Sep 30, 2006
Sep 3, 2006
ಜೋಗ ಬ್ಲಾಗ
ಈ ವರ್ಷ ಶರಾವತಿ ಮೈದುಂಬಿ ಹರಿದಿದ್ದಾಳೆ. ಲಿಂಗನಮಕ್ಕಿ ತುಂಬಿದೆ. ಜೋಗ ಜಲಪಾತದ ವೈಭವವನ್ನು ಟೀವಿ ಹಾಗೂ ಇಮೈಲಿನಲ್ಲಿ ಕಳೂಹಿಸಿದ ಫೋಟೋಗಳನ್ನು ನೋಡಿ ಪುಳಕಿತನಾದೆ. ಆದಷ್ಟು ಬೇಗ ಹೊರಡಲು ನಿರ್ದರಿಸಿದೆ. ಸ್ನೇಹಿತರನ್ನು ಪುಸಲಾಯಿಸಲು ಪ್ರಾರಂಭಿಸಿದೆ. ಥರಾವರಿ ಕಾರಣಗಳನ್ನು ನೀಡಿ ಎಲ್ಲರೂ ನುಣುಚಿಕೊಂಡರು. ಕೊನೆಗೆ ಒಬ್ಬನೇ ಹೋಗಬೇಕೆಂಬ ವಿಪರೀತದ ನಿರ್ದಾರಕ್ಕೆ ಬರುವಷ್ಟರಲ್ಲಿ ಆಫೀಸಿನ ಗೆಳೆಯರ ತಂಡವೊಂದು ಹೊರಟಿತ್ತು. ನಾನೂ ಅವರೊಡನೆ ಸೇರಿದೆ.
ಯಾರಾರು?: ವಿಕಾಸ್, ಮಿಥುನ್(ದಾ), ರಾಧೇಶ್, ಮಧು, ರವಿ, ನಾನು, ಕೃಷ್ಣ ಮತ್ತವನ ಇಬ್ಬರು ಸ್ನೇಹಿತರು. ಒಟ್ಟು ‘ಒಂಭತ್ತು’ ಮಂದಿ.
ಕಾರ್ಯಕ್ರಮ: ಶನಿವಾರ ಜೋಗ ನೋಡುವುದು. ಸಂಜೆಯೊಳಗೆ ಸುತ್ತಮುತ್ತಲಿನ ಯಾವುದಾದರೂ ಸ್ಥಳಗಳನ್ನು ನೋಡಿ, ಸಂಜೆ ಸಾಗರಕ್ಕೆ ಹಿಂತಿರುಗುವುದು.
ತಯಾರಿ: ೧. ರಿಜರ್ವೇಷನ್ - ಶುಕ್ರವಾರ ರಾತ್ರಿ, ಬೆಂಗಳೂರು-ಸಾಗರ / ಶನಿವಾರ ರಾತ್ರಿ, ಸಾಗರ-ಬೆಂಗಳೂರು, ೨. ಬಟ್ಟೆ ಬರೆ (ರವಿಗೆ optional) ೩. ತಿನ್ನಲು ಏನಾದರೂ (non-junk)
ಅವಧಿ: ಕೇವಲ ಒಂದು ದಿನ - Just one day!
ಮೊದಲೇ ನಿರ್ದರಿಸಿದಂತೆ ಕ.ರಾ.ರ.ಸಾ.ಸಂ ನಿಲ್ದಾಣದ ೪ನೇ ಪ್ಲಾಟ್‌ಫಾರ್ಮಿನಲ್ಲಿ ಸೇರಿದೆವು. ಬಸ್ಸು ಹೊರಡಬೇಕಿದ್ದಿದ್ದು ೯:೧೫ ಕ್ಕೆ. ಹೊರಡುವುದಿರಲಿ, ಬಸ್ಸೇ ಬರಲಿಲ್ಲ.. ೧೦ ಘಂಟೆಯಾದರೂ! ಒಂಭತ್ತೂ ಮಂದಿ ಬಸ್ಸನ್ನು ಹುಡುಕಿಕೊಂಡು ನಿಲ್ದಾಣದ ತುಂಬ ಅಲೆದದ್ದಾಯಿತು. ‘ಬಸ್ಸೆಲ್ಲಿ? ಯಾವಾಗ ಬರುತ್ತೆ?’ ಎಂದು ಕೇಳಿದವರನ್ನೆ ಮತ್ತೆ ಮತ್ತೆ ಕೇಳಿ ಬೈಸಿಕೊಂಡೆವು. ಎಲ್ಲರದ್ದೂ ಒಂದೇ ಉತ್ತರ. “ಇಲ್ಲೇಕೆ ಬಂದಿರಿ? ೪ನೇ ಪ್ಲಾಟ್‌ಫರ್ಮಿನಲ್ಲೇ ಇರಿ.. ಇನ್ನೇನು ಬರುತ್ತೆ”
ಆಗ ನಾನು -
“ಇರದ ಬಸ್ಸಿಗೆ ರಿಜರ್ವೇಷನ್ ಮಾಡಿಸಿ
ನಿಲ್ದಾಣ ಅಲೆದೊಡೆಂತಯ್ಯ?”
