Nov 26, 2007

ಬೆಟ್ಟದ ಮೇಲೊಂದು ಮನೆಯ ಮಾಡಿ...

ಊರಲ್ಲಿ ನಮ್ಮನೆ ಬದಿಯಲ್ಲಿ ಒಂದು ಪಾಳು ಸೈಟಿದೆ. ಆಕ್ಟುಯಲಿ, ಅಲ್ಲಿ ಮುಂಚೆ ಒಂದು ಪಾಳು ಮನೆಯಿತ್ತು. ಅದರಿಂದ ಹುಟ್ಟುವ ಬಾಡಿಗೆ ’ಅಷ್ಟಕ್ಕಷ್ಟೇ’ ಎನ್ನುವಂತಿದ್ದರಿಂದಲೋ ಏನೋ, ಅದರ ಮಾಲೀಕ ಅದರ ರಿಪೇರಿಯ ಗೋಜಿಗೆ ಹೋಗಿರಲಿಲ್ಲ. ಆ ಮನೆಯ ಕಾಂಪೌಂಡ್ ಒಳಗೆ ಕನಿಷ್ಟ ೨-೩ ಹುತ್ತಗಳಿದ್ದವು! ಅಫ್ ಕೋರ್ಸ್ ಅವುಗಳಲ್ಲಿ ಹಾವುಗಳು ಇದ್ವು. ಆಗೀಗ ರಸ್ತೆಯಲ್ಲಿ ಅಕ್ಕ ಪಕ್ಕದ ಕಾಂಪೌಂಡಿನಲ್ಲಿ ಕಾಣಿಸಿಕೊಂಡು, ಬೆಚ್ಚಿ ಬೀಳಿಸುತ್ತಿದ್ದವು. ಕೆಲವು ಕೋಲಿನ ಏಟು ತಿಂದು ಸಾಯುತ್ತಿದ್ದವು. ಆ ಮನೆ ಮಾರಲ್ಪಟ್ಟು, ಅದರ ಹೊಸ ಮಾಲೀಕ, ಮನೆಯನ್ನು ಕೆಡವಿಸಿ ಹುತ್ತಗಳನ್ನು ಒಡೆಸಿ ನೆಲಸಮ ಮಾಡಿಸಿ ಹೋದ! ಆಶ್ಚರ್ಯವೇನೆಂದರೆ ಆ ಸಮಯದಲ್ಲಿ, ಒಂದು..ಒಂದು.. ಹಾವೂ ಕಾಣಿಸಿಕೊಳ್ಳಲಿಲ್ಲ. "ಎಲ್ಲಾ ಭ್ರಮೆಯೇ" ಅಂದುಕೊಳ್ಳುವಂತೆ. ಕೆಲವರ ಪ್ರಕಾರ ಅವೆಲ್ಲ ಆಗ ಭೂಗತವಾಗಿ (ಪಾತಾಳದ ನಾಗಲೋಕಕ್ಕೆ?) ಹೊಗಿದ್ದವು. ಅಂತೂ, ಆ ಸೈಟಿನಲ್ಲಿ ಮತ್ತೆ ಗಿಡ-ಪಡ ಬೆಳೆದು ಮತ್ತೆ ’ಪಾಳು’ ಎಂದು ಕರೆಸಿಕೊಳ್ಳುವವರೆಗೂ ಯಾವ ಹಾವೂ ಕಾಣಿಸಿಕೊಂಡಿರಲಿಲ್ಲ. ಅವು "ಆ ದಿನಗಳು" ಬಿಡಿ.

