Showing posts with label ಕವನಗಳು. Show all posts
Showing posts with label ಕವನಗಳು. Show all posts

Aug 30, 2012

ಹಬ್ಬ

ಮೋಡಿಯ ಮಾಡನಿಟ್ಟು
ಸೌರ ತೇಜದ ಕಂಬಗಳ ನೆಟ್ಟು
ದೂರ ಸಾಗರದಿಂದ ತಂದ
ಮುತ್ತಿನ ಹಾಸಿಟ್ಟು
ಬಣ್ಣದ ಬಿಲ್ಲನು
ತೋರಣಕಿಟ್ಟು
ಹಸಿರುಸಿರ ಹಣತೆಯಿಟ್ಟು
ನಮ್ಮೆದೆಗೂಡನು ಬೆಚ್ಚಗಿಟ್ಟು
ಬಾನ ತಾಳ ಮೇಳಗಳ ನಡುವೆ
ಅಪೂರ್ವ ಸೃಷ್ಠಿಯ ಹಬ್ಬಕೆ
ಕರ್ತನು ವರುಷವೂ ಕೊಂಡಾಡುವನು!

May 30, 2010

ಪರಿಮಳದ ಜಾಡು

ನೆನಪಿನ ನೌಕೆ
ಸಾಲದು ಗೆಳತಿ
ನಿನ್ನೆದೆಯ ಲೋಕಕೆ!

ಪಯಣಿಸಲಿ ಹೇಗೆ,
ಕಂಗಳ ಕಾಂತಿಗೆ
ಸ್ಪರ್ಶದ ಮಿಂಚಿಗೆ
ಹುಚ್ಚೇರಿದೆ ಮನಕಡಲಿಗೆ

ಚಿಂತಿಸದಿರು ನೀ
ಉಸಿರಲಿ ಹಿಡಿದಿರುವೆ
ನಿನ್ನ ಪರಿಮಳವ;
ಕಂಪಿನ ಜಾಡನು ಹಿಡಿವೆ

ಒಲವಲಿ ಹೊಳೆಯುವ
ನಿನ್ನ ಕಣ್ ತಾರಾಗಣವ
ಅನುಸರಿಸಿ ಬರುವೆ!
ನಿನ್ನೆದೆಯ ಲೋಕಕೆ!

Sep 7, 2009

ಮುನ್ನ

ಪೂಜೆಗೆ ಕಾಯ್ ಒಡೆದು ಕೊಡುವ ಚಿಣ್ಣ,
ಜಗುಲಿಯ ಮೇಲೆ ನಿಂತು ಕಾಯುತಿರುವನು

ಹರಿದ ಬಟ್ಟೆ ತೊಟ್ಟವನು
ಕೊಳೆಯ ಮೈಯವನು
ಆದರೆ ತೇಜ ಕಂಗಳಲಿ ಸೆಳೆವನು
ಮಂತ್ರ ಸ್ಪರ್ಶದಲಿ ನುಡಿವನು

ಕೇರಿಯ ಹುಡುಗ;
ಹೆಸರೇನೆಂದು ಕೇಳಲು
’ಮುನ್ನ’ ಎಂದು ಹಿಂಜರಿದು ನುಡಿದು
ಕಾಣದಾದನು


Mar 29, 2009

ಮೌನ

ಇಳಿ ದಿನ
ಮೌನ

ಸಿರಿ ಗಗನ
ಮೌನ

ಗರಿ ಚಿಗುರು
ಮೌನ

ಬಿಸಿ ಮಣ್ಣ
ಮೌನ

ತಂಗಾಳಿ
ಮೌನ

ಎದೆ ಗೂಡಲೂ
ಮೌನ

ಸುಳಿವಿಲ್ಲದೆ
ಮೂಡಿದೆ
ಇಳೆ ಬಾನಿನ
ಮುಂಗಾರ ಕವನ

-05/06/08


Jan 11, 2008

ಕನಸು ಕಲ್ಪನೆಗಳಲಿ

ಇನಿ ದನಿಯಲಿ
ಮಾತನಾಡಿ
ಮುದಗೊಳಿಸುವವಳು ನೀನೆ

ಕನಸು ಕಲ್ಪನೆಗಳಲಿ
ಜೀಕಿ ನಲಿದು
ನಗುವವಳು ನೀನೆ

ಒಡನಾಟದಲಿ
ಸುಳಿವಿಲ್ಲದೆ ಮನದಲಿ
ಸುಳಿದಾಡಿದವಳು ನೀನೆ

ಎದೆಯ
ಮಾತು ಮಾತಿನಲಿ
ಸ್ಫುರಿಸುವ
ಹೆಸರು ನೀನೆ

ಅರಿವು ತಿಳಿವುಗಳಿರದೆ
ಕರಗಿದವನು ನಾನೆ

ಹೃದಯ ತಿಳಿದ
ನಿನ್ನೋಟದ ನುಡಿ
ಒಲವು ತಾನೆ?

