ಶುಭ್ರ ಬಿಳಿ ತೊಟ್ಟಿದ್ದಳು. ಅತ್ತೆಲ್ಲೋ ನೋಡುತ್ತಿದ್ದಳು. ರೇರ್ ವ್ಯೂ ಕನ್ನಡಿಯಲ್ಲಿ ಅವಳ ಓರೆ ಮುಖ ಮಾತ್ರ ಕಂಡಿದ್ದು - ಕೆಲವೇ ಕ್ಷಣಗಳವರೆಗೆ. ಬಹಳ ಚಲಾಕುತನದಿಂದ ಟ್ರಾಫಿಕ್ ಸಂಭಾಳಿಸಿಕೊಂಡು ಸಿಗ್ನಲ್‍ನಲ್ಲಿ ಜಾರಿಕೊಂಡು ಬಿಟ್ಟಳು. ರವಿ* ಅವಳನ್ನು (ನೋಡಿದವನಂತೆ) ಹಾಡಿ ಹೊಗಳಲು ಶುರು ಮಾಡಿದ. ಇಂಥ ಚೆಲುವೆಯನ್ನ ಇಲ್ಲಿಯವರೆಗೂ ಕಂಡಿಲ್ಲ, ಹಾಗೆ ಹೀಗೆ ಅಂತೆಲ್ಲ. ನಮ್ಮೆಲ್ಲರ ಕುತೂಹಲ ಉತ್ತುಂಗದಲ್ಲಿತ್ತು. ಪ್ರದೀಪ ಆಗಲೇ ಕಾರ್ ನಂಬರ್ ಪಠಿಸುತ್ತಿದ್ದ. ಫಾಲೋ ಮಾಡಲು ನೋಡಿದೆವು. ಕಿಟಕಿಯಾಚೆ ತಲೆ ಹಾಕಿ ಒಬ್ಬೊಬ್ಬರೊಂದು ದಿಕ್ಕು ಜಾಲಾಡಿದರೂ ಎಲ್ಲೂ ಕಾಣಸಿಗಳು. ಎರೆಡು ಸಿಗ್ನಲ್‍ಗಳ ನಂತರ, ಅಚಾನಕ್ ಹಿಂದಿನಿಂದ ಬಂದು, ಸಿಗ್ನಲ್ ಜಂಪ್ ಮಾಡಿ ಬಸ್ಸು ಟ್ರಕ್ಕುಗಳ ಹಿಂದೆ ಮತ್ತೆ ಮರೆಯಾಗಿಬಿಟ್ಟಳು.
ಕಾರ್ ನಂಬರ್ ಇರುವ ಪೇಪರ್ ಇನ್ನೂ ಡ್ಯಾಶ್ ಬೋರ್ಡ್ ಮೇಲಿದೆ. ಆ ನಂಬರ್ ಎಲ್ಲರ ನಾಲಿಗೆ ತುದಿಯಲ್ಲಿದೆಯೆನ್ನುವುದು ಬೇರೆ ಮಾತು. ಅವಳು ಮತ್ತೆಂದೂ ಕಾಣಸಿಗದ ಬೆಳದಿಂಗಳ ಬಾಲೆಯೋ?
* ಹೆಸರನ್ನು ಬದಲಾಯಿಸಲಾಗಿದೆ!