Showing posts with label ಕವಿ-ಕೃತಿ. Show all posts
Showing posts with label ಕವಿ-ಕೃತಿ. Show all posts

Mar 1, 2008

ಜಿಮ್ ಕಾರ್ಬೆಟ್ ಆಮ್ನಿಬಸ್


[Oxford university press, Rs.545]

ಜಿಮ್ ಕಾರ್ಬೆಟ್ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. 'A shot in the dark' - ಓದಿರುತ್ತೀರಿ. ನೂರಾರು ಯಾತ್ರಿಗಳನ್ನು ಕೊಂದ ರುದ್ರಪ್ರಯಾಗದ ನರಭಕ್ಷಕ ಚಿರತೆಯ ಅಂತ್ಯದ ಕಥೆಯದು. ಆ ಕಥೆಯನ್ನು ಓದುತ್ತಾ, ನೀವು ರೋಮಾಂಚಿತರಾಗಿದ್ದರೆ, ನೀವು jim corbett omnibus ಓದಲೇಬೇಕು. ಹಿಮಾಲಯದ ತಪ್ಪಲಿನ ಪ್ರಾಂತ್ಯಗಳಲ್ಲಿ, ಸಾವಿರಾರು ಜನರನ್ನು ಕೊಂದು ಅಲ್ಲಿನ ವಾಸಿಗಳನ್ನು ಭೀಕರ ಭಯದ ನೆರಳಿಗೆ ದೂಡಿ, ಸಾವು ನೋವುಗಳಿಂದ ಯಾತನೆಗೀಡುಮಾಡಿದ್ದ ನರಭಕ್ಷಕ ಹುಲಿ ಚಿರತೆಗಳನ್ನು ಬೇಟೆಯಾಡಿ ಕೊಲ್ಲುವ ಪ್ರಸಂಗಗಳನ್ನು, ಕಾರ್ಬೆಟ್ ಅದ್ಭುತವಾಗಿ ನಿರೂಪಿಸಿ ಬರೆದಿದ್ದಾರೆ - ಅವುಗಳ ಒಟ್ಟು ಸಂಗ್ರಹವೇ ಜಿಮ್ ಕಾರ್ಬೆಟ್ ಆಮ್ನಿಬಸ್.

ಪರ್ವತಮಯ ದುರ್ಗಮ ದಟ್ಟ ಕಾಡುಗಳಲ್ಲಿ, ಜೀವವನ್ನು ನರಭಕ್ಷಕನ ಮರ್ಜಿಯಲ್ಲಿಟ್ಟು, ಪ್ರತಿ ಕ್ಷಣ ಅಪಾಯವನ್ನು ಎದುರುನೋಡುತ್ತಾ, ಅದರ ಮುಂದಿನ ಹವಣಿಕೆಯನ್ನು ಊಹಿಸುತ್ತಾ, ಪ್ರತಿತಂತ್ರಗಳನ್ನು ಹೂಡುತ್ತಾ, ಅನಿರೀಕ್ಷಿತ ಪ್ರತಿಕೂಲಗಳ ನಡುವೆ ಬೇಟೆಯಾಡಿ ಕೊಲ್ಲುವುದನ್ನು ನೀವು ಅವನ ಸಾಹಸ ಧೈರ್ಯಗಳನ್ನು ಮೆಚ್ಚುತ್ತಾ ಸವಿಯಬಹುದು. ಪ್ಯಾರೆಲಲಿ, ಕಾರ್ಬೆಟ್‍ಗೆ ಕಾಡಿನ ಬಗೆಗಿರುವ ಆಳವಾದ ತಿಳುವಳಿಕೆ, ನಿಸರ್ಗದ ಬಗೆಗಿನ ಕಾಳಜಿ, ನೊಂದ ಹಳ್ಳಿಗರ ಅಳಲಿಗೆ ಸ್ಪಂದನ ಮತ್ತಿತರ ಸೂಕ್ಷ್ಮ ವಿವರಗಳು ತೆರೆದುಕೊಳ್ಳುತ್ತಾ ಹೊಗುತ್ತವೆ.

.. ಇನ್ನು ನಿಮ್ಮ ಓದಿಗೆ ಬಿಡುತ್ತೇನೆ. ತಪ್ಪದೇ ಓದಿ.

p.s: ಪುಸ್ತಕದ ಕೊನೆಯಲ್ಲಿ ಪ್ರಾಂತ್ಯಗಳ ನಕ್ಷೆಯಿದೆ - ನಿರೂಪಣೆಯ ಜೊತೆಜೊತೆಗೆ ನರಭಕ್ಷಕನ ವ್ಯಾಪ್ತಿ, ಜಾಡುಗಳನ್ನು ಗ್ರಹಿಸುವಲ್ಲಿ ಸಹಾಯಕ್ಕೆ ಬರುತ್ತದೆ.

Sep 19, 2007

ಬೊಗಸೆಯಲ್ಲಿ ಮಳೆ

ಹೀಗೇ ಒಮ್ಮೆ 'interesting' ಎನಿಸಿ ’ಬೊಗಸೆಯಲ್ಲಿ ಮಳೆ’ ಕೊಂಡೆ. ಹತ್ತು ಪುಟಗಳನ್ನು ಓದುವಷ್ಟರಲ್ಲಿ ನಾನು ಜಯಂತರ ಅಭಿಮಾನಿಯಾಗಿ ಹೋಗಿದ್ದೆ.

ಕವಿ-ಕೃತಿ ಪರಿಚಯದಲ್ಲಿ ಹೇಳಿರುವಂತೆ, ಪ್ರತೀವಾರ "ಹಾಯ್ ಬೆಂಗಳೂರ್" ವಾರ ಪತ್ರಿಕೆಗೆ "ಬೊಗಸೆಯಲ್ಲಿ ಮಳೆ" ಶೀರ್ಷಿಕೆಯಲ್ಲಿ ಬರೆದ ನುಡಿನೋಟಗಳ ಸಮಗ್ರ ಸಂಕಲನ ಇದು.

ಏನಿದು ನುಡಿನೋಟ? - ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಓದಿ ಸ್ವತಃ ತಿಳಿಯುವಂಥದ್ದು. ಓದಿದ ನಂತರ ’ನುಡಿನೋಟ’ ವೆಂಬುದು ಎಷ್ಟು ಸಮರ್ಪಕ ಹೆಸರೆಂದು ನಿಮಗೇ ತಿಳಿಯುತ್ತದೆ. ಆದರೂ ಸಂಕ್ಷಿಪ್ತವಾಗಿ ಹೇಳುವುದಾದರೆ, ನುಡಿನೋಟವು, ದೈನಿಕ ಆಗುಹೋಗುಗಳ ಸಣ್ಣ ವಿವರಗಳಲ್ಲಿ ಜಯಂತರು ತಮ್ಮ ಅನುಭವಗಳನ್ನು ಹೆಣೆದು ಕಟ್ಟಿಕೊಡುವ ಅಭಿವ್ಯಕ್ತಿಯ ಪ್ರಯತ್ನ; ಅವರ ಸುತ್ತಣ ಜಗತ್ತಿನ ಸೂಕ್ಷ್ಮ ಸವಿವರ ಚಿತ್ರಣ, ಭಾವುಕ ಅವಲೋಕನ. ಇಲ್ಲಿ ಕಾಲ್ಪನಿಕತೆಯಿಲ್ಲ. ಪೂರ್ವಾಗ್ರಹವಿಲ್ಲ, ಉತ್ಪ್ರೇಕ್ಷೆಗಳಿಲ್ಲ.

ರವಿ ಬೆಳಗೆರೆ ಹೇಳುವಂತೆ - ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಜಯಂತರು ಹೇಳಬಲ್ಲರು. ದೇಶ ಕಾಲಗಳಲ್ಲಿ ಸಂಚರಿಸುವ, ಪರಕಾಯ ಪ್ರವೇಶ ಮಾಡುವ ಅತಿಮಾನುಷನಂತೆ, ಅವರಿಗೆ ಫುಟ್‍ಪಾತ್‍ನಲ್ಲಿ ಸಿಲ್ವರ್ ಪೈಂಟ್ ಬಳಿದುಕೊಂಡು ನಿಲ್ಲುವ ಗಾಂಧಿ ಹುಡುಗನಿಗೆ ರಾತ್ರಿ ರಾತ್ರಿ ಗಾಳಿ ತೋರುವ ಮಮತೆ ಕಾಣುತ್ತದೆ. ಆಪರೇಷನ್ ಮುನ್ನ ಸಹಿ ಮಾಡುವ ಕರಾರು ಪತ್ರದ ನಿಯಮಗಳಲ್ಲಿ ಸೂತಕ ಛಾಯೆಯಿರುವುದು ಕಾಣುತ್ತದೆ. ’ಪಿಕ್‍ಪಾಕೆಟ್’ಗೊಂಡವನ ಆತ್ಮಸಾಕ್ಷಾತ್ಕಾರ ಕಾಣುತ್ತದೆ. ಎಲ್ಲವನ್ನು ಲೇಖಕನ ಛಾಯೆಯಿರದಂತೆ third person ನಿರೂಪಣೆಯಲ್ಲಿ ಬೆಚ್ಚನೆಯ ಸ್ಪರ್ಶದೊಂದಿಗೆ ಚಿತ್ರಿಸುತ್ತಾರೆ.

ಒಟ್ಟಿನಲ್ಲಿ, ಓದಿ ಮುಗಿವಾಗ, ಪುಸ್ತಕದಲ್ಲಿ ಬೆರಳಿಟ್ಟು ಮುಚ್ಚಿ, ಒಂದು ನಿಟ್ಟುಸಿರು ಬಿಟ್ಟಿರುತ್ತೇವೆ. ಕಣ್ಣು ಮುಚ್ಚಿಯೋ, ಎಲ್ಲೋ ದಿಟ್ಟಿಸಿಯೋ, ಒಂದು ಮಂಥನಕ್ಕೆ ಸಾಗಿರುತ್ತೇವೆ.

MUST READ.

[ಕನ್ನಡ ಓದಲು ಬಾರದ ಕನ್ನಡಿಗ ಮಿತ್ರರಿಗೆ ಓದಿ ಹೇಳಲು ಸಿದ್ಧ]

Oct 13, 2006

ರಾಷ್ಟ್ರಕವಿ ಜಿ.ಎಸ್.ಎಸ್.


“ಎಲ್ಲೋ ಹುಡುಕಿದೆ ಇಲ್ಲದ ದೇವರ…”

“…ಸ್ತ್ರೀ ಎಂದರೆ ಅಷ್ಟೇ ಸಾಕೆ?”

ನಾನು ಹೆಚ್ಚಾಗಿ ಜಿ.ಎಸ್.ಎಸ್ ಕವನಗಳನ್ನು ಓದಿಲ್ಲ. ಆದರೆ ಈ ಎರೆಡು ಕವನಗಳು ಸಾಕಲ್ಲವೆ - ಅವರ ಕವನಗಳ ಸತ್ವ, ಶಕ್ತಿಗಳನ್ನು ತಿಳಿಯಲು?