Sep 10, 2007

ಸಾಕು

ನೀ ಜನಿಸುವ
ಮೇರು ಗಿರಿ ಕಾನನಗಳ
ಮಲೆನಾಡಿನವನಲ್ಲ

ಎಡೆಯಿರದ
ಜೀವಗಳೊಡಲ
ಕಡಲ ತೀರದವನಲ್ಲ

ನೀನೊಲಿದು ನಗುವ
ಬಯಲಿನವನಲ್ಲ

ಗುಡುಗೇನು
ಸಿಡಿಲೇನು
ಬರೀ ಗಾಳಿಗೆ
ಕೊಂಬೆಗಳು ತೂಗಿ
ಎಲೆಗರಿಗಳದುರಿ
"ಓ ಮಳೆಯೆ?"
ಎನಿಸಿದರೆ ಸಾಕು.

Apr 20, 2007

ನಿನ್ನೆ ಸಂಜೆಯ ಮಳೆ

ಬೇಸಿಗೆಯ ಬಾಂದಳದಲೇಕೋ
ಕರಿಮೋಡ ಮಿಂಚಿನ ಬೆಳಕು
ಈ ಸಂಜೆಯಲೇಕೋ
ಬೆಳದಿಂಗಳ ಇಣುಕು

~ ~

ಬೀಸುವ ಚಾಮರದಲಿ ಜಾರೆ
ಭಾರದ ಹನಿ ನೀರು
ನೆನೆವ ತುಟಿಗಳಲಿ ತಾರೆ
ನಗೆಯ ಬಿಂದು ನೂರು

~ ~

ಈ ದಿನ ಸಂಜೆ
ಮಳೆಗಾಲಕೂ ಮುಂಚೆ
ಊರಿನಾಚೆ,
ಸರೋವರದೀಚೆ,
ಮಳೆಯ ಸೂಚಿಸೊ ಗಾಳಿ ಬೀಸಿ,
ಮಣ್ಣ ಕಂಪ ಸೂಸಿ,
ನಾ ನಲಿದ ಉಯ್ಯಾಲೆ ಯಾವುದೋ!

Oct 4, 2006

Penambur Beach / Rafting on Seetha nadi

-Penambur beach-


-Hebri/Rafting-

Well, the pictures speak for themselves - we had been to peNambur beach (Oct 2) and rafting (seetha nadi, Hebri), the next day. Rafting was great experience, but a little disappointed that we didnt have waterproof camera - we couldn’t capture the rough rides.

One of the great survival stories in history:
Everybody wanted something more. So, our instructor(K) planned raft capsize. Well, the instruction given to us was not to panic. But, I did exactly that. I went beneath the overturned boat. Didnt know a thing what was going on. Gasping for air, searching for something to grab, drinking a lot of water - I was horrified. Soon I realized to stay calm (that I was wearing a life jacket & I would eventually float). In the meantime, K pulled me out with a lot of effort.. and so.. I am alive!

More!
In a place where the stream was slow, we all jumped out to float for a while. Soon, it started to rain heavily - so much so that we could hardly open our eyes. It was bliss! (Do I need to describe more?)

In the Ghats:

But, as always happens, there will be an unexpected package that made me more happy.

While going to mangalore, because of the bad roads, we were delayed. But, that made us start descend the ghats at the dawn (just what I wanted!). I was @ the window seat and my head was literally out, trying to grab as much as I could! If we were travelling in our car, we could have stopped to take some mindblowing, wallpaperable snaps! Well, no substitute for snaps but here is a poem I wrote:

Wild splendour

In the wee hours of
this day of october,
everything is damp
mist all-over,
I wait for him to lit
to see the wild splendour

Across the hill, along the edge
As I pass, I see this valley
more beautiful than before,
for, there is a cloud,
sailing through - the wild splendour

I see streams white
run down in haste,
a river in its birth -
flowing fierce
down the steeps,
over the rocks,
into - the wild splendour

I see this village -
with walls and roofs,
all turned green,
how it would be like -
(as always) I wonder
to have born here,
amidst - the wild wild splendour
with plenty for life
to savour.
__________________

A Journey and a Greeting:
On the day we left for mangalore, these things happened:

