May 13, 2025

The World Not Seen

 ನನ್ನ ಶಾಲೆಯ ಹಾಗೂ ಕಾಲೇಜಿನ ಗೆಳೆಯರು ಒಟ್ಟುಗೂಡಿ, ಆಗಾಗ ಲಂಚ್ ಅಥವಾ ಡಿನ್ನರ್ ಅಂತ ಭೇಟಿ ಮಾಡ್ತಾ ಇರ್ತೀವಿ; ಬರೀ ಗೆಳೆಯರಷ್ಟೇ. 

ಮೂರು ದಶಕಗಳ ಹಿಂದೆ, ನಾವು ಶಾಲೆಯಲ್ಲಿ ಓದುವಾಗ, ಹುಡುಗರು ಹುಡುಗಿಯರನ್ನ ಹೆಚ್ಚಾಗಿ ಮಾತನಾಡಿಸುತ್ತಿರಲಿಲ್ಲ. ಅದೇನೋ ಒಂದು ಅಸ್ಪೃಶ್ಯತೆಯ ಪಿಡುಗಿನಂತೆ ಇರುತ್ತಿತ್ತು. ಕ್ರಮೇಣ 'ಹುಡುಗ-ಹುಡುಗಿಯರ' ನಡುವಿನ ಲಿಂಕ್ ಕಳಚಿ ಹೋಗಿತ್ತು. ಆ ಲಿಂಕ್ ಎಂದೂ ಇರಲೇ ಇಲ್ಲ ಅನ್ನಬಹುದು! 

ಕಳೆದ ವಾರ, ನಮ್ಮ ಆ ಸಹಪಾಠಿಗಳು ತಾವಾಗಿಯೇ initiative ತಗೊಂಡು ಒಂದು ಗೆಟ್ ಟುಗೆದರ್ ಪ್ಲಾನ್ ಮಾಡಿದ್ದರು! ಹಿಂದಿನ ಯಾವುದೇ ಬಂಧನಗಳಿರದೆ, ಮುಕ್ತವಾಗಿ ಮಾತನಾಡಿದೆವು. ಶಾಲೆಯಲ್ಲಿ ನಡೆದಿದ್ದು, ಶಾಲೆಯ ಆಚೆ ನಡೆದಿದ್ದು, ಯಾರಿಗೆ ಯಾರ ಮೇಲೆ ಕ್ರಶ್ ಇತ್ತು! ಏನೆಲ್ಲಾ!

ಈ ಮಾತು, ಈ ಸ್ವಾತಂತ್ರ್ಯ, ದಿಟ್ಟತನ ಆಗ ಯಾಕಿರಲಿಲ್ಲ? ಏನೋ ಅಮೂಲ್ಯವಾದದ್ದನ್ನ ಕಳೆದು ಕೊಂಡಂತಾಯ್ತು. ಶಾಲೆಯ ಸುವರ್ಣ ದಿನಗಳ ಇನ್ನೊಂದು ಸುಂದರ ವಿಸ್ತಾರವನ್ನ ನೋಡಲಿಲ್ಲವಲ್ಲ ಅಂತ!


May 12, 2025

ಮಳೆ vs ಛತ್ರಿ

ಊರಲ್ಲಿ, ಸಣ್ಣದಾಗಿ ಸೋನೆ ಶುರುವಾಯಿತು. ಈ ವರ್ಷ ಮಳೆ ಕೈ ಕೊಟ್ಟಿತ್ತು. ಎಷ್ಟೋ ದಿನದ ಮೇಲೆ ಮಳೆ ಬಂತು ಅಂತ ಕೊಡೆ ಹಿಡಿದು ಮಂದಸ್ಮಿತನಾಗಿ ನಡೆದು ಹೋಗುತ್ತಿದ್ದೆ . ಎದುರಿಗೆ ಬರುತ್ತಿದ್ದ ಹಿರಿಯ ಯಜಮಾನರು - "ಮಳೆ ಬರ್ತಿಲ್ಲ ಅಂತ ಜನ ಸಾಯ್ತಾ ಇದ್ರೆ, ಇಷ್ಟು ಸೋನೆಗೇ ಕೊಡೆ ಹಿಡೀತೀಯಾ?" ಎಂದು ಸ್ವಲ್ಪ ಕೋಪದಲ್ಲೇ ಗೊಣಗಿ ಹೋದರು!


(ಇದು ಕೆಲವು ವರ್ಷಗಳ ಹಿಂದಿನ ಘಟನೆ -  ಇದರ ಮುಂದೆ ಏನೋ ಬರೆಯಲು ಹೊರಟಿದ್ದೆ. ಈಗ ಮರೆತು ಹೋಗಿದೆ. ಇಷ್ಟೇ ಸಾಕೆನಿಸಿತು..)