Dec 28, 2025

ಬೆಟ್ಟದಂತ ಕಷ್ಟ

(ನಾನು ಚಿಕ್ಕವನಾಗಿದ್ದಾಗ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದ ಕಥೆಯಿದು. ಇದು ಯಾವ ಪ್ರತ್ರಿಕೆಯಲ್ಲಿ ಓದಿದ್ದೋ ಗೊತ್ತಿಲ್ಲ. ಗೂಗಲ್ ನಲ್ಲೂ ಸಿಗಲಿಲ್ಲ. ನನಗೆ ನೆನಪಿರುವ ಮಟ್ಟಿಗೆ ಬರೆಯುತ್ತಿದ್ದೇನೆ)

- - - -

ಒಂದು ಊರಿನಲ್ಲಿ ಪ್ರತೀ ವರ್ಷವೂ ಒಂದು ದೊಡ್ಡ ಜಾತ್ರೆ ನಡೆಯುತ್ತಿರುತ್ತದೆ. ಆ ಜಾತ್ರೆಯಲ್ಲಿ ವಿಧವಿಧವಾದ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆಯುತ್ತಿರುತ್ತವೆ. 

ಒಂದು ವರ್ಷ, ಒಬ್ಬ ಪೈಲ್ವಾನ್, ಚೆನ್ನಾಗಿ ಕೊಬ್ಬಿದ ಒಂದು ಕೋಣವನ್ನು ಜಾತ್ರೆಯ ಬಯಲಿನಲ್ಲಿ ಕಟ್ಟಿ - "ಈ ಕೋಣವನ್ನು ಎತ್ತಿ ಒಂದು ಸುತ್ತು ಹೊಡೆದು ಕೆಳಗಿಳಿಸಿದವರಿಗೆ ನೂರು ವರಾಹ ಬಹುಮಾನ ! ಸೋತರೆ 5 ವರಹ ನನಗೆ ಕೊಡಬೇಕು" ಎಂದು ಘೋಷಿಸಿಬಿಟ್ಟಿದ್ದ. 

ನೂರು ವರಾಹ ಅಂದರೆ, ಯಾರೂ ಹಿಂದೆಂದೂ ಕೇಳರಿಯದ ಬಹುಮಾನದ ಮೊತ್ತ. ನಾ ಮುಂದು ತಾ ಮುಂದು ಎಂದು ಆ ಊರಿನ ಯುವಕರೆಲ್ಲ 'ಒಂದು ಕೈ ನೋಡೇ ಬಿಡುವ' ಎಂದು ಮುಂದಾದರು.  ಒಬ್ಬೊಬ್ಬರೂ ವಿಧವಿಧವಾಗಿ ಪ್ರಯತ್ನಿಸಿ ಸೋತು ಹಾಸ್ಯಕ್ಕೀಡಾಗಿ ಹೋದರು. ಬರಬರುತ್ತಾ ಆ ಪೈಲ್ವಾನ್, ಆ ಊರಿನವರನ್ನೆಲ್ಲ ಹೀಯಾಳಿಸಲು ಪ್ರಾರಂಭಿಸಿದ. ಇದು ಊರಿಗೇ  ಸವಾಲಾಗಿ ಬಿಟ್ಟಿತ್ತು. 

ಒಂದು ದಿನ ಊರಿನ ಹಿರಿಯರೆಲ್ಲ ಸಭೆ ಸೇರಿ ಸಮಾಲೋಚನೆ ಮಾಡುವಾಗ, ಆಜ್ಜಿಯೊಬ್ಬಳು 'ಅಗಾ, ನಮ್ ಸಿದ್ದ ಮಾಡ್ಲಾರನ' ಅಂದಳು. 

ಪಶುಗಳನ್ನು ಮೇಯಿಸುತ್ತಾ ಕಾಡಿಗೆ ಹೋಗಿದ್ದ ಸಿದ್ದನನ್ನು ಯಾರೋ ಕರೆತಂದರು. ಊರಿಗೆ ಎದುರಾಗಿದ್ದ ಸವಾಲನ್ನು ಅವನಿಗೆ ವಿವರಿಸಿದರು. 'ಆಯ್ತು' ಎಂದು ತಲೆ ಅಲ್ಲಾಡಿಸಿ ಜಾತ್ರೆಯ ಬಯಲಿಗೆ ಹೊರಟೇ ಬಿಟ್ಟ. ಊರಿಗೆ ಊರೇ ಅವನ ಹಿಂದೆ ಹೊರಟಿತು. 