ಎಂದಾಗ ಯಾರೂ ನಗಲಿಲ್ಲ. ಕೊನೆಗೆ ನಿಲ್ದಾಣದ ಕಂಟ್ರೋಲರ್, ವಾಕಿ-ಟಾಕಿ ಯಲ್ಲಿ “ಎಲ್ಲಿದ್ಯಲೆ ಬೋಳಿಮಗ್ನೆ” ಎಂದಾಗ ಬಸ್ಸು ಇದ್ದಕ್ಕಿದ್ದಂತೆ ‘ಟ್ರಾಫಿಕ್ ಜಾಮಿ’ನಿಂದ ಹೊರಬಂದು ನಮ್ಮೆದುರು ನಿಂತಿತು!
ಬಹಳ ದಿನಗಳ ನಂತರದ ಪ್ರಯಾಣವಾದುದರಿಂದಾಗಿಯೂ (ಇಲ್ಲಿ ಕುಮಾರಪರ್ವತದ ಚಾರಣವನ್ನು ನೆನೆಯಬಹುದು) , ಜೋಗದ ಸಿರಿ ನೋಡುವ ಕಾತರದಿಂದಾಗಿಯೂ ಬಸ್ಸು ಹೊರಟಾಗ ಏನೋ ಒಂದು ರೀತಿಯ ಸಮಾದಾನ, ಸಂತೋಷವಿತ್ತು. ನಾನೂ, ವಿಕಸೂ(genius:)), ಇಂಥಹ ಕೆಲವು ಅನಿಸಿಕೆ-ವಿಚಾರಗಳ ವಿನಿಮಯ (”ತಿಳಿ ಹರಟೆ”) ಮಾಡಿಕೊಂಡು ನಿದ್ದೆಗೆ ಜಾರುವಷ್ಟರಲ್ಲಿ ತಿಪಟೂರು ಬಂದೇಬಿಟ್ಟಿತು. ಒಂದೇ ಉಸಿರಿನಲ್ಲಿ ನನ್ನೂರಿನ ಹಿರಿಮೆ-ಗರಿಮೆಗಳನ್ನು ಬಣ್ಣಿಸಿ, ನನ್ನ ಮನೆ, ಶಾಲೆ, ಕಾಲೇಜು, ಹೈಸ್ಖೂಲು, ಕೆರೆ ಕಟ್ಟೆ ಎಲ್ಲವನ್ನೂ ಕತ್ತಲಲ್ಲೇ ತೋರಿಸಿದೆ. ಅವನೂ ಪಾಪ “ಎಲ್ಲಿ?” ಎನ್ನದೆ.. “ಹೌದಾ, ಹೌದಾ” ಎನ್ನುತ್ತ ತನ್ನ ಪ್ರೌಢಿಮೆಯನ್ನು ತೋರಿಸಿದ. ಭಲೇ!
ಮಾರ್ಗ ಮದ್ಯದಲ್ಲಿ ಬಸ್ಸು “ಚಾ” ಗಾಗಿ ನಿಂತಿತು (ಅಂದರೆ ಡ್ರೈವರ್ ನಿಲ್ಲಿಸಿದ). ಆ ಜಾಗ “somewhere on NH206″ ಎನ್ನುವಂತಿತ್ತು! ಅಲ್ಲಿ ಕಣ್ಣಿಗೆ ಕಂಡದ್ಯಾವುಡೂ ಸ್ವಚ್ಛವಾಗಿರಲಿಲ್ಲ. ಈ ನಡುವೆ “Mutants/Arnold Schwazzneggar/Terminator” ಎಂದು ರವಿ enact ಮಾಡಿ ತೋರಿಸಿದಾಗ ನಕ್ಕಿದ್ದೇ ನಕ್ಕಿದ್ದು (ಹೆಚ್ಚು ವಿವರಣೆ ಇಲ್ಲಿ ಬೇಡ).
ಶಿವಮೊಗ್ಗ ದಾಟುವಷ್ಟರಲ್ಲಿ ಒಂದಿಷ್ಟು ಬೆಳ್ಳಗಾಗಿತ್ತು. ಇಬ್ಬನಿ ಮುಸುಕಿದ ಹೊಲ, ಗದ್ದೆ, ಅರೆಕಾಡುಗಳನ್ನು ಅರೆಮಂಪರಿನಲ್ಲಿ ಸವಿಯುತ್ತಾ ಸಾಗರದಲ್ಲಿಳಿದಾಗ ೬ ಘಂಟೆ.
ಬಸ್ ನಿಲ್ದಾಣದಲ್ಲೇ ಇದ್ದ ಒಂದು ಹೋಟೆಲ್ಲಿನಲ್ಲಿ ಹಲ್ಲುಜ್ಜದೆ ತಿಂಡಿ ಕಾಫಿ ತಿಂದು, ದಿನದ ಪ್ಲಾನ್ ಮಾಡಿದೆವು - ಟಾಟಾ ಸುಮೋ ಬಾಡಿಗೆ ಹಿಡಿದು ಜೋಗ + ಸಹಸ್ರಲಿಂಗೇಶ್ವರ(ಆಘನಾಶಿನಿ ನದಿಯ ಒಡಲಲ್ಲಿ ಸಹಸ್ರ ಲಿಂಗಗಳು) + ಹೊನ್ನೆಮರಡು ನೋಡಿ ಸಂಜೆ ೮ ರೊಳಗೆ ಸಾಗರಕ್ಕೆ ಹಿಂತಿರುಗುವುದು.
ಭಾಗ ೨ - ಜಲಪಾತ ಜಿಗ್ಞಾಸೆ:
ಜೋಗವನ್ನು ತಲುಪಿದಾಗ ನಿರಾಶರಾದೆವು. ನಿರೀಕ್ಷಿದಷ್ಟು ನೀರಿರಲಿಲ್ಲ. ನಾವು ಟೀವಿಯಲ್ಲಿ ಕಂಡದ್ದು ಆಗಸ್ಟ್ ೧೭ರ ಜಲಪಾತ. ಆ ದಿನ ಲಿಂಗನಮಕ್ಕಿಯಿಂದ ಹೆಚ್ಚು ನೀರು ಹೊರಬಿಡಲ್ಪಟ್ಟಿದ್ದರಿಂದ ಆ ದಿನ ಅಷ್ಟು ನೀರಿತ್ತೆಂದು ತಿಳಿಯಿತು. we were unlucky.
ಸುಮ್ಮನೆ ಹರಿಯುವುದಕ್ಕೂ, ಒಂದೆಡೆ ಎತ್ತರದಿಂದ ಬಿದ್ದು ಹರಿಯುವುದಕ್ಕೂ ವ್ಯತ್ಯಾಸವೇನು? ಜಲಪಾತ ಏಕಿಷ್ಟು ಮನೋಹರ? ಕೆಲವೇ ಕ್ಷಣಗಳಲ್ಲಿ ಬಿದ್ದು ಹರಿದು ಕಣ್ಮರೆಯಾಗುವ ದೃಷ್ಯಕ್ಕೇಕಿಷ್ಟು ತುಡಿತ?… ಬೀಳುವಾಗ ಏರುವ ರಭಸಕ್ಕಾಗಿ? ಭೋರ್ಗರೆಯುವ ಶಬ್ದ ನಿನಾದಗಳಿಗಾಗಿ? ಮುತ್ತಿನಂತೆ ಹೊಳೆವ ನೀರಿನ ಬಿಂದುಗಳಿಗಾಗಿ? ಕಗ್ಗಲ್ಲನ್ನು ಕೊರೆಕೊರೆದು ಕಡೆವುದಕ್ಕಾಗಿ? ಬೀಳುವಾಗ ನಿಲ್ಲುವ ಕ್ಷಣದ ಸ್ಥಬ್ದತೆಗಾಗಿ? ಪ್ರಪಾತ-ನದಿಗಳ ಸಮ್ಮಿಳನದ ಅಪರೂಪತೆಗಾಗಿ? ನಮ್ಮೊಳಗಿನ ಜೀವಜಲದ ಸ್ಪಂದನದಿಂದಾಗಿ? …. “ಮನಸ್ಸಿಗೆ ಯಾವುದು ಹಿತ? ಯಾವುದು ಅಹಿತ”? ಎಂಬಿತ್ಯಾದಿ ಜಿಗ್ಞಾಸೆಯಲ್ಲಿ ಮನಸ್ಸು ಮುಳುಗಿ ಹೋಯಿತು.