  1. To my surprise, this person greeted me a “happy journey”
  2. We were supposed to travel in a car. Its battery went down (we only came to know that after charging for 5 hrs).
  3. After waiting for a long time, in the K.S.R.T.C bus stand, only one bus arrived. Before the bus could stop, 200 people were at its doors. We feared to be one among them. We marched towards Gandhi nagar.
  4. We bought seats 23,24 and waited for the bus. The entire area was stinking (couldnt find a better place nearby). I suddenly feared chikungunya.
  5. Harsh reality: our seats were 39,40 - the penultimate row! We read the situation well and decided to keep quiet.
  6. We learnt how much our fellow passengers paid. There by, we learnt how big the topi was.
  7. Enter the bad roads - we were in air most of the time (after all, it was an air bus)

[I still believe that (a) is no way related to (b)-(g)]

Aug 24, 2006

ನನ್ನ ಮನೆ

ಎದುರಿಗೊಂದು ಬಯಲು
ಅದರಲೊಂದು ಪುಟ್ಟ ಶಾಲೆ
ಅದರಾಚೆಗೊಂದುದ್ಯಾನ
ಅದೋ ಮರೆಯಲಿದೆ ನೋಡು -
ನನ್ನ ಗೂಡು

ಬಯಲ ಸುತ್ತಲ
ಮರಗಳಡಿಯಲಿ
ಜಿಗಿವ ನಲಿವ ಚಿಣ್ಣರ ನೋಡು
ಅವರ ಎಳೆಗೊರಳಿನ ಇಂಪಿನಲಿ
ನಾಡಗೀತೆಯ ಕೇಳು

ಬೆಳ್ಮುಗಿಲ ಕೆಳಗೆ
ಹಸಿರೆಲೆ ಕೊಂಬೆಗಳ
ಚಿತ್ತಾರದ ಚಪ್ಪರ ನೋಡು
ಅದರಲಿ ಉದಯರವಿಯ
ಕೋಲ್ಬಿಸಿಲೊಮ್ಮೆ ನೋಡು

ಹಸಿರೊಲದಲಿ
ತೇಲುವ ಬೆಳ್ಳಕ್ಕಿಯ ನೋಡು
ಬಿರುಮಳೆಯೊಳಗೆ
ತೆಂಗಿನ ತೋಟದ ನಡುವೆ
ಮರೆಯಾಗುವ ಸೊಗಸು ನೋಡು

ದೂರದೂರಲಿ ಎಲ್ಲಿದೆಲ್ಲ…
ಮತ್ತೆ ಬಾರದೆ ಇರನೇನು
ನನ್ನೂರ ನನ್ನ ಮನೆಗೆ
ನೆನಪುಗಳ ಜೊತೆಗೆ

-ಚೇತನ್ ಪಿ
೨೩-೦೮-೨೦೦೬

May 18, 2006

ನಿನ್ನೆ ರಾತ್ರಿ

ನಿನ್ನೆ ನೀ ಮುಗಿಲಂಚಿಗೆ ಜಾರಿ
ಮರೆಯಾದ ಮೇಲೆ
ಭುವಿಗೆಲ್ಲ ಬಂಗಾರ ಹೊದಿಸಿ
ಮರೆಯಾದ ಮೇಲೆ
ಹೇ ಉದಯರವಿ,
ಎನಾಯಿತೆಂದು ನಾ ಹೇಳಲೆ?

ಎಂದಿಲ್ಲದ ತಂಗಾಳಿ
ಎಲ್ಲಿಂದಲೋ ಬೀಸಿದಾಗ
ಮೈ ಮನ ಅರಳಿತ್ತು
ಆಗ ನೆಲದಲಿ ಕಾರ್ಮೋಡದ ನೆರಳಿತ್ತು!

ಗುಡುಗಾರ್ಭಟ ಸಿಡಿಲ್ಮಿಂಚು…!
ಆ ವೈಭವವ ಹೇಗೆ ಬಣ್ಣಿಸಲಿ ನಾ…?
ಮಳೆಯ ಸದ್ದು ಕೇಳದಾಗಿತ್ತು!
ನೀನಿಲ್ಲದೆಯೂ ನೋಡು
ಬಾನೆಲ್ಲ ಬೆಳಕಾಗಿತ್ತು!

ರಾತೋರಾತ್ರಿ…
ರಾತೋರಾತ್ರಿ…
ನೀನಿರದ ವೇಳೆ…
ಬೆಂದ ಜೀವಗಳಿಗೆಲ್ಲ
ಮರುಜನ್ಮ ಬಂದಿತ್ತು!