ಆ ಮನೆಗೆ ಶಿಫ್ಟ್ ಆಗಿ ಆರೇಳು ವರ್ಷಗಳೇ ಆದರೂ, ನಾನಲ್ಲಿ ಇದ್ದುದು ಬಹಳ ಕಡಿಮೆ. ಎಲ್ಲ ಬರೀ ಕೇಳಿದ್ದೆನಷ್ಟೆ. ನಿನ್ನೆ ರಾತ್ರಿ ಪ್ರತ್ಯಕ್ಷವಾಗಿ ನೋಡುವಂತಾಯಿತು. ಹುಣ್ಣಿಮೆಯ ರಾತ್ರಿ(!) ಯಾವುದೋ ಕೆಟ್ಟ ಹಾವು (ಅಂದರೆ, ಸರ್ವೇಸಮಾನ್ಯವಾಗಿ, ಗಾಢ ಬಣ್ಣವುಳ್ಳದ್ದು ಎಂದರ್ಥ), ಅದ್ಯಾವ ಕಾರಣಾರ್ಥವೋ ಏನೋ, ನಮ್ಮನೆ ಕಾಂಪೌಂಡ್ ಒಳಗೆ ನುಸುಳಿ ಬಂದಿತ್ತು! ಕ್ಷಣಾರ್ಧದಲ್ಲಿ ನನ್ನ ಚಿಕ್ಕಮ್ಮ ಪೊರಕೆಯಲ್ಲಿ ಜೋರಾಗಿ ಗುಡಿಸಿ ಆಚೆ ತಳ್ಳಿಬಿಟ್ಟರು. ಎದುರಿನ ಬಯಲ ಸೊಂದಿಗಳಲ್ಲೆಲ್ಲೋ ಅದು ಮರೆಯಾಗಿಬಿಟ್ಟಿತ್ತು. ಎಲ್ಲರೂ ಹಾವು ಹೋದ ದಾರಿಯಲ್ಲೇ ದೃಷ್ಠಿಯಿಟ್ಟು ನೋಡುತ್ತಿರುವಾಗ "ಕಾಲತ್ರ ಹಾವು" ಅಂತ ಕಿರುಚಿ ಹೆದರಿಸಿದ್ದು ಯಾರಿಗೂ ಇಷ್ಟವಾಗದೆ ಬೈಸಿಕೊಂಡದ್ದಯ್ತು. ಆದರೆ ಆ ಹಾವು ಸುಮ್ಮನೆ ವಾಪಸ್ ತನ್ನ ಹುತ್ತನೋ, ಬಿಲನೋ ಸೇರ್ಕೊಳ್ಳೊದ್ ಬಿಟ್ಟು ನನ್ನ ಕಾರಿನ ಅಡಿಯಲ್ಲೇ ಮಲಗಿತ್ತು! ಊಟದ ನಂತರ ಕಾರ್ ತೆಗೆಯಲು ಡೋರಲ್ಲಿ ಕೀ ಇಡುವ ಹೊತ್ತಿಗೆ ಮೆಲ್ಲಗೆ ಹೊರಬರುತ್ತಿತ್ತು. ಎರಡಿಂಚು ಅಷ್ಟೇ.. ತುಳಿದುಬಿಡುತ್ತಿದ್ದೆ! ಪಕ್ಕದ ವಠಾರದ expert ಸೋಮಣ್ಣ ಹಾವನ್ನು ಹೊಡೆದು, ಸುಟ್ಟದ್ದು ಈಗ ಗತ. ವಿಷಯ ಕೇಳಿ ತಲ್ಲಣಿಸುವ ಮನೆಯ ಮನಗಳಿಗೆ, ಈ ಎಪಿಸೋಡು ಸೀಕ್ರೆಟ್. ಶ್ಶ್!

ಚಿಕ್ಕಪ್ಪನಂತೂ "ಇದೂ ಒಂದು ಮನೇನಾ" ಅಂತ ಗೊಣಗಿಕೊಳ್ಳುತ್ತಾರೆ. ಇದೆಲ್ಲದರಿಂದ ಬೇಸತ್ತಿದ್ದಾರೆ. ಬಹಳಷ್ಟು ಬಾರಿ ಮನೆ ಬದಲಾಯಿಸುವ ಬಗ್ಗೆ ವಿಚಾರ ನಡೆದಿದೆ. ಆದರೆ ಯಾರಿಗೂ ಇಷ್ಟ ಇಲ್ಲ. ಪಕ್ಕದ ಸೈಟಿನ ಹಾವುಗಳ ಸಂತತಿಯಲ್ಲಿ ಇದೇ ಕೊನೆಯ ಹಾವಾಗಿರಲಪ್ಪ.. ನಾಗಲೋಕದಿಂದ ಮತ್ತಿನ್ನಷ್ಟು ಜೀವಗಳು ಬರದಿರಲಿ ಅಂತ ದೇವರಲಿ ಪ್ರಾರ್ಥನೆ.

No comments: