ಮುಂಗಾರಿನ ಮೋಡಗಳಿಗೆ
ಆಗಸದಲ್ಲಿ ಅಣೆಕಟ್ಟುಗಳ ಕಟ್ಟೋಣ !
ಮಳೆಗಾಲದಲ್ಲಿ ಮೈ ಕಾಯಿಸಿಕೊಂಡು
ಪ್ರವಾಸಿಗರಂತೆ
ಊರೂರು ಅಲೆದಾಡುವ
ಮೋಡಗಳನು ಹಿಡಿದಿಡೋಣ !
ಗುಂಪು ಗುಂಪಾಗಿ ಬಂದು
ಒಟ್ಟಿಗೆ ಗುದ್ದಾಡಿ
ಕೊಚ್ಚುವ ಪ್ರವಾಹ ಇಳಿಸುವ
ಕಿಡಿಗೇಡಿ ಮೋಡಗಳನ್ನು
ಅಂಕುಶದಲ್ಲಿಡೋಣ !
ರಾಜ್ಯವಾರು ಜಿಲ್ಲಾವಾರು ಲೆಕ್ಕಮಾಡಿ
ಅಕ್ಷಾಂಶ ರೇಖಾಂಶಗಳಿಗೆ
ಮೋಡಗಳನ್ನು
ಹಾಯಿ ದೋಣಿಗಳಲ್ಲಿ ಕಳಿಸಿ
ಕರೆ ಕಟ್ಟೆಗಳನ್ನು ತುಂಬಿಸೋಣ !
ಕಾವೇರಿ ಗಲಾಟೆ
ಮಿತಿಮೀರಿದಾಗ
ಬೇಕಾಗುವ ಮೋಡಗಳನ್ನು
ಪರ್ವತ ಶ್ರೇಣಿಗಳ ನೆರಿಗೆಗಳಲ್ಲಿ
ಬಚ್ಚಿಡೋಣ !