ನೋಡು ಬಾ ಉದಯರವಿ..
ನಿನ್ನದೇ ಹೊಂಗಿರಣಗಳ ಪ್ರತಿಫಲನದಲ್ಲಿ…
ಹೊಸಜೀವ ಕಳೆಯ
ನೋಡು ಬಾ…

-ಚೇತನ್ ಪಿ
೧೭/೦೫/೨೦೦೬

Aug 24, 2005

ಶಿವನಸಮುದ್ರದಲಿ…

ಸಾರ್ಥಕ ದಿನದೀ ಕೊನೆಗೆ
ಮಬ್ಬಡರಿದೆ ಬಾನಿಗೆ
ಹಗಲ ಕೊನೆಯ ಘಳಿಗೆ,
ಬಿದ್ದೂ ಬೀಳದಂಗೆ
ಒಂದು ಹದ ತುಂತುರು ಮಳೆ ಮೆಲ್ಲಗೆ,
ತಂಗಾಳಿಯೊಳಗೆ…

ಕಾವೇರಿ ಕವಲಾಗಿ
ಕಣಿವೆಗಿಳಿಯುವಲ್ಲಿ,
ಜೀವ ಜಲಧಾರೆಗಳ ತಂತಿಗಳಲಿ
ನವರಸ ನಾದ, ಭಾವ
ಹಾಡೊಂದೇ,
ಕರ್ಣಗಳಲ್ಲಿನ್ನೂ ಪ್ರತಿಧ್ವನಿತ…

ಪುಟಿಪುಟಿದು ಇಳಿದು,
ಬಳಸಿ ಜಾರಿ,
ಶ್ವೇತ ಕುಂಚ ಕೊರೆಕೊರೆದು ಕಡೆದಿದೆ
ಭವ್ಯ ಶಿಲ್ಪ-ಸೋಪಾನ
ತೇವದೊಳು ಜೀವಂತ…

ತಿಳಿವಿಗೆ ನಿಲುಕದ
ನಲಿವಿನಾಳಕೆ
ಮಾನಸ ಮಂಥನದಲಿ
ಉದಯಿಸಿದೆ
ಜೀವರಸದೊಳು
ನವ ಚೇತನ!

-ಚೇತನ್ ಪಿ
೨೪-೦೮-೨೦೦೫

Jul 5, 2005

ಮತ್ತೊಂದು ಮುಂಜಾವು

ಪದಗಳ ಜೋಡಣೆಗೆ
ನೋಟಗಳ ಸೂರೆಗೆ
ಬತ್ತದು ಬೆಳಗಿನ ಬೆಳಗು
ಇದು ನಿತ್ಯದ ಬೆರಗು
ಇದು ನಿತ್ಯದ ಕಾವ್ಯ

ಬೆಚ್ಚ ಗನಸ ಬೀಳ್ಕೊಟ್ಟು
ಹೊರಬಂದು ಜಡಬಿಟ್ಟು
ತನುವೊಡ್ಡಿದೆ ಮೂಡಣಕೆ ಮನಬಿಚ್ಚಿ
ಎಳೆ ಮಿಂಚು ಸಂಚರಿಸಿತು ಮೈಯೊಳಗೆ
ನಡುಕದೊಳಗಿಂದ
ತೇಜ ರಶ್ಮಿಯ ಶಾಖದಿಂದ

ಶುಭ್ರ ತಿಳಿಬಾನು - ಬೆಳ್ಳಿಮೋಡ
ಪ್ರಶಾಂತ, ಅತಿ ಪ್ರಶಾಂತ
ಸ್ತಬ್ಧ, ನಿಶ್ಯಬ್ಧ
ಎಲ್ಲವೂ ಸುತ್ತಮುತ್ತ
ಎಲೆ ಗರಿಗಳ ಉಯ್ಯಾಲೆಯ ಅಲೆ
ಹಕ್ಕಿ ಸಂಕುಲ ತೇಲಿದೆ
ದಿನದ ಪಲ್ಲವಿಯ ಗುನುಗುತಲೆ
ಸನಿಹದ ದೇಗುಲದಲಿ
ಮಂತ್ರಘೋಷ, ಮಂಗಳ ಘಂಟಾನಾದ
ಇದು ಅಮೃತ ಘಳಿಗೆ!

ನಗುತಿಹನೋ ಭಾಸ್ಕರ
ನಭದಂಚಿನ ಪ್ರಭೆಯೊಳಗೆ ಪ್ರಜ್ವಲಿಸಿ

-ಚೇತನ್ ಪಿ / ೦೫-೦೭-೨೦೦೫

Jun 16, 2005

ಮಲೆನಾಡೋ? ವೈನಾಡೋ?

ಗಿರಿಗಳೆದ್ದಿವೆ ತೀರಗಳಿಂದ
ಅಲೆಅಲೆಯಾಗಿ ನಾಡಿನೊಳಗೆ
ಕಾದಿವೆ ಕಾರ್ಮೋಡಗಳ ದಾರಿಗೆ
ಬಾಗಿಲ ತೆರೆಯೆ, ಸುರಿಸಲು ಪನ್ನೀರ

ಎದೆ ಚೀರುವ ನೀರವತೆಯಲಿ
ಬೆರೆಯುತಿದೆ ಜಂತುಗಳ ಗುಂಯ್ ನಾದ;
ಮಬ್ಬೇರುತಿದೆ, ಒತ್ತೊತ್ತಿನ ವನವಿದು
ಹಗಲೋ? ಇರುಳೋ?

ಬಾನೆಲೆಗಳ ಚಪ್ಪರದ
ಮೇಲೆರಗಿದನೋ ವರುಣ
ಟಪಟಪನೆ ಪಟಪಟನೆ
ತೊಟ್ಟಿಕ್ಕುವ ಹನಿಗಳ ಹಳ್ಳ
ಚಿಲುಮೆಗಳ ಬಳ್ಳ
ಒಂದಾಗಲು ಮೈದುಂಬಿದಳೋ ನೀರೆ
ಹರಿವಳು ತಳುಕಿ ಬಳುಕಿ ಧುಮುಕಿ

ದಿಗಂತದಿಂದ ದಿಗಂತಕೆ
ತೇಲುತಿದೆ ಹಕ್ಕಿ
ಅಪ್ಪುಗೆಯ ರೆಕ್ಕೆಯ ಬಿಚ್ಚಿ
ನೋಟಗಳ ನುಂಗುತ
ಅಂತರಂಗಕೆ; ಹಾಡುತ
‘ಚೆಲುವೆಲ್ಲಾ ನನ್ನದೇ’

ಮಲೆನಾಡೊ ವೈನಾಡೊ
ಸೌಂದರ್ಯಕೆ ಯಾವ ರೂಪ?
ಯಾವ ಹೆಸರು?

-ಚೇತನ್
೧೬-೦೬-೨೦೦೫

May 25, 2005

ಬಿಡುಗಡೆ

ಕಡಲ ಬಿರುಗಾಳಿಗೆ
ಹುಯ್ದಾಡುತಿದೆ ಶ್ವೇತ ನೌಕೆ
- ತೀರವ ತೋರಬಾರದೇ?

ಕುರುಡಾಗಿವೆ ಕಣ್ಣುಗಳು
ಯಕ್ಷ ಪ್ರಶ್ನೆಗಳ ಕೋಲ್ಮಿಂಚಿಗೆ
- ಹೊಸ ದೃಷ್ಠಿಯ ಕರುಣಿಸಬಾರದೇ?

ಕುದಿಯುತಿದೆ ಎದೆ
ಕಲ್ಮಶಗಳ ಕಿಚ್ಚಿನಲಿ
- ಮಳೆಗರೆಯಬಾರದೇ?

ಅದರಲಿ ಅಹಮ್ಮಿನ ಮಹಲು ಕುಸಿದು
ಸ್ವಾರ್ಥ ಅಸೂಯೆಗಳು
- ಕರಗಬಾರದೇ?

ಮರುಳಾಗಿಹೆ ನಾ
ಸುಪ್ತ ಬಂಧನಗಳೊಳಗೆ
-ಬಿಡುಗಡೆಯ ತೋರಬಾರದೇ?

ಮನಸು ಮಣ್ಣಾಗಿ
ಹೊಸ ಹಸಿರು ಅರಳಬಾರದೇ?

-ಚೇತನ
೨೫-೦೫-೨೦೦೫

May 9, 2005

ಪರೀಕ್ಷೆ

ನಾಳೆಯೇ ಪರೀಕ್ಷೆ
ಹಿರಿಯರ ಹಿರಿಯ ಆಕಾಂಕ್ಷೆ
ಯಾರ ತಪ್ಪಿಗೆ ಯಾರ ಶಿಕ್ಷೆ?

ಅಮ್ಮನ ಪಾಠದ ಕಾಟ
ಅಪ್ಪನ ಗದರುವ ನೋಟ
ತಲೆಯಲಿ ನೂರು ನೆವಗಳ ಕೂಟ

ಮೆತ್ತಗೆ ನೀರ ಹೀರುತ್ತಾ,
ಆಗಾಗ ಕಿರುಬೆರಳು ತೋರುತ್ತಾ,
ಬಾಗಿಲಲ್ಲಿ ಯಾರನ್ನೋ ಕಾಯುತ್ತಾ,
ಬಿಡುಗಡೆಯ ಪ್ರಯತ್ನವು ನಡೆದಿದೆ ಸತತ

ನೆನಪು ಬಾರದಿರಲು,
ಬೆನ್ನಲಿ ಬೆರಳು ಮೂಡಿರಲು,
ಕಣ್ಣಲಿ ಕಪ್ಪಕ್ಷರ ಕದಡಿದೆ
ಎವೆ ಬಡಿಯಲು ಹಾಯೆಂದು ಇಳಿದಿದೆ

ಪ್ರಾಣಿ ಪಕ್ಷಿ ಮಗ್ಗಿ
ಅಕ್ಷರ ಕಾಗುಣಿತಗಳೆಲ್ಲ
ನಿದ್ದೆಯಲಿ ಬೆರೆತು
ಕನಸಿನಲಿ ಕಾಡಿವೆ

ನಿಶ್ಯಬ್ಧದಲಿ ನೆನಪೆಂತೊ
ಹಾಳೆಯಲಿ ಇಳಿದಿದೆ
ಕಡೆಯ ಘಂಟೆ ಮೊಳಗಿದೆ
ಮರುಕಳಿಸುವ ನಲಿವಿಗೆ
ಬಯಲಿಂದು ಕಾದಿದೆ

-ಚೇತನ್ ಪಿ
೦೯-೦೫-೨೦೦೫

Apr 25, 2005

ನೆಮ್ಮದಿ

ಧುಮುಕುವ ಹನಿ
ಧರೆಗೆ ಮುತ್ತಿಡಲು
ಹೊಮ್ಮುವ ತೃಪ್ತಿಯ ತರಂಗಗಳು
ಕಳವಳದ ಮನಸಿಗೆಷ್ಟೋ ನೆಮ್ಮದಿ

ಹೊನ್ನಿನ ಎಳೆಬಿಸಿಲಿಗೆ
ಮುಖವೊಡ್ಡಲು, ರೆಪ್ಪೆಯೊಳಗೆ
ಮೂಡುವ ಬೆಚ್ಚನೆ ಬೆಳಕಿನ ಹಿತ
ಒತ್ತಡದಲಿ ಒತ್ತಿದ ಮನಸಿಗೆಷ್ಟೋ ನೆಮ್ಮದಿ

ನಿರ್ಜನ ರಸ್ತೆಯಲಿ, ನಿಶ್ಯಬ್ಧದಲಿ
ಒಂದೇ ಗತಿಯ
ಹುಚ್ಚು ನಡಿಗೆಯ ಲಯ
ದಣಿದ ಮನಸಿಗೆಷ್ಟೋ ನೆಮ್ಮದಿ

ಹೋದ ರಜೆಯಲಿ
ಊರ ಮನೆಯಲಿ
ತಾಯ್ ತೊಡೆಯಲಿ ತಲೆಯನಿಟ್ಟ ನೆನಪು
ದಿಕ್ಕೆಟ್ಟ ಮನಸಿಗೆಷ್ಟೊ ನೆಮ್ಮದಿ

ಕಣ್ತುಂಬಿ ಎದೆಯುಕ್ಕುವ
ಆ ಘಳಿಗೆ, ಆ ನಿಮಿಷದಲಿ
ಸಾಲು ನಿಲ್ಲುವ ಭಾವ ಪದಗಳು
ತಲ್ಲಣಿಸಿದ ಮನಸಿಗೆಷ್ಟೋ ನೆಮ್ಮದಿ

-ಚೇತನ್ ಪಿ
೨೫-೦೪-೨೦೦೫

Apr 20, 2005

ನಮ್ಮ ಮಹಾನಗರಿ

ಉರಿಬಿಸಿಲಿನೊಳು ಅಲ್ಲೆಲ್ಲೋ ಕಾಣುವ
ಒಂದ್ನಾಲ್ಕು ಮರಗಳು
ಆ ಮರಗಳ ತೂತು ಛತ್ರಿಯ ಒಳಗೆ ತೂರುವ
ಒಂದ್ನಾಲ್ಕು ಕಿರಣಗಳು

ದುರ್ನಾತದ ಚರಂಡಿಯ ಪಕ್ಕದ
ಬಿಡಿಏ ಉದ್ಯಾನ
ಆ ಉದ್ಯಾನದೊಳು ಚಿಮ್ಮುವ ಕಾರಂಜಿಯ
ತಂಪನೆ ನೀರಿನ ಸಿಂಚನ

ವಾಹನಗಳ ಕರ್ಕಶ ಸದ್ದು,
ಕಪ್ಪು ಹೊಗೆಯ ನಟ್ಟ ನಡು
ಎಲ್ಲಿಂದಲೋ ತೇಲಿ ಬರುತಲಿಹುದು
ಆಕಾಶವಾಣಿಯ ಸುಮಧುರ ಹಾಡು

