Jun 1, 2025

ಕೇಳಿದಂತೆ ಬರೆ, ಬರೆದಂತೆ ನುಡಿ

ಅಕ್ಷರಮಾಲೆ ಕಲಿತು, ಕಾಗುಣಿತಾಭ್ಯಾಸ ಆದರೂ ನನ್ನ ಮಗ ಕನ್ನಡ ಓದಲು ಕಷ್ಟ ಪಡುತ್ತಿದ್ದ. ‘ಅಪ್ಪಾ.. ಕನ್ನಡ ಓದೋದು ಕಷ್ಟ.. ಇಂಗ್ಲಿಷ್ ಈಜಿ’ ಅಂತ ರಾಗ ಎಳೆಯುತ್ತಿದ್ದ.  ಆಗ ನಾನವನಿಗೆ, ‘ಕನ್ನಡ ತುಂಬಾ ಸುಲಭ ಕಾಣೋ, ಇಂಗ್ಲಿಷ್ ನಲ್ಲಿ ಸೈಲೆಂಟ್ ಅಕ್ಷರ ಇರ್ತಾವೆ, ಒಂದೇ ಅಕ್ಷರಕ್ಕೆ ಬೇರೆ ಬೇರೆ ಉಚ್ಛಾರ ಇರುತ್ತೆ ಅಂತ ಉದಾಹರಣೆ ಕೊಟ್ಟು - ಕನ್ನಡದಲ್ಲಿ ಹಾಗಲ್ಲ. ಕೇಳಿದಂತೆ ಬರೆಯಬಹುದು, ಬರೆದಂತೆ ನುಡಿಯಬಹುದು' ಎಂದು ಗರ್ವದಿಂದ ಹೇಳಿದೆ. ಸ್ವಲ್ಪ ಗಮನಿಸಿ ನೋಡಿದಾಗ ಒತ್ತಕ್ಷರಗಳನ್ನ ಕೂಡಿಸಿ ಓದಲು ಕಷ್ಟ ಪಡುತ್ತಿದ್ದ. ನನಗೆ ಆಗ ಹೊಳೆಯಿತು.! ಇಂಗ್ಲಿಷ್ನಲ್ಲಿ ಫೋನೆಟಿಕ್ ಸೀಕ್ವೆನ್ಸ್ ಹಾಗೂ ಬರೆಯುವ ಸೀಕ್ವೆನ್ಸ್ ಒಂದೇ ಇದ್ದಂತೆ, ಕನ್ನಡಲ್ಲಿಲ್ಲ - ಸ್ವಲ್ಪ ವ್ಯತ್ಯಾಸವಿದೆ. 

ಉದಾಹರಣೆಗೆ 'ಶಕ್ತಿ' ಎನ್ನುವುದನ್ನು ಉಚ್ಛರಿಸುವಾಗ ಕ್ರಮವಾಗಿ - ಶ್, ಅ, ಕ್ , ತ್ , ಇ  ಹೇಳುತ್ತೇವೆ. ಅದೇ ಕ್ರಮದಲ್ಲಿ sh, a , k , t , i ಎಂದು ಬರೆಯುತ್ತೇವೆ. ಆದರೆ ಕನ್ನಡದಲ್ಲಿ, ಬರೆವಾಗ ಕ್ ಹಾಗೂ ಇ ಮೊದಲೇ ಕೂಡಿಸಿ ಬರೆದು, ನಂತರ ತ್ ಒತ್ತು ಕೊಡುತ್ತೇವೆ. ಪದದಲ್ಲಿ 'ಕಿ' ಇದ್ದರೂ 'ಕಿ' ಎಂದು ಉಚ್ಚರಿಸುವ ಹಾಗಿಲ್ಲ! ಹಿಂದಿಯಲ್ಲಿ ಈ exception  ಇಲ್ಲ ('शक्ति').   

ನುಡಿದಂತೆ ಬರೆ. ಆದರೆ ಕಂಡಿಷನ್ಸ್ ಅಪ್ಲೈ !

--

ಆಗಾಗ ನೆನಪಿಸುಕೊಳ್ಳಲು ಹೀಗೊಂದು ಉದಾಹರಣೆ ಪ್ರಿಂಟ್ ಮಾಡಿ ಕೊಟ್ಟೆ.




May 13, 2025

The World Not Seen

 ನನ್ನ ಶಾಲೆಯ ಹಾಗೂ ಕಾಲೇಜಿನ ಗೆಳೆಯರು ಒಟ್ಟುಗೂಡಿ, ಆಗಾಗ ಲಂಚ್ ಅಥವಾ ಡಿನ್ನರ್ ಅಂತ ಭೇಟಿ ಮಾಡ್ತಾ ಇರ್ತೀವಿ; ಬರೀ ಗೆಳೆಯರಷ್ಟೇ. 

ಮೂರು ದಶಕಗಳ ಹಿಂದೆ, ನಾವು ಶಾಲೆಯಲ್ಲಿ ಓದುವಾಗ, ಹುಡುಗರು ಹುಡುಗಿಯರನ್ನ ಹೆಚ್ಚಾಗಿ ಮಾತನಾಡಿಸುತ್ತಿರಲಿಲ್ಲ. ಅದೇನೋ ಒಂದು ಅಸ್ಪೃಶ್ಯತೆಯ ಪಿಡುಗಿನಂತೆ ಇರುತ್ತಿತ್ತು. ಕ್ರಮೇಣ 'ಹುಡುಗ-ಹುಡುಗಿಯರ' ನಡುವಿನ ಲಿಂಕ್ ಕಳಚಿ ಹೋಗಿತ್ತು. ಆ ಲಿಂಕ್ ಎಂದೂ ಇರಲೇ ಇಲ್ಲ ಅನ್ನಬಹುದು! 

ಕಳೆದ ವಾರ, ನಮ್ಮ ಆ ಸಹಪಾಠಿಗಳು ತಾವಾಗಿಯೇ initiative ತಗೊಂಡು ಒಂದು ಗೆಟ್ ಟುಗೆದರ್ ಪ್ಲಾನ್ ಮಾಡಿದ್ದರು! ಹಿಂದಿನ ಯಾವುದೇ ಬಂಧನಗಳಿರದೆ, ಮುಕ್ತವಾಗಿ ಮಾತನಾಡಿದೆವು. ಶಾಲೆಯಲ್ಲಿ ನಡೆದಿದ್ದು, ಶಾಲೆಯ ಆಚೆ ನಡೆದಿದ್ದು, ಯಾರಿಗೆ ಯಾರ ಮೇಲೆ ಕ್ರಶ್ ಇತ್ತು! ಏನೆಲ್ಲಾ!

ಈ ಮಾತು, ಈ ಸ್ವಾತಂತ್ರ್ಯ, ದಿಟ್ಟತನ ಆಗ ಯಾಕಿರಲಿಲ್ಲ? ಏನೋ ಅಮೂಲ್ಯವಾದದ್ದನ್ನ ಕಳೆದು ಕೊಂಡಂತಾಯ್ತು. ಶಾಲೆಯ ಸುವರ್ಣ ದಿನಗಳ ಇನ್ನೊಂದು ಸುಂದರ ವಿಸ್ತಾರವನ್ನ ನೋಡಲಿಲ್ಲವಲ್ಲ ಅಂತ!


May 12, 2025

ಮಳೆ vs ಛತ್ರಿ

ಊರಲ್ಲಿ, ಸಣ್ಣದಾಗಿ ಸೋನೆ ಶುರುವಾಯಿತು. ಈ ವರ್ಷ ಮಳೆ ಕೈ ಕೊಟ್ಟಿತ್ತು. ಎಷ್ಟೋ ದಿನದ ಮೇಲೆ ಮಳೆ ಬಂತು ಅಂತ ಕೊಡೆ ಹಿಡಿದು ಮಂದಸ್ಮಿತನಾಗಿ ನಡೆದು ಹೋಗುತ್ತಿದ್ದೆ . ಎದುರಿಗೆ ಬರುತ್ತಿದ್ದ ಹಿರಿಯ ಯಜಮಾನರು - "ಮಳೆ ಬರ್ತಿಲ್ಲ ಅಂತ ಜನ ಸಾಯ್ತಾ ಇದ್ರೆ, ಇಷ್ಟು ಸೋನೆಗೇ ಕೊಡೆ ಹಿಡೀತೀಯಾ?" ಎಂದು ಸ್ವಲ್ಪ ಕೋಪದಲ್ಲೇ ಗೊಣಗಿ ಹೋದರು!


(ಇದು ಕೆಲವು ವರ್ಷಗಳ ಹಿಂದಿನ ಘಟನೆ -  ಇದರ ಮುಂದೆ ಏನೋ ಬರೆಯಲು ಹೊರಟಿದ್ದೆ. ಈಗ ಮರೆತು ಹೋಗಿದೆ. ಇಷ್ಟೇ ಸಾಕೆನಿಸಿತು..)