ಇರಲಿ. ಪರವಾಗಿಲ್ಲ. ಮೇಲಿಂದ, ಕೆಳಗಿಂದ, ಬದಿಯಿಂದ - ಎಲ್ಲಾ ಕೋನಗಳಿಂದಲೂ ಜಲಪಾತವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆವು. ನೋಡನೋಡುತ್ತ, ನನಗೆ ಜೋಗಕ್ಕಿಂತ, ಗಗನ ಚುಕ್ಕಿ ಭರ ಚುಕ್ಕಿಗಳೇ ಹೆಚ್ಚು ಭವ್ಯ ಹೆಚ್ಚು ರಮಣೀಯ ಎನಿಸಿತು. ಆದರೆ -
“ಜೋಗದ ಸಿರಿ ಬಳುಕಿನಲ್ಲಿ….”,
“ಮಾನವನಾಗಿ ಹುಟ್ಟಿದ ಮೇಲೆ …”
ಎಂದು ಕವಿಗಳ ಬಾಯಲ್ಲಿ ನಲಿದಿದೆಯೆಂದರೆ ಇದು ಮೇರು ನಿಜ.
ಭಾಗ ೩:
ಜಲಪಾತದ ಪಾದಕ್ಕೆ ಇಳಿದು ಹತ್ತಿದುದರಿಂದ ನಮ್ಮ ದೇಹಗಳು ನಾರುತ್ತಿದ್ದವು. ಫ್ರೆಶ್ ಆಗಲು ಹತ್ತಿರದ ಮಿನಿ ಜಲಪಾತದ ಪ್ರೋಗ್ರಾಮ್ ಇತ್ತು. ಆದರೆ ಅದು ಹೆಚ್ಚೆಂದರೆ ೪ ಜನ ನಿಲ್ಲಬಹುದಾದಂಥಹ ಸ್ಥಳ. ಅಲ್ಲಿ ಒಬ್ಬರು ಹಿರಿಯರು (ಮುದಿಯ ಎಂದರೆ ನೀವು ‘ಸಂಸ್ಕಾರ ಇಲ್ಲದವನು’ ಎನ್ನಬಹುದು) ಸ್ನಾನ ಮಾಡುತ್ತಿದ್ದರು ಬೇರೆ. ಅವರನ್ನು ಓಡಿಸಿ ಅಥವಾ ಅವರೊಡನೆ share ಮಾಡಿಕೊಂಡು ಸರದಿಯಲ್ಲಿ ನಿಂತು ಸ್ನಾನ ಮಾಡುವ ವ್ಯವಧಾನ ಯಾರಿಗೂ ಇಲ್ಲದ್ದರಿಂದ ಸೀದಾ ಸಹಸ್ರಲಿಂಗೇಶ್ವರಕ್ಕೆ ಹೊರಟೆವು.
ಒಂದು ಇಕ್ಕಟ್ಟಾದ ರಸ್ತೆಯಲ್ಲಿ ಕ್ರೇನ್ ವಾಹನ ಬದಿಗೆ ಕುಸಿದಿದ್ದರಿಂದ ಬಳಸು ದಾರಿ ಹಿಡಿಯಬೇಕಾಯಿತು. ನಮಗೆ ಬೋರ್ ಅಗದಂತೆ ಪಂಡಿತ್ ರವಿಜೀ-ಯವರು ಹಾಡಲು ಪ್ರಾರಂಭಿಸಿದಾಗಲೇ, ಅವರ ಕಂಠ ಸಿರಿ, ಅಪಾರ ಗ್ಞಾನ ಭಂಡಾರದ ಪರಿಚಯ ನಮಗಾಗಿದ್ದು. ಯಾರೊಬ್ಬರೂ ಬಾಯ್ತೆರೆಯಲಿಲ್ಲ… ಯಾವ ಕಾರಣಕ್ಕಾಗಿಯೂ! ಇನ್ನು ಅವರನ್ನು ನೇರ ದೃಷ್ಠಿಯಿಂದ ನೋಡುವ ದೈರ್ಯ ಯಾರಿಗೆ?
