Jun 28, 2008
ಅಲೂಗೆಡ್ಡೆ, ಮಂಜುಗಡ್ಡೆ ಮತ್ತು ಕಾಮನಬಿಲ್ಲು
ಆಲೂಗೆಡ್ಡೆ - ನಿಮಗೆ ಆಲೂಗೆಡ್ಡೆ ಸೇರದಿದ್ದರೆ, ಉತ್ತರ ಭಾರತದಲ್ಲಿ ಸಂಭಾಳಿಸುವುದು ಕಷ್ಟ. ಸಹಜವಾಗಿ ಅಲೂಗೆಡ್ಡೆ, yhai ಡಯೆಟ್‍ನಲ್ಲಿ ಸಿಂಹಪಾಲು. ತಿನ್ನುತ್ತಾ, ತಿನ್ನುತ್ತಾ, ನಾಲಗೆಗೂ ಅಲೂಗೆಡ್ಡೆಗೂ ಬೆಳೆದ ಹಗೆತನ ಹೋಗಲಾಡಿಸಲು ತಿಳಿಸಾರು ಪಾನಿಪುರಿ ಮಸಾಲೆವಡೆಗಳಿಗೆ ಬಹಳ ದಿನಗಳೆ ಹಿಡಿಯಿತು. ಮತ್ತು ಕಸೋಲಿನ ಟೆಂಟಿನಲ್ಲಾದ ಭೀಕರ ಅನಿಲ ದುರಂತಕ್ಕೂ ಇದೇ ಕಾರಣ ಎಂಬ ಶಂಕೆ.
ಮಂಜುಗಡ್ಡೆ - 56 ವರ್ಷಗಳಲ್ಲೇ, ಈ ಬಾರಿ ಗರಿಷ್ಠ ಹಿಮಪಾತ. ತಿಲಾ ಲೋಟ್ನಿ, ಸರ್‍ಪಾಸ್ ಗಳಲ್ಲಿ ಹಿಮವೋ ಹಿಮ! ಬಿಸಿಲೇರಿ, ಶೂ ಒತ್ತಡವೂ ಸೇರಿ, ಹಿಮ ಕರಗುತ್ತಿದ್ದಂತೆ ಶೂಗಳ ಗ್ರಿಪ್ ಯಾವುದಕ್ಕೂ ಸಾಲದೆ ಮುಂಗಾಲು ಹಿಂಗಾಲುಗಳು ಹಿಮದಲ್ಲಿ ಹೂತುಹೋಗುವಂತೆ ಒದ್ದುಕೊಂಡು ಹೆಜ್ಜೆ ಮೇಲೆ ಹೆಜ್ಜೆಯಿಟ್ಟು, ಕೋಲೂರ್ಕೊಂಡು ಹೋಗೋದು ಬಲು ಪ್ರಯಾಸದ ಸಂಗತಿಯಾಗಿತ್ತು. ಮತ್ತೆ ಹಿಮವೆಂದರೆ ವ್ಯಾಕರಿಕೆ ಬರುವಂತಾಗಿತ್ತು. ಎಷ್ಟೆಂದರೆ, ರೋಹ್ತಾಂಗ್ ಪಾಸ್‍ನಲ್ಲಿ (ಜಬ್ ವಿ ಮೆಟ್ ಫೇಮ್) ಕೂಡ ಯಾರೊಬ್ಬರಿಗೂ ಸ್ನೋ ಮೇಲೆ ಅಡಿಯಿಡುವ ಆಸಕ್ತಿಯಿರಲಿಲ್ಲ.
ಕಾಮನಬಿಲ್ಲು - ಖರ್ಚುಗಳನ್ನು ಲೆಕ್ಕ ಇಡುವಲ್ಲಿ ಸುಲಭ ಆಗ್ಲೆಂದು ಒಂದು shared by all ಕಾಮನ್ ಬಿಲ್ ಮಾಡಿದೆವು. ಎಲ್ರೂ, ತಮ್ಮದಲ್ಲ ಅಂತ ಖರ್ಚು ಮಾಡ್ತಿದ್ರಿಂದ, ಅದು ಅಗಾಧವಾಗಿ ಬೆಳೆದು ನಮ್ಮ (ಕೃಷ್ಣನನ್ನು ಹೊರೆತುಪಡಿಸಿ) ಶಾಲೋ ಜೇಬುಗಳಿಗೆ ಹೊರೆಯಾಗಿ, ಆರ್ಥಿಕ ಚಿಂತೆಗೀಡು ಮಾಡಿತ್ತು.
ಎಲ್ಲಕ್ಕೂ ಮಿಗಿಲಾಗಿ, ಸರ್‍ಪಾಸ್ ಶೃಂಗದಲ್ಲಿ ಮೊದಲಿಗನಾಗಿ ನಿಂತು ಮಫ್ಲರ್ ತೆಗೆದು, ಝಂಡಾ ಊರಿ, ಸುತ್ತುತ್ತಿರುವ ಹೆಲಿಕಾಪ್ಟರ್‍ನಲ್ಲಿರುವ ವೀಡಿಯೋಗ್ರಾಫರ್‍ಗೆ "ಯೇ" ಅಂತ ಕೂಗ್‍ಕೊಳ್ಳೋ ಪ್ರಮೋದನ ಕನಸು, ನಮ್ಮ ಬ್ಯಾಚ್‍ನಲ್ಲಿ ಅಷ್ಟೋಂದ್ ಜನ ಚಿಕ್ ಮಕ್ಳು ಇದ್ದಾರೆ ಅಂತ ಗೊತ್ತಾದಾಗ್ಲೇ ಭಗ್ನವಾಗಿ ಹೋಯ್ತು. ಹೌದು, ನಮ್ಮ ಬ್ಯಾಚ್‍ನಲ್ಲಿ ಚಿಕ್ ಮಕ್ಳಿದ್ರು. ಸಣ್ಣ ವಯಸ್ಸಿನ, ಒಮ್ಮೆಯೂ ಟ್ರೆಕ್ ಮಾಡಿರದವರಿದ್ರು. ಮೊದಲನೇ ಬ್ಯಾಚಿಗೆ ಪ್ರೀಪೋನ್ ಮಾಡ್ಕೊಳ್ಳೋ ಎಲ್ಲಾ ಪ್ಲಾನುಗಳೂ, ಮಿಥುನ ಕಾಲು ಉಳುಕಿಸುಕೊಳ್ಳೋದ್ರೊಂದಿಗೆ ಡ್ರಾಪ್ ಆದವು. ಆನ್ ದಿ ಪಾಸಿಟೀವ್ ಸೈಡ್, ’ಅವ್ರಿಗೇ ಆಗೋದಾದ್ರೆ, ನಮ್ಗೇನು ಕಷ್ಟ?’ ಅಂತ ನಾವು ಕಾನ್ಫಿಡೆನ್ಸ್ ತಗೊಂಡು ಸಮಾಧಾನ ಮಾಡ್ಕೊಬೇಕಾಯ್ತು.
ಮುಂದುವರೆಯುತ್ತದೆ...
Feb 17, 2008
ಎತ್ತಿನ ಭುಜ
ಪ್ಲಾನ್ ಮಾಡಿದ್ದೇನೋ ಬಂಡಾಜೆ ಫಾಲ್ಸಿಗೆ. ಆದರೆ ಅದು ನಕ್ಸಲ್ ಪೀಡಿತ ಪ್ರದೇಶವಾದ್ದರಿಂದ ಕ್ಯಾನ್ಸಲ್ ಆಗಿ ನಮ್ಮ ಡೆಸ್ಟಿನೇಶನ್ ಪಶ್ಚಿಮ ಘಟ್ಟದ ಯಾವ್ಯಾವುದೋ ತಾಣಗಳನ್ನು ತಾಗಿ, ಕೊನೆಗೆ ಬಂದು ಜೋತಿದ್ದು ’ಎತ್ತಿನ ಭುಜ’ಕ್ಕೆ. ಎತ್ತಿನ ಭುಜಕ್ಕೆ ಎಲ್ಲರೂ ಒಪ್ಪಲು ಎರೆಡು ಕಾರಣ - ಅಮೇತಿಕಲ್ ಹತ್ತುವಾಗ ಅದನ್ನ ನೋಡಿ ಪರಿಚಯವಿದ್ದದ್ದು ಮತ್ತು ಗೋಪು ಗೋಖಲೆಯವರ ಮನೆಯ ಊಟದ ನನೆಪಾದದ್ದು :)
ಒಂದಾನೊಂದು ಕಾಲದಲ್ಲಿ, ನಾವೆಲ್ಲರೂ ಒಂದೇ ಕಂಪೆನಿಯಲ್ಲಿದ್ದುದರಿಂದ, coordination ಅಷ್ಟು ಕಷ್ಟ ಆಗ್ತಿರ್ಲಿಲ್ಲ. ಆದರೀಗ ಕೆಲವರಲ್ಲಿ - ಕೆಲವರಿಲ್ಲಿ. ಜಿ-ಮೈಲ್ ಕಾನ್ವರ್ಸೇಷನ್ಸ್ 50 ನ್ನು ಮೀರಿತ್ತು. ನಮ್ಮ ತಯಾರಿಯ ಮುಖ್ಯ ಅಂಶಗಳೆಂದರೆ ಟೆಂಟು, ಸ್ಲೀಪಿಂಗ್ ಬ್ಯಾಗ್ಸ್ ಮತ್ತು ಹಣ್ಣು ತಿಂಡಿ ತಿನಿಸು. ಈ ಎಲ್ಲಾ ಜವಾಬ್ದಾರಿಗಳೂ ಹಿಂದಿನ ಟ್ರೆಕ್ಕುಗಳಿಂದ inherit ಆದಂತಾಗಿ, ನಾನು ಕೈಬೀಸಿಕೊಂಡು ಹೋಗುವುದಷ್ಟೇ ಬಾಕಿ ಇದ್ದುದು.
ಅಮೇದಿಕಲ್ ಟ್ರೆಕ್ ಮುಗಿಸಿ ಹಿಂತಿರುಗುವಾಗ, ಪ್ರಮೋದನ ಜೊತೆ ಚರ್ಚಿಸುತ್ತಿದ್ದೆ: Lot of things could have gone wrong. ಯಾರಿಗಾದರೂ ಪೆಟ್ಟಾಗಿಯೋ ಏನೊ ಫ್ರಾಕ್ಚರ್ ಆಗಿದ್ದರೆ, ಹತ್ತುವಾಗ ಅಥವಾ ಶಿಖರದಲ್ಲಿ ಉಸಿರಾಟದ ತೊಂದರೆಯಾಗಿದ್ದರೆ, ಯಾವುದಾದರೂ ಕಾಡು ಮೃಗ ಎದುರಾಗಿದ್ದರೆ, ವಿಪರೀತದ ಸಂಧರ್ಭವೆಂದರೆ ಹಾವು ಕಚ್ಚಿದ್ದರೆ, ಜೇನುಗಳು ಕಚ್ಚಿದ್ದರೆ, ಅದೆಷ್ಟೋಂದು ಸಾಧ್ಯತೆಗಳನ್ನು ನಾವು ನಿರ್ಲಕ್ಷಿಸಿ ಚಾರಣಕ್ಕೆ ಮುಂದಾಗುತ್ತೇವೆ! ನಮ್ಮ ತಯಾರಿಗಳು ಅದೆಷ್ಟು ಅಪರಿಪೂರ್ಣ ಮತ್ತು ಅಪಕ್ವ ಎನಿಸಿತ್ತು.
ಈ ಹಿನ್ನೆಲೆಯಲ್ಲಿ, ಮತ್ತೆ ಟ್ರೆಕ್ಕಿಂಗ್ ಎಂದಾಗ, ಸಹಜವಾಗಿಯೇ, ಹಿಂಜರಿಕೆಯಿತ್ತು. ರಾತ್ರಿ ಬಸ್‍ನಲ್ಲಿ ಹೋಗುವಾಗ ಕೃಷ್ಣ ಜಿಮ್ ಕರ್ಬೆಟ್‍ನ ಹತ್ತಾರು ನರಭಕ್ಷಕ ಹುಲಿ ಚಿರತೆಗಳ ಕಥೆಗಳನ್ನು ವರ್ಣಿಸಿ ಹೇಳಿದ್ದು, ಸತೀಶ ತನ್ನೂರಿನ ಕಾಡಿನ ಕಥೆಗಳನ್ನು ಹೇಳಿದ್ದು, ಯಾಕೋ ನನ್ನಲ್ಲಿ ಸ್ವಲ್ಪ ಹೆಚ್ಚಾಗಿಯೇ ಭಯ ಹುಟ್ಟಿಸಿತ್ತು. ನಡು ರಾತ್ರಿ ಚಾರ್ಮಾಡಿ ಘಾಟಿನಲ್ಲಿ ಸಾಗುವಾಗೊಮ್ಮೆ ಎಲ್ಲವೂ ಕಣ್ಮುಂದೆ ಬಂದಂತಾಗಿ ಎಚ್ಚರಾಗಿ, ಮುಂಜಾನೆ ಧರ್ಮಸ್ಥಳದಲ್ಲಿ ಏನಾದರೂ ಕಾರಣ ಹೇಳಿ ಎಸ್ಕೇಪ್ ಆಗುವ ಯೋಜನೆಗಳ ಬಗ್ಗೆಯೂ ಚಿಂತಿಸಿದ್ದೆ. ಆದರೆ ಗೈಡ್ ಇದ್ದುದುದರಿಂದ, ಶಿಖರದ ಅತ್ತ ಬದಿಯಲ್ಲಿ 2 ಕಿ.ಮಿ. ದೂರದಲ್ಲೆ ಊರೊಂದು ಇದ್ದುದುರಿಂದ ಮತ್ತು ಹಿಂತಿರುಗಿದರೆ ಪರ್ಮನೆಂಟಾಗಿ ಪುಕ್ಕಲನೆಂಬ ಬಿರುದು ಬರಬಹುದಾದ ಸಾಧ್ಯತೆಗಳಿದ್ದರಿಂದ... ಚಾರಣಕ್ಕೆ ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಿದ್ದೆ.
ಹಿಂದಿನ ಟ್ರೆಕ್ಕಿನಂತೆ, ಮತ್ತೆ ಸಾಕೇತದಲ್ಲಿ ರೂಂ ಪಡೆದು ಫ್ರೆಶ್ ಆಗಿ ಮಂಜುನಾಥನ ದರ್ಶನ ಪಡೆದು ಚಾರಣವನ್ನು ಮೊದಲುಮಾಡಿದೆವು. ಆದರೆ ಈ ಬಾರಿ ಶಿಶಿಲಕ್ಕೆ ಹೋಗುವ ಜೀಪಿನಲ್ಲಿ ಹತ್ತು ಮಂದಿ ’ಹಿಡಿ’ಯಬೇಕಾಗಿತ್ತು. ನಾನು ಅಕ್ಷರಷಃ ’ಡ್ರೈವರ್ ಸೀಟಿ’ನಲ್ಲಿ. ಡ್ರೈವರ್ ನನ್ನ ಬಲ ಮಗ್ಗುಲಲ್ಲಿ ಜೀಪಿನ ಹೊರಗೆ ವಾಲಿಕೊಂಡು, ತನ್ನ ಕಲ್ಗಳೆರೆಡನ್ನು ಹೇಗೋ ಬ್ರೇಕು ಕ್ಲಚ್ಚು ಆಕ್ಸಲರೇಟರ್‍ಗಳ ಮೇಲಿಟ್ಟು ಓಡಿಸುತ್ತಿದ್ದ. ಗೇರ್ ಬದಲಾಯಿಸುವುದೋ - ಕತ್ತಲಲ್ಲಿ ಏನನ್ನೊ ತಡಕಾಡಿ ಅತ್ತಿಂದಿತ್ತ ಸರಿಸಿದಂತೆ! ಎನಿವೇ, ಈ ದೃಶ್ಯವನ್ನು ಕಂಡು ಯಾರೂ ಹುಬ್ಬೇರಿಸಿದಂತೆ ಕಾಣಿಲಿಲ್ಲ. ಇಲ್ಲಿ ಇದು ಸರ್ವೇ ಸಮಾನ್ಯ ಎನಿಸುತ್ತದೆ.
ಶಿಶಿಲದಲ್ಲಿ ಈ ಬಾರಿಯೂ, ಚೆನ್ನಪ್ಪಣ್ಣನವರು ನಮ್ಮ ಗೈಡ್ ಆಗಿ ನಮ್ಮ ಜೊತೆಗಾದರು. ಬೆಳಗಿನ ತಿಂಡಿ ಅದ್ಯಾವುದೋ ಡಬ್ಬಾ ಹೋಟೆಲಿನಲ್ಲಿ ಸರಿ ಹೋಗದೇ ಇದ್ದುದರಿಂದ, ಗೋಪು ಗೋಖಲೆಯವರ ಮನೆಯಲ್ಲಿ ಊಟ ಮುಗಿಸಿ ಚಾರಣ ಆರಂಭಿಸುವ ವಿಚಾರ ಕೆಲವರಿಗೆ! ಅಂತೂ ಇಂತೂ ಚಾರಣದ ಟ್ರೈಲ್ ತಲುಪುವಷ್ಟರಲ್ಲಿ ಸುಮಾರು ಹನ್ನೆರೆಡೂವರೆ! ಅದೇನೋ ಏನೋ, ವರ್ಷದ ಈ ವೇಳೆಗಾಗಲೆ, ಬಿಸಿಲಿಗೆ ರಸ್ತೆಯ ಮಣ್ಣು ಪೂರ್ತಿ ಶುಷ್ಕವಾಗಿತ್ತು. ಜೀಪ್ ಇಳಿಯುವಷ್ಟರಲ್ಲಿ ಎಲ್ಲರ ಮೈಮೇಲೆ ಎರೆಡಿಂಚು ಧೂಳು! ಚಾರಣದ ಫೋಟೋಗಳನ್ನು ನೋಡಿ - "ಏನೋ, ಕೂದಲಿಗೆ ಕಾಪರ್ ಬ್ಲೀಚ್ ಮಾಡುಸ್ಕೊಂಡಾ?" ಅಂತ ಕೇಳಿಸಿಕೊಳ್ಳುವಷ್ಟು! ಚೆನ್ನಪ್ಪಣ್ಣನವರ ಪರಿಚಯದವರ ಮನೆಯಲ್ಲಿ ಚಾರಣಕ್ಕೆ ಬೇಕಿಲ್ಲದ ಬಟ್ಟೆ ಸರಕುಗಳನ್ನು ಇಳಿಸಿದೆವು. 7 kg ಇದ್ದುದರಿಂದ, ಚೆನ್ನಪ್ಪಣ್ಣನವರ ಸಲಹೆಯ ಮೇರೆಗೆ, ಟೆಂಟುಗಳನ್ನೂ ಅಲ್ಲೇ ಇಳಿಸಿದೆವು.
ಟ್ರೈಲಿನ ಆದಿಯಲ್ಲೇ ನದಿಯನ್ನು ದಾಟಬೇಕು. ನದಿಯು ಆ ಬದಿಯ ತಿರುವಿನಲ್ಲಿ ಕಣಿವೆಯಿಂದ ಹರಿದು ಬಂದು ಈ ಬದಿಯಲ್ಲಿ ಮತ್ತೊಂದು ತಿರುವು ಪಡೆದು ಸಾಗುವ ದೃಶ್ಯ ಮನೋಹರವಾಗಿತ್ತು. ಹರಿವಿನಲ್ಲಿ ಕೊಂಚ ರಭಸವಿದ್ದುದ್ದರಿಂದ, ಸಣ್ಣ ಉರುಟುಕಲ್ಲುಗಳ ಮೇಲೆ ಹರಿಯುತ್ತಿದ್ದುದ್ದರಿಂದ ಮತ್ತು ಬದಿಯ ಮರಗಳು ಕೋನಿಫೆರಸ್ ಮರಗಳಂತೆ ಕಾಣುತ್ತಿದ್ದರಿಂದ, ಹಿಮಾಲಯದ ತಪ್ಪಲಿನ ಯಾವುದೊ ಕಣಿವೆಗೆ ಬಂದಂತಾಗಿತ್ತು! ಅಲ್ಲೇ ಸ್ವಲ್ಪ ವಿರಮಿಸಿಕೊಂಡು, ಚೆನ್ನಾಗಿ ನೀರು ಕುಡಿದು, ಬಾಟಲಿಗಳನ್ನು ತುಂಬಿಸಿಕೊಂಡು ಮುಂದುವರಿದೆವು. ಇದು ಅಮೇತಿಕಲ್‍ನಷ್ಟು ಕಷ್ಟ ಇರುವುದಿಲ್ಲ ಅಂತ ತಿಳಿದಿದ್ದರಿಂದ ಮಾನಸಿಕವಾಗಿ ಎಲ್ಲರೂ ಉತ್ಸಾಹದಿಂದ ಮುನ್ನಡೆಯುತ್ತಿದ್ದೆವು. ಅಷ್ಟಾಗಿ ಕಡಿದಾಗಿಯೂ ಇರದಿದ್ದರಿಂದ ಸುಸ್ತಾಗಲಿಲ್ಲ. ಒಣಗಿದ ಎಲೆಗಳ ಮೇಲೆ ಚರಕ್ ಪರಕ್ ಅಂತ ಸದ್ದು ಮಾಡಿಕೊಂಡು, ಗಿಡ-ಕೊಂಬೆಗಳನ್ನು ಸರಿಸಿಕೊಂಡು, ಎಲ್ಲೋ ಹರಿವ ತೊರೆಯ ಸದ್ದಿನಲ್ಲಿ, ಕಾಡಿನ ನಿಶ್ಯಬ್ಧದಲ್ಲಿ, ಏದುಸುರಿನಲ್ಲಿ, ಆಯಾಸದಲ್ಲಿ ಹೆಜ್ಜೆಗಳು ಸಾಗಿದ್ದವು.
ಎತ್ತಿನ ಭುಜದಲ್ಲಿ, ದಾರಿ ಕಡಿದಾಗಿರದೇ ಇರಬಹುದು, ಆದರೆ ನಡೆವ ದಾರಿ ಸಾಕಷ್ಟಿತ್ತು. ಹಾಗೂ ಬಹುತೇಕ ಭಾಗ ಕಾಡಾಗಿದ್ದುದರಿಂದ, ಆರ್ದ್ರತೆ ಹೆಚ್ಚಿದ್ದುದರಿಂದ ಕೆಲವರಿಗೆ ತುಸು ಹೆಚ್ಚೇ ಆಯಾಸವಾಗಿ ನಾವು ಅನೇಕ ಬಾರಿ ನಿಂತು ನಡೆಯಬೇಕಾಯಿತು [ನವೀನನಂತೂ, ಅಷ್ಟು ಹೊತ್ತು ಮಾತನಾಡುತ್ತಿದ್ದವನು ಸುಮ್ಮನಾಗಿಬಿಟ್ಟಿದ್ದ]. ಇದರಿಂದ ನಡಿಗೆಯ ಒಟ್ಟಾರೆ ಗತಿಯು ತಗ್ಗಿ, ಸಮಯಾಭಾವ ಕಾಣಿಸಿತು. ಚೆನ್ನಪ್ಪಣ್ಣನವರು "ಇನ್ನೇನು ಅರ್ಧ ಘಂಟೆ", "ಒಂದು ಘಂಟೆ" ಎಂದು, ಒಂದು ಘಂಟೆಯ ನಂತರವೂ ಮತ್ತರ್ಧ ಘಂಟೆ ಎನ್ನುತ್ತಿದ್ದರು. ಚೆನ್ನಪ್ಪಣ್ಣನವರ ಉದ್ದೇಶ ನಮ್ಮನ್ನು ’ಇನ್ನೆನು ಬಂತು’ ಎಂಬಂತೆ ಉತ್ತೇಜಿಸುವುದಷ್ಟೇ ಆಗಿದ್ದರೂ, ಮುಂದಿನ ಸಮಯದ ಒಂದು ಸರಿಯಾದ ಅಳತೆ ಸಿಗದೆ ಸ್ವಲ್ಪ ಕಸಿವಿಸಿಯಾಯಿತು. ಆದರೆ ಬಹುತೇಕೆ ಕಾಡನ್ನು ಕ್ರಮಿಸಿಯಾಗಿ, ಮೇಲಿನ ಬಯಲು ಸಿಕ್ಕಿದ್ದರಿಂದ, ಎತ್ತಿನ ಭುಜ ನಮ್ಮ ಕಣ್ ಮುಂದೆಯೇ ಇದ್ದುದರಿಂದ ಸ್ವಲ್ಪ ನಿರಾಳವೆನಿಸಿತ್ತು. ದಾರಿಯ ಕೊನೆಯ ಕಾಡಿನ ಸ್ಟ್ರೆಚ್ಚಿನ ಆದಿಯಲ್ಲಿ ಒಂದು ಸುಧೀರ್ಘ ವಿಶ್ರಾಂತಿ ಪಡೆದು ಮುಂದುವರೆದು ಶಿಖರದ ಕೆಳಗಿನ ಸಣ್ಣ ಬಯಲು ತಲುಪುವಷ್ಟರಲ್ಲಿ ಸೂರ್ಯಾಸ್ತದ ಸಮಯವಾಗಿತ್ತು.
ಚೆನ್ನಪ್ಪಣ್ಣನವರು ನೀರು ತರಹೋದರು. ನಾವು ಬ್ಯಾಗನ್ನಿಳಿಸಿ ಕ್ಯಾಮೆರಾ ಹಿಡಿದು ಮೇಲೋಡಿದೆವು. ದಿಗಂತದಲಿ ಸರಸರನೆ ಇಳಿಯುತ್ತಿದ್ದ ರವಿ - ಮುಂದಿನ ಕ್ಷಣಕ್ಕೆ ಮತ್ತಷ್ಟು ತಂಪಾಗಿ ಕೆಂಪಾಗಿ. ಕೆಳಗೆ ಹೊಳೆಯುವ ಒಂದು ಬೆಳ್ಳಿ ರೇಖೆ. ಅದೇ ಕಪಿಲಾ ನದಿ.. ಕಣಿವೆಗಳ ನಡುವೆ. ದಿಗಂತದಿಂದ ನೆತ್ತಿಯ ನೀಲಿಯವರೆಗೆ ಹಳದಿ ಕೆಂಪು ನಸುಗೆಂಪು ನೇರಳೆಗಳ ವರ್ಣಪಂಕ್ತಿಯ ನಿರಂತತೆ (continuum). ಬಾನಲ್ಲಿ ಕರಗುತ್ತಿರುವ ಬೆಳಕಿನ ಪರದೆಯ ಹಿಂದೆ ಅಸಂಖ್ಯ ತಾರೆ! ಕತ್ತಲಾಗುತ್ತಿದ್ದಂತೆ ಮತ್ತಷ್ಟು ಸ್ಪಷ್ಟ. ಇಡೀ ಬಾನು ದೇದೀಪ್ಯಮಾನವಾಗಿತ್ತು. ಆ ದೃಶ್ಯ ವರ್ಣಿಸಲಾಗದ್ದು. ನೆಲಕ್ಕೆ ಬೆನ್ನು ಹಾಕಿ, ಆಕಾಶ ದಿಟ್ಟಿಸುತ್ತಾ, ಅದು ಆ ಕಾನ್ಸ್ಟಲ್ಲೇಷನ್, ನೆಬುಲ್ಲ ಅಂತ ನಮ್ಮ ಹತ್ತನೆ ತರಗತಿಯ ಆಸ್ಟ್ರೊ-ಫಿಸಿಕ್ಸ್ ತರಗತಿಗಳನ್ನು ಮೆಲುಕಿದೆವು.
ಭುವಿಯಲ್ಲಿ ಸುತ್ತೆಲ್ಲ ಕಪ್ಪು ಕಾಡು ಹೊದ್ದ ಗಿರಿಪಂಕ್ತಿ. ಅಲ್ಲೊ ಇಲ್ಲೋ ಕಾಣುತ್ತಿದ್ದ ಬೆಳಕಿನ ತುಣುಕುಗಳು - ಅವು ಊರುಗಳು. ಅದೋ ಶಿಶಿಲ, ಅದೋ ಮೂಡಿಗೆರೆ, ಅದೋ ಕೊಟ್ಟಿಗೆಹಾರ ಎಂದು ಚೆನ್ನಪ್ಪಣ್ಣ ಗುರುತಿಸಿ ತೋರಿಸಿದರು. ನನಗೆ ಚಾರ್ಮಾಡಿ ಘಾಟಿನಲ್ಲಿ ಪಯಣಿಸಬೇಕೆಂಬ ಹಂಬಲ ಬಹಳ ಹಿಂದಿನದು. ನನ್ನಮ್ಮ ಅದೊಮ್ಮೆ ಆ ಘಾಟಿನಲ್ಲಿ ಸಾಗಿದ್ದ ತಮ್ಮ ಪಯಣವನ್ನು ವರ್ಣಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ - ಒಂದೇ ಬಸ್ಸು ಹೋಗಬಹುದಾದಂಥ ದಾರಿ; ಕಡಿದಾದುದು. ಅತ್ತ ನೋಡಿದರೆ ಕಂದರ. ೧೮೦ ಡಿಗ್ರಿಗಿಂತ ಹೆಚ್ಚಿನ ಘಾಟಿನ ತಿರುವುಗಳು. ಸಂಜೆಗೆ ಒಮ್ಮೆಗೆ ಶುರುವಾದ ಮಳೆಗೆ ಬಸ್ಸು ಹೆಡ್‍ಲೈಟ್ ಬಿಟ್ಟುಕೊಂಡು ನಿಂತದ್ದು.. ಇತ್ಯಾದಿ.
ಟ್ರೈಪಾಡ್ ಇಲ್ಲದಿದ್ದುದರಿಂದ ಆ ಮಬ್ಬುಗತ್ತಲಿನಲ್ಲಿ ಚಿತ್ರ ಸೆರೆಹಿಡಿಯಲಾಗಲಿಲ್ಲ :( ಚೆನ್ನಪ್ಪಣ್ಣನವರು ಸೌದೆ ಕಟ್ಟುಗಳನ್ನು ಒಗ್ಗೂಡಿಸಿ ಕ್ಯಾಂಪ್-ಫೈರ್ ಸಿಧ್ಧಮಾಡಿದ್ದರು. ಮಸಾಲಾ ಬ್ರೆಡ್ದು, ಕೇಕು, ಕರದಂಟು (?), ಖರ್ಜೂರ, ಒಬ್ಬಟ್ಟು ಮತ್ತಿನ್ನಷ್ಟು ತಿಂದು, ’ಚಪ್ಪ ಚಪ್ಪ ಚರಕ ಚಲೇ’ ಅಂತ ಬೆಂಕಿಯ ಸುತ್ತ ಸುತ್ತುತ್ತಾ ಕುಣಿಯುವಷ್ಟರಲ್ಲಿ ರಾತ್ರಿ ೮ ಆಗಿತ್ತು. ಅಲ್ಲಿಗೆ ಬಂದಿದ್ದ ಹತ್ತಿರದ ಊರಿನ ಮತ್ತೊಬ್ಬರು - ಗಾಳಿ ರಾತ್ರಿ ವಿಪರೀತ ಗತಿಯಲ್ಲಿ ಬೀಸುವುದಿದ್ದರಿಂದ ಕಾಡಿನಲ್ಲಿ ಅಥವಾ 2 ಕಿಮಿ ದೂರದ ದೇಗುಲದ ಕಾಂಪೌಂಡಿನಲ್ಲಿ ಮಲಗುವಂತೆ ಹೇಳಿದರು. ಕಾಡಿನಲ್ಲಿ?! ನೋ ಚಾನ್ಸ್. ೨ ಕಿಮಿ ಈ ಕತ್ತಲಲ್ಲಿ ಹೋಗುವುದು? ನೋ ಚಾನ್ಸ್ ಅಂತ ಅಲ್ಲೇ ಮಲಗುವುದಾಗಿ ನಿರ್ಧಾರವಾಗಿ ಸ್ಲೀಪಿಂಗ್ ಬ್ಯಾಗ್ ಹರಡಿಕೊಳ್ಳುವಾಗ ನಮಗೊಂದು ಸರ್ಪ್ರೈಸ್ ಕಾದಿತ್ತು. ಸ್ಲೀಪಿಂಗ್ ಬ್ಯಾಗ್‍ಗಳು ಸಾಕಷ್ಟು ಉದ್ದವಿರಲಿಲ್ಲ ಹಾಗೂ ಅವು ಸಂಪೂರ್ಣವಾಗಿ ದೇಹವನ್ನು ಮುಚ್ಚುವಂಥವುಗಳೂ ಆಗಿರಲಿಲ್ಲ. ಅಲ್ಲದೆ ಕೆಲವು ಬ್ಯಾಗ್‍ಗಳಲ್ಲಿ ತೂತಾಗಿದ್ದವು!
ನಾವು ಮಲಗಲು ಆಯ್ದುಕೊಂಡ ಜಾಗ ಅಷ್ಟೇನೂ ಸಮತಟ್ಟಾಗಿರಲಿಲ್ಲ. ಸ್ವಲ್ಪ ಹೊತ್ತಿಗೇ ಮೈ ಕೈ ನೋಯಲು ಶುರುವಾಯ್ತು. ಉದ್ದ ಸಾಲದೆ, ಮಂಡಿ ಮಡಚಿ, ಒಂದೇ ಬದಿಗೆ ಮಲಗಿ, ಸ್ಲೀಪಿಂಗ್ ಬ್ಯಾಗಿನ ಹೆಡ್ ರೆಸ್ಟನ್ನ ಆತ್ತಿತ್ತ ಎಳೆದುಕೊಂಡು ಸುತ್ತಿಕೊಂಡು ಮಲಗಿದರೂ, ಮೂರು ತಾಸಿಗಿಂತ ಹೆಚ್ಚು ನಿದ್ದೆಯಾಗಲಿಲ್ಲ! ಎಚ್ಚರಾದಾಗ ಮಧ್ಯರಾತ್ರಿ. ವಿಪರೀತ ಅಥವಾ ಪ್ರಚಂಡ ಎಂಬ ವಿಶೇಷಣಗಳು ಸಾಲುವುದಿಲ್ಲವೇನೋ. ಗಾಳಿ ರೊಯ್ಯನೆ ಬೆಟ್ಟವನ್ನೇ ಬುಡಮೇಲು ಮಾಡುವಂತೆ ಬೀಸುತ್ತಿತ್ತು! ಅಷ್ಟು ಹೊತ್ತಿಗಾಗಲೇ ಸತೀಶ ಮತ್ತು ಚೆನ್ನಪ್ಪಣ್ಣ ಎದ್ದು ಕ್ಯಾಂಪ್-ಫೈರ್ ಪಕ್ಕ ಕೂತುಬಿಟ್ಟಿದ್ದರು. ನಾನೂ ಅವರನ್ನು ಕೂಡಿಕೊಂಡು ಬೆಂಕಿಯ ಕೆನ್ನಾಲಿಗೆಗೆ ಮೈ ಒಡ್ಡಿ ಕೂತೆ. ಗಾಳಿಯ ಶಬ್ಧಕ್ಕೆ ಬೆಂಕಿಯ ಫಟ ಫಟಿಸುವಿಕೆಯಾಗಲಿ, ಸೌದೆಯ ಚಿಟ್ ಪಿಟ್ ಏನು, ಪಕ್ಕದಲ್ಲಿ ಕೂಗಿದರೂ ಕೇಳುತ್ತಿರಲಿಲ್ಲ. ಒಬ್ಬರು ಎದ್ದದ್ದುದನ್ನು ಕಂಡು ಮತ್ತೊಬ್ಬರು ಎಂಬಂತೆ ಒಬ್ಬೊಬ್ಬರಾಗಿ ಎಲ್ಲರೂ ಎದ್ದು ಬಂದರು. ಯಾರಿಗೂ ಸರಿಯಾಗಿ ನಿದ್ದೆಯಾಗಿರಲಿಲ್ಲ. ನಾರಾ, ರಾಜಸ್ತಾದ ಛಳಿಯ ಬಗ್ಗೆ ಹೇಳಹತ್ತಿದ. ಹೀಗೆ ಹರಟೆ ಎಲ್ಲಿಂದೆಲ್ಲಿಗೋ ಹೋಗಿ ಮಾತು ಸಾಕಾಗಿ, ಎಲ್ಲರೂ ದಿಗಂತದಲ್ಲಿ ಸೂರ್ಯನ ಬೆಳಕಿಗಾಗಿ ಕಾಯತೊಡಗಿದೆವು. ಮುಂಜಾನೆಯ ಬೆಳಕಿಗಾಗಿ ಕಾದದ್ದು ಅದೇ ಮೊದಲು :D
ಸೂರ್ಯೋದಯಕ್ಕೆ ಸುಮಾರು ಒಂದು ಘಂಟೆ ಮುಂಚೆಯೇ ನಾವು ಶಿಖರದೆಡೆಗೆ ಹೊರಟೆವು. ’ಭುಜ’ವನ್ನು ಹತ್ತುವ ದಾರಿ ಕಡಿದಾದ ಬಂಡೆ ಕಲ್ಲುಗಳಿಂದ ಕೂಡಿದುದರಿಂದ ಒಂದಷ್ಟು ರಾಕ್ ಕ್ಲೈಂಬಿಂಗ್ ಮಾಡಬೇಕು. ಆ ಗಾಳಿಯಲ್ಲಿ ಹತ್ತುವುದು ಅಪಾಯಕಾರಿಯಾದ್ದರಿಂದ ರಭಸ ಒಂದಿಷ್ಟು ತಗ್ಗುವವರೆಗೂ ಕಾದು ಶಿಖರ ಏರಿದೆವು !! ಸುತ್ತಲೂ, ಚಾರ್ಮಾಡಿ ಪರ್ವತ ಶ್ರೇಣಿ ಅಲೆ ಅಲೆಯಲೆಯಾಗಿ ಹರಡಿಕೊಂಡಿರುವ ದೃಶ್ಯವನ್ನು ಕಣ್ತುಂಬಿಕೊಳ್ಳುವ ಹೊತ್ತಿಗಾಗಲೇ, ಪೂರ್ವದ ಗಿರಿಸಾಲಿನ ಅಂಚಿನಲ್ಲಿ ಬೆಳ್ಳನೆ ಪ್ರಭಾವಳಿ ಕಾಣುತ್ತಿತ್ತು! ಒಂದಷ್ಟು ಬಾನುಲಿಗಳು ಸುತ್ತುತ್ತಿದ್ದವು. ಕಾಡು, ಕ್ರಮೇಣ ತನ್ನ ಕಪ್ಪನ್ನು ಜಡಿದು ಹಸಿರು ಬಣ್ಣ ತಾಳುತ್ತಿತ್ತು. ಚುಕ್ಕೆಗಳೆಲ್ಲ ಮರೆಯಾಗುತ್ತಾ, ದಿಗಂತ ನೆನ್ನೆಯ ಸಂಜೆಯಂತೆ ಮತ್ತೆ ಕೆಂಪಾಗಿತ್ತು. ಅವನ ಕಣ್ಮರೆಯ ಉಪಸ್ಥಿತಿಯಲ್ಲೂ, ಜೀವಗಳಲ್ಲಿ ಚೈತನ್ಯ ಸಂಚಾರ! ದಿನಕರ ದಿನದ ಕೀಲಿಕೈ ಹಿಡಿದು ಆ ಶಿಖರದಲ್ಲಿ ಹೊಳೆವಾಗ, ಬರೀ ರೋಮಾಂಚನವಾಯಿತೆಂದರೆ ಅದು ನ್ಯೂನೋಕ್ತಿ! ಪ್ರತಿ ಸೂರ್ಯೋದಯವೂ ಸೂರ್ಯಾಸ್ತವೂ ಒಂದು ವಿಸ್ಮಯ. ಅದನ್ನು ಕಾಡಿನ ನಡುವೆ, ಬೆಟ್ಟದ ಮೇಲೆ ನೋಡುವ ಸೊಬಗೇ ಬೇರೆ!
Jul 4, 2007
ಅಮೇತಿಕಲ್ ಪರ್ವತಾರೋಹಣ
ಈ ಬಾರಿ ನಾವು ಹೊರಟದ್ದು - ಧರ್ಮಸ್ಥಳದ ಹತ್ತಿರದ, ಶಿಶಿಲದ ಬಳಿಯ ಚಾರ್ಮಾಡಿ, ಶಿರಾಡಿ ಶ್ರೇಣಿಗಳ ಮದ್ಯದಲ್ಲಿರುವ ಅಮೇತಿಕಲ್ ಪರ್ವತಕ್ಕೆ.
ಶನಿವಾರ ಹತ್ತಿ, ರಾತ್ರಿ ಶಿಖರದಲ್ಲೇ ತಂಗಿ, ಮುಂಜಾನೆ ಇಳಿದು, ಸಂಜೆ ಬೆಂಗಳೂರಿಗೆ ಹಿಂದಿರುಗುವ ಪ್ಲಾನ್. ಟೆಂಟ್ ಮತ್ತು ಸ್ಲೀಪಿಂಗ್ ಬ್ಯಾಗ್‌ಗಳ ವ್ಯವಸ್ಥೆ ಬೆಂಗಳೂರಿನಿಂದಲೇ; ಮಾರ್ಗದರ್ಶನಕ್ಕಾಗಿ ಸ್ಥಳೀಯ ಗೈಡ್. ಶುಕ್ರವಾರ ರಾತ್ರಿ ಸರ್ಕಾರಿ ಬಸ್ಸಲ್ಲಿ ಪ್ರಯಾಣ.
ಕಣ್ಬಿಟ್ಟಾಗ ಮುಂಜಾನೆ ಆರು. ಆಗಲೇ ರವಿ ತನ್ನ ಪ್ರಖರತೆ ತೋರುತ್ತಿದ್ದ. ಬಸ್ಸು ಹೈವೇಯಿಂದಿಳಿದು, ರೊಯ್ಯನೆ ಕಾಡಿನ ನಡುವೆ ಏರಿ ಇಳಿದು ಸುತ್ತುತ್ತಾ ಧರ್ಮಸ್ಥಳದ ಕಡೆಗೆ ಸಾಗಿದೆ. ಸುತ್ತೆಲ್ಲ ವನಸಿರಿ - ಹಸಿರು - ಅಹ್ಲಾದಕರ ಗಾಳಿ. ಮಲೆನಾಡಿನ ಪರಿಸರದಲ್ಲಿ ಶ್ವಾಸ ಸಂಭಂಧಿಗಳಾಗಿ ಒಂದಾಗಿದ್ದೆವು.
‘ಸಾಕೇತ’ದಲ್ಲಿ ಲೋಕಲ್ ಬಾಯ್ ಪ್ರದೀಪ ಆಗಲೇ ರೋಮುಳನ್ನು ಕಾದಿರಿಸಿದ್ದ. ‘ಫ್ರೆಶ್’ ಆಗಿ ದೇವಸ್ಥಾನಕ್ಕೆ ಹೊರಟು ಸೀದಾ ಕ್ಯೂನಲ್ಲಿ ನಿಂತೆವು. ಮುಂಜಾನೆಯಾದುದರಿಂದಲೋ ಏನೋ, ಪ್ರಾಂಗಣದಲ್ಲಿ ಅಷ್ಟಾಗಿ ಹೆಚ್ಚು ಜನರಿದ್ದಂತೆ ಕಾಣಲಿಲ್ಲ. ಭಕ್ತಿಯ ವಾತಾವರಣ; ಅದರಿಂದ ಸುತ್ತೆಲ್ಲ ಒಂದು ಗಾಂಭೀರ್ಯ, ಸ್ಥಬ್ದತೆ, ಉಲ್ಲಾಸ. ಸಾಲಿನಲ್ಲಿ ನಡೆಯುವಾಗ ಅಲ್ಲಲ್ಲಿ ದೊಡ್ಡ ಪರದೆಯಲ್ಲಿ ದೇವರ ದರ್ಶನ. ನಾನಾ ಕಡೆಯಿಂದ ಬಂದಿದ್ದ ಭಕ್ತಾದಿಗಳು - ಮುದುಕರು, ಅಜ್ಜಿಯರು, ಯುವಕರು.. - ನಾನಾ ಕಷ್ಟಗಳು - ಅವನಲ್ಲಿ ಮೊರೆ. ಆ ಪ್ರಶಾಂತ ದೇಗುಲವೇ ಅವರಿಗೆ ಅಭಯ. ಭಕ್ತಿಯೇ ಅವರ ಅರ್ಪಣೆ.
ಅಂಗಳದ ನಡುವಿನಲ್ಲಿದ್ದುದು ಕಲ್ಲು ಮಂಟಪಗಳು ಹಾಗೂ ಅಲ್ಲಿ ರವಿಯ ನೆರಳು ಬೆಳಕಿನ ಆಟ - ಎಲ್ಲರಿಗೂ ತಮ್ಮೂರ ಊರ ನಡುವಿನ ದೇಗುಲ ನೆನಪಿಗೆ ಬರುವಂತೆ. ಮಂತ್ರ ಘೋಷ, ಘಂಟಾನಾದ, ಮಂಗಳಾರತಿಯ ತೇಜದ ವಿಶಿಷ್ಟ ಬೆಳಕಲ್ಲಿ ದರ್ಶನ ಸುಸಾಂಗ. ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಹೊರಬಂದಾಗ ಏನೋ ತೃಪ್ತಿ.
ಜೀಪನ್ನು ಹಿಡಿದು ಹೊರಟೇಬಿಟ್ಟೆವು. ನಮ್ಮ ಗೈಡ್ - ‘ಚೆನ್ನಪ್ಪಣ್ಣ’ನವರು ನಮ್ಮನ್ನು ಶಿಶಿಲದಲ್ಲಿ ಕೂಡಿಕೊಂಡರು. ಚಾರಣದ ಪ್ರಾರಂಭದ ತಾಣ ತಲುಪುವಷ್ಟರಲ್ಲಿ ನೇರ ನೆತ್ತಿಯ ಬಿಸಿಲಿತ್ತು.
* * * *
ಪ್ರಾರಂಭದ ದಾರಿ ತುಸು ಹೆಚ್ಚೇ ಕಡಿದಾಗಿತ್ತು. ೪೫ ಡಿಗ್ರಿಯಷ್ಟು ಇಳಿಜಾರು. ಉಸ್ ಉಸ್ ಎಂದು ಅಲ್ಲಲ್ಲೆ ಕೂತು ನಿಂತು ಕಾಡನ್ನು ದಾಟುವುದರಲ್ಲಿ ನೀರಿನ ಬಾಟಲಿಗಳಾಗಲೇ ಖಾಲಿಯಾಗುವುದರಲ್ಲಿದ್ದವು. ಆರಂಭದ ಕಾಡು ದಾಟಿದ ನಂತರ ಸ್ವಲ್ಪ ಸಮತಟ್ಟಾದ ನೆಲ. ಅಲ್ಲೆ ಮರದ ತಂಪಿನಲ್ಲಿ ಊಟ. ಆ ಜಾಗದಿಂದಲೇ ಅಮೇತಿಕಲ್ ಪರ್ವತದ ತುತ್ತ ತುದಿಯ ಮೂರು ದೊಡ್ಡ ಕಲ್ಲು ಬಂಡೆಗಳು ಕಾಣುತ್ತಿದ್ದವು. ನಮ್ಮ ಗೈಡ್ ಹೇಳಿದಂತೆ, ತುಳುವಿನಲ್ಲಿ ‘ಅಮೇ’ ಅಂದರೆ ಪಾಂಡವರು ಹಾಗೂ ‘ದಿಕ್ಕೆಲು’ ಅಂದರೆ ಒಲೆ. (ಒಂದೊಂದು ಬಂಡೆಯೂ ಸುಮಾರು ಮೀಟರ್‌ಗಳಷ್ಟು ಎತ್ತರ. ಅದನ್ನು ಪಾಂಡವರು ಹೇಗೆ ಬಳಸುತ್ತಿದ್ದರೋ, ದೇವರೇ ಬಲ್ಲ). ಇಷ್ಟು ದೂರದಿಂದ ನೋಡಿದರೂ, ಶಿಖರದೆಡೆಗೆ ಒಂದು ಅಂದಾಜಿನ ಮಾರ್ಗವೂ ಕಾಣದು. ಗೈಡ್ ಇರದಿದ್ದರೆ ಅರ್ಧ್ ದಾರಿಗೇ ವಾಪಸ್ ಬರಬೇಕಾಗಿತ್ತು!
ಬೇಸಿಗೆಯಲ್ಲಿ, ಈ ಮಾರ್ಗದಲ್ಲಿ ನೀರು ಸಿಗುವುದು ಒಂದೇ ಒಂದು ತಾಣದಲ್ಲಿ. ‘ಅದಿನ್ನೆಷ್ಟು ದೂರ?’ ಎಂದು ತಲೆಗೊಂದೆಂಬಂತೆ ಪದೇ ಪದೇ ಗೈಡನ್ನು ಕೇಳಿದೆವು. ಅವರೂ ಸಹ ಎಲ್ಲರಿಗೂ - ‘ಇಲ್ಲೇ’, ‘ಇನ್ನೈದು ನಿಮಿಷ’, ‘ಇನ್ನು ಹತ್ತು ನಿಮಿಷ’ ಎಂದು ಶಾಂತವಾಗಿ ಹೇಳುತ್ತಿದ್ದರು. ಕೊನೆಗೂ ಅಲ್ಲಿ ತಲುಪಿದಾಗ ಹೊಟ್ಟೆ ತುಂಬಾ ಕುಡಿದು ಎಲ್ಲಾ ಬಾಟಲಿಗಳಲ್ಲಿ ನೀರು ತುಂಬಿಸಿಕೊಂಡು ಹೊರಟೆವು. ಮುಂದೆ ಹುಲ್ಲು, ಸಣ್ಣ ಕಲ್ಲು ಬಂಡೆಗಳಿಂದ ಕೂಡಿದ zigzag ದಾರಿ. ಸಾಗುತ್ತಾ ನಿಲ್ಲುತ್ತಾ ಸವಿಯುತ್ತಾ ಕ್ಲಿಕ್ಕಿಸುತ್ತಾ ಮಾತಾಡುತ್ತಾ, ಒಂದು ಏಕಾತನದ (monotonous) ಲಯದಲ್ಲಿ ಹತ್ತುತ್ತಿದ್ದೆವು. ಆದರೆ ಕೃಷ್ಣ ಮಾತ್ರ, ಭಾರವಾದ ಬ್ಯಾಗಿನ ಕಾರಣ, ಬಹಳ ಕಷ್ಟ ಪಡಬೇಕಾಯಿತು.
ಒಂದೆಡೆ 60 ಡಿಗ್ರಿ ಇಳಿಜಾರಿನ ಬಂಡೆ. ಷೂ ಗ್ರಿಪ್ ಚೆನ್ನಾಗಿದ್ದುದರಿಂದ ಯಾರಿಗೂ ಕಷ್ಟವಾಗಲಿಲ್ಲ. ಬಂಡೆ ತೇವವಿದ್ದರಂತೂ ಸಾದ್ಯವೇ ಇಲ್ಲ ಬಿಡಿ. ಮತ್ತೊಂದು ಕಡೆ ತೀರಾ ಇಳಿಜಾರಿನ ಕಲ್ಲುಬಂಡೆಯ ಸಂದು ಗೊಂದುಗಳಲ್ಲಿ ನೂರಾರು ಬಾಳೆ ಗಿಡಗಳು! (ಅಲ್ಲಿ ಒಳಗೊಂದು ನೀರಿನ ಸೆಲೆಯಿತ್ತೆಂದು ಕಾಣುತ್ತದೆ). ನಿಂತು ಒಮ್ಮೆ ಹಿಂದೆ ತಿರುಗಿ ನೋಡಿದರೆ ಪರ್ವತಗಳ ಸಾಲು ಸಾಲೇ ಕಾಣುತ್ತದೆ - ಅದೋ ಎತ್ತಿನ ಭುಜ, ಅದೋ ಹುಲಿ ಮಲೆ ಎಸ್ಟೇಟ್, ಅದೋ ಭತ್ತದ ರಾಶಿ - ಅಲ್ಲಿಂದ ಮೂಡಿಗೆರೆ 3 ಕಿ.ಮೀ. ಅದು ಚಾರ್ಮಾಡಿ ಪರ್ವತ ಶ್ರೇಣಿ. ಇತ್ತ ಶಿರಾಡಿ! ಇಲ್ಲೇ ಹೀಗೆ! ಇನ್ನು ಶಿಖರದಿಂದ?!
ಒಂದೆಡೆ ದೊಡ್ಡ ಬಂಡೆಯ ಅಡಿಯಲ್ಲಿ ನಿಂತೆವು. ಅದು ಟೆಂಟ್ ಮಾಡಬಹುದಾದಂತಹ ಜಾಗ - ರಾತ್ರಿ ತಂಗುವುದಕ್ಕೆ ಒಂದು ಪರ್ಯಾಯ. ಕೃಷ್ಣನಿಗೆ ಹೆಚ್ಚೇ ಬಳಲಿದ್ದ - ‘ಇಲ್ಲೇ ತಂಗುವ’ ಎಂದ. ಕೆಲವರು ಅದನ್ನು ಪುಷ್ಟೀಕರಿಸುತ್ತ ಮುಂಜಾನೆ ಎದ್ದು ಶಿಖಿರಕ್ಕೆ ಹೊಗಿಬರಬಹುದಲ್ಲ - ಎಂದು ಉಪಾಯ ಹೂಡಿದರು. ಶಿಖರ ತಲುಪುವ ವೇಳೆ 5, 6 ಎಂದು ಹಲವಾರು ಬಾರಿ ಪರಿಷ್ಕೃತಗೊಂಡು ಈಗ 6.30 ಆಗುವಂತೆ ಕಾಣುತ್ತಿತ್ತು. ಮೋಡ ಕವಿದು ಮಬ್ಬಾಗಿದೆ. ಮುಂದೆ ಕಡಿದಾದ ಕಾಡು ಬೇರೆ. ಏನಾಗುತ್ತೋ ನೋಡೋಣ; ಮುಂದೆ ಕಷ್ಟವಾದರೆ, ಹಿಂದಿರುಗಿ ಇಲ್ಲೇ ಟೆಂಟ್ ಮಾಡುವ ಸಾದ್ಯತೆ ಇದ್ದೇ ಇದೆಯೆಂದು ಏರಲು ಮುಂದುವರಿದೆವು.
* * * *
ಎಲ್ಲರ ಮನಸ್ಸಿನಲ್ಲೂ, ಆಗ ತಾನೇ ಮೂಡಿದ ಸಂಜೆಗತ್ತಲಿನಿಂದ ಶುರುವಾದ ಒಂದು ಸಣ್ಣ ಭಯ, ಮಾತಾಡದೇ ಬೇಗ ಬೇಗ ಹೆಜ್ಜೆ ಹಾಕುವಂತೆ ಮಾಡಿತು. ಗೈಡ್ ಇದ್ದುದರಿಂದ ಎಲ್ಲರಿಗೂ ಒಂದಿಷ್ಟು ದೈರ್ಯ. ಇಲ್ಲದಿದ್ದರೆ ಆ ಕಾಡನ್ನು ದಾಟುವ ದುಸ್ಸಾಹಸ ಖಂಡಿತಾ ಮಾಡುತ್ತಿರಲಿಲ್ಲ! ಇಳಿಬೆಳಕಿನಲ್ಲಿ, ಒತ್ತೊತ್ತಿನ ವನದಲ್ಲಿ, ಚೀರುವ ನೀರವತೆಯಲ್ಲಿ, ಜೀರುಂಬೆಯೋ ಅಥವಾ ಇನ್ಯಾವುದೋ ಕಾಡು ಜಂತುವಿನ ಶಿಳ್ಳೆಯಲ್ಲಿ, ಮುಳ್ಳಿನ ಗಿಡಗಳಿಂದ ತಪ್ಪಿಸಿಕೊಳ್ಳುತ್ತಾ, ಕೊಂಬೆಗಳನ್ನು ಬಗ್ಗಿಯೋ, ಜಿಗಿದೋ ಸಾಗಿ, ಗಿಡಗಳ ಖಾಂಡವನ್ನೇ ಸಹಾಯವಾಗಿ ಹಿಡಿದೆಳೆದು ಸಾಗುತ್ತಿದ್ದೆವು. ಚೆನ್ನಪ್ಪಣ್ಣನವರು ಮುಂದೆ ಸಾಗುತ್ತಾ, ಅಲ್ಲಲ್ಲೆ, ದಾರಿಗಡ್ಡವಾದುದನ್ನು ತಮ್ಮ ಮಚ್ಚಿನಲ್ಲಿ ಕಡಿಯುತ್ತ, ಅಲ್ಲಲ್ಲಿ ಎಚ್ಚರಿಕೆ ಹೇಳುತ್ತಿದ್ದರು. ನನಗೋ, “ಎಲ್ಲಿದ್ದೀನಪ್ಪಾ!”, ‘ನಾನ್ಯಾಕಾದ್ರೂ ಬಂದ್ನೋ” ಅಂತ ಅನ್ನಿಸ್ತಾ ಇತ್ತು.
ಕಾಡು, ಬೆಟ್ಟದ ತುದಿಯ ಹೆಬ್ಬಂಡೆಯನ್ನು ಬಳಸಿ, ಹಿಂಬಾಗದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದೆ ಕಡಿದಾದ ಮಾರ್ಗ; ಕಾಲು ದಾರಿಯನ್ನು ಮುಚ್ಚುವಂತಹ ಎದೆಯೆತ್ತರದ ಹುಲ್ಲು. ಕೆಲವು ಕಡೆಯಲ್ಲಂತೂ ಜಾರಿದರೆ ದೇವರೇ ಗತಿಯೆನ್ನುವಂತೆ. ಅಲ್ಲಲ್ಲಿ ಸಡಿಲ ಮಣ್ಣು ಅಥವಾ ಸಡಿಲಾದ ಕಲ್ಲುಗಳಿರುತ್ತಿದ್ದುದರಿಂದ ಪ್ರತಿ ಹೆಜ್ಜೆಗೂ ಹುಲ್ಲನ್ನು ಗೊಂಚಲಾಗಿ ಹಿಡಿದು ಹತ್ತಬೇಕಾಗಿತ್ತು. ಶಿಖರ ತಲುಪಿದಾಗ ಮೋಡ ಕವಿದಿದ್ದರಿಂದ ಆಗಲೇ ಸುಮಾರು ಕತ್ತಲಾಗಿತ್ತು. ಸೂರ್ಯಾಸ್ತ ನೋಡುವ ಅವಕಾಶ ನನಗೆ ಮತ್ತೆ ಕೈ ತಪ್ಪಿತ್ತು.
ಗಾಳಿಗಡ್ಡವಾಗುವಂತಿದ್ದ ಬಂಡೆಯ ಮಗ್ಗುಲಲ್ಲಿ ೨ ಟೆಂಟ್ ಹಾಕಿದೆವು. ಮತ್ತೊಂದು ಸ್ವಲ್ಪ ದೂರದಲ್ಲಿ. ಚೆನ್ನಪ್ಪಣ್ಣನವರು ಆಗಲೇ ಕಟ್ಟಿಗೆ ಒಟ್ಟು ಮಾಡಿ ಬೆಂಕಿ ಹಚ್ಚಿದ್ದರು; ನಮ್ಮ ‘ಕ್ಯಾಂಪ್ ಫೈರ್’ ಸಿದ್ದವಾಗಿತ್ತು. ಬೆಂಕಿ ಕಾಯಿಸಿಕೊಂಡು, ಒಂದಿಷ್ಟು ತಿನ್ನುತ್ತಾ, ಹರಟೆ ಹೊಡೆದು ಕತ್ತಲಾಗುವಷ್ಟರಲ್ಲಿ ಎಲ್ಲರೂ ಟೆಂಟ್ ಒಳಗೆ. ಮಲಗುವಾಗ ಇನ್ನೂ ೮ ಘಂಟೆ. ನೆಲಕ್ಕೆ ಬೆನ್ನು ಹಾಕಿ ಚುಕ್ಕಿ ಚಂದಿರರನ್ನು ದಿಟ್ಟಿಸಲು ಬಾನೆಲ್ಲ ಮೋಡ. ಅಂದು ರಾತ್ರಿ ಶಿಶಿಲದಲ್ಲಿ ಜಾತ್ರೆಯ ಕೊನೆ ದಿನದ ಉತ್ಸವ ಆಚರಣೆಗಳ ಬೆಳಕನ್ನು ನೋಡೋಣವೆಂದರೆ ಕೆಳಗೂ ಮೋಡ. ಇನ್ನೇನು ಮಲಗುವುದೊಂದೇ option. ನನಗಂತೂ ಕಣ್ಮುಚ್ಚಿದೊಡನೆ ನಿದ್ದೆ.
ಒಮ್ಮೆ ರಾತ್ರಿ ಎಚ್ಚರಾದಾಗ ‘ಧೋ’ ಎಂದು ಮಳೆ ಸುರಿಯುತ್ತಿತ್ತು. ಟೆಂಟ್ ಮೇಲೆ ಕವರ್ ಮುಚ್ಚಿದ್ದರೂ, ಹನಿ ತೊಟ್ಟಿಕ್ಕುತ್ತಿತ್ತು; ಇತ್ತ ನೋಡಿದರೆ ಕೃಷ್ಣ, ಪ್ರದೀಪ ಗೊರಕೆ. ಎಷ್ಟೋ ಮೈಲಿ ದೂರ ಬಂದು, ಈ ಬೆಟ್ಟದ ತುದಿಯಲ್ಲಿ, ಈ ಮಳೆಯಲ್ಲಿ, ರಾತ್ರಿ ಕಳೆಯುವ ಅದ್ಯಾವ ಘನ ಸಾದನೆಗಾಗಿ ಇಲ್ಲಿಗೆ ಬಂದೆ ಎಂದೆನಿಸಿತು.
ಪಕ್ಕದ ಟೆಂಟ್‌ಗೆ ಸರಿಯಾಗಿ ಕವರ್ ಮುಚ್ಚದ ಕಾರಣ ಒಳಗೆಲ್ಲ ನೀರು. ಮಿಥುನ, ರಾಧೇಶ ಎದ್ದು ಕೂತುಬಿಟ್ಟಿದ್ದರಂತೆ. ನವೀನ ಪ್ರಳಯಕ್ಕೂ don’t care ಎಂಬಂತೆ ಮಲಗಿದ್ದನಂತೆ. ಕೆಲವರಿಗೆ ರಾತ್ರಿ ಜಾತ್ರೆಯ ಓಲಗ ಕೇಳಿಸಿತಂತೆ. ಕೆಲವರಿಗೆ ಟೆಂಟ್ ಸುತ್ತಾ ಯಾರೋ/ಏನೋ ಓಡಾಡಿದಂತಾಯಿತಂತೆ!
* * * *
ಮುಂಜಾನೆಯ ವಿಚಾರವೇ ಬೇರೆ ಬಿಡಿ. ಅದನ್ನು ಇಲ್ಲಿ ಮತ್ತೆ ಹೇಳಬೇಕಾಗಿಲ್ಲ. ಅದು ಪ್ರತಿ ದಿನದ ಕೊಡುಗೆ. (”ಮೂಡಣ ಮನೆಯ ಮುತ್ತಿನ ನೀರಿನ..” ನೆನಪಿಗೆ ಬಂತು). ಅಲ್ಲಿಂದ ಮುಂದುವರೆದು ಒಂದು ದೊಡ್ಡ ಬಂಡೆಯನ್ನು ಹತ್ತಿ ತುತ್ತ ತುದಿ ತಲುಪಿದೆವು. ಅಲ್ಲೊಂದು ಬಾವುಟ ಕಲ್ಲುಗಳೊಳಗೆ ಅಚಲವಾಗಿ ನಿಂತಿದೆ. ಅಲ್ಲಿಯ ನೋಟಗಳಿಗೆ ಎಲ್ಲರೂ ಮೂಕರಾಗಿ ಹೋದೆವು ಎಂದಷ್ಟೇ ಹೇಳಬಲ್ಲೆ. ಸುತ್ತೆಲ್ಲ ಮೋಡದ ಸಾಗರ. ಸೂರ್ಯ ಅವುಗಳ ಮರೆಯಲ್ಲಿ ಕ್ಷೀಣವಾಗಿ ಬೆಳಗುತ್ತಿದ್ದಾನೆ! ಮೋಡಗಳು ನಿಧಾನವಾಗಿ ಒಂದೇ ಗತಿಯಲ್ಲಿ ತೇಲುತ್ತಿವೆ. ಹಿಂಡು ಹಿಂಡಾಗಿ ಪಡುವಣದಿಂದ ಮತ್ತಷ್ಟು ಬರುತ್ತಲೇ ಇವೆ. ಇದರಲ್ಲಿ ಒಂದೊಂದು ಮೋಡ ಅದೆಲ್ಲಿ ಹೋಗಿ ಕರಗುವುದೆಂಬ ಬೆರಗು. ಮೋಡಗಳು ಸ್ವಲ್ಪವೇ ಸರಿದು ಸಂದಾದರೂ, ಕೆಳಗಿನ ಆಳದಲ್ಲಿ ಪರ್ವತಗಳ ಸಾಲು ಸಾಲು ಕಾಣುತ್ತಿತ್ತು. ಸ್ವರ್ಗದಿಂದ ಭುವಿಯನ್ನು ನೋಡಿದಂತಾಗಿತ್ತು. ಕ್ಯಾಮೆರಾ ತೆಗೆದು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಎಲ್ಲರೂ ಬಂಡೆಗಳ ತುದಿಯಲ್ಲಿ ಕೂತು ಮೋಡಗಳನ್ನೋ, ದಿಗಂತವನ್ನೋ, ಏನನ್ನೋ ದಿಟ್ಟಿಸುತ್ತ ಕೂತ್ತದ್ದು ಅದೆಷ್ಟು ಹೊತ್ತೋ! ಪ್ರಮೋದ್ ಆಗ “ಬಾರೇ, ಬಾರೇ” ಹಾಡಿದ. ಅದೊಂದು ಸಂಪೂರ್ಣ ರಸ ಘಳಿಗೆಯಾಗಿತ್ತು.
* * * *
ಇಳಿದವರೇ ಸೀದಾ ಚನ್ನಪ್ಪಣ್ಣನವರ ಮನೆಯಲ್ಲಿ ಲ್ಯಾಂಡ್. ರುಚಿರುಚಿಯಾದ ಮಾವಿನ ಹಣ್ಣಿನ ಆತಿಥ್ಯ ಸ್ವೀಕರಿಸಿದೆವು. ಎಲ್ಲಾ ಸಮಯದಲ್ಲೂ ನಗುನಗುತ್ತಲೇ ಇದ್ದು, ನಮ್ಮ ತರಲೆ ತೊಂದರೆಗಳನ್ನು ಸಹಿಸಿಕೊಂಡು, ಚಾರಣದ ಯಶಸ್ವಿಗೆ ಕಾರಣರಾದದ್ದಕ್ಕೆ ಚೆನ್ನಪ್ಪಣ್ಣನವರಿಗೆ ನಾವು ಕೃತಜ್ಞತೆಯಿಂದ ವಂದಿಸಿ ವಿದಾಯ ಹೇಳಿದೆವು. ಅಲ್ಲಿಂದ ಸೀದಾ ನಮ್ಮ organizer ಗೋಪು ಗೋಖಲೆಯವರ ಮನೆಗೆ; ಅವರ ಅಡಿಕೆಯ ತೋಟದ ಹಿಂದಿನ ನದಿಯಲ್ಲಿ ಸ್ನಾನ (ಜಲ ಮಾಲಿನ್ಯ). ನಂತರ ಮನೆಯಲ್ಲಿ ಭಾರೀ ಭೋಜನ. ಹಲಸಿನ ಬೀಜದ ಸಾರು, ಹಲಸಿನ ಹಣ್ಣಿನ ಸಾರು - ಹಬ್ಬದಡುಗೆ! (ಜಾತ್ರೆಯ ಪ್ರಯುಕ್ತ ಇರಬಹುದು).
ಆನಂತರ ಶಿಶಿಲೇಶ್ವರನ ದರ್ಶನ. ದೇವಸ್ಥಾನದ ದಂಡೆಯಲ್ಲಿ ಕಪಿಲೆ - ಅಲ್ಲಿ ಸಾವಿರಾರು ದೊಡ್ಡ ಮೀನುಗಳು. ಅವುಗಳಿಗೆ ಪುರಿ ಎಸೆಯುತ್ತಾ ಫೋಟೋ ಸೆಷನ್. ತೂಗು ಸೇತುವೆಯ ಮೇಲೆ ನಿಂತು ವೀಕ್ಷಣೆ - ಸುತ್ತೆಲ್ಲ ಬೆಟ್ಟ, ನಡುವೆ ಕಪಿಲೆ, ದಡದಲ್ಲಿ ದೇವಸ್ಥಾನ … ಆಹಾ!
ಬೆಟ್ಟ, ಮೋಡ, ಬಿಸಿಲು, ಮಳೆ, ಸಾಗರ, ಗಾಳಿ, ಹಸಿರು, ಕಾಡು, ವನ್ಯ ಜೀವಿಗಳು, ಶಿಶಿಲ ಧರ್ಮಸ್ಥಳಗಳಲ್ಲಿ ದೇವರ ದರ್ಶನ .. ನಮ್ಮ ಚಾರಣ ಒಂದು ಆಧ್ಯಾತ್ಮಿಕ ಯಾತ್ರೆಯಾಗಿತ್ತು!
Feb 5, 2005
ಕುಮಾರಪರ್ವತ ಚಾರಣ
ನಾವು ಅಂದರೆ - ಶಿವಕುಮಾರ್, ಮಾರುತಿ, ಹರ್ಷ, ಅಮೋಲ್ ಮತ್ತು ನಾನು ಸಹೋದ್ಯೋಗಿಗಳು, ಕುಮಾರಪರ್ವತ ಚಾರಣ ಮಾಡಬೇಕೆಂಬ ಸಂಕಲ್ಪ ಮಾಡಿದೆವು. ಅದರಂತೆ ಒಂದು ಪುಟ್ಟ ಯೋಜನೆಯನ್ನು ರೂಪಿಸಲು ಯೋಚಿಸಿದೆವು. ಬಹಳ ವಾದ ವಿವಾದಗಳಿಗೆ ಆಸ್ಪದ ನೀಡಿದ್ದ ನಮ್ಮ ಯೊಜನೆ ಅಂತೂ ಸಿದ್ಧಗೊಂಡಿತ್ತು. ಯೋಜನೆಯಲ್ಲಿ ಎರೆಡು ಅಂಶಗಳು : ನಾವು ಒಯ್ಯುವ ಸಾಮಗ್ರಿಗಳು ಮತ್ತು ವೇಳಾಪಟ್ಟಿ.
ಯೋಜನೆಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ -"ಸೋಮವಾರ ಪೇಟೆಗೆ ರಾತ್ರಿ ಪ್ರಯಾಣ ಮಾಡಿ, ಅಲ್ಲಿಂದ ಮುಂಜಾನೆ ೧೦-೧೫ ಕಿ.ಮೀ ದೂರದ ಪುಷ್ಪಗಿರಿಯೆಂಬ ಬೆಟ್ಟದ ತಪ್ಪಲಿನ ಊರಿಗೆ ಹೋಗಿ, ಅಲ್ಲಿಂದ ಹತ್ತಲು ಪ್ರಾರಂಭಿಸುವುದು. ಬೆಟ್ಟದ ತುದಿಯೇರಿ, ರಾತ್ರಿ ಕಳೆದು, ಇನ್ನೊಂದು ಬದಿಯಿಂದ ಇಳಿದು ಸುಬ್ರಹ್ಮಣ್ಯ ಸೇರುವುದು. ಇಳಿಯುವಾಗ ಮಾರ್ಗ ಮಧ್ಯದಲ್ಲಿ ’ಭಟ್ಟ’ರ (ಬೆಟ್ಟದ ಮೇಲೆ ಮನೆ ಮಾಡಿರುವ ಪುಣ್ಯಾತ್ಮನ) ಮನೆಯಲ್ಲಿ ಉದರ ಪೋಷಣೆ ಮತ್ತು ಒಡಲ ಪೋಷಣೆ ಮಾಡಿಕೊಂಡು ಇಳಿಯುವುದು. ಸುಬ್ರಹ್ಮಣ್ಯದಲ್ಲಿ ಕುಮಾರಧಾರೆಯಲ್ಲಿ ಮಿಂದು, ದೇವರ ದರ್ಶನ ಮಾಡಿಕೊಂಡು, ಭಾನುವಾರ ರಾತ್ರಿ ಅಥವಾ ಸೋಮವಾರ ಮುಂಜಾನೆಯ ಹೊತ್ತಿಗೆ ಬೆಂಗಳೂರು ಸೇರುವುದು".
ನಿಶ್ಚಯಿಸಿದಂತೆ ಕ.ರಾ.ರ.ಸಾ.ಸಂ. ಬಸ್ ನಿಲ್ದಾಣದಲ್ಲಿ ಸೇರಿ, ಮುನ್ನವೇ ಕಾದಿರಿಸಿದ್ದ (’ಮಲೆನಾಡ ಮಿಂಚು’ ಎಂಬ ಬಿರುದಾಲಂಕೃತ) ಬಸ್ಸನ್ನು ಏರಿದೆವು. ನಮ್ಮ ’ಮಿಂಚು’ ಎಷ್ಟು ನಿಧಾನವಾಗಿ ಸಾಧ್ಯವೋ ಅಷ್ಟು ನಿಧಾನವಾಗಿ ’ಓಡಿತು’. ಟ್ರಾಕ್ಟರ್ ಗಳಿಂದೆಲ್ಲ ಹಿಂದಿಕ್ಕಲ್ಪಟ್ಟಿತು! ನಮಗೇನು? ಮುಂಜಾನೆಯ ಒಳಗಾಗಿ, ಸೋಮವಾರ ಪೇಟೆಯಲ್ಲಿ ಎಸೆದರೆ ಸಾಕೆಂದು ಸಮಾಧಾನದಿಂದ ’ಕಾಡು ಹರಟೆ’ಗೆ ತೊಡಗಿದೆವು. ಪಾಪ ಕನ್ನಡ ಬಾರದ ಅಮೋಲನಿಗೆ ಬೇಸರ ಬಂದು ನಿದ್ದೆ ಹೋದನು. ಸರಿಸುಮಾರು ೧ ಘಂಟೆಯವರೆಗೂ ಶಕ್ತಾನುಸಾರ ಹರಟೆ ಕೊಚ್ಚಿ, ಒಬ್ಬೊಬ್ಬರೆ ನಿದ್ದೆ ಹೋದೆವು. ಹರಟೆ ನಿಷ್ಪ್ರಯೋಜಕ ಎಂದು ಯಾರು ಹೇಳಿದ್ದು? ಅದು ಬಾಯಿಯ ಚಪಲ ತೀರಿಸುವುದಲ್ಲದೆ ಆತ್ಮೀಯತೆ, ಒಗ್ಗಟ್ಟುಗಳನ್ನು ಬಲಪಡಿಸುತ್ತದೆ (ಎಂದು ಯಾರೋ ಹೇಳಿದ ನೆನಪು!)
ಹಾಗೂ ಹೀಗೂ, ಒಂದೆರೆಡು ಕಂತುಗಳಲ್ಲಿ, ಒಟ್ಟು ೩ ತಾಸು ನಿದ್ದೆ ಹೊಡೆದೆ. ಕಿಟಕಿಯ ಮಗ್ಗುಲಲ್ಲಿ ಕುಳಿತಿದ್ದರಿಂದ, ಸ್ವಲ್ಪವೇ ತೆರೆದ ಕಿಟಕಿಯಿಂದ ಒಂದು ರೀತಿಯ ಕಂಪಾದ ಗಾಳಿಯು ಮೂಗಿಗೇರಿ, ಸಹಸ್ರಾರು ನರಗಳನ್ನು ಉದ್ರೇಕಿಸಿ ನನ್ನನ್ನು ಎಚ್ಚರಿಸಿತು. ಬಸ್ಸು ಆಗಲೇ ಮಲೆನಾಡನ್ನು ಪ್ರವೇಶಿಸಿಯಾಗಿತ್ತು. ಒಳಗಿನ ದೀಪಗಳೆಲ್ಲವೂ ಆರಿದ್ದವು. ಅರೆ ಬೆಳದಿಂಗಳ ಮತ್ತು ಬಸ್ಸಿನ ಬದಿಗೆ ಬೀಳುತ್ತಿದ್ದ ಹೆಡ್‌ಲೈಟಿನ ಮಂದ ಬೆಳಕಿನ ಮಿಶ್ರಣದಲ್ಲಿ, ಕಾಡಿನ ಎತ್ತರದ ಮರಗಳು ಮಬ್ಬು ಮಬ್ಬಾಗಿ, ಆಪ್ಯಾಯಮಾನವಾಗಿ ಕಾಣುತ್ತಿದ್ದವು. ನಿದ್ದೆ ಸಂಪೂರ್ಣವಾಗಿ ಆರಿಹೋಗಿತ್ತು. ಕಿಟಕಿಯೆಡೆ ಮಗ್ಗುಲಾಗಿ ಸುಖಾನುಭವವನ್ನು ಮುಂದುವರೆಸಿದೆ. ಅಪರಾತ್ರಿಯಲ್ಲೂ ಇಂತಹ ಚೈತನ್ಯ ಸೂಸುವ ಶಕ್ತಿ ಇನ್ಯಾರಿಗಿದೆ?
ಬಸ್ಸು ಘಟ್ಟಗಳಲ್ಲಿ ತಿರುಗುತ್ತಾ, ಸಮವೇಗದಲ್ಲಿ ಏರುತ್ತ ಇಳಿಯುತ್ತಿರುವಾಗ ಸೀಟಿನಲ್ಲಿ ರುಂಡ ಮುಂಡಗಳು ಅತ್ತಿತ್ತ ಓಲಾಡುತ್ತ, ಕಾಡಿನ ನಿಶಾ ಸೌಂದರ್ಯ ಸವಿಯುತ್ತಾ, ಅಲ್ಲಲ್ಲಿ ಕಾಫಿ ಗಿಡಗಳ ಕಂಪನ್ನು ಬಲವಾಗಿ ಹೀರಿ ಎದೆ ತುಂಬಿಸಿಕೊಳ್ಳುತ್ತಾ, ನಶೆ ಏರಿ ಏನನ್ನೂ ಯೋಚಿಸದ ಸ್ಥಿತಿ ತಲುಪಿ, ಧೈನ್ಯ ಭಾವ ತಾಳಿದ್ದೆ. ಮಲೆನಾಡ ಸ್ವಾಗತಕ್ಕೆ ಬೆರಗಾದೆ.
ಅಷ್ಟರಲ್ಲಿ ’ಶನಿವಾರ ಸಂತೆ’ ಬಂತು. ರಸ್ತೆ ಬದಿಯ ಬಹುತೇಕ ಕಟ್ಟಡಗಳು ಮಳಿಗೆಗಳಾಗಿದ್ದವು. ಆ ಪಟ್ಟಣ ವ್ಯಪಾರೀ ಕೇಂದ್ರವೆಂದು ತೋರುತ್ತದೆ. ಕಂಡ ಅಲ್ಪಸ್ವಲ್ಪ ಮನೆಗಳು ಪ್ರಾಚೀನ ಮಾದರಿಯವುಗಳಾಗಿದ್ದರೆ, ಸರ್ಕಾರಿ ಕಟ್ಟಡಗಳು ಬ್ರಿಟೀಷ್ ಮಾದರಿಯಲ್ಲಿದ್ದವು. ಪಟ್ಟಣವು ಕಾಲರೇಖೆಯಲ್ಲಿ ಇನ್ನೂ ಹಿಂದಿರುವಂತೆ ಕಂಡಿತು. ಗತದರ್ಶನವಾದಂತಾಯಿತು. ಬಾಲ್ಯದ ನೆನಪುಗಳು ಕಣ್ಣ ಮುಂದೆ ಕುಣಿದವು.
[ಸಮಾನ್ಯವಾಗಿ ನಾವೆಲ್ಲರೂ, ’ಭೂತ’ವನ್ನು (ವಿಶೇಷವಾಗಿ ಬಾಲ್ಯವನ್ನು) ಪ್ರೀತಿಸುತ್ತೇವೆ. ಕೆಲವರಂತೂ ಭೂತದಲ್ಲೇ ಜೀವಿಸುತ್ತಾರೆ. ಅಂಥವರಲ್ಲಿ ನಾನೂ ಒಬ್ಬ. ತಪ್ಪೊ ಒಪ್ಪೊ, ನನಗಂತೂ ಅದೇ ಇಷ್ಟ.]
ಇನ್ನೂ, ೪.೩೦ ಆಗುತ್ತಿದ್ದಂತೆಯೇ, ಸೋಮವಾರಪೇಟೆ ತಲುಪಿದೆವು. ಇಷ್ಟು ಬೇಗನೆ ತಂದೆಸೆದದ್ದಕ್ಕೆ ಡ್ರೈವರನನ್ನು ಬಯ್ಯುತ್ತ ಇಳಿದೆವು. ಮುಂದೇನೆಂದು ಮೈಮುರಿಯುತ್ತ, ಆಕಳಿಸುತ್ತ ಯೋಚಿಸಿದೆವು. ನಿತ್ಯಕರ್ಮಗಳಿಗೆ ಒಂದು ಲಡ್ಜ್ ಮಾಡುವುದೆಂದೂ, ಅದರ ಮುನ್ನ ಒಮ್ಮೆ ಈ ಊರಿನ ಬೀದಿಗಳಿಗೆ ನಮ್ಮ ದರ್ಶನ ಭಾಗ್ಯ ಕೊಟ್ಟು ಬರೋಣವೆಂದು ನಿರ್ಧರಿಸಿ ಹೊರಟೆವು. ಫೋಜು ಕೊಡುತ್ತ ಕ್ಯಾಮೆರಾ ಕ್ಲಿಕ್ಕಿಸಿದೆವು. ಅಲೆದಾಡಿದೆವು. ಹರ್ಷನಂತೂ ಹರ್ಷದಿಂದ "ಈ ಊರು ಕ್ಲಾಸ್ ಅದ" ಎಂದು ಒಂದೇ ಸಮನೆ ಉದ್ಗರಿಸತೊಡಗಿದನು. ಬಾಲ್ಯ ಮರುಕಳಿಸಿದಂತೆ ಆಡತೊಡಗಿದನು. ನಮ್ಮಲ್ಲಿಯ ಏಕೈಕ ಮನೊರಂಜನೆಯೆಂದರೆ ಅವನೆ! ಅವನ ಸಾಂಕ್ರಾಮಿಕ ನಗೆಯ ಶೈಲಿ, ಸಿಲ್ಲಿ ಜೋಕ್‍ಗಳಿಗೂ ನಗುವಂತೆ ಮಾಡಿತ್ತು. ಶಿವಣ್ಣನನ್ನು (ಶಿವಕುಮಾರನನ್ನು ಪ್ರೀತಿಯಿಂದ ಹಾಗೆ ಕರೆಯುತ್ತಿದ್ದೆವು) ಅವನು ಕಾಡುತ್ತಿದ್ದ ರೀತಿ, ಕಾಮಿಡಿ ಧಾರಾವಾಹಿ ನೋಡಿದಂತಾಗಿತ್ತು.
ಲಾಡ್ಜಿನಲ್ಲಿ ಹರ್ಷನ ಬಾಲ್ಯ ಲೀಲೆ ಮುಂದುವರೆದಿತ್ತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಬಾಟಲಿಗಳಿಗೆ ನೀರು ತುಂಬಿಸಿಕೊಂಡು ರೂಮ್ ಖಾಲಿ ಮಾಡಿದೆವು. ಸಮಯ ೬.೩೦. ಎಲ್ಲೆಲ್ಲೂ ಮುಸುಕು ಮಂಜು. ತಿಳಿ ನೀಲಿ ಬಣ್ಣದ ಶುಭ್ರ ಬಾನು, ನಮ್ಮ ಕೈಂಕರ್ಯಕ್ಕೆ ಶುಭಸೂಚನೆಯಂತಿತ್ತು. ಹೊರಡುವಾಗ ರೂಮ್‍ಬಾಯ್ "ಹಾವಿರುತ್ತವೆ, ಹುಶಾರ್ ಸಾರ್" ಎಂದು ಎಚ್ಚರಿಸಿ, ನನ್ನ ತಲೆಗೆ ಹುಳ ಬಿಟ್ಟಿದ್ದ. ಹಾವು ಕಚ್ಚಿದರೆ ಮಾಡುವ ಮೊದಲ ಚಿಕಿತ್ಸೆಯನ್ನು ನೆನಪಿಸಿಕೊಂಡೆ - ಅದು ಎಲ್ಲರಿಗೂ ಗೊತ್ತೆಂದು ಖಾತ್ರಿ ಮಾಡಿಕೊಂಡೆ. ಎಷ್ಟು ಪ್ರಯತ್ನ ಪಟ್ಟರೂ, ಹುಳ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಲೇ ಇತ್ತು. ಹೋಟೆಲೊಂದನ್ನು ಹೊಕ್ಕು, ಗಡತ್ತಾಗಿ ಇಡ್ಲಿ ಚಟ್ನಿ ತಿಂದೆವು; ಸಾಕಷ್ಟನ್ನು ಕಟ್ಟಿಸಿಕೊಂಡೆವು.
ಪುಷ್ಪಗಿರಿಗೆ (ಖಾಸಗೀ) ಬಸ್ಸಿದ್ದಿದ್ದು. ೭.೩೦ಕ್ಕೆ. ಬೆ.ಮ.ಸಾ.ಸಂ. ಬಸ್ಸುಗಳಲ್ಲಿ ಅಲೆದಾಡಿ ’ಅನುಭವಸ್ಥ’ನಾದ ನಾನು, ಜವಾಬ್ದಾರಿಯಿಂದ ಎಲ್ಲರಿಗೂ ಸೀಟ್ ಹಿಡಿದೆ. ನಮ್ಮ ಭಾರೀ ಭಾರೀ ಬ್ಯಾಗುಗಳನ್ನು ತೊಡೆಯ ಮೇಲೇರಿಸಿಕೊಂಡು, ಕೈಗೊಂದು ನೀರಿನ ಬಾಟಲಿ ಹಿಡಿದುಕೊಂಡು ಕುಂತೆವು. ಮಾರುತಿಯ ಬಿ.ಎಸ್.ಎನ್.ಎಲ್ ಮೊಬೈಲಿನಲ್ಲಿ ಸಿಗ್ನಲ್ ಇತ್ತು. ಮನೆಗೆ ಫೋನ್ ಹಾಯಿಸಿದೆವು. ಬಸ್ ಹೊರಟಿತು. ನಮ್ಮೆಲ್ಲರ ದೃಷ್ಠಿ ಕಿಟಕಿಯ ಮೂಲಕ ಹಾಯ್ದು ರಸ್ತೆಯ ಬದಿಯಿಂದ ಹಿಡಿದು - ದಿಗಂತದ ಪರ್ವತಗಳವರೆಗೆ ಇಣುಕಿತ್ತು. ಇದ್ದಕ್ಕಿದ್ದಂತೆ ನಾವೆಲ್ಲ ಅರಿವಿಲ್ಲದಂತೆ ಅಂತರ್ಮುಖಿಗಳಾಗಿದ್ದೆವು.
ಕ್ರಮೇಣ ಬಸ್ ಭರ್ತಿಯಾಯಿತು. ಅವರಲ್ಲಿ ಹೆಚ್ಚು ಮಂದಿ ಕಾಫಿ ತೋಟದ ಕೂಲಿಯಾಳುಗಳು ಮತ್ತು ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು. ವಿಧ್ಯಾರ್ಥಿಗಳಂತೂ ಹತ್ತುತ್ತಿದ್ದಂತೆಯೇ ಎದುರಿನಲ್ಲೇ ಕುಳಿತಿದ್ದ ತಮ್ಮ ಶಿಕ್ಷಕಿಯನ್ನು ಕಂಡು "ನಮಸ್ತೆ ಮೇಡಂ" ಎಂದು ಎರೆಡೂ ಕೈಗಳನ್ನು ಜೋಡಿಸಿ (ದೇವರಿಗೆ ವಂದಿಸುವಂತೆ) ತಲೆಬಾಗಿ ನಮಸ್ಕರಿಸುತ್ತಿದ್ದರು. ಆ ಕ್ಷಣ ನಮ್ಮೆಲ್ಲರ ಹೃದಯಗಳು ಮೆಚ್ಚುಗೆಯಿಂದ ತುಂಬಿ ಬಂದವು. ಕ್ರಮೇಣ ಎಲ್ಲರೂ ಇಳಿದು ವಿಧ್ಯಾರ್ಥಿಗಳು ಮಾತ್ರ ಉಳಿದರು. "ವಿಧ್ಯಾರ್ಥಿಗಳಿಗೆ ಮಾಸಿಕ ಪಾಸ್ ಇಲ್ವೇ?" ಎಂದು ಹರ್ಷ ಕೇಳಿದ್ದಕ್ಕೆ ಕಂಡಕ್ಟರ್ ಉತ್ತರಿಸಿದ "ವಿಧ್ಯಾರ್ಥಿಗಳಿಗೆ ಟಿಕೇಟೇ ಇಲ್ರಿ"
ಪುಷ್ಪಗಿರಿ ಹತ್ತಿರವಾದಂತೆ, ರಸ್ತೆ ಕಿರಿದಾಗುತ್ತಾ ಹೋಯಿತು. "ಈ ರಸ್ತೆಯಲ್ಲಿ ಬಸ್ ಹೋಗುವುದೇ!" ಎಂಬುವಷ್ಟು ಕಿರಿದಾಯಿತು. ಗಿಡಗೆಂಟೆಗಳು ಕಿಟಕಿಗಳೊಳಗೆ ಇಣುಕಿ ನೋಡುತ್ತಿದ್ದವು. ನೋಡನೋಡುತ್ತಿದ್ದಂತೆ ಪುಷ್ಪಗಿರಿ ಬಂದೇ ಬಿಟ್ಟಿತ್ತು. ಚಾಲಕನ ಚಾಕಚಕ್ಯತೆಯನ್ನು ಮೆಚ್ಚುತ್ತಾ ಇಳಿದೆವು. ಶಾಲಾಮಕ್ಕಳೂ ಇಳಿದರು. ಎದುರಿಗೆ ಕಂಡದ್ದು ಒಂದು ಚೊಕ್ಕ ಶಾಲೆ. ಅದು ಬಿಟ್ಟರೆ ದೂರದ ವೃಕ್ಷಾವೃತ ಬೆಟ್ಟಗಳು. ನಾನೂ ಇಲ್ಲಿಯೇ ಹುಟ್ಟಿ, ಈ ಶಾಲೆಯಲ್ಲೇ ಒದಿದ್ದರೆ ಹೇಗಿರುತ್ತಿತ್ತು?! ಹಾಗೆ ಓದುತ್ತಿದ್ದಾಗ ಚಾರಣ ಮಾಡಲು ಬರುತ್ತಿದ್ದ ನನ್ನಂಥವರನ್ನು ’ಆ ನಾನು’ ಹೇಗೆ ನೋಡುತ್ತಿದ್ದೆ? - ಎಂದೆಲ್ಲ ಯೋಚಿಸತೊಡಗಿದೆ. ಅಷ್ಟರಲ್ಲಿ ಅಮೋಲ್ ಹೇಳಿದ - "ಇನ್ಕೆ ಜೀವನ್ ಕಿತ್ನೀ ಸರಲ್ ಹೈನಾ?"
ಕ್ಯಾಮೆರಾಗಳನ್ನು ಹೊರತೆಗೆದು ನಡೆಯಲಾರಂಭಿಸಿದೆವು. ಬೆಟ್ಟದ ಬುಡದ ಅರಣ್ಯ ಇಲಾಖೆಯ ಚೆಕ್ ಪೋಸ್ಟಿಗೆ ಇನ್ನೂ ೩-೪ ಕಿ.ಮಿ. ಏರು ದಾರಿ ಸವೆಸಬೇಕಾಗಿತ್ತು. ಅಲ್ಲಲ್ಲಿ ಮನೆಗಳು, ಕಾಡು ಕಡಿದು ಮಾಡಿದ ಹೊಲ ಗದ್ದೆಗಳು. ಸಣ್ಣ ಪರಿಶುಧ್ಧ ನೀರಿನ ಚರಂಡಿಗಳನ್ನು ನೋಡುತ್ತಾ, ನಶ್ಯಬ್ಧ ಪ್ರಶಾಂತ ವಾತಾವರಣದಲ್ಲಿ ಹರಟುತ್ತಾ ಸಾಗಿದೆವು.
ನಡುವೆ ಒಂದು ಈಶ್ವರನ ದೇವಸ್ಥಾನ ಎದುರಾಯಿತು. ದೇವಸ್ಥಾನ ತಲುಪುವಷ್ಟರಲ್ಲೇ, ನಾವೆಲ್ಲ ಏದುಸಿರು ಬಿಡುತ್ತಿದ್ದೆವು. ನಮ್ಮ ಲಗೇಜ್‍ಗಳನ್ನೆಲ್ಲ ಇಳಿಸಿ, ಶೂ ಬಿಚ್ಚಿ, ಅಲ್ಲಿಯೇ ಇದ್ದ ನಲ್ಲಿಗಳಲ್ಲಿ ಕೈ ಕಾಲ್ ಮುಖಗಳನ್ನು ತೊಳೆದೆವು. ಬೆಟ್ಟದ ಆ ತಣ್ಣನೆಯ ನೀರು ಬೆಚ್ಚಗಿನ ಮುಖಕ್ಕೆ ತಾಗಿ, ಹಣೆಯ ಗೆರೆಗಳನ್ನು ನಿವಾರಿಸಿತು. ಕಣ್ಣರಳಿಸಿತು.
ದೇವಸ್ಥಾನ ಪ್ರವಶಿಸಿದೆವು. ದೇವಸ್ಥಾನದ ರಚನೆ ವಿಶಿಷ್ಟವಾಗಿತ್ತು. ನಮ್ಮಲ್ಲಿರುವಂತಲ್ಲ; ನಾಲ್ಕು ಮೂಲೆಗಳಲ್ಲಿಯೂ ಸೊಂಟದೆತ್ತರದ ಕೋಣೆಗಳು; ಒಂದೊಂದರಲ್ಲಿಯೂ ಒಂದೊಂದು ದೇವರು. ದೇವಸ್ಥಾನದ ಎಡಭಾಗದ ಕೋಣೆಗಳು ಪರಸ್ಪರ ಅಭಿಮುಖವಾಗಿದ್ದವು. ಹಾಗೆಯೇ ಬಲಬಾಗದ ಕೋಣೆಗಳು. ಮಹಾಮಂಗಳಾರತಿಗೆ ಸಿದ್ಧತೆಗಳು ನಡೆಯುತ್ತಿತ್ತು. ಪೂಜಾರಿಗಳು - "ಇನ್ನೂ ೧೫ ನಿಮಿಷಗಳಾಗುತ್ತದೆ" ಎಂದಾಗ ಹೊರಬಂದು ದೇವಾಲಯದ ಪಕ್ಕದಲ್ಲಿದ್ದ ವಿಶಾಲ ಆಲದ ಮರದ ಕಟ್ಟೆಯಲ್ಲಿ ಕಾಲು ಚಾಚಿ ಕುಳಿತೆವು. ಆ ವಿಶಾಲ ತಂಪು ನೆರಳು ಹಿತವಾಗಿತ್ತು. ಆ ಮರ ನಮ್ಮೂರಲ್ಲಿದ್ದಿದ್ದರೆ ಸದಾಕಾಲ ಕ್ರಿಕೆಟ್ ನಡೆಯುತ್ತಿತ್ತು. ಒಂದೆರಡು ಫೋಟೋ ಹೊಡೆದೆವು.
ಈ ಫೋಟೋಗಳು ಕೇವಲ ನಮ್ಮ ನೆನಪಿನಾಳದ ಚಿತ್ರಗಳನ್ನು ಹೊರತೆಗೆಯಲು ಇರುವ ಕೀಲಿಕೈ ಇದ್ದಂತಷ್ಟೇ. ಫೋಟೋಗಳಲ್ಲಿ ಬಣ್ಣಮಾತ್ರವಿರುತ್ತದೆ. ಆದರೆ ಮನಸ್ಸಿನ ಚಿತ್ರದಲ್ಲಿ, ಭಾವ ಹಾಗೂ ಸುತ್ತಮುತ್ತಲಿನ ವಾತಾವರಣ, ಪರಿಸರ ಸಮ್ಮಿಳಿತವಾಗಿರುತ್ತದೆ. ಹೀಗಾಗಿ, ಫೋಟೋಗಳನ್ನು ಇತರರಿಗೆ ತೋರಿಸಿದಾಗ, ನಮಗಾದಷ್ಟೇ ಸಂತೋಷ ಅವರಿಗಾಗದು. ಅನುಭವವೇ ಬೇರೆ, ವರ್ಣನೆಯೇ ಬೇರೆ.
ಸ್ವಲ್ಪ ಹೊತ್ತಿಗೆ ಇನ್ನೊಂದು ತಂಡವೊಂದು ದೇವಸ್ಥಾನಕ್ಕೆ ಬಂತು. ಆ ತಂಡದ ’ಕ್ಯಾಪ್ಟನ್’ - ವೆಂಕಿ. ಪರಸ್ಪರ ಪರಿಚಯ ಮಾಡಿಕೊಂಡೆವು. ನಾವು ಸ್ಲೀಪಿಂಗ್ ಬ್ಯಾಗ್ ತರದಿರುವುದನ್ನು ನೋಡಿ - "ಪೀಕಲ್ಲಿ ಸಿಂಗಲ್ ಡಿಜಿಟ್ ಟೆಂಪರೇಚರ್ ಇರುತ್ತೆ. ತೀವ್ರ ಚಳಿಯಿರುತ್ತೆ. ಮಂಜಿನಿಂದ ನಿಮ್ಮ ಹೊದಿಕೆ ಒದ್ದೆಯಾಗಿ ಹೋಗುತ್ತದೆ" ಎಂದು ಎಚ್ಚರಿಸಿದನು.
ಅಷ್ತೊತ್ತಿಗೆ ದಣಿವಾರಿ ನಾವೆಲ್ಲ ಸಹಜ ಸ್ಥಿತಿಗೆ ಮರಳಿದ್ದೆವು. ಮಂಗಳಾರತಿಗೆ ದೇವಾಲಯಕ್ಕೆ ಹಿಂತಿರುಗಿದೆವು. ಪೂಜೆಯ ನಂತರ ಮುತುಕದ ಎಲೆಯಲ್ಲಿ ಕೊಟ್ಟ ಗೋಧಿ ಪಾಯಸವನ್ನು ಚಪ್ಪರಿಸಿ ಹೊಡೆದೆವು. ಮತ್ಯಾರಿಗೂ ಹಸಿವಿಲ್ಲವಾದ್ದರಿಂದ ಮುಂದೆ ನೀರಿರುವಲ್ಲಿ ತಿಂಡಿ ತಿಂದು ನಮ್ಮ ಬಾಟಲಿಗಳನ್ನು ತುಂಬಿಸಿಕೊಂಡು ಮುಂದುವರೆಯುವುದೆಂದು ನಿರ್ಧರಿಸಿ, ಮಾರುತಿ ತಂದಿದ್ದ ’ಕರದಂಟ’ನ್ನು ಬಾಯಿಗೆ ಹಾಕಿಕೊಂಡು ಹೆಜ್ಜೆ ಹಾಕಿದೆವು.
ಒಂದು ಕಿ.ಮೀ. ದೂರದಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಿಕ್ಕಿತು. (ಅದರ ಸುತ್ತ ಆನೆಗಳ ಉಪಟಳಗಳಿಂದ ಪಾರಾಗಲು ಗುಂಡಿ ತೆಗೆದಿದ್ದರು). ತಲೆಗೆ ೨೦ರಂತೆ ಪ್ರವೇಶ ಶುಲ್ಕ ನೀಡಿ, ಅರಣ್ಯ ಪ್ರವೇಶಿಸಿದೆವು. ಒಂದು ಚಿಕ್ಕ ತೊರೆಯನ್ನು ಕಾಲಲ್ಲೇ ದಾಟಿದೆವು (ಅದಕ್ಕೆ ಕಟ್ಟಿದ್ದ ತೂಗು ಸೇತುವೆ ಮುರಿದು ಹೋಗಿತ್ತು). ಒಳಗೆ ಹೋದಂತೆಲ್ಲ ಕಾಡು ದಟ್ಟವಾಗಿ, ರವಿಯ ಕಿರಣಗಳು ಕೇವಲ ಇಣುಕಲಷ್ಟೇ ಸಾಧ್ಯವಾಗಿತ್ತು. ಶಕ್ತಿಯ ಉಪಯುಕ್ತ ಬಳಕೆಗಾಗಿ ಮೌನವಾಗಿ, ಹಸಿರನ್ನು ಆಸ್ವಾದಿಸುತ್ತಾ, ಪಕ್ಷಿ ಸಂಕುಲದ - "ಜುಂಯ್‍ಯ್", "ಟರ್ ಕುಟ್ ಪರ್ ಕುಟ್", "ಚೀಂವ್ ಚೀಂವ್" ನಿನಾದಗಳನ್ನು ಸವಿಯುತ್ತಾ ನಡೆದೆವು. ಕ್ಯಾಮೆರಾಗೆ ಕೆಲಸ ಕಡಿಮೆಯಾಯಿತು.
ಅಕ್ಕಪಕ್ಕದಲ್ಲಿ ಸಣ್ಣ ತೊರೆಗಳು, ಚಿಕ್ಕ ಜಲಪಾತಗಳು ಕಂಡುಬಂದರೂ, ಅಲ್ಲಿ ನಿಲ್ಲುವ ಸಮಯವಿಲ್ಲದೆ, ಸ್ವಲ್ಪ ನಿರಾಸೆಯಿಂದಲೇ ಮುನ್ನಡೆದೆವು. ನಮ್ಮ ಮುಖ್ಯ ಗುರಿಯ ದೆಸೆಯಿಂದ, ಇಂಥ ಬಹಳಷ್ಟು ಸಣ್ಣ ಪುಟ್ಟ ತ್ಯಾಗಗಳನ್ನು ಮಾಡಬೇಕಾಯಿತು. ಗುರಿ ಕಷ್ಟವಾದಷ್ಟೂ ಇಂಥ ತ್ಯಾಗಗಳು ಹೆಚ್ಚಾಗುತ್ತವಷ್ಟೇ! ಗುರಿಯ ಮಹತ್ವ ಇಂಥಹ ತ್ಯಾಗಗಳನ್ನು ಮುಚ್ಚುವಂತಿರಬೇಕು.
ಈ ನಡುವೆ ಮನಸ್ಸಿನಲ್ಲಿ ಒಂದು ಪುಟ್ಟ ಕವನ ಹೆಣೆದೆ:
ಕಣ್ಣರಳಿ, ಪದ ತೊದಲಿ,
ಉನ್ಮಾದದಲೆಯಲಿ ತೇಲಿ,
ಕಣ ಕಣ ತಣಿಯುವ ಪರಿ,
ಇನೆಲ್ಲಿ? ನಾಸ್ತಿಕನಾಸ್ತಿನಕಾಗುವನೇ ಸರಿ.
ಅರಿವಿಗೆ ಹೊಳೆದಷ್ಟು ರೀತಿಯಲ್ಲಿ ’ದೇವರ’ನ್ನು ಅರ್ಥೈಸಿಕೊಂಡಿದ್ದ ನಾನು ’ಸತ್ಯಂ ಶಿವಂ ಸುಂದರಂ’ ಎಂಬುದನ್ನು ಮನಗಂಡೆ.
ಈ ನಡುವೆ ವೆಂಕಿಯ ತಂಡವೂ ನಮ್ಮನ್ನು ಕೂಡಿಕೊಂಡಿತು. ಪುನಃ ಸುಮಾರು ೧.೦೦ ಸುಮಾರಿಗೆ, ಹಚ್ಚು ಕಮ್ಮಿ ಬತ್ತಿ ಹೋಗಿದ್ದ ತೊರೆಯೊಂದು ಸಿಕ್ಕಿತು. ರೈತರ ದೇಹದಲ್ಲಿ ಎಲುಬುಗಳು ಮೇಲೆದ್ದಂತೆ, ಅದರ ಒಡಲ ಬಂಡೆಗಳೆಲ್ಲ ಮೇಲೆದ್ದಿದ್ದವು. ವೆಂಕಿಯ ತಂಡವೂ ಅಲ್ಲೇ ತೊರೆಯ ಕೆಳಭಾಗದಲ್ಲಿ ಊಟಕ್ಕೆ ಕೂತಿತು. ಇಡ್ಲಿ, ಚಪಾತಿ, ಸಿಹಿ ಹೋಳಿಗೆ, ಉಪ್ಪಿನ ಕಾಯಿ ಮುಂತಾದ ನಮ್ಮ ಅವಶ್ಯಕತೆಗೆ ವ್ಯತಿರಿಕ್ತವಾಗಿದ್ದ ಭೋಜನವನ್ನೇ ಮಾಡಿದ್ದೆವು. ಪರಿಣಾಮವನ್ನು ನಂತರ ಮನಗಂಡೆವು : "ಭಾರವಾದ ಹೊಟ್ಟೆ, ಹೆಚ್ಚಿದ ಬಾಯಾರಿಕೆ, ಆಯಾಸ". ಆದರೆ ವೆಂಕಿಯ ತಂಡ, ಹಣ್ಣುಗಳು ಮತ್ತು ನೀರಿನ ಅಂಶ ಹೆಚ್ಚಿರುವ ಆಹಾರವನ್ನೇ ಸೇವಿಸಿತ್ತು.
ಮುಂದೆ ದಾರಿ ಕಡಿದಾಗುತ್ತಾ ಹೋಯಿತು. ಕತ್ತಲು ಹೆಚ್ಚಿತು. ಆಯಾಸ ಹೆಚ್ಚಾಗಿ ಕಾಲಿನ ಸೆಳೆತ ಪ್ರರಂಭವಾಯಿತು. ಸುಮಾರು ೩.೩೦ ಕ್ಕೆ ಶಿಖರಕ್ಕೆ ಇನ್ನೂ ಎಷ್ಟು ದೂರವೆಂದು ಕೇಳಲು ವೆಂಕಿ ಹೇಳಿದ್ದಿಷ್ಟು:
"ಇನ್ನೂ ಸುಮಾರು ಒಂದೂವರೆ ತಾಸಾಗುತ್ತದೆ. ಮುಂದಿನ ದಾರಿ ಇನ್ನೂ ಕಡಿದಾಗಿದೆ. ನಿಮಗೆ ಹತ್ತಲು ಸಾಧ್ಯವೇ ಇಲ್ಲ ಎನ್ನುವುದಾದರೆ, ಶಿಖರ ಏರದೆಯೇ ಈ ಮಟ್ಟದಲ್ಲೇ ಬೆಟ್ಟವನ್ನು ಬಳಸಿ, ಭಟ್ಟರ ಮನೆಯನ್ನು ಕೂಡುವ ಪರ್ಯಾಯ ದಾರಿಯೊಂದಿದೆ. ಆ ದಾರಿ ಒಂದಷ್ಟು ದೂರ ಸಮತಟ್ಟಾಗಿದ್ದು, ನಂತರ ಇಳಿಜಾರಿದೆ. ತ್ರಾಸಾಗಲಾರದು. ಹಾಗೇ ಹೋದರೆ ಸುಮಾರು ೨ ತಾಸಾಗುತ್ತದೆ. ಆದರೆ ನಿಮ್ಮ ಈ ಸ್ಥಿತಿಯನ್ನು ನೋಡಿದರೆ ೩ ತಾಸಾಗಬಹುದು. ಕತ್ತಲೂ ಆಗಬಹುದು. ಕತ್ತಲಲ್ಲಿ ದಾರಿ ತಪ್ಪದಂತೆ ನಡೆಯಬೇಕು. ಇನ್ನು ಸ್ವಲ್ಪ ದೂರದಲ್ಲಿಯೇ ಕಾಡು ಮುಗಿಯುತ್ತದೆ. ಹುಲ್ಲು ಮತ್ತು ಬಡೆಕಲ್ಲುಗಳಿರುವ ಇಳಿಜಾರು ಸಿಗುತ್ತದೆ. ಅಲ್ಲಿಂದಲೇ ಭಟ್ಟರ ಮನೆ ಕಾಣುತ್ತದೆ. ಅಲ್ಲಿಂದ ನಿಮ್ಮ ದೃಷ್ಠಿ ಭಟ್ಟನ ಮನೆಯ ಮೇಲೇ ಇದ್ದರೆ ಸಾಕು.."
"ಸಂಪೂರ್ಣ ಕತ್ತಲಾಗುವುದರೊಳಗಾಗಿ ನಾವು ತಲುಪಲಾಗದಿದ್ದರೆ? ನರದ ಸೆಳೆತ ಹೆಚ್ಚಾಗಿ ಈ ಕಡೆ ಶಿಖರವನ್ನೂ ತಲುಪಲಾಗದಿದ್ದರೆ? ರಾತ್ರಿ ಕಾಡಿನಲ್ಲೇ ತಂಗಬೇಕಾದರೆ?" ಎಂಬ ಪ್ರಶ್ನೆಗಳಿಂದ ನಮ್ಮಲ್ಲಿ ಸಣ್ಣ ಭಯ ಆವರಿಸಿತು. ನಾನು ಸುಲಭವಾದ ಭಟ್ಟರ ಮನೆಯ ದಾರಿಯನ್ನೇ ಹಿಡಿಯೋಣವೆಂದೆ. ನನ್ನ ದೇಹದ ದಣಿವಿಗಿಂತ ಮಾನಸಿಕ ದಣಿವು ಹೆದರಿಕೆಗಳು ನನ್ನ ಆಯ್ಕೆಗೆ ಕಾರಣವಾಗಿದ್ದವು. ಮಾರುತಿ ಮತ್ತು ಅಮೋಲ್ ತಮ್ಮ ನಿಶ್ಚಯದಲ್ಲಿ ಅಚಲರಾಗಿದ್ದರು - "ಎಷ್ಟೇ ಕಷ್ಟವಾಗಲಿ, ಏರಿಯೇ ತೀರೋಣ; ಎಂಥ ಚಳಿಯೇ ಆಗಲಿ, ಸಹಿಸೋಣ; ಇಷ್ಟು ದೂರವೇ ಬಂದಿದ್ದೇವೆ, ಹಾಗೇ ಹಿಂದಿರುಗುವುದು ಬೇಡ; ಸೂರ್ಯಾಸ್ತ, ಸೂರ್ಯೋದಯಗಳನ್ನು ನೋಡಿಯೇ ತೀರೋಣ"
“when going gets tough, tough get going” ಎಂಬುದು ನೆನಪಿಗೆ ಬಂತು.
ಹರ್ಷ ಮತ್ತು ಶಿವಣ್ಣನಿಗೆ ನನ್ನಷ್ಟೇ ದಣಿವಾಗಿತ್ತು. ಅವರೂ ಸಹ ನನ್ನ ನಿರ್ಧಾರವನ್ನು ಸಮರ್ಥಿಸಿದರು. ಅಷ್ಟರಲ್ಲಿ ಭಟ್ಟರ ಮನೆಯ ಕಡೆಗೆ ಹೋಗುವ ಕವಲು ಬಂದೇ ಬಿಟ್ಟಿತು. ನಮ್ಮ ದ್ವಂದ್ವ ತೀರಿರಲಿಲ್ಲ. ವಾದ-ವಿವಾದಗಳೆದ್ದವು. ಅಲ್ಲೇ ನಿಂತೆವು. ಸಂಜೆಯ ನಾಲ್ಕಾದರೂ ಮಬ್ಬುಗತ್ತಲು ತೀವ್ರವಾಗುತ್ತಿತ್ತು. ಭಯ ಹೆಚ್ಚಾಯಿತು. ವೆಂಕಿಯ ತಂಡ ನಮ್ಮ ಪ್ರಶ್ನೆಗಳನ್ನು ಪರಿಹರಿಸುತ್ತ ನಮ್ಮೊಡನೆಯೆ ನಿಂತಿತು.
ಕೊನೆಗೆ ಕಾಲಿನ ಸೆಳೆತವೇ ಪ್ರಧ್ಯಾನ್ಯತೆ ಪಡೆದು, ಮಾರುತಿ ಮತ್ತು ಅಮೋಲ್ ನಮ್ಮ ನಿರ್ಧಾರಕ್ಕೇ ಒಪ್ಪಿದರು. ನಾವು ಭಟ್ಟರ ಮನೆಯ ಕಡೆಗೆ ಹೆಜ್ಜೆ ಹಾಕಿದೆವು. ವೆಂಕಿಯ ತಂಡ ಮುಖ್ಯ ದಾರಿಯಲ್ಲಿ ಶಿಖರದೆಡೆ ಏರತೊಡಗಿತು.
ಇಷ್ಟಿಷ್ಟು ದೂರ ನಡೆಯುವಷ್ಟರಲ್ಲಿ ನರದ ಸೆಳೆತಕ್ಕೆ ಒಳಗಾಗುತ್ತಿದ್ದೆ. ಕೂತು ಪರಿಹರಿಸಿಕೊಂಡು ಮುಂದುವರೆಯುತ್ತಿದ್ದೆ. ವೆಂಕಿಯ ನಿರ್ದೇಶನದಂತೆ ಅಲ್ಲಲ್ಲಿ ಸರಿಯಾದ ಕವಲುಗಳನ್ನು ಹಿಡಿಯುತ್ತಾ ಸಾಗಿದೆವು. ಕಾಡು ಮುಗಿದು ಬಯಲು ಸಿಕ್ಕೇ ಬಿಟ್ಟಿತು. ನಿಟ್ಟುಸಿರು ಬಿಟ್ಟೆವು. ಸ್ವಲ್ಪ ದೂರ ಸಾಗುವಷ್ಟರಲ್ಲಿ ಒಂದು ಬೆಟ್ಟದ ತುದಿಯಲ್ಲಿದ್ದೆವು. ಆ ತುದಿಯಲ್ಲಿ ಸುತ್ತಲಿನ ಕಂದರಗಳ ನಡುವಿನಲ್ಲಿ ನಿಂತು, ರಮಣೀಯ ದೃಶ್ಯ ನೋಡಿದಾಗ, ಆಯಾಸವು ತಾತ್ಕಾಲಿಕವಾಗಿ ಮಾಯವಾಯಿತು (ಮನಸ್ಸಿನ ಮತ್ತು ಶರೀರದ ನಡುವಿನ ನಂಟು ಬಹಳ ಜಟವೇ ಸರಿ).
ಬೆಟ್ಟ ಇಳಿಯುತ್ತಾ ಇಳಿಯುತ್ತಾ, ಭಟ್ಟರ ಮನೆ ಸ್ಪಷ್ಟವಾಗಿ ಕಾಣತೊಡಗಿತು. ಇನ್ನಷ್ಟು ದೂರದಲ್ಲಿ, ನೆಲಮಟ್ಟದಲ್ಲಿ ನೀರಿನ ತೊರೆಯಿಂದ ಪ್ರಕಾಶಮಾನ ಪ್ರತಿಫಲನವೊಂದು ಕಂದಿತು. ಅದೇ ಕುಮಾರಧಾರೆಯೆಂದು ನಂತರ ತಿಳಿದೆವು.
ಗ್ಲೂಕೋಸ್ ತಿನ್ನುತ್ತಾ, ಕ್ಯಾಮೆರಾ ಕ್ಲಿಕ್ಕುಸುತ್ತಾ ಇಳಿದೆವು. ಇಳಿಯುವಾಗ ಮಂಡಿ ನೋಯಲು ಶುರುವಾಯಿತು. ಚೂಪಾದ ಬಂದೆ ಕಲ್ಲುಗಳ ಮೇಲೆ ಕಾಲಿಟ್ಟು, ಪಾದಗಳೂ ನೋಯಲು ಶುರುವಯಿತು. ಆದರೂ ಹಿಂದಿದ್ದಂಥ ಆತಂಕ, ಅನಿಶ್ಚಿತತೆ ಇರದಿದ್ದುದರಿಂದ, ಪ್ರಶಾಂತ ಚಿತ್ತದಿಂದ ಹರಟುತ್ತಾ ಇಳಿದೆವು. ಆ ಕ್ಷಣ ಇಲ್ಲಿ ಕಣ್ಣು ಮುಚ್ಚಿ, ಅದೋ ಆ ಬೆಟ್ಟದಲ್ಲಿ, ಆ ಮರಗಳ ನಡುವೆ ಕಣ್ಬಿಟ್ಟರೆ ಗತಿಯೇನು? ಎಂದೆಲ್ಲಾ ಕಲ್ಪಿಸಿಕೊಳ್ಳುತ್ತಾ, ನಗುತ್ತಾ ಸಾಗಿದೆವು.
ಮೊದಲು ಫಾರೆಸ್ಟ್ ಗಾರ್ಡಿನ ಕ್ವಾರ್ಟರ್ಸ್ ಸಿಕ್ಕಿತು. ನಾವು ತಂದಿದ್ದ ರಸೀತಿಯನ್ನು ತೋರಿಸಿದೆವು. ಮುಂಜಾನೆ ನಮ್ಮ ಸ್ನೇಹಿತರಿಬ್ಬರು ಬರುವುದಾಗಿ ತಿಳಿಸಿ, ಚೆನ್ನಾಗಿ ನೀರು ಕುಡಿದು, ದಣಿವಾರಿಸಿಕೊಂದು, ಅಲ್ಲಿಯೇ ಹತ್ತಿರವಿದ್ದ ಭಟ್ಟರ ಮನೆಗೆ ಅವನ ಅಡಿಕೆಯ ತೋಟದ ಮೂಲಕ ಹಾದು ಹೋದೆವು.
ಸುಬ್ರಹ್ಮಣಯದಿಂದ ಹತ್ತುವವರು ಕೆಲವರು ಭಟ್ಟರ ಮನೆಯಲ್ಲೇ ತಂಗಿ, ಮುಂಜಾನೆ ಎದ್ದು ಹತ್ತುತ್ತಾರೆ. ಅಂಥವರು ಹತ್ತಾರು ಮಂದಿಯಾಗಲೇ ಅಲ್ಲಿಗೆ ಬಂದಿದ್ದರು. ಕೆಲವರು ಮನೆಯ ಮುಂದಿನ ಒಂದು ವಿಶಾಲ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದರು (ಎಡೆಮಟ್ಟೆಯನ್ನು ಬ್ಯಾಟ್ ಮಾಡಿಕೊಂಡು, ಯಾವುದೋ ಹಣ್ಣನ್ನು ಬಾಲ್ ಮಾಡಿಕೊಂಡು). ಇನ್ನು ಕೆಲವರು ಹರಟುತ್ತಿದ್ದರು.
ಬ್ಯಾಗ್ ಶೂಗಳನ್ನು ಕಳಚಿ ಕೂತು ಕ್ರಿಕೆಟ್ ವೀಕ್ಷಿಸಿದೆವು. ಆ ಅಂಗಳದ ಮೂಲೆಯಲ್ಲಿ (ತೋಟದ ಅಂಚಿನಲ್ಲಿ) ಇಟ್ಟಿದ್ದ ನೀರಿನ ಡ್ರಮ್‍ನಲ್ಲಿ ನೀರು ತೆಗೆದು ಕೈ ಕಾಲು ತೊಳೆದುಕೊಂಡು ’ಫ್ರೆಶ್’ ಆದೆವು. ಕಾಫಿ ಕೇಳಿ ಪಡೆದೆವು. ’ಸೊರ್ರ್ ಸೊರ್ರ್’ ಎಂದು ಹೀರಿದೆವು. (ಆಹಾ! ಪುನರ್ಜನ್ಮ!!) ರುಚಿ ಹೇಗಿತ್ತೆಂದು ನೋಡುವಷ್ಟರಲ್ಲಿ ಲೋಟ ಖಾಲಿಯಾಗಿತ್ತು. ಕ್ರಿಕೆಟ್ಟಿನ ಮುಂದಿನ ’ಸೆಷನ್’ ನೋಡುತ್ತಾ ಕುಳಿತೆವು. ಅಷ್ಟರಲ್ಲಿ ಕತ್ತಲಾಯಿತು. ದೀಪ ಹಚ್ಚಲಾಯಿತು. ಅಲ್ಲಿಗೆ ಬಂದಿದ್ದವರೆಲ್ಲಾ, ತಾವು ತಂದಿದ್ದ ಒಂದು ಬಗೆಯ ಪ್ಲಾಸ್ಟಿಕ್ ಚೀಲವೊಂದನ್ನು ಹಾಸಿಕೊಂಡು ಅಂಗಳದಲ್ಲಿ ಹರಟೆಗೆ ಕೂತರು. ನಾವೇನು ಕಮ್ಮಿ? ಪೇಪರ್ ಹಾಸಿಕೊಂಡು ಕುಳಿತು ನಾವೂ ಹರಟಿದೆವು. ಭೂತ, ವರ್ತಮಾನ, ಭವಿಷ್ಯಗಳನ್ನು ಜಾಲಾಡಿದೆವು.
ತೆರೆದ ಅಂಗಳದಲ್ಲಿ ಹರಟುವುದು ನನಗೇನೂ ಹೊಸದಲ್ಲ. ಆದರೂ ಈ ಬಾರಿ ಹೆಚ್ಚು ಆಪ್ಯಾಯಮಾನವಾಗಿ ಕಂಡಿತು. ತಂಪಾದ ಗಾಳಿಯಲ್ಲಿ ಆಗೊಮ್ಮೆ ಈಗೊಮ್ಮೆ ಕತ್ತೆತ್ತಿ ಚುಕ್ಕಿ ಚಂದ್ರಮ ದರ್ಶನ ಮಾಡುತ್ತಿದ್ದೆವು. ಆಕಳಿಸಿದೆ. ಸಾಂಕ್ರಾಮಿಕವೆಂಬಂತೆ ಎಲ್ಲರೂ ಸರದಿಯೆಂಬಂತೆ ಆಕಳಿಸಿದೆವು. ಹೊಟ್ಟೆಯಲ್ಲಿ ರೌದ್ರ ನರ್ತನ ನಡೆಯುತ್ತಿತ್ತು. ಊಟಕ್ಕೆ ಇದಿರು ನೋಡುತ್ತಿದ್ದೆವು.
"ಊಟ ರೆಡಿ" ಎಂಬ ಬುಲಾವ್ ಬಂದೊಡನೆಯೇ, ಛಂಗನೆ ಹಾರಿ, ಮನೆಯ ಹೊರಕೋಣೆಗೆ ನುಗ್ಗಿದೆವು. ’ಸೆಲ್ಫ್ ಸರ್ವೀಸ್’ ಎಂದು ತಿಳಿಯಿತು. ಪ್ಲಾಸ್ಟಿಚ್ ಚೀಲಗಳನ್ನು ಮಡಚಿ ಹಾಸಿ ಕುಳಿತೆವು. ಕೆಲವು ಸ್ವಯಂ ಸೇವಕರು ಊಟ ಬಡಿಸಿದರು. "ಆಹಾ! ಅದೇನು ರುಚಿ!!" ಚಪ್ಪರಿಸಿಕೊಂಡು, ಎರೆಡೆರೆಡು ಬಾರಿ ಬಡಿಸಿಕೊಂಡು "ಅನ್ನದಾತಾ ಸುಖೀಭವ" ಎಂದು ಹರಸಿ, ಉಂಡೆವು. ಸಮಯ ೯.೦೦. ಇನ್ನೊಂದು ಹೇಳಲೇಬೇಕಾದ ಅಂಶವೆಂದರೆ - ನಮಗೆ ಬೇರೊಬ್ಬರ ಮನೆಗೆ ಬಂದಿರುವಂತೆ ಅನಿಸಲೇ ಇಲ್ಲ. ನಮ್ಮ ಅಜ್ಜಿಯ ಮನೆಗೋ, ಅಜ್ಜನ ಮನೆಗೋ ಹೋದಂತಿತ್ತು. ಬಂದವರೆಲ್ಲರ ನಡುವೆ - "ನಾವೆಲ್ಲಾ ಒಂದೇ ಮನೆಯವರು" ಎಂಬ ಭಾವವಿತ್ತು. ಈ ರೀತಿಯ ವಾತಾವರಣ ಸೃಷ್ಠಿಸುವುದು, ಅಥವಾ ಸೃಷ್ಠಿಗೊಳ್ಳುವುದು ಕಷ್ಟವೇ ಸರಿ. ಇದರ ಹಿಂದಿನ ರಹಸ್ಯವಾದರೂ ಎನು?
ಈಗ ನಾವು ’ಹೊಟ್ಟೆ ತುಂಬಿದ ಜನ’. ಇನ್ನಷ್ಟು ಹರಟಿ, ಮನೆಯ ಮುಂಭಗದಲ್ಲಿ ಚಪ್ಪರದಂತೆ ಸೋಗೆಯಲ್ಲೇ ಮಾಡಿದ ಕೋಣೆಯಲ್ಲಿ, ಭಟ್ಟರೇ ಕೊಟ್ಟ ಪ್ಲಾಸ್ಟಿಕ್ ಚೀಲಗಳು, ನಾವು ತಂದಿದ್ದ ಪೇಪರ್‍ಗಳನ್ನು ಹಾಸಿಕೊಂಡು ಮಲಗಿದೆವು. ಆ ರಾತ್ರಿ ನಮ್ಮನ್ನು ಯಮ ಬಂದರೂ ಎಚ್ಚರಿಸಲಾಗುತ್ತಿರಲಿಲ್ಲ!
ಮುಂಜಾನೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಮಧುರವಾದ ಹಾಡೊಂದು ನಮ್ಮನ್ನು ಎಚ್ಚರಿಸಿತು (ನನಗೆ ನನ್ನ ಅಜ್ಜಿಯ ನೆನಪು ತರಿಸಿತು). ಮನೆಯಿಂದ ಸ್ವಲ್ಪ ದೂರ ಹೋಗಿ, ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಬಂದು, ಕಾಫಿ ಕುಡಿದು, ಭಟ್ಟರೊಂದಿಗೆ ಫೋಟೋ ತೆಗೆಸಿಕೊಂಡು, ತಿಂಡಿ ತಿನ್ನದೇ ಹೊರಟೇ ಬಿಟ್ಟೆವು.
ಮಾರ್ಗ ಮಧ್ಯದಲ್ಲಿ, ಬೆಟ್ಟಗಳ ನಡುವೆ ಸೂರ್ಯೋದಯ ವೀಕ್ಷಿಸಿ ಹರ್ಷಗೊಂಡೆವು. ೫ ಕಿ.ಮಿ. ಕಾಡಿನಲ್ಲಿ ಇಳಿದು ಸುಬ್ರಹ್ಮಣ್ಯ ಸೇರಿದೆವು. ಕುಮಾರಧಾರೆಯಲ್ಲಿ ಮಿಂದು, ದೇವರ ದರ್ಶನ ಮಾಡಿ, ಬಸ್ಸಲ್ಲಿ ಕುಳಿತೆವು. ಸಮಯ: ಮದ್ಯಾಹ್ನ ೨.೩೦. ಬೆಂಗಳೂರವರೆಗಿನ ದಾರಿಯನ್ನು ಸವೆಯುವಷ್ಟು ನೆನಪಿನ ಬುತ್ತಿ, ಆಗಲೇ ಕಟ್ಟಿದ್ದೆವು.