ಸಾರ್ಥಕ ದಿನದೀ ಕೊನೆಗೆ
ಮಬ್ಬಡರಿದೆ ಬಾನಿಗೆ
ಹಗಲ ಕೊನೆಯ ಘಳಿಗೆ,
ಬಿದ್ದೂ ಬೀಳದಂಗೆ
ಒಂದು ಹದ ತುಂತುರು ಮಳೆ ಮೆಲ್ಲಗೆ,
ತಂಗಾಳಿಯೊಳಗೆ…
ಕಾವೇರಿ ಕವಲಾಗಿ
ಕಣಿವೆಗಿಳಿಯುವಲ್ಲಿ,
ಜೀವ ಜಲಧಾರೆಗಳ ತಂತಿಗಳಲಿ
ನವರಸ ನಾದ, ಭಾವ
ಹಾಡೊಂದೇ,
ಕರ್ಣಗಳಲ್ಲಿನ್ನೂ ಪ್ರತಿಧ್ವನಿತ…
ಪುಟಿಪುಟಿದು ಇಳಿದು,
ಬಳಸಿ ಜಾರಿ,
ಶ್ವೇತ ಕುಂಚ ಕೊರೆಕೊರೆದು ಕಡೆದಿದೆ
ಭವ್ಯ ಶಿಲ್ಪ-ಸೋಪಾನ
ತೇವದೊಳು ಜೀವಂತ…
ತಿಳಿವಿಗೆ ನಿಲುಕದ
ನಲಿವಿನಾಳಕೆ
ಮಾನಸ ಮಂಥನದಲಿ
ಉದಯಿಸಿದೆ
ಜೀವರಸದೊಳು
ನವ ಚೇತನ!
-ಚೇತನ್ ಪಿ
೨೪-೦೮-೨೦೦೫