May 25, 2005

ಬಿಡುಗಡೆ

ಕಡಲ ಬಿರುಗಾಳಿಗೆ
ಹುಯ್ದಾಡುತಿದೆ ಶ್ವೇತ ನೌಕೆ
- ತೀರವ ತೋರಬಾರದೇ?

ಕುರುಡಾಗಿವೆ ಕಣ್ಣುಗಳು
ಯಕ್ಷ ಪ್ರಶ್ನೆಗಳ ಕೋಲ್ಮಿಂಚಿಗೆ
- ಹೊಸ ದೃಷ್ಠಿಯ ಕರುಣಿಸಬಾರದೇ?

ಕುದಿಯುತಿದೆ ಎದೆ
ಕಲ್ಮಶಗಳ ಕಿಚ್ಚಿನಲಿ
- ಮಳೆಗರೆಯಬಾರದೇ?

ಅದರಲಿ ಅಹಮ್ಮಿನ ಮಹಲು ಕುಸಿದು
ಸ್ವಾರ್ಥ ಅಸೂಯೆಗಳು
- ಕರಗಬಾರದೇ?

ಮರುಳಾಗಿಹೆ ನಾ
ಸುಪ್ತ ಬಂಧನಗಳೊಳಗೆ
-ಬಿಡುಗಡೆಯ ತೋರಬಾರದೇ?

ಮನಸು ಮಣ್ಣಾಗಿ
ಹೊಸ ಹಸಿರು ಅರಳಬಾರದೇ?

-ಚೇತನ
೨೫-೦೫-೨೦೦೫

May 9, 2005

ಪರೀಕ್ಷೆ

ನಾಳೆಯೇ ಪರೀಕ್ಷೆ
ಹಿರಿಯರ ಹಿರಿಯ ಆಕಾಂಕ್ಷೆ
ಯಾರ ತಪ್ಪಿಗೆ ಯಾರ ಶಿಕ್ಷೆ?

ಅಮ್ಮನ ಪಾಠದ ಕಾಟ
ಅಪ್ಪನ ಗದರುವ ನೋಟ
ತಲೆಯಲಿ ನೂರು ನೆವಗಳ ಕೂಟ

ಮೆತ್ತಗೆ ನೀರ ಹೀರುತ್ತಾ,
ಆಗಾಗ ಕಿರುಬೆರಳು ತೋರುತ್ತಾ,
ಬಾಗಿಲಲ್ಲಿ ಯಾರನ್ನೋ ಕಾಯುತ್ತಾ,
ಬಿಡುಗಡೆಯ ಪ್ರಯತ್ನವು ನಡೆದಿದೆ ಸತತ

ನೆನಪು ಬಾರದಿರಲು,
ಬೆನ್ನಲಿ ಬೆರಳು ಮೂಡಿರಲು,
ಕಣ್ಣಲಿ ಕಪ್ಪಕ್ಷರ ಕದಡಿದೆ
ಎವೆ ಬಡಿಯಲು ಹಾಯೆಂದು ಇಳಿದಿದೆ

ಪ್ರಾಣಿ ಪಕ್ಷಿ ಮಗ್ಗಿ
ಅಕ್ಷರ ಕಾಗುಣಿತಗಳೆಲ್ಲ
ನಿದ್ದೆಯಲಿ ಬೆರೆತು
ಕನಸಿನಲಿ ಕಾಡಿವೆ

ನಿಶ್ಯಬ್ಧದಲಿ ನೆನಪೆಂತೊ
ಹಾಳೆಯಲಿ ಇಳಿದಿದೆ
ಕಡೆಯ ಘಂಟೆ ಮೊಳಗಿದೆ
ಮರುಕಳಿಸುವ ನಲಿವಿಗೆ
ಬಯಲಿಂದು ಕಾದಿದೆ

-ಚೇತನ್ ಪಿ
೦೯-೦೫-೨೦೦೫