ದಾರಿಯುದ್ದಕ್ಕೂ ಹೊಲ ಗದ್ದೆಗಳು. ನಾನು ಜೀವನದಲ್ಲಿ ಹಿಂದೆಂದೂ ಕಾಣದಷ್ಟು ಎಳೆ ಹಸಿರನ್ನು ಅಂದು ಕಂಡೆನು! ವಿಶೇಷವಾಗಿ ತಾಳಗುಪ್ಪಕ್ಕೆ ಹೋಗುವಾಗ ನೇರ ರಸ್ತೆಯ ಇಬ್ಬದಿಯಲ್ಲಿನ ಆ ವಿಸ್ತಾರ ಹಸಿರ ಸಿರಿ!! ಅದು ವರ್ಣಿಸಲಸಾಧ್ಯ.
ಯಾವ ಋತುವಿನದಿದು
ಯಾವ ದಿನ?ಎಳೆ ಪೈರು
ಎಳೆ ಹಸಿರು
ಕಂಗೊಳಿಸುವ ದಿನ
ಹಸಿರರಸುವ ಮನದಲಿ
ತಣಿಯದ ಉತ್ಸಾಹ
ಉಕ್ಕಿಸುವ ದಿನ
ಭುವಿಯಲ್ಲಿ
ಬಣ್ಣ ಬೇರಿಲ್ಲದ ದಿನ!
ಇದು ಯಾವ ದಿನ!
ನನಗಂತೂ ಜೀಪಿನಿಂದ ಇಳಿದು ಆ ಪೈರುಗಳ ಮದ್ಯೆ ಓಡಿ, ಹಾರಿ, ತೇಲಬೇಕೆನಿಸುತ್ತಿತ್ತು. ಆದರೆ, ಫೋಟೋ ತೆಗೆಯಲೂ ಸಹ ಸಮಯವಿರಲಿಲ್ಲ… we were imprisoned by Time!
ಸರಿ. ಸಹಸ್ರ ಲಿಂಗೇಶ್ವರ ತಲುಪಿದೆವು. ನದಿ ರಭಸದಿಂದಲೆ ಹರಿಯುತ್ತಿತ್ತು. ಒಳಗಿಳಿಯಲು ಎಲ್ಲರಿಗೂ ತುಸು ಭಯ. ನದಿಯ ತಳದಲ್ಲಿ ಮಣ್ಣು-ಮರಳಿಗಿಂತ, ಬಂಡೆ ಕಲ್ಲುಗಳೇ ಹೆಚ್ಚು… ಆದುದರಿಂದ, ಬಂಡೆಕಲ್ಲುಗಳನ್ನು ಹಿಡಿದುಕೊಂಡೇ ಅವುಗಳ ಬದಿಯಲ್ಲೇ ಸಾಗಿ, ಒಂದು ಸುರಕ್ಷಿತ ಜಾಗ ಸೇರಿದೆವು. ಈಜು ಬರುವವರು ಒಂದಿಷ್ಟು ಅತ್ತಿತ್ತ ಈಜುವ ಸಾಹಸ ಮಾಡಿದರು.
ವಿಕಾಸ ತನ್ನ ರುದ್ರಾಕ್ಷಿ ಮಾಲೆಯನ್ನು ಕಳೆದುಕೊಂಡ. ಲಿಂಗದ ಒಂದು ಸಣ್ಣ ಶಿಲ್ಪ ಸಿಕ್ಕರೆ ಪುಣ್ಯವೆಂದು ಹೇಳಿದಾಕ್ಷಣ ಮಿಥುನ ಮರಳನ್ನು ಕೆದಕಿ ಜಾಲಾಡತೊಡಗಿದ. ರವಿ ತನ್ನ ಚೇಷ್ಟೆಗಳನ್ನು ಮುಂದುವರೆಸಿದ. ತಿರುಪತಿ ತಿಮ್ಮಪ್ಪನ ಭಂಗಿಯಲ್ಲಿ ಮಲಗಿ ಫೋಟೋ ಹೊಡೆಸಿಕೊಂಡ. ನಾನು ಚಳಿಗೆ ‘ದಂತ ಕಟಕಟ’ ರಾಗ ಹಾಡಿ ಎಲ್ಲರನ್ನೂ ರಂಜಿಸಿದೆ.
ಅಷ್ಟೇ.. ಮುಳುಗಿ ಬಿದ್ದು, ನಕ್ಕು ನಲಿದು, ಒಂದು ಸುದೀರ್ಘ ಸ್ನಾನ ಮುಗಿಸಿ ಹೊರಬಂದೆವು. ರವಿಯ ತಿಂಗಳ ಸ್ನಾನ ಮುಗಿದಿತ್ತು. ಮುಂದಿನ ಸ್ಟಾಪ್ - ಹೊನ್ನೆಮರಡು.
ಭಾಗ ೪:
ಹೊನ್ನೆಮರಡಿಗೆ ಹೋಗಿದ್ದು ವೇಸ್ಟ್ ಆಯಿತೆನ್ನಬಹುದು. ಹೋಗುವುದರೊಳಗಾಗಿ ಕತ್ತಲಾಗುತ್ತಿತ್ತು. ಬೋಟಿಂಗ್ ಮಾಡಲು ಸಮಯವಿರಲಿಲ್ಲ. ಲಿಂಗನಮಕ್ಕಿ backwaters ನೋಡಿಕೊಂಡು, ಸ್ವಲ್ಪ ಹೊತ್ತು ರಿಲ್ಯಾಕ್ಸ್ ಮಾಡಿಕೊಂಡು ಅಲ್ಲಿಗೆ ಪ್ರತ್ಯೇಕವಾಗಿ ಎರೆಡು ದಿನ ಬಂದು ಇದ್ದು ಹೋಗುವ ಪ್ಲಾನ್ ಹಾಕಿಕೊಂಡು ಹಿಂದಿರುಗಿದೆವು. ಆಗಲೇ ರವಿ - ‘ಶಾರ್ಕ್ ಓಡಿಸುವ ವಾಟರ್ ಪ್ರೂಫ್ ವಾಚ್’ ಬಗೆ ತಿಳಿಸಿದ್ದು!
ಹಿಂತಿರುಗುವಾಗ ತಾಳಗುಪ್ಪದ ಬಳಿ ರಸ್ತೆಯ ಬದಿಯಲ್ಲಿ ಜೀಪ್ ನಿಲ್ಲಿಸಿ, ಹೊಲಗದ್ದೆಗಳನ್ನು ನೋಡುತ್ತಾ, ಜೋಗದಿಂದ ಹೊರಡುವ Hi-Tension ಎಲೆಕ್ಟ್ರಿಚ್ ಲೈನ್‌ಗಳನ್ನು ನೋಡುತ್ತಾ ‘ರಸಸಂಜೆ’ ಸವಿದೆವು.
ಈ ರೀತಿಯಾಗಿ… ನಾವು ಸೇಫಾಗಿ ಸಾಗರಕ್ಕೆ ಹಿಂತಿರುಗಿದಾಗ ಸುಮಾರು ೮ ಘಂಟೆ.
ಆ ಹೋಟೆಲ್ ಈ ಹೋಟೆಲ್ ಎಂದು ೨-೩ ಕಿ.ಮಿ. ನಡೆದು ಸುಸ್ತಾಗಿ, ಸಿಗುವ ಊಟವೂ ಸಿಗದೆ ಅರೆ ಬರೆ ಊಟ ಮಾಡಿ, ಅಲ್ಲಿ ಇಲ್ಲಿ ಟೈಮ್ ಪಾಸ್ ಮಾಡಿ ಬಸ್ ಹತ್ತಿದೆವು. ಎಚ್ಚರವಾದಾಗ ಬೆಂಗಳೂರಿನಲ್ಲಿದ್ದೆವು! ಶಿವಮೊಗ್ಗ/ಸಾಗರ/ಸಿರಸಿ ಗಳಲ್ಲಿ ಬೀಳದ ಮಳೆ ಬೆಂಗಳೂರಿನಲ್ಲಿ ಬೀಳುತ್ತಿತ್ತು!
-ಚೇತನ್ ಪಿ
೯ ಸೆಪ್ಟೆಂಬರ್ ೨೦೦೬