ಕೈ ಚಾಚಿದರೊಬ್ಬ ಸಿಗುವನು
ಅಷ್ಟೊಂದು ಇಕ್ಕಟ್ಟು
ಈ ಇಕ್ಕಟ್ಟಿನಲಿ ಗಟ್ಟಿಯಾಗಿದೆ
ಅವಿಭಕ್ತ ಕುಟುಂಬದ ಒಗ್ಗಟ್ಟು

ಮಹಾನಗರಿಯಲ್ಲಿಂದೂ ಅಳಿದಿಲ್ಲ
ಜಾತಿ ಮತಗಳ ಬೇಧ
ಈ ಬೇಧವ ಭೇಧಿಸುತಲಿದೆ
ಮನುಜತೆಯ ಸಹಜ ಸ್ನೇಹ ಸಂಬಂಧ

ಹತ್ತು ಭಾಷೆಯ ನೂರು ಸೀಮೆಗಳ
ಜನ ಮನಗಳದಿದು ಸಂಗಮ
ಆ ಸಂಗಮದೊಳೂ ಕಂಗೊಳಿಸುತಿದೆ
ಕನ್ನಡದ ನಿತ್ಯೋತ್ಸವದ ಸಂಭ್ರಮ

ಚೇತನ್ ಪಿ
೨೦-೦೪-೨೦೦೫

Apr 12, 2005

ಜೀವಜಲವೇ

ನನ್ನೊಡಲ ಜೀವಜಲವೇ,
ನಿನ್ನೊಡಲ ಈ ಜೀವವ ಸಲಹು ಬಾ
ಬಾ ತಾಯಿ, ಬಂದೇ ಬಾ,
ಈ ನಿನ್ನ ನನ್ನ ಮೈದುಂಬಿ ಬಾ…ನಿನ್ನೆಲ್ಲಾ ಆಕಾರಗಳಲಿ
ನಿನ್ನೆಲ್ಲಾ ವರ್ಣಗಳಲಿ
ನಿನ್ನೆಲ್ಲಾ ಗುಣಗಳಲಿ
ನಿನ್ನೆಲ್ಲಾ ರೂಪುಗಳಲಿ
ನಿನ್ನೆಲ್ಲಾ ಶಕ್ತಿಗಳಲಿ
ನಿನ್ನೆಲ್ಲಾ ವ್ಯಾಪ್ತಿಗಳಲಿ
ನಿನ್ನ ಒಡಲಾಳ ಜೀವಕೋಟಿಗಳಲಿ
ಶೂನ್ಯದ ತಳ ಸೇರುವೆ
ಭಕ್ತಿಯಿಂದ ಕೈ ಮುಗಿವೆ
ಬಾ ತಾಯಿ, ನೀ ಬಂದೇ ಬಾ…

ನಿನ್ನ ಗುಡುಗು ಗದ್ದಲಕೆ
ನಿನ್ನ ಸಿಡಿಲು ಮಿಂಚಿಗೆ
ನಿನ್ನ ರೋಷ ರಭಸಕೆ
ಉಸಿರ ಬಿಗಿ ಹಿಡಿದು ಕಾದಿಹೆ ನಾ
ಬಾ ತಾಯಿ, ನೀ ಬೇಗ ಬಾ…

ಇಳೆಯೊಳು ಉಕ್ಕಿ ಬಾ
ಕಡಲೋಳು ಕೊಚ್ಚಿ ಬಾ
ಗಗನವ ಮುಚ್ಚಿ ಬಾ
ಎಂತಾದರೂ ಬಾ
ಬಿರಿದ ಬಾಯ್ಗಳ ಮುಚ್ಚು ಬಾ
ಬಾ ತಾಯಿ, ನೀ ಬಂದೇ ಬಾ…

ಹಸಿರು ಎಲೆಗಳಲಿ
ಅವುಗಳ ನೆರಳಿನಲಿ
ನೆಲದ ತಂಪಿನಲಿ
ಮಣ್ಣಿನ ಕಂಪಿನಲಿ
ಕಾಮನ ಬಿಲ್ಲಿನಲಿ
ಅದರ ಬಿಂಬಗಳಲಿ
ನಮ್ಮೆಲ್ಲಾ ಜೀವನಾಳಗಳಲಿ
ಮೈ ಬೆವರ ಬಿಂದುಗಳಲಿ
ನದಿ ಕೆರೆ ತೊರೆಗಳಲಿ
ಹಳ್ಳ ಕೊಳ್ಳಗಳಲಿ
ಝರಿ ಜಲಪಾತಗಳಲಿ
ನಮ್ಮೆಲ್ಲಾ ಆನಂದ ಭಾಷ್ಪಗಳಲಿ
ನೆಲೆಸು ಬಾ
ಉಳಿಸು ಬಾ
ಬಾಳಿಸು ಬಾ…

