Aug 24, 2006

ನನ್ನ ಮನೆ

ಎದುರಿಗೊಂದು ಬಯಲು
ಅದರಲೊಂದು ಪುಟ್ಟ ಶಾಲೆ
ಅದರಾಚೆಗೊಂದುದ್ಯಾನ
ಅದೋ ಮರೆಯಲಿದೆ ನೋಡು -
ನನ್ನ ಗೂಡು

ಬಯಲ ಸುತ್ತಲ
ಮರಗಳಡಿಯಲಿ
ಜಿಗಿವ ನಲಿವ ಚಿಣ್ಣರ ನೋಡು
ಅವರ ಎಳೆಗೊರಳಿನ ಇಂಪಿನಲಿ
ನಾಡಗೀತೆಯ ಕೇಳು

ಬೆಳ್ಮುಗಿಲ ಕೆಳಗೆ
ಹಸಿರೆಲೆ ಕೊಂಬೆಗಳ
ಚಿತ್ತಾರದ ಚಪ್ಪರ ನೋಡು
ಅದರಲಿ ಉದಯರವಿಯ
ಕೋಲ್ಬಿಸಿಲೊಮ್ಮೆ ನೋಡು

ಹಸಿರೊಲದಲಿ
ತೇಲುವ ಬೆಳ್ಳಕ್ಕಿಯ ನೋಡು
ಬಿರುಮಳೆಯೊಳಗೆ
ತೆಂಗಿನ ತೋಟದ ನಡುವೆ
ಮರೆಯಾಗುವ ಸೊಗಸು ನೋಡು

ದೂರದೂರಲಿ ಎಲ್ಲಿದೆಲ್ಲ…
ಮತ್ತೆ ಬಾರದೆ ಇರನೇನು
ನನ್ನೂರ ನನ್ನ ಮನೆಗೆ
ನೆನಪುಗಳ ಜೊತೆಗೆ

-ಚೇತನ್ ಪಿ
೨೩-೦೮-೨೦೦೬

No comments: