮಧ್ಯಾಹ್ನದ ಊಟಕ್ಕೆ ಬೇಕಾಗೋ ಅಡಿಗೆಗೆ ಬೇಕಾಗುವ ತರಕಾರಿ, ಇತರೆ ಸಾಮಗ್ರಿಗಳನ್ನೆಲ್ಲ ತಂದಿರಿಸಿದರು. 


ಆದರೆ ಕೆಲಸದವರು ಬರಲೇ ಇಲ್ಲ. ಫೋನ್ ಮಾಡಿದಾಗ, ಏನೋ ಸಬೂಬು ಹೇಳಿ 'ಇನ್ನೆರೆಡು ದಿನ ಬಿಟ್ಟು ಬರುತ್ತೇವೆ' ಎಂದು ಹೇಳಿದರು. 


ಇದು ಹೀಗೇ ಇನ್ನೆರಡು ಮೂರು ಬಾರಿ ನಡೆಯಿತು. ಕೆಲಸದವರು ಹೇಳಿದ ದಿನ ಬರಲೇ ಇಲ್ಲ. 


ಒಂದು ದಿನ ಎಕಾಏಕಿ ಬೆಳಿಗ್ಗೆ ಕೆಲಸಕ್ಕೆ ಹಾಜರಾದರು! ಬಿರು ಬಿಸಿಲಿಗೆ ಮಣ್ಣು ಒಣಗಿ ಗಟ್ಟಿಯಾಗಿದ್ದಿತು. ಅಜ್ಜ ಅವರ ಮೇಲೆ ಕೂಗಾಡಿ ಕೆಲಸಕ್ಕೆ ಇನ್ನೊಂದು ದಿನ ನಿಗದಿ ಮಾಡಿದರು. 


ಚಾ ಹೀರುತ್ತಾ ಅಜ್ಜ ಏನೋ ಯೋಚನೆ ಮಾಡುತ್ತಾ ಕೂತಿದ್ದರು. 


ಆಗ ಪ್ರಮೋದ : 'ಅಜ್ಜ, ತೋಳ-ಬಂತು-ತೋಳ ಕಥೆ ಆಯಿತಲ್ಲವಾ?' ಎಂದ. ಅಜ್ಜ ಸ್ವಲ್ಪ ಯೋಚನೆ ಮಾಡಿ ನಕ್ಕು -


'ಭೇಷ್ ಪ್ರಮೋದ, ಒಳ್ಳೆ ಪ್ರಯತ್ನ!  ಇದನ್ನ ಇಂಗ್ಲಿಷ್ ನಲ್ಲಿ anology ಎನ್ನುತ್ತಾರೆ. ಬಾ ಕೂತ್ಕೋ' ಎಂದು ಪ್ರಮೋದನನ್ನು ಸೋಫಾ ಮೇಲೆ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು ಅಜ್ಜ


'ನೋಡು, ಈ ಸಂಧರ್ಭಕ್ಕೆ ಅದು ಅಷ್ಟು ಸರಿ ಹೊಂದುವುದಿಲ್ಲ. ಯಾಕೆ ಹೇಳು ನೋಡೋಣ?'


ಸ್ವಲ್ಪ ಯೋಚನೆ ಮಾಡಿ ಗೊತ್ತಿಲ್ಲ ಎನ್ನುವಂತೆ ತಲೆ ಅಲ್ಲಾಡಿಸಿದ. 


'ನಾವು anology ಬಳಸುವಾಗ ಉದಾಹರಿತ ಕಥೆಗೂ ನಿಜ ಸಂಧರ್ಭಕ್ಕೂ ಎಲ್ಲಾ ರೀತಿಯಲ್ಲೂ ಸಾಮ್ಯತೆ ಇರಬೇಕು. ತೋಳ-ಬಂತು-ತೋಳ ಕಥೆಯಲ್ಲಿ ಒಬ್ಬ ಹುಡುಗ ಪದೇ ಪದೇ ಸುಳ್ಳು ಹೇಳಿ ನಂಬಿಕೆ ಕಳೆದುಕೊಳ್ಳುತ್ತಾನೆ. ಇಲ್ಲಿ ಹುಡುಗನೋ, ಹುಡುಗಿಯೋ, ಮುದುಕನೊ ಅನ್ನುವುದು ಮುಖ್ಯವಲ್ಲ. ಹಾಗೆಯೆ ಯಾವ ರೀತಿಯ ಸುಳ್ಳು ಅನ್ನುವುದೂ ಮುಖ್ಯವಲ್ಲ. ಅನಂತರ, ಅವನು ತನ್ನ  ಅತ್ಯಂತ ಆಪತ್ಕಾಲೀನ ಅಥವಾ ಕಠಿಣ ಸಮಯದಲ್ಲಿ ನಿಜ ಹೇಳಿದರೂ, ಅದು ಸುಳ್ಳೆಂದು ಯಾರೂ ನಂಬದೆ ಇದ್ದಾಗ ಅವನಿಗೆ ನಷ್ಟವಾಗುತ್ತದೆ - ಅದು ಜೀವ ಹಾನಿ ಇರಬಹುದು, ದುಡ್ಡಿನ ನಷ್ಟವಿರಬಹುದು - ಯಾವುದು ಅನ್ನುವುದು ಮುಖ್ಯವಲ್ಲ. ಗೊತ್ತಾಯಿತಾ? 


ಈಗ ಹೇಳು ಈ anology ಇವತ್ತಿಗೆ ಯಾಕೆ ಸೂಕ್ತ ಅಲ್ಲ ಅಂತ?'


'ಹ್ಞಾ .. ಯಾಕಂದ್ರೆ ಇಲ್ಲಿ ನಷ್ಟ ಆಗಿದ್ದು ನಮಗೆ, ಕೆಲಸದವರಿಗಲ್ಲ!' 


'ಭೇಷ್! ಒಟ್ಟಾರೆಯಾಗಿ ಹೇಳುವುದಾರೆ, ನಂಬಿಕೆ ಅನ್ನುವುದು ನಮ್ಮ ಜೀವನಕ್ಕೆ ಅವಶ್ಯಕ. ನಂಬಿಕೆಯ ಮೇಲೆಯೇ ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗುತ್ತೇವೆ. ನಂಬಿಕೆ ಕಳೆದುಕೊಂಡರೆ, ನಾವು ನಮ್ಮ ಸುತ್ತಲಿನ ಜನರಿಂದ ಸಂಪರ್ಕ ಕಳೆದುಕೊಂಡಂತೆ - ನಷ್ಟ ಖಚಿತ. ಕೆಲಸದವರು ಬರದೇ ಇದ್ದುದರಿಂದ ಇಂದು ನಮಗೆ ನಷ್ಟ ಆಗಿರಬಹುದು. ಆದರೆ ಮುಂದೆ ಅವರಿಗೆ ಲಾಭದಾಯಕ ಕೆಲಸ ಸಿಗದೇ ಹೋಗುವುದು ಖಚಿತ.'


'ನೀತಿ ಪಾಠ ಸಾಕು ಬಿಡಿ .. ಶಾವಿಗೆ ಪಾಯಸ ಮಾಡಿದ್ದೆ ತಗೊಳ್ಳಿ' ಎಂದು ಅಜ್ಜಿ ಅಡುಗೆ ಮನೆಯಿಂದ ಬಂದು ಬಟ್ಟಲುಗಳನ್ನು ಕೈಗಿತ್ತರು. 


ಪ್ರಮೋದನಿನ್ನೂ ಅಜ್ಜ ಹೇಳಿದ್ದನ್ನ ಜೀರ್ಣಿಸಿಕೊಳ್ಳುತ್ತಲೇ ಇದ್ದ.