ಗಿರಿಗಳೆದ್ದಿವೆ ತೀರಗಳಿಂದ
ಅಲೆಅಲೆಯಾಗಿ ನಾಡಿನೊಳಗೆ
ಕಾದಿವೆ ಕಾರ್ಮೋಡಗಳ ದಾರಿಗೆ
ಬಾಗಿಲ ತೆರೆಯೆ, ಸುರಿಸಲು ಪನ್ನೀರ
ಎದೆ ಚೀರುವ ನೀರವತೆಯಲಿ
ಬೆರೆಯುತಿದೆ ಜಂತುಗಳ ಗುಂಯ್ ನಾದ;
ಮಬ್ಬೇರುತಿದೆ, ಒತ್ತೊತ್ತಿನ ವನವಿದು
ಹಗಲೋ? ಇರುಳೋ?
ಬಾನೆಲೆಗಳ ಚಪ್ಪರದ
ಮೇಲೆರಗಿದನೋ ವರುಣ
ಟಪಟಪನೆ ಪಟಪಟನೆ
ತೊಟ್ಟಿಕ್ಕುವ ಹನಿಗಳ ಹಳ್ಳ
ಚಿಲುಮೆಗಳ ಬಳ್ಳ
ಒಂದಾಗಲು ಮೈದುಂಬಿದಳೋ ನೀರೆ
ಹರಿವಳು ತಳುಕಿ ಬಳುಕಿ ಧುಮುಕಿ
ದಿಗಂತದಿಂದ ದಿಗಂತಕೆ
ತೇಲುತಿದೆ ಹಕ್ಕಿ
ಅಪ್ಪುಗೆಯ ರೆಕ್ಕೆಯ ಬಿಚ್ಚಿ
ನೋಟಗಳ ನುಂಗುತ
ಅಂತರಂಗಕೆ; ಹಾಡುತ
‘ಚೆಲುವೆಲ್ಲಾ ನನ್ನದೇ’
ಮಲೆನಾಡೊ ವೈನಾಡೊ
ಸೌಂದರ್ಯಕೆ ಯಾವ ರೂಪ?
ಯಾವ ಹೆಸರು?
-ಚೇತನ್
೧೬-೦೬-೨೦೦೫