ಸಿದ್ದನನ್ನು ನೋಡಿ ಪೈಲ್ವಾನ್ ನಕ್ಕು 'ನಿನಗಿಂತ ಗಟ್ಟಿ ಜನ ಬಂದು ಮಣ್ಣು ಮುಕ್ಕಿ ಹೋದ್ರು. ಹ್ಞೂ .. ನಿನ್ನಿಷ್ಟ, ಜನರಿಗೆ ಮನರಂಜನೆ ಆಗ್ಲಿ' ಎಂದು ವ್ಯಂಗ್ಯವಾಗಿ ನಕ್ಕ. 

ತಕ್ಷಣವೇ ಆ ಕೋಣವನ್ನ ಅನಾಮತ್ತಾಗಿ ಎತ್ತಿ ತಿರುಗಿಸಿ ಕೆಳಗಿಳಿಸಿ ಬಿಟ್ಟ ಸಿದ್ದ ! 

ಆ ಪೈಲ್ವಾನ್ ಗೆ  ಸಣ್ಣ  ಆಘಾತವಾಯಿತಾದರೂ, ಎಚ್ಚೆತ್ತುಕೊಂಡು 'ಭೇಷ್' ಎಂದು ತಟ್ಟಿ, ಬಹುಮಾನವನ್ನು ಸಿದ್ದನ ಕೈಗಿಟ್ಟು ಹೊರಟುಬಿಟ್ಟ!  ಸಿದ್ದ ಬಹುಮಾನವನ್ನು ನೇರವಾಗಿ ದೇವಿಯ ಗುಡಿಗೆ ಹೋಗಿ ಕಾಣಿಕೆಯಾಗಿ ಸಲ್ಲಿಸಿದ. 

ಊರ ಹಿರಿಯರು ಬಂದು ಸಿದ್ದನಿಗೆ ಕೇಳಿದರು - 'ಅಲ್ವೋ ಸಿದ್ದ! ನೀನ್ಯಾವ ಗರಡಿಯಲ್ಲಿ ಅಭ್ಯಾಸ ನಡೆಸಿದ್ದೀಯೋ?' ಎಂದು. 

'ಏನಿಲ್ರ .. ನಮ್ಮನ್ಯಾಗೆ ಎಮ್ಮೆ ಕರ ಹಾಕಿತ್ತ. ಅದನ್ನ ಕಂಡ್ರೆ ನಂಗೆ ಭಾಳ ಮುದ್ದು.  ದಿನಾ ಅದನ್ನ ಎತ್ತಿ ಊರೆಲ್ಲ ಸುತ್ತುವೆ. ದಿನಾ ಅದ್ರ ತೂಕ ಹೆಚ್ಚಾದಂಗೆ ಕಷ್ಟ ಆಗ್ತಾ ಇತ್ರ. ಆದ್ರೂ, ಒಂದು ದಿನಕ್ಕೆ ಅದೆಷ್ಟು ಭಾರ ಆಗಿರನ? ಅಂತ ಅನ್ಸಿ ಎತ್ತಿ ಸುತ್ತಾಡಿಸ್ತಿದ್ದೆ. ಈಗ ಹೆಂಗೆ ಬೆಳ್ಕಂಡೈತೆ ಗೋತ್ರಾ? ಇವತ್ತಿಗೂ ಎತ್ತಿ ಸುತ್ತಾಡಿಸ್ತೀನಿ' ಎಂದ!

- - - -

'ಸಣ್ಣ ಪ್ರಯತ್ನಗಳನ್ನ ದಿನವೂ ಮಾಡಿದ್ರೆ ಬೆಟ್ಟದಂತ ಕಷ್ಟನೂ ಕಷ್ಟ ಅನಿಸಲ್ಲ. ಅದಕ್ಕೆ ದಿನವೂ ಸ್ವಲ್ಪನಾದ್ರೂ ಓದ್ಬೇಕು, ಅಭ್ಯಾಸ ಮಾಡ್ಬೇಕು' ಎಂದು ಮಗನಿಗೆ ನೀತಿ ಕಥೆ ಹೇಳುವಾಗ ಅರ್ಧಾಂಗಿಯ ಮುಖದ ಮೇಲೆ ಪ್ರಸನ್ನತೆಯಿತ್ತು :)


1 comment:

Anonymous said...

ತುಂಬಾ ಚೆನ್ನಾಗಿದೆ