ಬಾ ತಾಯಿ, ನೀ ಬಂದೇ ಬಾ,
ನಿನಿಲ್ಲೇ ನೆಲೆಸು ಬಾ

-ಚೇತನ್ ಪಿ
೧೨-೦೪-೨೦೦೫

Mar 31, 2005

ನಾನಿಲ್ಲಿಯವನು

ಹಿಂದೂ ಇಂದೂ ಮುಂದೂ
ನಾನಿಲ್ಲಿಯವನು ಎಂದೆಂದೂತಾಯಿ ನಾಡ ಜೀವ ನಾಡಿ
ಮಾತೃ ಭಾಷೆಯ ಮೋಹ ಪಾಷ
ಕಣ್ಣ ಕಟ್ಟಿ ಬಿಗಿದಿರಲಿ ನನ್ನ ಎಂದೆಂದೂ
ನಾನಿಲ್ಲಿಯವನು ಎಂದೆಂದೂ

ನಲ್ಮೆಯ ನಡೆ ನುಡಿಯ ನಾಡು
ಹೊನ್ನ ಮಣ್ಣ ನದಿಗಳ ಜಾಡು
ಕಲೆಯ ಕಣ್ಣ ಭಾವ ಬೀಡು
ಜ್ಞಾನೋದಯದ ಗಿರಿಗಳ ಮಾಡು
ಕಸ್ತೂರಿಯ ಸೂಸಿಹುದು ವಿಶ್ವದೆಲ್ಲೆಡೆ
ನಾನಿಲ್ಲಿಯವನು ಎಂದೆಂದೂ

ಜನನಿ ನೀ ಬಸಿದ ಜೀವ ಕಣ
ಧನ್ಯತೆಯಲಿ ಮಿಂದಿದೆ ಅನು ಕ್ಷಣ
ಸಾರ್ಥಕತೆಯ ಸಾರಿದೆ ಅನು ಕ್ಷಣ
ಋಣದ ಎಳೆ ಬೆಸೆದಿರಲಿ ಮುಂದಣ-
ಜನ್ಮಕೂ- ದರುಶನವಾಗಲಿ ನಿನ್ನ ಚರಣ
ಸ್ವಾರ್ಥಿ; ನಾನಿಲ್ಲಿಯವನು ಎಂದೆಂದೂ

-ಚೇತನ್ ಪಿ.
೩೦-೦೩-೨೦೦೫

Mar 24, 2005

ಮೊನ್ನೆ ಮನೆ ಮುಟ್ಟಿದ್ದು

ಮುಳ್ಳು ಹತ್ತ ದಾಟಿತ್ತು
ಕೆಲಸ ಮಾಡಿ ತಲೆ ಕೆಟ್ಟಿತ್ತು
ಬಸ್ಸಲಿ ಜನಸಂಖ್ಯೆ ನೂರ ಎಂಟಿತ್ತು
ಶೆಖೆ ಇಂದು ಹತ್ತು ಪಟ್ಟಿತ್ತು
ಬೆವರಿ ಬಟ್ಟೆ ಮೈಗಂಟಿತ್ತು
ಕಾಲು ಆಸೀನಕೆ ಆಸೆ ಪಟ್ಟಿತ್ತು
ವಾಕ್-ಮನ್ ಕೈ ಕೊಟ್ಟಿತ್ತು
ದುರ್ಗಂಧಕೆ ಉಸಿರು ಕಟ್ಟಿತ್ತು
ಸಾರಾಯಿಯ ಸ್ಯಾಂಪಲ್ ಮೂಗ ಮುಟ್ಟಿತ್ತು
ಮೆಲ್ಛಾವಣಿ ಆಗಾಗ ತಲೆಯ ತಟ್ಟಿತ್ತು
ಮಬ್ಬುಗತ್ತಲು ಬೀಡು ಬಿಟ್ಟಿತ್ತು
ಯಾರಿಗೆ ಯಾರ ಮೇಲೋ ಸಿಟ್ಟಿತ್ತು
ಎಲ್ಲರ ಹಣೆ ಗಂಟಿಟ್ಟಿತ್ತು
ತಾಳ್ಮೆ ಗಂಟು ಮೂಟೆ ಕಟ್ಟಿತ್ತು
ಅಯ್ಯೋ…… ಶಿವನೇ….
ನನ್ನ ಶ್ರೀನಗರ ಬಂದೇ ಬಿಟ್ಟಿತ್ತು—————

ಚೇತನ್ ಪಿ
೨೩-೦೩-೨೦೦೫