Showing posts with label ಕನ್ನಡ. Show all posts
Showing posts with label ಕನ್ನಡ. Show all posts

Jun 1, 2025

ಕೇಳಿದಂತೆ ಬರೆ, ಬರೆದಂತೆ ನುಡಿ

ಅಕ್ಷರಮಾಲೆ ಕಲಿತು, ಕಾಗುಣಿತಾಭ್ಯಾಸ ಆದರೂ ನನ್ನ ಮಗ ಕನ್ನಡ ಓದಲು ಕಷ್ಟ ಪಡುತ್ತಿದ್ದ. ‘ಅಪ್ಪಾ.. ಕನ್ನಡ ಓದೋದು ಕಷ್ಟ.. ಇಂಗ್ಲಿಷ್ ಈಜಿ’ ಅಂತ ರಾಗ ಎಳೆಯುತ್ತಿದ್ದ.  ಆಗ ನಾನವನಿಗೆ, ‘ಕನ್ನಡ ತುಂಬಾ ಸುಲಭ ಕಾಣೋ, ಇಂಗ್ಲಿಷ್ ನಲ್ಲಿ ಸೈಲೆಂಟ್ ಅಕ್ಷರ ಇರ್ತಾವೆ, ಒಂದೇ ಅಕ್ಷರಕ್ಕೆ ಬೇರೆ ಬೇರೆ ಉಚ್ಛಾರ ಇರುತ್ತೆ ಅಂತ ಉದಾಹರಣೆ ಕೊಟ್ಟು - ಕನ್ನಡದಲ್ಲಿ ಹಾಗಲ್ಲ. ಕೇಳಿದಂತೆ ಬರೆಯಬಹುದು, ಬರೆದಂತೆ ನುಡಿಯಬಹುದು' ಎಂದು ಗರ್ವದಿಂದ ಹೇಳಿದೆ. ಸ್ವಲ್ಪ ಗಮನಿಸಿ ನೋಡಿದಾಗ ಒತ್ತಕ್ಷರಗಳನ್ನ ಕೂಡಿಸಿ ಓದಲು ಕಷ್ಟ ಪಡುತ್ತಿದ್ದ. ನನಗೆ ಆಗ ಹೊಳೆಯಿತು.! ಇಂಗ್ಲಿಷ್ನಲ್ಲಿ ಫೋನೆಟಿಕ್ ಸೀಕ್ವೆನ್ಸ್ ಹಾಗೂ ಬರೆಯುವ ಸೀಕ್ವೆನ್ಸ್ ಒಂದೇ ಇದ್ದಂತೆ, ಕನ್ನಡಲ್ಲಿಲ್ಲ - ಸ್ವಲ್ಪ ವ್ಯತ್ಯಾಸವಿದೆ. 

ಉದಾಹರಣೆಗೆ 'ಶಕ್ತಿ' ಎನ್ನುವುದನ್ನು ಉಚ್ಛರಿಸುವಾಗ ಕ್ರಮವಾಗಿ - ಶ್, ಅ, ಕ್ , ತ್ , ಇ  ಹೇಳುತ್ತೇವೆ. ಅದೇ ಕ್ರಮದಲ್ಲಿ sh, a , k , t , i ಎಂದು ಬರೆಯುತ್ತೇವೆ. ಆದರೆ ಕನ್ನಡದಲ್ಲಿ, ಬರೆವಾಗ ಕ್ ಹಾಗೂ ಇ ಮೊದಲೇ ಕೂಡಿಸಿ ಬರೆದು, ನಂತರ ತ್ ಒತ್ತು ಕೊಡುತ್ತೇವೆ. ಪದದಲ್ಲಿ 'ಕಿ' ಇದ್ದರೂ 'ಕಿ' ಎಂದು ಉಚ್ಚರಿಸುವ ಹಾಗಿಲ್ಲ! ಹಿಂದಿಯಲ್ಲಿ ಈ exception  ಇಲ್ಲ ('शक्ति').   

ನುಡಿದಂತೆ ಬರೆ. ಆದರೆ ಕಂಡಿಷನ್ಸ್ ಅಪ್ಲೈ !

--

ಆಗಾಗ ನೆನಪಿಸುಕೊಳ್ಳಲು ಹೀಗೊಂದು ಉದಾಹರಣೆ ಪ್ರಿಂಟ್ ಮಾಡಿ ಕೊಟ್ಟೆ.




Sep 19, 2007

ಬೊಗಸೆಯಲ್ಲಿ ಮಳೆ

ಹೀಗೇ ಒಮ್ಮೆ 'interesting' ಎನಿಸಿ ’ಬೊಗಸೆಯಲ್ಲಿ ಮಳೆ’ ಕೊಂಡೆ. ಹತ್ತು ಪುಟಗಳನ್ನು ಓದುವಷ್ಟರಲ್ಲಿ ನಾನು ಜಯಂತರ ಅಭಿಮಾನಿಯಾಗಿ ಹೋಗಿದ್ದೆ.

ಕವಿ-ಕೃತಿ ಪರಿಚಯದಲ್ಲಿ ಹೇಳಿರುವಂತೆ, ಪ್ರತೀವಾರ "ಹಾಯ್ ಬೆಂಗಳೂರ್" ವಾರ ಪತ್ರಿಕೆಗೆ "ಬೊಗಸೆಯಲ್ಲಿ ಮಳೆ" ಶೀರ್ಷಿಕೆಯಲ್ಲಿ ಬರೆದ ನುಡಿನೋಟಗಳ ಸಮಗ್ರ ಸಂಕಲನ ಇದು.

ಏನಿದು ನುಡಿನೋಟ? - ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಓದಿ ಸ್ವತಃ ತಿಳಿಯುವಂಥದ್ದು. ಓದಿದ ನಂತರ ’ನುಡಿನೋಟ’ ವೆಂಬುದು ಎಷ್ಟು ಸಮರ್ಪಕ ಹೆಸರೆಂದು ನಿಮಗೇ ತಿಳಿಯುತ್ತದೆ. ಆದರೂ ಸಂಕ್ಷಿಪ್ತವಾಗಿ ಹೇಳುವುದಾದರೆ, ನುಡಿನೋಟವು, ದೈನಿಕ ಆಗುಹೋಗುಗಳ ಸಣ್ಣ ವಿವರಗಳಲ್ಲಿ ಜಯಂತರು ತಮ್ಮ ಅನುಭವಗಳನ್ನು ಹೆಣೆದು ಕಟ್ಟಿಕೊಡುವ ಅಭಿವ್ಯಕ್ತಿಯ ಪ್ರಯತ್ನ; ಅವರ ಸುತ್ತಣ ಜಗತ್ತಿನ ಸೂಕ್ಷ್ಮ ಸವಿವರ ಚಿತ್ರಣ, ಭಾವುಕ ಅವಲೋಕನ. ಇಲ್ಲಿ ಕಾಲ್ಪನಿಕತೆಯಿಲ್ಲ. ಪೂರ್ವಾಗ್ರಹವಿಲ್ಲ, ಉತ್ಪ್ರೇಕ್ಷೆಗಳಿಲ್ಲ.

ರವಿ ಬೆಳಗೆರೆ ಹೇಳುವಂತೆ - ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಜಯಂತರು ಹೇಳಬಲ್ಲರು. ದೇಶ ಕಾಲಗಳಲ್ಲಿ ಸಂಚರಿಸುವ, ಪರಕಾಯ ಪ್ರವೇಶ ಮಾಡುವ ಅತಿಮಾನುಷನಂತೆ, ಅವರಿಗೆ ಫುಟ್‍ಪಾತ್‍ನಲ್ಲಿ ಸಿಲ್ವರ್ ಪೈಂಟ್ ಬಳಿದುಕೊಂಡು ನಿಲ್ಲುವ ಗಾಂಧಿ ಹುಡುಗನಿಗೆ ರಾತ್ರಿ ರಾತ್ರಿ ಗಾಳಿ ತೋರುವ ಮಮತೆ ಕಾಣುತ್ತದೆ. ಆಪರೇಷನ್ ಮುನ್ನ ಸಹಿ ಮಾಡುವ ಕರಾರು ಪತ್ರದ ನಿಯಮಗಳಲ್ಲಿ ಸೂತಕ ಛಾಯೆಯಿರುವುದು ಕಾಣುತ್ತದೆ. ’ಪಿಕ್‍ಪಾಕೆಟ್’ಗೊಂಡವನ ಆತ್ಮಸಾಕ್ಷಾತ್ಕಾರ ಕಾಣುತ್ತದೆ. ಎಲ್ಲವನ್ನು ಲೇಖಕನ ಛಾಯೆಯಿರದಂತೆ third person ನಿರೂಪಣೆಯಲ್ಲಿ ಬೆಚ್ಚನೆಯ ಸ್ಪರ್ಶದೊಂದಿಗೆ ಚಿತ್ರಿಸುತ್ತಾರೆ.

ಒಟ್ಟಿನಲ್ಲಿ, ಓದಿ ಮುಗಿವಾಗ, ಪುಸ್ತಕದಲ್ಲಿ ಬೆರಳಿಟ್ಟು ಮುಚ್ಚಿ, ಒಂದು ನಿಟ್ಟುಸಿರು ಬಿಟ್ಟಿರುತ್ತೇವೆ. ಕಣ್ಣು ಮುಚ್ಚಿಯೋ, ಎಲ್ಲೋ ದಿಟ್ಟಿಸಿಯೋ, ಒಂದು ಮಂಥನಕ್ಕೆ ಸಾಗಿರುತ್ತೇವೆ.

MUST READ.

[ಕನ್ನಡ ಓದಲು ಬಾರದ ಕನ್ನಡಿಗ ಮಿತ್ರರಿಗೆ ಓದಿ ಹೇಳಲು ಸಿದ್ಧ]

Nov 20, 2006

ಆಗ - ಈಗ

ನನಗೆ ಆಗ್ಗಿಂದಾಗ್ಗೆ ಕಸಿವಿಸಿ ತರುವ ವಿಷಯವೆಂದರೆ, ಹಿಂದೆ ನಾನು ಕನ್ನಡ-ಇಂಗ್ಲೀಷ್ ನಿಘಂಟನ್ನು ನೋಡುತ್ತಿದ್ದೆ.. ಈಗ ಇಂಗ್ಲೀಷ್-ಕನ್ನಡ ನಿಘಂಟನ್ನು ನೋಡುತ್ತೇನೆ.

ಇಗೋ ಕನ್ನಡ‘ ಖ್ಯಾತಿಯ ಪ್ರೊ. ಜಿ. ವೆಂಕಟಸುಬ್ಬಯ್ಯನವರ ನಿಘಂಟು ಅಂತರ್ಜಾಲದಲ್ಲಿ ಯೂನಿಕೋಡ್‌ನಲ್ಲಿ ಸಿಗುವಂತಾಗಿರುವುದು ಹರ್ಷ ತಂದಿದೆ.

http://www.baraha.com/nighantu/index.php


Nov 13, 2006

ಎಕ್ಸ್.ಪಿ. ಕನ್ನಡದಲ್ಲಿ

ಅಂತೂ ಇಂತೂ, ಎಕ್ಸ್.ಪಿ. ಯ ಕನ್ನಡ ಪರಿಸರಕ್ಕೆ (GUI) ‘ಎವಾಲ್ವ್’ ಆದೆ (ಪವನಜರಿಗೆ ಧನ್ಯವಾದಗಳು). ಅದರ ಒಂದು ನೋಟ ಇಲ್ಲಿದೆ..

ಎಕ್ಸ್.ಪಿ. ಕಾರ್ಯಾಚರಣ ವ್ಯವಸ್ಥೆ ಸಂಪೂರ್ಣವಾಗಿ ಯೂನಿಕೋಡನ್ನು ಬಳಸಿ ಬೆಂಬಲಿಸಿದರೂ, ಅಪ್ಲಿಕೇಷನ್‌ಗಳು ಇನ್ನೂ ಹಳೆಯದಾದವುಗಳಾದ್ದು, ಅಕ್ಷರಗಳನ್ನು ansi ಎಂದು ಪರಿಗಣಿಸುವುದರಿಂದ ಇನ್ನೂ ಕೆಲವು ತೊಂದರೆಗಳಿವೆ. ಉದಾಹರಣೆಗೆ, acdc (ಹಳೆಯ) ಅಪ್ಲಿಕೇಷನ್ ಕನ್ನಡದಲ್ಲಿ ಹೆಸರಿಸಿದ ಚಿತ್ರಗಳನ್ನು (image/jpeg) ತೆರೆಯುವುದಿಲ್ಲ.

ಕನ್ನಡ user interfaceನ ಈಗಿನ ಸ್ಥಿತಿಯಲ್ಲಂತೂ, ಪದಗಳ ಅನುವಾದ ಹಾಸ್ಯಾಸ್ಪದವಾಗಿದೆ. closeಗೆ ‘ಮುಚ್ಚು’, runಗೆ ‘ಓಡಿಸು’ (ಇವು ತಪ್ಪೆಂದಲ್ಲ; ಇಂದಿನ ಭಾಷಾ ಬಳಕೆಯಲಿ ಅಭಾಸವಾಗಿವೆಯಷ್ಟೆ) ಇತ್ಯಾದಿ. ಆದರೆ, ತಂತ್ರಗ್ಞಾನಕ್ಕೆ ಸಂಬಂಧಪಟ್ಟ, ಸಂಬಂಧಪಡದ ಇಂಗ್ಲೀಷಿನ ಹಲವು ಪದಗಳ ಅನುವಾದ ನಿಜವಾಗಿಯೂ ಕಷ್ಟಕರವಾಗಿದೆ, ಸವಾಲಾಗಿದೆ. ಇಲ್ಲಿ ಓದಿ.

ಹಾಗೂ, ಕನ್ನಡ ಒಪನ್ ಟೈಪ್ ಫಾಂಟಗಳ ಕೊರತೆಯಿದೆ. ಈಗಿರುವ Arial Unicode MS ಹಾಗೂ ಮೈಕ್ರೊಸಾಫ್ಟ್‌ನವರ ‘ತುಂಗ’ ಫಾಂಟ್‌ಗಳು ಯಾವುದಕ್ಕೂ ಸಾಲವು. ಇಲ್ಲಿ ಓದಿ.

ಕಂಪ್ಯೂಟರ್‌ನಲ್ಲಿ, ಮಾಹಿತಿ ತಂತ್ರಗ್ಞಾನದಲ್ಲಿ ಕನ್ನಡ ಬಳಕೆಯ ಲಾಭ ಎಷ್ಟೆಂಬುದು ನಿಮಗೆ ತಿಳಿದೇ ಇದೆ.

Oct 13, 2006

ರಾಷ್ಟ್ರಕವಿ ಜಿ.ಎಸ್.ಎಸ್.


“ಎಲ್ಲೋ ಹುಡುಕಿದೆ ಇಲ್ಲದ ದೇವರ…”

“…ಸ್ತ್ರೀ ಎಂದರೆ ಅಷ್ಟೇ ಸಾಕೆ?”

ನಾನು ಹೆಚ್ಚಾಗಿ ಜಿ.ಎಸ್.ಎಸ್ ಕವನಗಳನ್ನು ಓದಿಲ್ಲ. ಆದರೆ ಈ ಎರೆಡು ಕವನಗಳು ಸಾಕಲ್ಲವೆ - ಅವರ ಕವನಗಳ ಸತ್ವ, ಶಕ್ತಿಗಳನ್ನು ತಿಳಿಯಲು?

Mar 31, 2005

ನಾನಿಲ್ಲಿಯವನು

ಹಿಂದೂ ಇಂದೂ ಮುಂದೂ
ನಾನಿಲ್ಲಿಯವನು ಎಂದೆಂದೂತಾಯಿ ನಾಡ ಜೀವ ನಾಡಿ
ಮಾತೃ ಭಾಷೆಯ ಮೋಹ ಪಾಷ
ಕಣ್ಣ ಕಟ್ಟಿ ಬಿಗಿದಿರಲಿ ನನ್ನ ಎಂದೆಂದೂ
ನಾನಿಲ್ಲಿಯವನು ಎಂದೆಂದೂ

ನಲ್ಮೆಯ ನಡೆ ನುಡಿಯ ನಾಡು
ಹೊನ್ನ ಮಣ್ಣ ನದಿಗಳ ಜಾಡು
ಕಲೆಯ ಕಣ್ಣ ಭಾವ ಬೀಡು
ಜ್ಞಾನೋದಯದ ಗಿರಿಗಳ ಮಾಡು
ಕಸ್ತೂರಿಯ ಸೂಸಿಹುದು ವಿಶ್ವದೆಲ್ಲೆಡೆ
ನಾನಿಲ್ಲಿಯವನು ಎಂದೆಂದೂ

ಜನನಿ ನೀ ಬಸಿದ ಜೀವ ಕಣ
ಧನ್ಯತೆಯಲಿ ಮಿಂದಿದೆ ಅನು ಕ್ಷಣ
ಸಾರ್ಥಕತೆಯ ಸಾರಿದೆ ಅನು ಕ್ಷಣ
ಋಣದ ಎಳೆ ಬೆಸೆದಿರಲಿ ಮುಂದಣ-
ಜನ್ಮಕೂ- ದರುಶನವಾಗಲಿ ನಿನ್ನ ಚರಣ
ಸ್ವಾರ್ಥಿ; ನಾನಿಲ್ಲಿಯವನು ಎಂದೆಂದೂ

-ಚೇತನ್ ಪಿ.
೩೦-೦೩-೨೦೦೫